Sunday, September 8, 2024

ಪುಣ್ಯ ಕಾರ್ಯಗಳು ವೃದ್ಧಿಸುವ ಅಕ್ಷಯ ತೃತೀಯ

“ನಾವು ಮಾಡಿದ ಪುಣ್ಯ ಕಾರ್ಯಗಳು ಶಾಶ್ವತವಾಗಿರಬೇಕಾದರೆ ಅಕ್ಷಯ ತೃತೀಯ ಎಂಬ ಈ ಶುಭದಿನದಲ್ಲಿ ಮಾಡಿ” ಎನ್ನುವ ಈ ಹಿರಿಯರ ಮಾತು ಭಾವನಾತ್ಮಕವಾದ ಒಂದು ಅತೀತ ನಂಬಿಕೆಯನ್ನು ಉಳಿಸಿಬಿಡುತ್ತದೆ. ಸಮೃದ್ಧಿಯ ಹಬ್ಬವೆಂದೇ ಜನಜನಿತವಾಗಿರುವ ಅಕ್ಷಯ ತೃತೀಯವು ಮನೆಗೂ ಮನಸಿಗೂ ಅದೃಷ್ಟ ಮತ್ತು ನೆಮ್ಮದಿ ತರುವ ನಂಬಿಕೆ ಹಾಸುಹೊಕ್ಕಾಗಿದೆ.

ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸ ಶುಕ್ಲಪಕ್ಷದ ಮೂರನೇ ದಿನವನ್ನು ಅಕ್ಷಯ ತೃತೀಯ ಎನ್ನುತ್ತಾರೆ. ಈ ವರ್ಷದ ಅಕ್ಷಯ ತೃತೀಯವು ರೋಹಿಣಿ ನಕ್ಷತ್ರದ ಶೋಭನ್ ಯೋಗದಲ್ಲಿ ಆಚರಿಸಲಾಗುವುದು ವಿಶೇಷ. ಈ ಶುಭಯೋಗದ ಅಕ್ಷಯ ತೃತೀಯವು ಈ ವರ್ಷದಲ್ಲಿ ಬಂದಿರುವುದು ಬರೋಬ್ಬರಿ 30 ವರ್ಷಗಳ ನಂತರ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ, ಅಕ್ಷಯ ಎಂದರೆ ಸಂಸ್ಕೃತದ ಶಾಶ್ವತ ಎನ್ನುವ ಅರ್ಥವಿದೆ. ಕಡಿಮೆಯಾಗದೇ ಇರುವುದು ಅಥವಾ ವೃದ್ಧಿಸುವುದು ಎನ್ನುವುದಕ್ಕೆ ಪರ್ಯಾಯ ಪದವಾಗಿ ಕನ್ನಡದಲ್ಲಿ ಅರ್ಥೈಸಿಕೊಳ್ಳಬಹುದು. ಧನ, ಧಾನ್ಯ, ಸಂಪತ್ತು, ಅದೃಷ್ಟ, ಪುಣ್ಯ ಇವೆಲ್ಲವೂ ಅಕ್ಷಯಿಸುತ್ತಲೇ ಇರಲಿ ಎನ್ನುವ ಈ ಶುಭಪ್ರದ ದಿನವನ್ನು ಆರಿಸಿಕೊಂಡಿರುವುದಕ್ಕೆ ಪೌರಾಣಿಕ ಹಿನ್ನೆಲೆಯೂ ಸಾಕಷ್ಟು ಇವೆ.

ಶ್ರೀಕೃಷ್ಣನಿಗೂ ಅಕ್ಷಯ ತೃತೀಯಕ್ಕೂ ಇರುವ ಸಂಬಂಧವೇನು ?

