Sunday, September 8, 2024

ಪ್ರಜ್ವಲ್‌ ರೇವಣ್ಣ ಪ್ರಕರಣ : ಸಿಬಿಐಯನ್ನು ಕರಪ್ಷನ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್ ಎಂದವರಿಗೆ ಈಗ ವಿಶ್ವಾಸ ಬಂತಾ ? : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಮೈಸೂರು) : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ರೀತ್ಯ ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಮಾಧ್ಯಮ ವರದಿಗಾರರಿಗೆ ಪ್ರತಿಕ್ರಿಯಿಸಿ ಮಾತನಾಡಿದ ಸಿಎಂ, ಬಿಜೆಪಿಯವರು ಯಾವತ್ತಾದರೂ ಒಂದು ಪ್ರಕರಣವಾದರೂ ಸಿಬಿಐಗೆ ಕೊಟ್ಟಿದ್ದಾರಾ? ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಪ್ರಕರಣ, ಒಂದಂಕಿ ಲಾಟರಿ ಪ್ರಕರಣ, ಸಚಿವರಾದ ಕೆ.ಜೆ. ಜಾರ್ಜ್‌ ಅವರ ಮೇಲಿನ ಆರೋಪ, ಪರೇಶ್‌ ಮೇಸ್ತಾ ಸಾವಿನ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಹಿಂದೆ ಬಿಜೆಪಿಯವರೇ ಸಿಬಿಐ ಯನ್ನು ಕರಪ್ಷನ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್ ಎಂದು ಬಣ್ಣಿಸಿದ್ದಾರೆ. ದೇವೇಗೌಡರು ಚೋರ್‌ ಬಚಾವೋ ಸಂಸ್ಥೆ ಎಂದು ಹೇಳಿದ್ದರು. ಈಗ ಸಿಬಿಐ ಮೇಲೆ ಅವರಿಗೆ ವಿಶ್ವಾಸ ಬಂತಾ? ನನಗೆ ಸಿಬಿಐ ಮೇಲೆ ವಿಶ್ವಾಸವಿದೆ. ಆದರೆ, ನಮ್ಮ ಪೊಲೀಸರ ಬಗ್ಗೆ ಹೆಚ್ಚು ನಂಬಿಕೆ ಇದೆ. ಅದಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ ಎಂದು ಹೇಳಿದರು.

ನಮ್ಮ ಸರ್ಕಾರ ಕಾನೂನು ರೀತ್ಯ ನಡೆಯುತ್ತಿರುವ ಕೆಲಸದಲ್ಲಿ, ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅವರು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಾರೆಂದು ನಂಬಿದ್ದೇನೆ. ನಾನು ಯಾವತ್ತೂ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿ ಎಂದು ಹೇಳಿಲ್ಲ, ಹೇಳುವುದೂ ಇಲ್ಲ. ಈ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ತನಿಖೆಯ ಅಗತ್ಯವಿಲ್ಲ. ಎಲ್ಲ ಅಪರಾಧ ಪ್ರಕರಣಗಳ ತನಿಖೆ ಯಾರು ಮಾಡುತ್ತಾರೆ? ನಮ್ಮ ಪೊಲೀಸರಲ್ಲವೇ? ಅವರದ್ದೇ ವಿಶೇಷ ತನಿಖಾದಳ ರಚಿಸಿರುವುದಲ್ಲವೇ? ನಮ್ಮ ಪೊಲೀಸರನ್ನು ನಾವು ನಂಬಬೇಕಲ್ಲವೆ? ಎಂದು ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣನವರ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ನಾನಾಗಲೀ, ಡಿ.ಕೆ.ಶಿವಕುಮಾರ್‌ ಆಗಲೀ, ಸರ್ಕಾರದ ಯಾರೊಬ್ಬರೂ ಹಸ್ತಕ್ಷೇಪ ಮಾಡುತ್ತಿಲ್ಲ. ನನಗೆ ಎಸ್.ಐ.ಟಿ. ಮೇಲೆ ವಿಶ್ವಾಸವಿದೆ. ಸತ್ಯಾಸತ್ಯತೆ ಹೊರಬರುವ ನಂಬಿಕೆ ಇದೆ ಎಂದು ಅವರು ಹೇಳಿದರು.

ಇನ್ನು, ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರಳ ಸಾಧನೆ ಶ್ಲಾಘನೀಯ. ಈ ವಸತಿ ಶಾಲೆಗಳ ಇನ್ನಷ್ಟು ಮಕ್ಕಳು ರ್ಯಾಂಕ್ ಪಡೆಯಬೇಕು, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕೆಂದು ಆಶಿಸುತ್ತೇನೆ ಎಂದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಯ ಉದ್ದೇಶವೇ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದಾಗಿದೆ. 90ರ ದಶಕದಲ್ಲಿ ಹೆಂಡದಂಗಡಿ, ಸಾರಾಯಿ ಅಂಗಡಿ ಬೇಡ, ವಸತಿ ಶಾಲೆ ಬೇಕು ಎಂಬುದು ದಲಿತ ಹೋರಾಟದ, ದಲಿತ ಸಂಘರ್ಷ ಸಮಿತಿಯವರ ಘೋಷಣೆಯಾಗಿತ್ತು. 1994 ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕಾರಣ ಮತ್ತು ನಾನು ಕೂಡ ಗ್ರಾಮೀಣ ಪ್ರದೇಶದಿಂದ ಬಂದವನಾದ್ದರಿಂದ ಮೊರಾರ್ಜಿ ವಸತಿ ಶಾಲೆಗಳನ್ನು ಸ್ಥಾಪಿಸಲಾಯಿತು. ಇಂದು ಹೋಬಳಿಗೊಂದರಂತೆ 800 ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!