Sunday, May 19, 2024

ವಿವಾಹ ಪೂರ್ವ ಆಪ್ತ ಸಮಾಲೋಚನೆ

ಬಹಳಷ್ಟು ವರ್ಷಗಳ ಹಿಂದೆ ಗುರುಗಳಾದ ರವೀಂದ್ರನಾಥ ಶಾನುಭಾಗ್ ಅವರೊಂದಿಗೆ ಜಿ‌ಎಸ್ಬಿ ದೇವಾಲಯದಲ್ಲಿ “ಸಾರಸ್ವತ ಜಾಗ್ರತಿ” ಎಂಬ ಕಾರ್ಯಕ್ರಮದಲ್ಲಿ “ವಿವಾಹಪೂರ್ವ ಆಪ್ತ ಸಮಾಲೋಚನೆ” ಬಗ್ಗೆ ನಾನು ಮಾತನಾಡಿದ್ದೆ. ಅದರ ಪಟವನ್ನು ಇತ್ತೀಚೆಗೆ ಶಾನುಭಾಗರ ಮಡದಿ ವಿದ್ಯಾ ಅಕ್ಕ ಕಳಿಸಿದ್ದರು. ಈ ಕಾರ್ಯಕ್ರಮ ನಡೆದು ಹದಿನೈದು ವರ್ಷಗಳಾಯಿತು. ಆದರೆ ಈಗಲೂ ಕೂಡ ನಮ್ಮ ಸಮಾಜದ ಕೆಲವೇ ಕೆಲವು ಧರ್ಮ ಅಥವಾ ಜಾತಿಗಳಲ್ಲಿ ವಿವಾಹಪೂರ್ವ ಆಪ್ತ ಸಮಾಲೋಚನೆಗೆ ಒತ್ತು ಕೊಡಲಾಗಿದೆ. ಇವತ್ತು ಮದುವೆ ಎನ್ನುವಾಗ ವಧು ವರರ ಅನ್ವೇಷಣೆಯಲ್ಲಿ ನಡೆಯುವುದು ಮುಖ್ಯವಾಗಿ ಕುಟುಂಬಗಳ ಹಣಕಾಸು ಪರಿಸ್ಥಿತಿ, ಕುಟುಂಬದ ಹಿನ್ನೆಲೆ, ಸಮಾಜದಲ್ಲಿರುವ ಸ್ಥಿತಿಗತಿ, ವಧು ಅಥವಾ ವರ ನೋಡಲು ಹೇಗಿದ್ದಾರೆ ಅಂದರೆ looks ಬಗ್ಗೆ ಚರ್ಚೆ, ವಧು ಅಥವಾ ವರ ಅವರ ಕೆಲಸ, ವಿದ್ಯಾರ್ಹತೆ, ಅವರೀಗ ಎಲ್ಲಿದ್ದಾರೆ. ಅಂದರೆ ಮೆಟ್ರೋ ಸಿಟಿಗಳಲ್ಲಿ ಇದ್ದಾರೋ ಅಥವಾ ವಿದೇಶದಲ್ಲಿದ್ದಾರೋ, ಜಾತಕದ ತುಲನೆ ಮತ್ತು ಇದರಲ್ಲಿ ಏನಾದರೂ ಹೊಂದಿಕೆ ಆಗುತ್ತದೆಯೋ ಇಲ್ಲವೋ ಇವುಗಳ ಬಗ್ಗೆ ಚರ್ಚೆ ನಡೆಯುತ್ತದೆ. ಹಲವೊಮ್ಮೆ ಹುಡುಗ ಹುಡುಗಿಯ ಆಧ್ಯಾತ್ಮಿಕ ಒಲವು ನಂಬಿಕೆಗಳು ಈ ಬಗ್ಗೆಯೂ ಚರ್ಚೆ ಆಗುತ್ತದೆ.