ಈ ದಿನ ಬ್ರಹ್ಮದೇವನ ಮಗ ಅಕ್ಷಯಕುಮಾರ ಜನಿಸಿರುವನೆಂದೂ ಭಗಿರಥ ಪ್ರಯತ್ನದ ಗಂಗಾವತರಣ ನಡೆದದ್ದೂ ಅಕ್ಷಯ ತೃತೀಯ ದಿನದಂದೇ ಆಗಿರುತ್ತದೆ. ಮಹಾಭಾರತದಲ್ಲಿ ಪಾಂಡವರು ವನವಾಸ ಸಂದರ್ಭದಲ್ಲಿ ಪಾಂಡವರಿಗೆ ಆಹಾರ ಹಾಗೂ ಅತಿಥಿಗಳಿಗೆ ಭೋಜನ ನೀಡಲು ಆಹಾರದ ಕೊರತೆಯಿಂದ ದೌಪದಿ ದುಃಖಿಸಿದ ಸಂದರ್ಭದಲ್ಲಿ ಶ್ರೀ ಕೃಷ್ಣನು, ತಯಾರಿಸಿದ ಆಹಾರ ಎಂದಿಗೂ ಕ್ಷಯವಾಗದಂತೆ ಪಾತ್ರೆಯೊಂದನ್ನು ದೌಪದಿಗೆ ನೀಡಿದನು. ಈ ಅಕ್ಷಯ ಪಾತ್ರೆಯಲ್ಲಿ ಎಂದೂ ಕರಗದ ಪದಾರ್ಥಗಳು ಭೋಜನಕ್ಕೆ ವಿಫುಲವಾಗಿ ದೊರೆಯುತ್ತಿತ್ತು. ಶ್ರೀ ಕೃಷ್ಣನು ಈ ಅಕ್ಷಯ ಪಾತ್ರೆಯನ್ನು ನೀಡಿದ್ದು ಅಕ್ಷಯ ತೃತೀಯದ ದಿನವಾಗಿದೆ. ಕೃತಯುಗವೂ ಆರಂಭವಾಗಿದ್ದು ಈ ಅಕ್ಷಯತೃತೀಯ ದಿನದಂದೇ ಎಂದು ಪುರಾಣ ಹೇಳುತ್ತದೆ. ಪದ್ಮಪುರಾಣದ ಪ್ರಕಾರ ವಿಷ್ಣು ನಾರದನಿಗೆ ಹೇಳಿದಂತೆ ಈ ಪುಣ್ಯ ಪರ್ವಕಾಲದಲ್ಲಿ ಮಾನವರು ಯಾವುದೇ ಪುಣ್ಯಕಾರ್ಯಗಳನ್ನು ಮಾಡಿದರೂ ಮರಣಾನಂತರದ ಸಾಯುಜ್ಯ ಪುಣ್ಯಫಲಪ್ರದವಾಗಿರುತ್ತದೆ ಎಂದು. ಶ್ರೀಕೃಷ್ಣನಿಗೆ ಅವಲಕ್ಕಿ ಕೊಟ್ಟು ಸ್ನೇಹ ಸಂಪಾದನೆ ಮಾಡಿದ ಸುಧಾಮನ ಬಡತನ ನೀಗಿದ್ದೂ ಈ ಅಕ್ಷಯ ತೃತೀಯ ದಿನವೆಂದು ಪುರಾಣ ಪ್ರತೀತಿ ಇದೆ.

ಜೈನರಿಗೂ ಇದು ಪರ್ವ ಕಾಲ :

ಈ ಅಕ್ಷಯ ತೃತೀಯ ಹಿಂದೂ ಧರ್ಮ ಮಾತ್ರವಲ್ಲದೇ ಜೈನರಿಗೂ ಇದು ಪರ್ವಕಾಲ. ಪ್ರಥಮ ತೀರ್ಥಂಕರ ಭಗವಾನ್ ಆದಿನಾಥರು ಮುನಿ ಅವಸ್ಥೆಯಲ್ಲಿ ಆಹಾರ ಭಿಕ್ಷೆಗೆ ವಿಹಾರ ಆರಂಭಿಸುತ್ತಾರೆ. ಆದರೆ ಜೈನ ಜನರು ಮುನಿಗಳಿಗೆ ಆಹಾರ ನೀಡುವ ವಿಧಿ ತಿಳಿದುಕೊಂಡಿರುವುದಿಲ್ಲ. ಆರು ತಿಂಗಳು ಆದಿನಾಥರಿಗೆ ಆಹಾರವಿರುವುದಿಲ್ಲ. ಶ್ರೇಯಾಂಸ ಮಹಾರಾಜರಿಗೆ ಆಹಾರ ನೀಡುವ ವಿಧಿ ತಿಳಿದಿರುತ್ತದೆ. ಭವಸ್ಮರಣೆಯಿಂದ ಆಹಾರ ದಾನಮಾಡುವ ವಿಧಿ ತಿಳಿದ ಮಹಾರಾಜ ಆದಿನಾಥರಿಗೆ ಆಹಾರ ದಾನ ಮಾಡಿದ ಪುಣ್ಯದಿನವೇ ಅಕ್ಷಯ ತೃತೀಯ ಎನ್ನುವ ನಂಬಿಕೆ ಅವರಲ್ಲಿದೆ. ಈ ಪರ್ವಕಾಲವು ಜೀವವನದಲ್ಲಿ ಮಾನಸಿಕ, ದೈಹಿಕ ಸುಖವನ್ನು ಪಡೆದು ಪಾಪಗಳ ನಿವಾರಣೆಯಾಗಿ, ಪುಣ್ಯ ವೃದ್ಧಿಸುತ್ತದೆ ಎನ್ನುವ ಬಲವಾದ ಧಾರ್ಮಿಕ ನಂಬಿಕೆಯಿಂದ ಈ ಅಕ್ಷಯ ತೃತೀಯಕ್ಕೆ ಜೈನರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಅಕ್ಷಯ ತೃತೀಯ ದಿನದಂದು ಚಿನ್ನ ಬೆಳ್ಳಿಗಳನ್ನು ಖರೀದಿಸಿದರೆ ಮನೆಗೆ ಮಂಗಳಕರವಾಗುತ್ತದೆ. ಈ ದಿನ ಪಡೆದ ವಸ್ತುಗಳು ಯಾವತ್ತೂ ಶಾಶ್ವತವಾಗಿರುತ್ತದೆ. ಕರಗುವುದಿಲ್ಲ ಮತ್ತು ಕಳೆದುಕೊಳ್ಳುವುದಿಲ್ಲ ಎನ್ನುವ ನಂಬಿಕೆ ಜನರಲ್ಲಿ ಗಾಢವಾಗಿ ಬೇರೂರಿದೆ. ಹಾಗಾಗಿ ಆಸ್ತಿ ಖರೀದಿ, ವ್ಯಾಪಾರ ಆರಂಭ, ಹಲವಾರು ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ತಮ್ಮ ತಮ್ಮ ಭಾವನಾತ್ಮಕ ನಂಬಿಕೆಯಲ್ಲಿ ಪರವಶರಾಗಿರುತ್ತಾರೆ.

