16.1 C
New York
Friday, October 22, 2021

Buy now

spot_img

ಅನಿಲ್ ಕುಂಬ್ಳೆ ಮತ್ತೆ ಕೋಚ್ …?

ಎಸ್.ಜಗದೀಶಚಂದ್ರ ಅಂಚನ್ ಸೂಟರ್‌ ಪೇಟೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್ ನಾಯಕತ್ವಕ್ಕೆ ಈಚೆಗೆ ರಾಜೀನಾಮೆ ನೀಡಿದ್ದರು. ಇವರ ಪದತ್ಯಾಗದ ಸುದ್ದಿಯ ಬೆನ್ನಲೇ ಟೀಂ ಇಂಡಿಯಾದ ಮುಂದಿನ ಕೋಚ್ ಯಾರಾಗುವರು ಎನ್ನುವ ಚರ್ಚೆ ಕೂಡ ಈಗ ನಡೆಯುತ್ತಿದೆ. ಮುಂದಿನ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಟ್ವೆಂಟಿ-20 ವಿಶ್ವಕಪ್ ಪಂದ್ಯಾಟದ ನಂತರ ರವಿಶಾಸ್ತ್ರಿ ಅವರ ಕೋಚ್ ಅವಧಿ ಕೂಡ ಮುಕ್ತಾಯಗೊಳ್ಳುತ್ತಿದೆ. ನಾಯಕ ಕೊಹ್ಲಿ ಕೂಡ ಈ ಸಮಯದಲ್ಲೇ ಟ್ವೆಂಟಿ-೨೦ ಕ್ರಿಕೆಟಿನ ನಾಯಕತ್ವ ತ್ಯಜಿಸುತ್ತಿರುವುದರಿಂದ ಈ ಎರಡೂ ಪ್ರಮುಖ ಹುದ್ದೆಗಳ ಆಯ್ಕೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಾಯಕ ಸ್ಥಾನಕ್ಕೆ ಕೊಹ್ಲಿ ಸೂಚಿಸಿದ ರೋಹಿತ್ ಶರ್ಮ ಟ್ವೆಂಟಿ-೨೦ ಕ್ರಿಕೆಟಿನ ಸಾರಥ್ಯ ವಹಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಕೋಚ್ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆಗೆ ಸದ್ಯ ಕ್ರಿಕೆಟ್ ಲೆಜೆಂಡ್ ಅನಿಲ್ ಕುಂಬ್ಳೆ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

ಭಲೇ ಜೋಡಿ :
ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ಭಲೇ ಜೋಡಿ’. ಇಂತಹ ಅಪರೂಪದ ಜೋಡಿಗೆ ಅಪವಾದವಾಗಿರುವುದು ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬುವುದು. ಇವರಿಬ್ಬರ ಜೋಡಿಯಲ್ಲಿ ಟೀಂ ಇಂಡಿಯಾ ಸಾಕಷ್ಟು ಪಂದ್ಯಗಳನ್ನಾಡಿ ಯಶಸ್ಸಿನ ಹಾದಿಯನ್ನು ಕಂಡರೂ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಪ್ರಮುಖ ಐಸಿಸಿ ಟೂರ್ನಿಗಳು ನಡೆಯುವಾಗಲೇಲ್ಲ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲೇ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ -20 ಕ್ರಿಕೆಟ್ ನಾಯಕತ್ವದ ಪದತ್ಯಾಗಕ್ಕೆ ಮುಂದಾಗಿದ್ದಾರೆ. ಆದರೂ ಕೊಹ್ಲಿ – ರವಿಶಾಸ್ತ್ರಿ ಜೋಡಿ ಟೀಂ ಇಂಡಿಯಾವನ್ನು ಬಲಿಷ್ಠವಾಗಿ ಕಟ್ಟಿದ್ದು ಮಾತ್ರ ಸುಳ್ಳಲ್ಲ.

