spot_img
Saturday, December 7, 2024
spot_img

ರಾಜ್ಯದಲ್ಲಿಯೇ ಮೊತ್ತ ಮೊದಲ ಬಾರಿಗೆ ವಂಡ್ಸೆಯಲ್ಲಿ ಅನುಷ್ಠಾನ | ಇನ್ನೊಂದು ಪೈಲೆಟ್ ಪ್ರಾಜೆಕ್ಟ್ ‘ಪಾಲಿಯೇಟಿವ್ ಕೇರ್ ಯೂನಿಟ್’

(ಜನಪ್ರತಿನಿಧಿ ವರದಿ)  ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ವಂಡ್ಸೆ ಕ್ಲಸ್ಟರ್‌ನಲ್ಲಿ ಪಾಲಿಯೇಟಿವ್ ಕೇರ್ ಯೂನಿಟ್ ಶೀಘ್ರ ಆರಂಭವಾಗಲಿದೆ. ಕರ್ನಾಟಕ ರಾಜ್ಯದಲ್ಲಿ ಪೈಲೆಟ್ ಯೋಜನೆಯಾಗಿ ವಂಡ್ಸೆಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಮಹತ್ವಕಾಂಕ್ಷಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ವಂಡ್ಸೆ, ಚಿತ್ತೂರು, ಇಡೂರು, ಆಲೂರು, ಹಕ್ಲಾಡಿ, ಹೆಮ್ಮಾಡಿ, ಕೆರಾಡಿ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಜು.22ರಿಂದ ಜು.24ರ ತನಕ ಕೇರಳದ ತಿರುವನಂತಪುರದ ಪಾಲೀಮ್ ಇಂಡಿಯ ಸಂಸ್ಥೆಗೆ ಭೇಟಿ ನೀಡಿ ಅಧ್ಯಯನ ನಡೆಸಿದರು. ತ್ರಿವೆಂಡ್ರಮ್ ಜಿಲ್ಲೆಯ ವೆಂಗನೂರು ಮತ್ತು ಭರತನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಿದರು. ಈ ಅಧ್ಯಯನ ತಂಡದಲ್ಲಿ 13 ಜನರಿದ್ದರು. ಇದಕ್ಕೆ ಬೆಂಗಳೂರಿನ ಕೆ.ಎಚ್.ಪಿ.ಟಿ ಸಂಸ್ಥೆ ಪೂರಕ ವ್ಯವಸ್ಥೆ ಮಾಡಿದ್ದರು.

ಏನಿದು ಪಾಲಿಯೇಟಿವ್ ಕೇರ್ ಯೂನಿಟ್?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೇತೃತ್ವದಲ್ಲಿ ಈ ಕಾರ್ಯಕ್ರಮ ಪೈಲೆಟ್ ಕಾರ್ಯಕ್ರಮವಾಗಿ ವಂಡ್ಸೆ ಕ್ಲಸ್ಟರ್‌ನಲ್ಲಿ ಅನುಷ್ಠಾನ ಆಗಲಿದೆ. ಸಮಗ್ರ ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿ ಇದರ ಒಂದು ಭಾಗ ಪಾಲಿಯೇಟಿವ್ ಕೇರ್ ಯೂನಿಟ್. ಇದೊಂದು ಅತ್ಯಂತ ಮಹತ್ವಕಾಂಕ್ಷಿ ಯೋಜನೆ. ಈಗಾಗಲೆ ಕೇರಳ ರಾಜ್ಯದ ಕೆಲವು ಗ್ರಾಮಗಳಲ್ಲಿ ಇದು ಬಹಳ ಜನಪ್ರಿಯತೆ ಪಡೆದಿದೆ. ಕರ್ನಾಟಕದಲ್ಲಿಯೂ ಕೂಡಾ ಈ ಯೋಜನೆಯನ್ನು ಅನುಷ್ಟಾನ ಮಾಡಬೇಕು ಎನ್ನುವುದು ಸರ್ಕಾರ ಉದ್ದೇಶ.

