spot_img
Tuesday, March 31, 2026
spot_img

ಭಾಗವತ ಸುಧಾಕರ ಕೊಠಾರಿ ಅವರಿಗೆ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ

ಜನಪ್ರತಿನಿಧಿ ವಾರ್ತೆ] ಬಡಗುತಿಟ್ಟಿನಲ್ಲಿ ಸಾಂಪ್ರಾದಾಯಿಕ ಶೈಲಿಯ ಭಾಗವತಿಕೆ ಮೂಲಕ ಪ್ರಸಿದ್ಧಿ ಪಡೆದಿರುವ ಭಾಗವತ ಸುಧಾಕರ ಕೊಠಾರಿ ಯಳಜಿತ್ ಅವರಿಗೆ 2026ನೇ ಸಾಲಿನ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಫೆ.20 ಶುಕ್ರವಾರ ವಂಡ್ಸೆಯ ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಪ್ರತಿಷ್ಠಾನ ವರ್ಧಂತ್ಯೋತ್ಸವದ ಸಂದರ್ಭದಲ್ಲಿ ನಡೆಯಲಿದೆ.

ಸಂಪ್ರದಾಯದ ಚೌಕಟ್ಟಿನಲ್ಲಿಯೇ ಪೌರಾಣಿಕ ಪ್ರಸಂಗಗಳಿಗೆ ಜೀವ ತುಂಬುತ್ತಾ ಬರುತ್ತಿರುವ ಸುಧಾಕರ ಕೊಠಾರಿ ಏರು ಸ್ಥಾಯಿಯ ಮೂಲಕವೇ ಅಭಿಮಾನಿಗಳ ಮನ ಗೆದ್ದವರು. ಭಾಗವತರಾಗಿ 31 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಪ್ರತಿಭಾ ಸಂಪನ್ನ ಇವರು.

ನಾಗು ಕೊಠಾರಿ-ಚಂದು ಕೊಠಾರಿಯವರ ಪುತ್ರರಾಗಿ 1978 ರಲ್ಲಿ ಜನಿಸಿದ ಇವರು, ಸ.ಕಿ.ಪ್ರಾ.ಶಾಲೆ ಯಳಜಿತ್‌ನಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣ, ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಯಕ್ಷಗಾನದಿಂದ ಆಸಕ್ತರಾಗಿದ್ದ ಇವರು ವಿದ್ಯಾರ್ಥಿದಿಸೆಯಲ್ಲಿಯೇ ಸ್ಥಳೀಯ ಶ್ರೀ ಸಿದ್ಧಿವಿನಾಯಕ ದುರ್ಗಾಪರಮೇಶ್ವರಿ ಸಾಂಸ್ಕೃತಿಕ ಸಂಘದಲ್ಲಿ ವೇಷ ಮಾಡುತ್ತಿದ್ದರು. ಇವರ ಉತ್ಸಾಹವನ್ನು ಗಮನಿಸಿದ ಸಂಗೀತ ಗುರುಗಳಾದ ಮಂಗೇಶ ಶೆಣೈ ಯಳಜಿತ್, ಜಗದೀಶ ಭಟ್ ಹರೆಗುಡಿ ಅವರ ಪ್ರೋತ್ಸಾಹದಿಂದ ಶಾಸ್ತ್ರೀಯವಾಗಿ ಹೇರಂಜಾಲು ವೆಂಕಟರಮಣ ಗಾಣಿಗರಿಂದ ಭಾಗವತಿಕೆ ಅಭ್ಯಾಸ ಮಾಡಿ, ತನ್ನ 17ನೇ ವಯಸ್ಸಿನಲ್ಲಿ ಬಗ್ವಾಡಿ ಮೇಳಕ್ಕೆ ಸಂಗೀತಗಾರರಾಗಿ ಸೇರ್ಪಡೆಯಾದರು. ನಂತರ ಮಾರಣಕಟ್ಟೆ ಮೇಳಕ್ಕೆ ಸೇರ್ಪಡೆ, ಅಲ್ಲಿ ಎರಡು ವರ್ಷ ಸಂಗೀತಗಾರರಾಗಿ ನಂತರ ಸಹಭಾಗವತರಾಗಿ ಮುಂದುವರಿದರು. ಈ ವರ್ಷದಿಂದ ಹಟ್ಟಿಯಂಗಡಿ ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಕಂಠಸಿರಿಯಲ್ಲಿ ಜೀವ ಪಡೆಯುವ ಹಿಂದೋಳ, ಮಧ್ಯಮಾವತಿ, ಮೋಹನ, ಸಾವೇರಿ ರಾಗಗಳ ಪದ್ಯಗಳು ಅನನ್ಯ. ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾದ ನಾರಾಯಣ ಶಬರಾಯ ನಿರ್ದೇಶನದ ಸಂಪೂರ್ಣ ರಾಮಾಯಣ ಯಕ್ಷಗಾನದಲ್ಲಿಯೂ ಇವರ ಭಾಗವತಿಕೆ ಇದೆ.

ಇವರ ಪ್ರತಿಭೆಯನ್ನು ಗುರುತಿಸಿ ಈಗಾಗಲೇ ಗಣೇಶೋತ್ಸವ ಸಮಿತಿ ಯಳಜಿತ್, ಯಕ್ಷಾಭಿಮಾನಿ ಬಳಗ ಹೊಸೂರು, ಶ್ರೀ ಸಿದ್ಧಿವಿನಾಯಕ ದುರ್ಗಾಪರಮೇಶ್ವರಿ ಸಾಂಸ್ಕೃತಿಕ ಸಂಘ ಹರೆಗುಂಡಿ, ಯಳಜಿತ್ ಹುಟ್ಟೂರ ಅಭಿಮಾನಿ ಬಳಗ ಯಳಜಿತ್ ವತಿಯಿಂದ ಸನ್ಮಾನ, ಮುಂಬಯಿ, ಹೈದರಬಾದ್‌ಗಳಲ್ಲಿ ಸನ್ಮಾನಿತರಾಗಿದ್ದಾರೆ.

ಬಡಗುತಿಟ್ಟಿನ ಪ್ರಸಿದ್ಧ ಭಾಗವತರಾಗಿ ಗುರುತಿಸಿಕೊಂಡಿರುವ ಇವರ ಪ್ರತಿಭೆಗೆ ಯೋಗ್ಯವಾಗಿಯೇ ರಾಜ್ಯೋತ್ಸವ ಪ್ರಶಸಿ ಪುರಸ್ಕೃತ ತೆಂಕು ಬಡಗಿನ ಸವ್ಯಸಾಚಿ ವಂಡ್ಸೆ ನಾರಾಯಣ ಗಾಣಿಗ ಸಂಸ್ಮರಣ ಪ್ರಶಸ್ತಿ ಲಭಿಸಿದೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!