ಈ ಅಕ್ಷಯ ತೃತೀಯ ದಿನ ಪಾರಂಪರಿಕವಾಗಿ ನಡೆದು ಬಂದ ಪದ್ಧತಿ, ಆಚಾರ-ವಿಚಾರಗಳೆಂದು ಉಲ್ಲೇಖಿಸಿ ಹೇಳುವುದು ಕಷ್ಟ. ಏಕೆಂದರೆ ನಮ್ಮ ಹಿಂದೂ ಧರ್ಮಾಚರಣೆಯಲ್ಲಿ ಅಕ್ಷಯತೃತೀಯವನ್ನು ಒಂದು ವಿಶೇಷ ದಿನವೆಂದು ಮಹತ್ವ ನೀಡಿದ್ದೇ ಸರಿಸುಮಾರು ಹತ್ತು ಹದಿನೈದು ವರ್ಷಗಳಿಂದ ಈಚೆಗೆ. ಹತ್ತು ಹಲವಾರು ಹಬ್ಬಗಳ ನಡುವೆ ಅಕ್ಷಯ ತೃತೀಯ ಬಂದು ಹೋಗಿತ್ತಾದರೂ ಜ್ಯೋತಿಷ್ಯ, ಪಂಚಾಂಗಗಳು ಶುಭಯೋಗದ ದಿನಗಳನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿಯೂ ಪರಿಚಯಿಸುತ್ತದೆ. ಇಂತಹ ದಿನವನ್ನು ಸ್ವಲ್ಪ ವೈಭವೀಕರಿಸುತ್ತಾ ಬಲವಾದ ನಂಬಿಕೆಗಳು ಪರವಶಗೊಳಿಸುವಂತೆ ಮಾಡುತ್ತಿದೆ. ಜನರು ಇಂತಹ ನಂಬಿಕೆಯಲ್ಲಿ ಪ್ರತಿಫಲಗಳನ್ನು ಅನಿರೀಕ್ಷಿತವಾಗಿ ಪಡೆಯುವಾಗಲೂ ಶ್ರದ್ಧೆ, ನಂಬಿಕೆಯ ವಿಚಾರಗಳು ಮತ್ತಷ್ಟು ಪ್ರಚಾರಗೊಳ್ಳುತ್ತಾ ಹೋಯಿತು. ನಡುವೆ ಬೆಲೆಬಾಳುವ ವಸ್ತುಗಳನ್ನೂ ಖರೀದಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರು ಜನರಲ್ಲಿನ ಭಾವನಾತ್ಮಕ ದೌರ್ಬಲ್ಯವನ್ನು ಧನಾತ್ಮಕವಾಗಿ ಪಡೆದು ಆಕರ್ಷಕವಾದ ವ್ಯಾಪಾರದಲ್ಲಿ ತೊಡಗುತ್ತಾರೆ. ಈಗ ಅಕ್ಷಯ ತೃತೀಯ ಎನ್ನುವುದು ವ್ಯಾಪಾರೀಕರಣದ ಒಂದು ಭಾಗವಾಗಿರುವುದು ಇತಿಹಾಸ.

ಅಕ್ಷಯ ತೃತೀಯ ಉತ್ಕೃಷ್ಟ ಪುಣ್ಯ ಕಾಲ :