ವಂಡ್ಸೆ, ಚಿತ್ತೂರು, ಇಡೂರು, ಆಲೂರು, ಹಕ್ಲಾಡಿ, ಹೆಮ್ಮಾಡಿ, ಕೆರಾಡಿ ಈ ಗ್ರಾಮ ಪಂಚಾಯತ್‌ಗಳಿಗೆ ವಂಡ್ಸೆ ಕ್ಲಸ್ಟರ್ ಆಗಿದ್ದು, ಕ್ಲಸ್ಟರ್ ಕೇಂದ್ರದಲ್ಲಿ ಯೂನಿಟ್ ಕಾರ್ಯರಂಭ ಮಾಡಲಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಕಳೆದ ಐದು ತಿಂಗಳಿಂದ ಸಮೀಕ್ಷೆ ಕಾರ್ಯ ನಡೆದಿದೆ. ಇನ್ನು ಎರಡು ತಿಂಗಳಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭ ಮಾಡಲಿದೆ.

ತನ್ನ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ದುರ್ಬಲರಿರುವ ಹಿರಿಯ ನಾಗರಿಕರು, ಅಸಹಾಯಕರು, ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿರುವವರ ಯೋಗಕ್ಷೇಮದ ಮೇಲೆ ನಿರಂತರ ಕಣ್ಗಾವಲಿಟ್ಟು ಆರೈಕೆ ಮಾಡುವುದು ಇದರ ಉದ್ದೇಶ. ಕೆಲವೊಂದು ಮನೆಯಲ್ಲಿ ಹಿರಿಯರು, ಅನಾರೋಗ್ಯ ಪೀಡಿತರು ಒಬ್ಬಂಟಿಯಾಗಿ ಇರುತ್ತಾರೆ. ಅವರ ಆರೋಗ್ಯ ತಪಾಸಣೆ, ತುರ್ತು ಚಿಕಿತ್ಸೆ ಇದ್ದರೆ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡುವುದು, ಚಿಕಿತ್ಸೆಯ ಬಳಿಕ ಮನೆಗೆ ಬಂದಾಗ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುವುದು, ಕೆಲವೊಂದು ಕಾಯಿಲೆಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವುದು, ಸ್ವಾವಲಂಬಿ ಜೀವನ ನಡೆಸಲು ಆಸಕ್ತರಿದ್ದರೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋವಕಾಶ ಕಲ್ಪಿಸುವುದು ಇತ್ಯಾದಿ ಕೆಲಸಗಳನ್ನು ಪಾಲಿಯೇಟಿವ್ ಕೇರ್ ಯೂನಿಟ್ ನಿರ್ವಹಿಸಲಿದೆ.

ಗುರುತಿಸಲ್ಪಟ್ಟ ವ್ಯಕ್ತಿಗಳನ್ನು ನಿರಂತರ ಸಂಪರ್ಕದಲ್ಲಿರಿಸಿಕೊಂಡು ಪ್ರತಿದಿನ ಅವರ ಬಿ.ಪಿ, ಶುಗರ್ ಮುಂತಾದ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಲಿದೆ. ದೈಹಿಕ, ಮಾನಸಿಕ ಆರೋಗ್ಯದ ಮೇಲೂ ಕೂಡಾ ನಿಗಾ ವಹಿಸಲಾಗುತ್ತದೆ. ತನ್ನ ವ್ಯಾಪ್ತಿಯಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರು, ವಿಶೇಷಚೇತನರು, ಮಕ್ಕಳು, ಎಂಡೋಸಲ್ಫಾನ್ ಪೀಡಿತರ ಯೋಗಕ್ಷೇಮದ ಮೇಲೂ ಕಣ್ಗಾವಲು ಇರಿಸಲಿದೆ.

