Saturday, July 27, 2024

ತಾನೇ ಸತ್ತೇ ಎಂದು ನಿರೂಪಿಸಲು ತನ್ನ ಕಾರಿನಲ್ಲಿ ಅಮಾಯಕ ವ್ಯಕ್ತಿಯ ಜೀವಂತ ದಹಿಸಿದ ಕೊಲೆಗಾರ

ಕಾರ್ಕಳದ ಖಾಸಗಿ ಸರ್ವೇಯರ್‌ನಿಂದ ಕೃತ್ಯ: ಒಂದೇ ದಿನದಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

ಬೈಂದೂರು:ಜು.14: ಬೈಂದೂರು ಹೇನ್ಬೇರುವಿನ ನಿರ್ಜನ ಪ್ರದೇಶದಲ್ಲಿ ಕಾರಿನೊಂದಿಗೆ ವ್ಯಕ್ತಿ ಸುಟ್ಟು ಕರಕಲಾಗಿರುವ ಘಟನೆಗೆ ಬಿಗು ತಿರುವು ದೊರಕಿದ್ದು ಕೊಲೆಗಾರರ ತನ್ನನ್ನು ರಕ್ಷಿಸಿಕೊಳ್ಳಲು ಅಮಾಯಕ ವ್ಯಕ್ತಿಯನ್ನು ತನ್ನ ಕಾರಿನೊಳಗೆ ಬೆಂಕಿಹಾಕಿ ಕೊಲೆಗೈದಿರುವುದು ಬೆಳಕಿಗೆ ಬಂದಿದೆ. ಕೊಲೆಗೆ ಸಂಬಂಧಿಸಿ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಕಾರಿನೊಳಗೆ ಗುರುತು ಹಿಡಿಯದಷ್ಟು ಸುಟ್ಟು ಹೋಗಿರುವ ವ್ಯಕ್ತಿಯನ್ನು ಕಾರ್ಕಳ ಪರಿಸರದ ನಿವಾಸಿ ಮೇಸ್ತ್ರೀ ಕೆಲಸ ಮಾಡುತ್ತಿದ್ದ ಆನಂದ ದೇವಾಡಿಗ (55ವ) ಎಂದು ಗುರುತಿಸಲಾಗಿದೆ. ಕೊಲೆಗೆ ಕಾರಣನಾದ ವ್ಯಕ್ತಿಯನ್ನು ಕಾರ್ಕಳ ತಾಲೂಕು ಮಾಳ ಗ್ರಾಮದ ಖಾಸಗಿ ಸರ್ವೇಯರ್ ಸದಾನಂದ ಶೇರೆಗಾರ್ (52ವ), ಕೃತ್ಯಕ್ಕೆ ಸಹಕರಿಸಿದ ಹಿರ್ಗಾನ ಶಿವನಗರ ನಿವಾಸಿ ಶಿಲ್ಪಾ (30ವ) ಎಂಬಾಕೆಯನ್ನು ಬಂಧಿಸಲಾಗಿದೆ.