ಅಕ್ಷಯ ತೃತೀಯ ಕೇವಲ ಧನ, ಧಾನ್ಯ, ಸಂಪತ್ತು ವೃದ್ಧಿಯಾಗುವುದು ಎನ್ನುವ ನಂಬಿಕೆ ಒಂದು ಕೋನದಲ್ಲಿ ಸ್ವಾರ್ಥವನ್ನು ಬಿಂಬಿಸುತ್ತದೆಯಾದರೂ ದಾನ ಧರ್ಮವೇ ಈಅಕ್ಷಯ ತೃತೀಯದ ಮೂಲ ಉದ್ದೇಶ. ಯಾರು ಈ ದಿನದಂದು ಬಡಬಗ್ಗರಿಗೆ, ನಿರ್ಗತಿಕರಿಗೆ ದಾನ ಮಾಡುತ್ತಾರೋ ಅವರ ಮನೆಯ ನೆಮ್ಮದಿ, ಶಾಂತಿ, ಆರೋಗ್ಯ ವೃದ್ಧಿಯಾಗುವುದೇ ಮಾನವ ಧರ್ಮದ ಸಕಾರಾತ್ಮಕ ಚಿಂತನೆಯಾಗಿರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಕಾರಣಗಳಿವೆ. ಅಕ್ಷಯ ತೃತೀಯ ದಿನವೂ ಒಂದು ವೈಜ್ಞಾನಿಕ ಹಿನ್ನೆಲೆಯ ಪರ್ವವೇ ಆಗಿದೆ. ಈ ವೈಶಾಖ ಮಾಸ ಸುಡುಬಿಸಿಲ ಕಾಲ. ಅನೇಕ ಬಡವರು, ನಿರ್ಗತಿಕರಿಗೆ, ಪಶುಪಕ್ಷಿಗಳಿಗೆ ನೀರು, ಅನ್ನ ಆಹಾರದ ಕೊರತೆ ಇರುತ್ತದೆ. ಅದರಲ್ಲೂ ನೀರಿನ ಹಾಹಾಕಾರ ಹೆಚ್ಚು. ಹಿಂದಿನ ಕಾಲದಲ್ಲಿ ಬಳಲಿ ಬಂದವನಿಗೆ ಬಾಯಾರಿಕೆಯ ದಾಹ ತೀರಿಸಲು ಮಣ್ಣಿನ ಮಡಿಕೆಯಲ್ಲಿ ನೀರು ದಾನ ಮಾಡುತ್ತಿದ್ದರು, ಆಹಾರ ಇಲ್ಲದಿದ್ದರೂ ನೀರಿನ ಕೊರತೆ ಇರಬಾರದು. ಸಾಯುವಾಗಲೂ ಒಂದು ಗುಟುಕು ನೀರು ಸೇವಿಸಿಯೇ ಸಾಯುಜ್ಯ ಸೇರುವ ನಂಬಿಕೆಯು ಜಲದಾನದ ಮಹತ್ವ ತಿಳಿಸುತ್ತದೆ. ದಾರಿಹೋಕರಿಗೆ ಪಾನಕದಂತಹ ಪಾನೀಯವನ್ನು ನೀಡುವುದರ ಪುಣ್ಯದ ಕೆಲಸ ಮತ್ತೊಂದಿಲ್ಲ. ಅಲ್ಲದೆ ವಯೋವೃದ್ಧರಿಗೆ, ಬಡವರಿಗೆ, ನಿರ್ಗತಿಕರಿಗೆ ಛತ್ರಿ ಮತ್ತು ಪಾದರಕ್ಷೆಗಳನ್ನು ದಾನ ಮಾಡುವುದರಿಂದಲೂ ದಾನಿಯ ಮನೆಯ ಪುಣ್ಯ, ನೆಮ್ಮದಿ, ಸಂತೋಷ ವೃದ್ಧಿಸುತ್ತದೆ. ಆದ್ದರಿಂದಲೇ ಜೈನ ಧರ್ಮದಲ್ಲಿ ಆಹಾರ ದಾನವೇ ಅಕ್ಷಯ ತೃತೀಯದ ಉತ್ಕೃಷ್ಟ ಪುಣ್ಯಕಾರ್ಯವೆನಿಸಿದೆ.

ಸಾಲ ಮಾಡಿ ಚಿನ್ನ ಖರೀದಿಸಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಬದಲು ಮಾನವೀಯತೆಯ ಮನೋಭಾವವಿರುವ ಮಾನವ ಅಕ್ಷಯತೃತೀಯದಂದೇ ಪುಣ್ಯಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಜೀವನದುದ್ದಕ್ಕೂ ನೆಮ್ಮದಿ, ಸುಖ, ಶಾಂತಿ ಅಕ್ಷಯಿಸುತ್ತಲೇ ಇರುತ್ತದೆ ಎನ್ನುವುದು ಭಾವನಾತ್ಮಕವಾಗಿಯೂ
ಮತ್ತು ಭೌತಿಕವಾಗಿಯೂ ಸತ್ಯ.

ಉಮೇಶ್ ಆಚಾರ್ಯ, ಕೊಳಂಬೆ
ಲೇಖಕರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!