ರವಿಶಾಸ್ತ್ರಿ-ಕೊಹ್ಲಿ ಜೋಡಿ ಟೆಸ್ಟ್ ಕ್ರಿಕೆಟಿನಲ್ಲಿ ವಿಶ್ವದ ಎಲ್ಲ ದೇಶಗಳನ್ನು ಸೋಲಿಸಿದ ಹೆಗ್ಗಳಿಕೆಯನ್ನು ಹೊಂದಿದೆ. ಇಂತಹ ಗೆಲುವು ಕಳೆದ ನಾಲ್ಕು ವರ್ಷಗಳ ಕ್ರಿಕೆಟ್ ಋತುವಿನಲ್ಲಿ ಪದೇ ಪದೇ ನಡೆಯುತ್ತಾ ಬಂದಿದೆ. ಟೆಸ್ಟ್ ಕ್ರಿಕೆಟಿನಲ್ಲಿ ನಂ.1 ಸ್ಥಾನದಲ್ಲಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ 2ಬಾರಿ ಸರಣಿ ಗೆದ್ದರೆ, ಜೊತೆಗೆ ಇಂಗ್ಲೆಂಡ್ ನ್ನು ಅವರದ್ದೇ ನೆಲದಲ್ಲಿ ಸೋಲಿಸಿದ ಪರಾಕ್ರಮ ಈ ಜೋಡಿ ಹೊಂದಿದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟಿನಲ್ಲಿ ನಂ.1ಸ್ಥಾನದಲ್ಲಿ ಬಹುಕಾಲ ಟೀಂ ಇಂಡಿಯಾ ವಿಜೃಂಭಿಸಿತ್ತು. ಕ್ರಿಕೆಟ್ ಅಭಿಮಾನಿಗಳು ಬಯಸಿದ್ದಕ್ಕಿಂತ ಹೆಚ್ಚಿನ ಗೆಲುವುಗಳನ್ನು ಈ ಜೋಡಿ ಭಾರತೀಯ ಕ್ರಿಕೆಟಿಗೆ ಸಮರ್ಪಿಸಿದೆ. ಒಂದುವೇಳೆ ರವಿಶಾಸ್ತ್ರಿ-ಕೊಹ್ಲಿ ಜೋಡಿ ಈ ಬಾರಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಿಯನ್ನು ಗೆದ್ದರೆ ಯಶಸ್ಸಿನೊಂದಿಗೆ ತಮ್ಮ ಜವಾಬ್ದಾರಿಗೆ ಮಂಗಳ ಹಾಡಲಿದೆ.

ಕೋಚ್ ರೇಸ್‌ನಲ್ಲಿ :
ಈಗ ಎದ್ದಿರುವ ಪ್ರಮುಖ ಪ್ರಶ್ನೆ ಒಂದೇ. ಅದು ಮುಂದಿನ ಕೋಚ್ ಯಾರು ಎನ್ನುವುದು.ಈ ಹಿಂದೆ ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್ ಅವರನ್ನು ನೇಮಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ , ಈಗ ಹೊಸ ಹೆಸರು ಬರುತ್ತಿದೆ. ಅದು ಅನಿಲ್ ಕುಂಬ್ಳೆ ಮತ್ತು ವಿವಿ‌ಎಸ್ ಲಕ್ಷ್ಮಣ್ ಹೆಸರು. ರೇಸ್ ನಲ್ಲಿ ಇನ್ನೊಂದು ಹೆಸರಿದೆ. ಭಾರತೀಯನಲ್ಲದ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ. ಜಯವರ್ಧನೆ ಐಪಿ‌ಎಲ್ ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಉತ್ತಮ ತರಬೇತುದಾರರಾಗಿರುವುದರಿಂದ, ಅವರನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡಬಹುದು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಆದರೆ, ಜಯವರ್ಧನೆ ಟೀಂ ಇಂಡಿಯಾದ ಕೋಚ್ ಆಗಲು ನಿರಾಕರಿಸಿದ್ದಾರೆ.