ಆಪಾದಿತರಿಗೆ ಕೃತ್ಯ ನಡೆಸಿ ಪರಾರಿಯಾಗಲು ಸಹಾಯ ಮಾಡಿದ ಅರೋಪಿತರಾದ ಸತೀಶ ಆರ್ ದೇವಾಡಿಗ (40ವ) ನಿತೀನ್ @ ನಿತ್ಯಾನಂದ ದೇವಾಡಿಗ (40ವ) ಬಂಧಿಸಿ ತನಿಖಾಧಿಕಾರಿಯವರ ಮುಂದೆ ಹಾಜರುಪಡಿಸಿ ದಸ್ತಗಿರಿ ಕ್ರಮ ಜರಗಿಸಲಾಗಿದೆ.
ಬುಧವಾರ ಬೆಳಿಗ್ಗೆ ಕಾರಿನೊಂದಿಗೆ ವ್ಯಕ್ತಿಯೋರ್ವ ಸುಟ್ಟು ಹೋಗಿರುವುದು ಪತ್ತೆಯಾಗುತ್ತಲೇ ಘಟನೆ ಸಂಬಂಧ ತನಿಖೆ ಆರಂಭಿಸಿದ ಬೈಂದೂರು ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಈ ಕೊಲೆ ಸಿನಿಮೀಯ ರೀತಿಯಲ್ಲಿದ್ದು ಖಾಸಗಿ ಸರ್ವೇಯರ್ ಆಗಿದ್ದ ಸದಾನಂದ ಶೇರುಗಾರ್ ಹಣ ಹಾಗೂ ಅವ್ಯಹಾರದಲ್ಲಿ ಸಿಲುಕಿಕೊಂಡಿದ್ದು ಅದರಿಂದ ಬಚವಾಗಲು ತಾನು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋದ ಕಥೆ ಕಟ್ಟಲು ಈ ನಾಟಕ ರೂಪಿಸಿದ್ದ. ಅದಕ್ಕೆ ಪೂರಕವಾಗಿ ಮಂಗಳವಾರ ಮಧ್ಯಾಹ್ನ ತನ್ನ ಸ್ನೇಹಿತೆ ಶಿಲ್ಪಾ ಎಂಬಾಕೆಯ ಸಹಾಯ ಕೇಳಿದ್ದ. ಶಿಲ್ಪಾ ತನ್ನ ಪರಿಚಿತ ವ್ಯಕ್ತಿ ಮೇಸ್ತ್ರೀ ಆನಂದ ದೇವಾಡಿಗ ಎನ್ನುವಾತನನ್ನು ಬಾರ್‌ಗೆ ಬರುವಂತೆ ತಿಳಿಸಿದ್ದು, ಬಾರ್‌ನಲ್ಲಿ ಆನಂದ ದೇವಾಡಿಗ ಎನ್ನುವಾತನಿಗೆ ಚೆನ್ನಾಗಿ ಕುಡಿಸಿದ್ದಾರೆ. ಮದ್ಯದಲ್ಲಿ ನಿದ್ರೆ ಮಾತ್ರೆಯನ್ನು ಬೆರೆಸಿದ್ದರು. ಆನಂದ ದೇವಾಡಿಗನನ್ನು ತನ್ನ ಕಾರಿನಲ್ಲಿ ಹಾಕಿಕೊಂಡು ಇವರು ಬೈಂದೂರಿನತ್ತ ಹೊರಟಿದ್ದರು. ರಾತ್ರಿ 12.30 ಗಂಟೆಯ ಸುಮಾರಿಗೆ ಕಾರು ಸಾಸ್ತಾನ ಟೋಲ್‌ಗೇಟ್‌ನಲ್ಲಿ ಮಹಿಳೆ ಟೋಲ್ ಪಾವತಿಸಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬೈಂದೂರು ಹೆನ್‌ಬೇರುವಿನಲ್ಲಿ ಕಾರಿಗೆ ಪೆಟ್ರೋಲ್ ಹಾಕಿ ಬೆಂಕಿ ಹಾಕಿ ಇವರು ಮರಳಿದ್ದು, ಇನ್ನೀರ್ವರು ಆರೋಪಿಗಳು ಹಂತಕರನ್ನು ಕರೆದುಕೊಂಡು ಹೋಗಿ ಬೆಂಗಳೂರು ಬಸ್‌ಗೆ ಬಿಟ್ಟಿದ್ದಾರೆ.

ತಾನು ಆತ್ಮಹತ್ಯೆ ಮಾಡಿಕೊಂಡೇ ಎಂದು ನಂಬಿಸುವ ಸಲುವಾಗಿ ಹಂತಕ ಬೆಂಗಳೂರಿಗೆ ಹೊರಟಿದ್ದು ದುರದೃಷ್ಟವಶಾತ್ ಬಸ್ ಹಾಳಾಗಿ ಮೂಡಬಿದ್ರೆಯಿಂದ ಆತ ಮರಳಿ ಕಾರ್ಕಳಕ್ಕೆ ಬರುವಾಗ ಪೊಲೀಸರು ಸದಾನಂದ ಶೇರುಗಾರ ಹಾಗೂ ಶಿಲ್ಪರನ್ನು ಬಂಧಿಸಿದ್ದಾರೆ.

