Saturday, October 12, 2024

ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ: ರೂ. 12 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ

ದೇವಳದ ನೀಲ ನಕಾಸೆ

ಕುಂದಾಪುರ: ಸುಮಾರು ಮೂರು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿ, ಪೌಳಿ, ವೀರಭದ್ರ ಗುಡಿ, ವಸಂತ ಮಂಟಪ ನಿರ್ಮಾಣ ಸೇರಿದಂತೆ ಜೀರ್ಣೋದ್ಧಾರ ಪ್ರಕ್ರಿಯೆಗೆ ಈಗಾಗಲೇ ಕಾರ್ಯಯೋಜನೆ ಸಿದ್ಧಪಡಿಸಲಾಗಿದ್ದು, ಸುಮಾರು ರೂ. 12ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ. 2025ರ ಮಾರ್ಚ್ ಒಳಗೆ ಜೀರ್ಣೋದ್ಧಾರ ಕಾರ್ಯಮುಗಿಸಿ ಪುನಃಪ್ರತಿಷ್ಠೆ ಮಾಡುವ ಗುರಿ ಹೊಂದಲಾಗಿದೆ ಎಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ತಿಳಿಸಿದರು.

ಅವರು ಶುಕ್ರವಾರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಇದೇ ಮೇ 13ರಿಂದ 15ರ ತನಕ ಪ್ರಾಯಶ್ಚಿತಾದಿ ಕಾರ್ಯಗಳನ್ನು ಮುಗಿಸಿಕೊಂಡು ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗುವುದು. ಅದರ ಮೊದಲು ಮೂಲಸಾನಿಧ್ಯ ಅಭಿವೃದ್ಧಿ ಪಡಿಸುವ ಚಿಂತನೆ ಹೊಂದಿದ್ದೇವೆ ಎಂದರು.

ಈಗಿನ ಗರ್ಭಗುಡಿಯ ಕರ್ಣಮುಚ್ಚಿಗೆಯ ಮೇಲ್ಬಾಗವನ್ನು ಬದಲಾವಣೆ ಮಾಡಲಾಗುವುದು, ತೀರ್ಥ ಮಂಟಪವನ್ನು ಸಂಪೂರ್ಣ ಹೊಸತಾಗಿ ನಿರ್ಮಾಣ ಮಾಡಲಾಗುವುದು, ಶಿಲಾಮಯದೊಂದಿಗೆ ತಾಮ್ರದ ಹೊದಿಕೆ ಮಾಡಲಾಗುವುದು. ಅನ್ನಛತ್ರ ನಿರ್ಮಾಣ ಹಾಗೂ ಸಭಾಭವನ ನಿರ್ಮಾಣದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.

ಕ್ಷೇತ್ರದ ಜೀರ್ಣೋದ್ದಾರದ ಬಗ್ಗೆ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿ ಹಾಗೂ ಗ್ರಾಮಸ್ಥರ ನಿರ್ಧಾರದಂತೆ ದೈವಜ್ಞರಾದ ಬೇಳ ಪದ್ಮನಾಭ್ ಶರ್ಮ ಇರಿಂಜಾಲಕ್ಕುಡ ಮತ್ತು ತಂಡದವರಿಂದ ಅಷ್ಟಮಂಗಳ ಪ್ರಶ್ನೆ ಮೂಲಕ ಗುಣ ದೋಷ ಚಿಂತನೆ ನೆಡೆಸಲಾಗಿದ್ದು ಈ ಪ್ರಕಾರ ಜೀರ್ಣೋದ್ಧಾರಕ್ಕೆ ಮುಂಚಿತವಾಗಿ ಭದ್ರದೀಪ ಸ್ಥಾಪನೆಯೊಂದಿಗೆ ಮುಷ್ಠಿಕಾಣಿಕೆ ಸಮರ್ಪಣೆ ಮಾಡಲಾಗಿದೆ. ವಾಸ್ತು ತಜ್ಞರ ಮೂಲಕ ವಾಸ್ತುವಿನ್ಯಾಸ ಸಿದ್ಧಪಡಿಸಲಾಗಿದೆ ಎಂದರು.

ನಿತ್ಯ ಅನ್ನಸಂತರ್ಪಣೆ ಆರಂಭವಾದ ಬಳಿಕ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಬೇರೆ ಬೇರೆ ಭಾಗದಿಂದ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಶುಕ್ರವಾರದಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ವಾಸ್ತುಗನುಗುಣವಾಗಿ ದೇವಳ ಜೀರ್ಣೋದ್ಧಾರ ಮಾಡಬೇಕು ಎನ್ನುವುದು ಭಕ್ತಾದಿಗಳ ಬಯಕೆಯೂ ಆಗಿದೆ ಎಂದರು.
ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಮಹತ್ಕಾರ್ಯ ಇದಾಗಿದ್ದು ದೇವಿಯ ಸದ್ಭಕ್ತರು, ನಂಬಿದ ಕುಟುಂಬದವರು, ಸಂಬಂಧಪಟ್ಟ ನಾಲ್ಕು ಮಾಗಣೆ ಗ್ರಾಮಸ್ತರು. ಊರ ಪರ‌ಊರ ಸಮಸ್ತ ಭಕ್ತಾಧಿಗಳು ಜೀರ್ಣೋದ್ದಾರ ಕಾರ್ಯದಲ್ಲಿ ಕೈಜೋಡಿಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಬಾಲಚಂದ್ರ ಪಿ.ಟಿ, ಸಂಪತ್ ಕುಮಾರ್ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಗೋಪಾಲ ದೇವಾಡಿಗ ಸೌಕೂರು, ಸುರೇಂದ್ರ ಶೆಟ್ಟಿ ಗುಲ್ವಾಡಿ, ಪ್ರಧಾನ ಅರ್ಚಕ ಅನಂತ ಅಡಿಗ, ವಾಸ್ತು ತಜ್ಞರಾದ ಸರ್ವೇಶ್ ತಂತ್ರಿ ಬೆಳ್ಮಣ್ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!