ಕುಂಬ್ಳೆಗೆ ಮತ್ತೆ ಮಣೆ :
ರಾಹುಲ್ ದ್ರಾವಿಡ್ ಎನ್‌ಸಿ‌ಎ ಮುಖ್ಯಸ್ಥರಾಗಿ ಮುಂದುವರೆಯುವುದಾಗಿ ತಿಳಿಸಿದ ನಂತರ ಅನಿಲ್ ಕುಂಬ್ಳೆ ಅವರನ್ನು ಮತ್ತೆ ಕೋಚ್ ಮಾಡಲು ಬಿಸಿಸಿ‌ಐ ಈಗ ತೆರೆಮರೆಯ ಪ್ರಯತ್ನ ಶುರು ಮಾಡಿಕೊಂಡಿದೆ. ಅನಿಲ್ ಕುಂಬ್ಳೆ ಈ ಹಿಂದೆ 2016ರ ಜೂನ್ -24ರಿಂದ 2017ರವರೆಗೆ ಟೀಂ ಇಂಡಿಯಾದ ಕೋಚ್ ಆಗಿದ್ದವರು. ಕುಂಬ್ಳೆ ಗರಡಿಯಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಸರಣಿಯಲ್ಲೇ ಭರ್ಜರಿ ಜಯಭೇರಿ ಬಾರಿಸಿ 2-0 ಅಂತರದಿಂದ ಸರಣಿ ಗೆದ್ದಿತ್ತು . ಈ ಗೆಲುವಿನ ಮೂಲಕ ಅನಿಲ್ ಕುಂಬ್ಳೆ ಹೊಸ ಇನಿಂಗ್ಸ್ ಆರಂಭಿಸಿದ್ದರು. ಇದಾದ ಬಳಿಕ ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಜಯಗಳಿಸಿದೆ . ಹೀಗೆ ಕುಂಬ್ಳೆ ಅವಧಿಯಲ್ಲಿ ಟೀಂ ಇಂಡಿಯಾ ಐದು ಟೆಸ್ಟ್ ಸರಣಿಗಳಲ್ಲಿ ಗೆಲುವು ಪಡೆದು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿತ್ತು. ಆದರೆ, 2017ರ ಚಾಂಪಿಯನ್ಸ್ ಟ್ರೋಫಿ ಏಕದಿನ ಫೈನಲ್‌ನಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ದ ಸೋತ ಬೆನ್ನಲ್ಲೇ ಅನಿಲ್ ಕುಂಬ್ಳೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಅಂದು ಅನಿಲ್ ಕುಂಬ್ಳೆ ಏಕಾ‌ಏಕಿ ಕೋಚ್ ಸ್ಥಾನವನ್ನು ತೊರೆಯಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವಿನ ವೈಮನಸ್ಸು ಕಾರಣವಾಗಿತ್ತು. ಅನಿಲ್ ಕುಂಬ್ಳೆ ಮಾತಿಗೆ ಕೊಹ್ಲಿ ಕಿಂಚಿತ್ತೂ ಮನ್ನಣೆ ನೀಡುತ್ತಿರಲಿಲ್ಲ. ಕೊಹ್ಲಿ ಸ್ವಯಂ ನಿರ್ಧಾರ ತೆಗೆದುಕೊಂಡು ಕುಂಬ್ಳೆ ಅವರನ್ನು ಕಡೆಗಣಿಸುತ್ತಿದ್ದರು. ಇದರಿಂದ ಬೇಸತ್ತ ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದರೂ ಟೀಂ ಇಂಡಿಯಾ ಸಲಹಾ ಸಮಿತಿಯ ಸದಸ್ಯರಾಗಿದ್ದ ವಿವಿ‌ಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ಹಾಗೂ ಹಾಲಿ ಬಿಸಿಸಿ‌ಐ ಅಧ್ಯಕ್ಷ ಸೌರವ್ ಗಂಗೂಲಿ ಅವರೆಲ್ಲ ಅನಿಲ್ ಕುಂಬ್ಳೆ ಅವರನ್ನೇ ಮುಂದಿನ ಅವಧಿಗೂ ಕೋಚ್ ಆಗಿ ಮುಂದುವರೆಸಲು ಬಿಸಿಸಿ‌ಐಗೆ ಸಲಹೆ ನೀಡಿದ್ದರು. ಆದರೆ, ಅಷ್ಟರಲ್ಲಾಗಲೇ ಅನಿಲ್ ಕುಂಬ್ಳೆ ಕೋಚ್ ಹುದ್ದೆಯನ್ನು ತೊರೆಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಕುಂಬ್ಳೆ ತಂಡದೊಂದಿಗಿದ್ದ ಆ ಒಂದು ಒಂದು ವರ್ಷ ಅದ್ಭುತವಾಗಿತ್ತು. ಕೊಹ್ಲಿಯ ಉದ್ದಟತನದಿಂದ ಅನಿಲ್ ಕುಂಬ್ಳೆ ಕೋಚ್ ಯುಗ ಅಂತ್ಯಗೊಂಡಿತ್ತು.

ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಕೋಚ್ ಹುದ್ದೆಯಿಂದ ನಿರ್ಮಿಸಿ ಇದೀಗ 4 ವರ್ಷಗಳು ಕಳೆದಿವೆ. ರವಿಶಾಸ್ತ್ರಿ ನಿರ್ಗಮನದ ನಂತರ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆಯೇ ಸೂಕ್ತ ಅಭ್ಯರ್ಥಿ ಎನ್ನುವುದು ಬಿಸಿಸಿ‌ಐ ಬಿಗ್ ಬಾಸ್ ಗಳ ಅಭಿಮಾತ. ಕುಂಬ್ಳೆ ಅವರನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡಿದರೆ ಕೊಹ್ಲಿ ಬಾಸ್’ಗಿರಿಗೂ ಕಡಿವಾಣ ಹಾಕಲು ಬಿಸಿಸಿ‌ಐ ಪ್ಲ್ಯಾನ್ ಹಾಕಿಕೊಂಡಿದೆ. ಒಟ್ಟಿನಲ್ಲಿ ನಾಲ್ಕು ವರ್ಷಗಳ ಸುದೀರ್ಘ ಅವಧಿಯ ನಂತರ ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಕೋಚ್ ಹುದ್ದೆಗೇರುವ ವೇದಿಕೆಯೊಂದನ್ನು ಬಿಸಿಸಿ‌ಐ ನಿರ್ಮಿಸಿದೆ. ಆದರೆ, ಅಧಿಕೃತ ಘೋಷಣೆಗೆ ಕಾಯಬೇಕಾಗಿದೆ.

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!