ಈ ಪ್ರಕರಣದ ಆರೋಪಿ ಪತ್ತೆ ಕಾರ್ಯಚರಣೆಯು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪ ಉಡುಪಿ ಜಿಲ್ಲೆ ಹಾಗೂ ಶ್ರೀಕಾಂತ ಕೆ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರ ಸೂಚನೆಯಂತೆ ಸಂತೋಷ್ ಕಾಯ್ಕಿಣಿ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ವೃತ್ತ, ಪವನ ನಾಯಕ ಕಾನೂನು ಮತ್ತು ಸುವ್ಯವಸ್ಥೆ, ಪಿ.ಎಸ್.ಐ. ಬೈಂದೂರು ಪೊಲೀಸ್ ಠಾಣೆ, ವಿನಯ ಎಂ.ಕೊರ್ಲಹಳ್ಳಿ, ಕಾನೂನು ಮತ್ತು ಸುವ್ಯವಸ್ಥೆ, ಪಿ.ಎಸ್.ಐ. ಗಂಗೊಳ್ಳಿ ಪೊಲೀಸ್ ಠಾಣೆ, ಹಾಗೂ ಸಿಬ್ಬಂದಿಯವರಾದ ಮೋಹನ ಪೂಜಾರಿ, ನಾಗೇಂದ್ರ, ಕೃಷ್ಣ ದೇವಾಡಿಗ, ಶಾಂತರಾಮ ಶೆಟ್ಟಿ, ಅಣ್ಣಪ್ಪ ಪೂಜಾರಿ, ಚಂದ್ರಶೇಖರ, ಸುಜಿತ್, ಶ್ರೀಧರ, ಪ್ರಿನ್ಸ್, ಚಾಲಕರಾದ ಚಂದ್ರಶೇಖರರವರು ಸಹಕರಿಸಿದ್ದರು.

ಬುಧವಾರ ಬೆಳಿಗ್ಗೆ ಹೆನ್‌ಬೇರುವಿನಲ್ಲಿ ಸಂಪೂರ್ಣ ಸುಟ್ಟುಹೋದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ಅದರಲ್ಲಿ ಗುರುತು ಹಿಡಿಯಲು ಅಸಾಧ್ಯವಾದ ರೀತಿಯಲ್ಲಿ ವ್ಯಕ್ತಿಯೋರ್ವರ ಕಳೇಬರಹ ಪತ್ತೆಯಾಗಿತ್ತು. ಪ್ರಕರಣವನ್ನು ಬೇದಿಸಲು ಹೊರಟ ಪೊಲೀಸರು ಪ್ರಾರಂಭದಲ್ಲಿ ಕಾರಿನ ಚೆಸ್ಸಿ ನಂಬರ್ ಫೊರೆನ್ಸಿಕ್ ತಜ್ಞರ ಸಹಕಾರದಲ್ಲಿ ಪತ್ತೆ ಹಚ್ಚಿ ಆ ಆಧಾರದಲ್ಲಿ ಕಾರಿನ ಮಾಲಕರ ಪತ್ತೆ ಚ್ಚಿದ್ದರು. ಕಾರು ಸದಾನಂದ ಸೇರುಗಾರ್ ಸೇರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿತ್ತು. ಸಾಸ್ತಾನ ಟೋಲ್ ಗೇಟ್‌ನಲ್ಲಿ ರಾತ್ರಿ ೧೨.೩೦ಕ್ಕೆ ಈ ಕಾರಿನಿಂದ ಮಹಿಳೆ ಟೋಲ್ ಪಾವತಿಸಿರುವುದು ದೃಢ ಪಟ್ಟಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆದು ಒಂದೇ ದಿನದಲ್ಲಿ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
21,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!