spot_img
Wednesday, January 22, 2025
spot_img

ನವೋದಯ ಸ್ವಸಹಾಯ ಗುಂಪುಗಳಿಗೆ ಇನ್ನೂ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ-ಡಾ.ಎಂ.ಎನ್.ರಾಜೇಂದ್ರ ಕುಮಾರ್

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಶಂಕರನಾರಾಯಣ ಶಾಖೆ ಉದ್ಘಾಟನೆ
ಶಂಕರನಾರಾಯಣ, ಅ.11: ನವೋದಯ ಸ್ವಸಹಾಯ ಗುಂಪುಗಳ ಮೂಲಕ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದೆ. ಬಡ್ಡಿ ಶೋಷಣೆ ನಿಲ್ಲಬೇಕು. ಚಕ್ರ ಬಡ್ಡಿಯ ಸುಳಿಗೆ ಜನಸಾಮಾನ್ಯರು ಸಿಲುಕಬಾರದು. ನವೋದಯ ಸದಸ್ಯರಿಗೆ ಇನ್ನೂ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯಗಳು ಸಿಗಬೇಕು ಎನ್ನುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇನ್ನಷ್ಟು ಸ್ವಸಹಾಯ ಸಂಘಗಳ ಆರಂಭ ಮಾಡುವ ಮೂಲಕ ಅವರ ಅಭಿವೃದ್ದಿಗೆ ಶ್ರಮಿಸುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳು ಹಾಗೂ ನವೋದಯ ಪ್ರೇರಕರಿಗೂ ಉತ್ತೇಜಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 106ನೇ ಶಂಕರನಾರಾಯಣ ಶಾಖೆಯನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಹಕಾರಿ ಕ್ಷೇತ್ರ ಜನರ ಕ್ಷೇತ್ರ. ಆ ಅಭಿಮಾನದಿಂದ ಜನ ಬರುತ್ತಾರೆ. ಸಹಕಾರ ಸಂಘಗಳು ಎಲ್ಲಿಯೂ ವಿಲೀನ ಆಗುವುದಿಲ್ಲ. ಜನರಿಗೆ ಆರ್ಥಿಕ ಶಕ್ತಿ ನೀಡಿ ಸ್ವಾವಲಂಬನೆಗೆ ಉತ್ತೇಜಿಸುತ್ತವೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಜನರ ಬ್ಯಾಂಕು, ಜನರ ಬಳಿಗೆ ತೆರಳಿ ಕೆಲಸ ಮಾಡಲಾಗುತ್ತಿದೆ. ಬ್ಯಾಂಕು ಜನರ ಬಳಿಗೆ ತೆರಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಗೊಂದು ವಾಹನವನ್ನು ಶೀಘ್ರ ಬಿಡುಗಡೆ ಮಾಡಲಾಗುತ್ತದೆ. ಗ್ರಾಮಾಂತರ ಪ್ರದೇಶದ ಜನರ ಬಳಿಗೇ ತೆರಳಿ ಅವರ ಆರ್ಥಿಕ ಶಕ್ತಿ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಅಧಿಕ ಗುಂಪು ರಚನೆಗೆ ಬಹುಮಾನ
2022ರ ಅಂತ್ಯದೊಳಗೆ 60 ಸಾವಿರ ನವೋದಯ ಗುಂಪುಗಳು ರಚನೆಯ ಗುರಿ ಹೊಂದಿದೆ. ಡಿಸೆಂಬರ್ ಅಂತ್ಯದೊಳಗೆ ಅತೀ ಹೆಚ್ಚು ಸ್ವಸಹಾಯ ಗುಂಪು ರಚಿಸುವ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ 3 ಲಕ್ಷ ಬಹುಮಾನ, ಹಾಗೆಯೇ ಮೇಲ್ವಿಚಾರಕರಿಗೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ನೀಡಿ ಉತ್ತೇಜಿಸಲಾಗುವುದು ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದ ಜಿ.ಎಸ್.ಆಚಾರ್ ಅವರ ಹುಟ್ಟೂರಲ್ಲಿ 106ನೇ ಶಾಖೆ ಉದ್ಘಾಟನೆಗೊಳ್ಳುತ್ತಿದೆ. 8.5 ಕೋಟಿ ಠೇವಣಾತಿ ಸಂಗ್ರಹ, 1300ಕ್ಕೂ ಹೆಚ್ಚು ಖಾತೆಗಳನ್ನು ತೆರೆದಿರುವುದು ಜನತೆ ನಮ್ಮ ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ ಎಂದ ಅವರು, ಜಿ.ಎಸ್.ಆಚಾರ್ ಸಭಾಭವನ ಅಭಿವೃದ್ದಿಗೆ ರೂ.50 ಸಾವಿರ ನೀಡುವುದಾಗಿ ತಿಳಿಸಿದರು.