ನುರಿತ ಸಿಬ್ಬಂದಿ ಜೊತೆಗೆ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಖಾಸಗಿ ಸೇವಾ ಮನೋಭಾವದ ವೈದ್ಯರ ಉಚಿತ ಸೇವೆ ಪಡೆದುಕೊಳ್ಳುವುದು, ಮಣಿಪಾಲ ಆಸ್ಪತ್ರೆ ಜೊತೆ ಒಪ್ಪಂದ ಮಾಡಿಕೊಂಡು ಅಗತ್ಯ ಬಿದ್ದರೆ ಅಲ್ಲಿಗೆ ಕಳುಹಿಸಿ ಉಪಚರಿಸುವುದು, ಉಚಿತ ಆಂಬುಲೆನ್ಸ್ ಸೇವೆಯನ್ನು ಒದಗಿಸುವುದು, ಉಚಿತ ಔಷಧ, ಉಚಿತ ಸಲಕರಣೆ ಇತ್ಯಾದಿ ಒಳಗೊಂಡಿದೆ. ಉದಾಹಣೆಗೆ ವಂಡ್ಸೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ವಂಡ್ಸೆ, ಆಲೂರು, ಹಕ್ಲಾಡಿ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬೆಳ್ಳಾಲದ ಆಯುಷ್ ಆಸ್ಪತ್ರೆಯ ಸಹಕಾರ ಪಡೆದುಕೊಳ್ಳಲಾಗುತ್ತದೆ. ಇದರಲ್ಲಿ ಇಬ್ಬರು ಖಾಯಂ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ. ಅಂಬುಲೆನ್ಸ್ ವ್ಯವಸ್ಥೆಯನ್ನು ಕೂಡಾ ಹೊಂದಿರುತ್ತದೆ.

ಕೇರಳದಲ್ಲಿ ಯಶಸ್ವಿ:
ಕೇರಳದಲ್ಲಿ ಇದು ಯಶಸ್ವಿಯಾಗಿ ನಡೆಸಲ್ಪಡುತ್ತಿದೆ. ತ್ರಿವೇಂಡ್ರಮ್ ಜಿಲ್ಲೆಯ ಕೆಲವೊಂದು ಕಡೆ ಎಷ್ಟು ಯಶಸ್ವಿಯಾಗಿದೆ ಎಂದರೆ ಅಲ್ಲಿ ೧೪ ಬೆಡ್‌ನ ಆಸ್ಪತ್ರೆ,, ಹೊರ ರೋಗಿಗಳ ವಿಭಾಗ ಇತ್ಯಾದಿಗಳನ್ನು ಪಾಲೀಮ್ ಇಂಡಿಯಾ ಎನ್ನುವ ಸ್ವಯಂಸೇವಾ ಸಂಸ್ಥೆ ನಿರ್ವಹಿಸುತ್ತಿದೆ. ಸಂಪೂರ್ಣ ಉಚಿತವಾದ ವ್ಯವಸ್ಥೆ ಇದಾಗಿದ್ದು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

“ನಮ್ಮ ಗ್ರಾಮ ಪಂಚಾಯತ್ ಅಲ್ಲಿ ಸಮಗ್ರ ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿ ಎನ್ನುವ ಯೋಜನೆಯನ್ನು ಪೈಲೆಟ್ ಪ್ರಾಜೆಕ್ಸ್ ಆಗಿ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕೇವಲ ಒಂದೇ ಪಂಚಾಯತ್‌ಗೆ ಮಾಡಿದರೆ ನಿರ್ವಹಣೆ ಕಷ್ಟ ಹಾಗೂ ಇನ್ನಷ್ಟು ಗ್ರಾಮ ಪಂಚಾಯತ್‌ಗೆ ಉಪಯೋಗ ಆಗಲಿ ಎನ್ನುವ ಉದ್ದೇಶದಿಂದ ಈಗಾಗಲೇ ಘನತ್ಯಾಜ್ಯ ವಿಲೇವಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ 7 ಗ್ರಾಮ ಪಂಚಾಯತ್ ಸೇರಿ ವಂಡ್ಸೆ ಕ್ಲಸ್ಟರ್ ನಲ್ಲಿ ಈ ಯೋಜನೆ ಜಾರಿಗೆ ತರಲು ಮುಂದಾಗಿದೆ. Palliative care ಇದರ ಒಂದು ಭಾಗ ಮಾತ್ರ. ಇದು ಕೇರಳದ ಕೆಲವೊಂದು ಗ್ರಾಮ ಪಂಚಾಯತ್ ಗಳಲ್ಲಿ ಯಶಸ್ವಿಯಾಗಿ ಅನುಷ್ಠಾನ ಆಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ವಂಡ್ಸೆಯಲ್ಲಿ ಇದು ಪ್ರಥಮ” -ಉದಯಕುಮಾರ್ ಶೆಟ್ಟಿ, ಪೂರ್ವಾಧ್ಯಕ್ಷರು, ವಂಡ್ಸೆ ಗ್ರಾಮ ಪಂಚಾಯತ್, ಅಧ್ಯಕ್ಷರು, ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!