ನೂತನ ಶಾಖೆಯ ಗಣಕೀಕರಣವನ್ನು ಶಂಕರನಾರಾಯಣ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ಸಚ್ಚಿದಾನಂದ ವೈದ್ಯ ಉದ್ಘಾಟಿಸಿದರು. ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಸಂತೋಷ ದೇವಾಡಿಗ ಭದ್ರತಾಕೋಶವನ್ನು ಉದ್ಘಾಟಿಸಿದರು.

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಾಜಿ ನಿರ್ದೇಶಕ ಜಿ.ಎಸ್. ಹರಿಪ್ರಸಾದ್ ಆಚಾರ್ ಮಾತನಾಡಿ ಈ ಹಿಂದೆಯೇ ಶಂಕರನಾರಾಯಣದಲ್ಲಿ ಎಸ್.ಸಿ.ಡಿಸಿಸಿ ಬ್ಯಾಂಕಿನ ಶಾಖೆಯ ತೆರೆಯುವ ಬಗ್ಗೆ ಯೋಚಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಆಗಲಿಲ್ಲ. ಆದರೆ ಈಗ ಇಲ್ಲಿ ಆಗುತ್ತಿರುವುದು ಸಂತೋಷ ತಂದಿದೆ ಎಂದರು.

ಕಟ್ಟಡ ಮಾಲಕ ಹೆಚ್. ಸದಾಶಿವ ನಾಯಕ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಕೆ.ಎಂ.ಎಫ್ ನಿರ್ದೇಶಕ ಗೋಪಾಲಕೃಷ್ಣ ಕಾಮತ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ರವೀಂದ್ರ ಬಿ., ನಿರ್ದೇಶಕರಾದ ಕೆ.ಹರಿಶ್ಚಂದ್ರ, ಬಿ.ಅಶೋಕ್ ಕುಮಾರ್ ಶೆಟ್ಟಿ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡ ಮಾಲಕ ಹೆಚ್. ಸದಾಶಿವ ನಾಯಕ್, ಶಂಕರನಾರಾಯಣ ಶಾಖೆಯ ಶಾಖಾ ವ್ಯವಸ್ಥಾಪಕ (ಪ್ರಭಾರ) ಚಂದ್ರಶೇಖರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಥಮ ಠೇವಣಿ ಪತ್ರ ವಿತರಣೆ, ಪ್ರಥಮ ಸಂಚಯ ಖಾತೆದಾರರಿಗೆ ಪಾಸ್ ಪುಸ್ತಕ ವಿತರಣೆ, ಪ್ರಥಮ ಸಾಲ ಪತ್ರ ವಿತರಣೆ, ಪ್ರಥಮ ಲಾಕರ್ ಕೀ ವಿತರಣೆ ನಡೆಯಿತು. ನೂತನ ಶಂಕರನಾರಾಯಣ ಶಾಖೆ ಉದ್ಘಾಟನೆ ಸಂದರ್ಭದಲ್ಲಿ ಈ ವ್ಯಾಪ್ತಿಯಲ್ಲಿ 51 ಗುಂಪು ರಚನೆಯಾಗಿದ್ದು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. 14 ನವೋದಯ ಸ್ವಸಹಾಯ ಗುಂಪುಗಳಿಗೆ ರೂ.55 ಲಕ್ಷ ಸಾಲ ವಿತರಣೆ ವಿತರಿಸಲಾಯಿತು. ಚೈತನ್ಯ ವಿಮಾ ಚೆಕ್ ವಿತರಿಸಲಾಯಿತು.

ದಿವ್ಯಾ ಮತ್ತು ಪ್ರತೀಕ್ಷಾ ಪ್ರಾರ್ಥಿಸಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮೊಳಹಳ್ಳಿ ಮಹೇಶ್ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!