ಖುಷಿಯ ವಿಷಯವೆಂದರೆ ವರದಕ್ಷಿಣೆಯ ಪಿಡುಗು ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಿದೆ. ಈಗಲೂ ಕೂಡ ಸಮಾಜ ಪುರುಷ ಪ್ರಧಾನವಾಗಿದ್ದರೂ ಕೂಡ ಮಹಿಳೆಯರು ಉನ್ನತ ಶಿಕ್ಷಣ, ಉತ್ತಮ ಕೆಲಸ ಪಡೆದ ಕಾರಣ ಪುರುಷರಿಗಿಂಥ ತಾವೇನೂ ಕಡಿಮೆ ಇಲ್ಲ ಎಂದು ಪ್ರತಿದಿನ ತೋರಿಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಲಿಂಗ ತಾರತಮ್ಯ ಕಡಿಮೆ ಆಗುತ್ತಾ ಇದೆ. ಪೂರ್ತಿ ನಿಂತು ಹೋಗಿದೆ ಎಂದು ಹೇಳುವುದಿಲ್ಲ. ಒಬ್ಬ ವೈದ್ಯನಾಗಿ ವಿವಾಹಪೂರ್ವ ಆಪ್ತ ಸಮಾಲೋಚನೆಯನ್ನು ನಾನು ಸಮಾಜದ ಅಗತ್ಯತೆ ಎಂದು ಭಾವಿಸುತ್ತೇನೆ. ನಾನು ಯಾವುದೇ ಆಪ್ತಸಮಾಲೋಚನೆ ಇಲ್ಲದೆ ಮದುವೆಯಾದೆ. ಅಮ್ಮ ತೋರಿಸಿದ ಹುಡುಗಿಗೆ ತಾಳಿ ಕಟ್ಟಿದೆ. ಆದರೆ ಇವಾಗಿನ ಸಮಾಜದ ಆಗುಹೋಗುಗಳನ್ನು ಗಮನಿಸುವಾಗ ವಿವಾಹಪೂರ್ವ ಆಪ್ತ ಸಮಾಲೋಚನೆ ಬಹಳ ಅಗತ್ಯ ಎಂದು ಪ್ರತಿಪಾದಿಸುವೆ.

ವಿಚ್ಛೇದನ ಹೆಚ್ಚಾಗಿದೆ ಎಂದು ಜನರು ಹೇಳುತ್ತಾರೆ. ಜನರು ಹೆಚ್ಚು ಆತ್ಮವಿಶ್ವಾಸ ಮತ್ತು ಅಭಿವ್ಯಕ್ತತೆ ತೊರಿಸುತ್ತಾರೆ ಎಂದು ನಾನು ಹೇಳ ಬಯಸುತ್ತೆನೆ. ಮೊದಲು ಅವರು ಭಿನ್ನಾಭಿಪ್ರಾಯಗಳ ಹೊರತಾಗಿಯೂ ಬಳಲುತ್ತಿದ್ದರು ಮತ್ತು ಸಮಾಜದ ಭಯದಿಂದಾಗಿ ಒಟ್ಟಿಗೆ ವಾಸಿಸುತ್ತಿದ್ದರು. ಈಗ ಅಂತಹ ಭಾವನಾತ್ಮಕ ವಿಚ್ಛೇದನಗಳು ಅಂದರೆ ಕೇವಲ ತೋರಿಕೆಗಾಗಿ ಗಂಡ ಹೆಂಡತಿ ಅಂತ ಒಂದೇ ಸೂರಿನಡಿಯಲ್ಲಿ ಬದುಕುವುದು ಕಡಿಮೆಯಾಗಿವೆ. ಈಗ ಜನರು ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗುತ್ತಾರೆ ಮತ್ತು ಮರುಮದುವೆಯ ಮೂಲಕ ಎರಡನೇ ಇನ್ನಿಂಗ್ಸ್ ಅನ್ನು ಅನುಸರಿಸುತ್ತಾರೆ. ಇಂತಹ ಕಾಲಘಟ್ಟದಲ್ಲಿ ಮದುವೆಯ ಮುಂಚೆ ಗಂಡು ಹೆಣ್ಣು ಮಾತಾಡಿಕೊಳ್ಳುವುದು ಅಗತ್ಯಬಿದ್ದರೆ ಆಪ್ತ ಸಮಾಲೋಚನೆಗೆ ಹೋಗುವುದು ಅತಿ ಅಗತ್ಯ ಎಂದು ಹೇಳಬಯಸುತ್ತೇನೆ. ಇಲ್ಲವೇ ವಿವಿಧ ಧರ್ಮಗಳು ಮದುವೆಯಾಗುವ ಹುಡುಗ ಹುಡುಗಿಯರಿಗೆ ಈ ರೀತಿಯ ಆಪ್ತ ಸಮಾಲೋಚನಾ ಕಾರ್ಯಕ್ರಮಗಳನ್ನು ನಡೆಸುವುದು ಸೂಕ್ತ. ಇದರಿಂದಾಗಿ ಹುಡುಗ ಹುಡುಗಿಯ ನಡುವೆ ಮದುವೆಯ ನಂತರದ ಸಂಬಂಧಗಳು ಬಾಂಧವ್ಯ ಉತ್ತಮಗೊಳ್ಳಲು ಸಹಕಾರಿಯಾಗುತ್ತದೆ. ಈ ಬಗ್ಗೆ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮದವರ ವಿವಾಹ ಪೂರ್ವ ಸಮಾಲೋಚನಾ ಕಾರ್ಯಕ್ರಮಗಳನ್ನು ನಾನು ಗಮನಿಸಿದ್ದೇನೆ. ಬೇರೆ ಯಾವ ಧರ್ಮಗಳಲ್ಲೂ ಇಂತಹ ಪದ್ದತಿ ನೋಡಿಲ್ಲ. ಅಂತರ್ಜಾತಿ ವಿವಾಹಗಳಲ್ಲಿ ಬಹುಷಃ ವೃತ್ತಿಪರ ಆಪ್ತಸಲಹಾಗಾರರು ವಿವಾಹಪೂರ್ವ ಆಪ್ತ ಸಲಹೆ ಬಗ್ಗೆ ಒಲವು ತೋರಬೇಕು.

ಮದುವೆ ಎಂದ ಮೇಲೆ ಆ ಮದುವೆಯಲ್ಲಿ ಗಂಡ ಹೆಂಡತಿಯ ನಡುವ ಇರಬೇಕಾದ ಪ್ರೀತಿ, ಲೈಂಗಿಕತೆ, ಮಕ್ಕಳು ಬೇಕೇ ಬೇಡವೇ ಅಥವಾ ಯಾವಾಗ ಬೇಕು, ಅವರ ಲಾಲನೆ ಪಾಲನೆಯ ಬಗ್ಗೆ ಅನಿಸಿಕೆಗಳು ಮತ್ತು ಹಣಕಾಸು ನಿರ್ವಹಣೆಯ ಬಗ್ಗೆ ಮುಕ್ತವಾದ ಚರ್ಚೆ ಇದು ಬಹಳ ಪ್ರಮುಖವಾಗಿರುತ್ತದೆ. ಮದುವೆಯಾಗಿ ೨೩ ವರ್ಷ ಕಳೆದರೂ ಈ ಬಗ್ಗೆ ಚರ್ಚೆ ಮಾಡದ ದಂಪತಿಗಳನ್ನು ನೋಡಿದ್ದೇನೆ. ಅಧಿಕ ರಕ್ತದೊತ್ತಡ, ಮಧುಮೇಹ, ವಿಟಿಲಿಗೊ, ಕೆಲವೊಮ್ಮೆ ಏಡ್ಸ್ ಹೆಪಟೈಟಿಸ್ ಬಿ ಯಾ ಸಿ ವೈರಾಣು ಕಾಯಿಲೆಗಳು, ಸಿಫಿಲಿಸ್ ಗೊನೋರಿಯ ದಂತಹ ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ತಿಳಿಸದೆ ಮದುವೆಯಾಗುವ ಹಲವರಿದ್ದಾರೆ. ಖಿನ್ನತೆ, ಚಿತ್ತವಿಕಲತೆ, ತೀವ್ರ ಬಗೆಯ ಗೀಳು ಮನೋರೋಗ ಮುಂತಾದ ಸಮಸ್ಯೆಗಳು ಇದ್ದರೂ ಅದನ್ನು ಮುಚ್ಚಿಟ್ಟು ಅಥವಾ ತೀವ್ರತೆಯನ್ನು ತಿಳಿಸದೆ ಮದುವೆ ಆಗುವ ಹಲವರು ಇದ್ದಾರೆ. ಮದುವೆಯ ನಂತರ ಈ ವಿಷಯಗಳು ಹೊರಗೆ ಬಂದಾಗ “ನೀವು ಕೇಳಲಿಲ್ಲ, ನಾವು ಹೇಳಲಿಲ್ಲ” ಎನ್ನುವ ಮಾತುಗಳು ಬರುತ್ತವೆ. ಹಿಮೋಫಿಲಿಯಾ ದಂತಹ ರೋಗಗಳು ಅನುವಂಶಿಕವಾಗಿ ಬರುವುದರಿಂದ ಅವು ವಿರಳ ರೋಗಗಳಾದರು ಕೂಡ ಚರ್ಚೆ ಮಾಡುವುದು ಅಗತ್ಯವಾಗಿದೆ. ಮದುವೆಯಾಗುವ ಹುಡುಗ ಅಥವಾ ಹುಡುಗಿಗೆ ತನ್ನ ಸಂಗಾತಿಗೆ ಸಂಬಳ ಎಷ್ಟು, ಖರ್ಚು ಎಷ್ಟು? ಅವರ ಮೇಲೆ ನಿರ್ಭರವಾಗಿರುವ ಕೌಟುಂಬಿಕರು ಎಷ್ಟು ಜನ ? ಮದುವೆಯ ನಂತರ ವಾಸಿಸುವುದು ಎಲ್ಲಿ ? ಕೂಡುಕುಟುಂಬ ವಾದರೆ ಮನೆಯಲ್ಲಿ ಹಿರಿಯರು ಇದ್ದರೆ ಅವರನ್ನು ನೋಡಿಕೊಳ್ಳುವುದರಲ್ಲಿ ಯಾರದು ಎಷ್ಟು ಪಾತ್ರ ? ಅವಿಭಕ್ತ ಕುಟುಂಬದಲ್ಲಿ ಯಾರ್ಯಾರೊಂದಿಗೆ ಎಷ್ಟೆಷ್ಟು ಚಲನವಲನ ಮಾಡಬೇಕು ಎನ್ನುವುದರ ಬಗ್ಗೆ ಸ್ವಲ್ಪವಾದರೂ ಮಾಹಿತಿ ಇರುವುದು ಸೂಕ್ತ.

ಮದುವೆಯ ನಂತರ ಕೆಲಸ ಮುಂದುವರಿಸುವುದರ ಬಗ್ಗೆ ಮೊದಲೇ ಗೊತ್ತಿರಬೇಕು. ಮದುವೆ ಮುಂಚೆ ಓದು ಮುಂದುವರಿಸುತ್ತ ಇರುವವರಾದರೆ ಮದುವೆಯ ನಂತರ ಓದು ಮುಂದುವರಿಸಬಹುದೆ ಎಂಬುದರ ಬಗ್ಗೆ ಸರಿಯಾದ ಚರ್ಚೆ ನಡೆಯಬೇಕು. ಇಂತಹ ವಿಷಯಗಳ ಬಗ್ಗೆ ಬರವಣಿಗೆಯಲ್ಲಿ ನಿರ್ಧಾರಗಳನ್ನು ಬರೆಸಿಕೊಳ್ಳುವುದು ಒಳ್ಳೆಯದು. ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುವುದು, ಅಮೇರಿಕದ ಟೈಮಿಂಗ್ ನಲ್ಲಿ ಕೆಲಸ ಮಾಡುವುದು, ವೈದ್ಯರೆಂದರೆ ಹಗಲು ರಾತ್ರಿಯೆನ್ನದೆ ತುರ್ತು ಕರೆಗಳಿಗೆ ಸ್ಪಂದಿಸುವುದು ಈ ಬಗ್ಗೆ ಸೂಕ್ಷ್ಮವಾದ ಚರ್ಚೆಗಳು ನಡೆಯಬೇಕು. ಹುಡುಗ ಹುಡುಗಿ ನಡುವೆ ಮಾತುಕತೆ ಜರುಗಬೇಕು . ಈ ಮಾತುಕತೆಗಳಲ್ಲಿ ಅವರ ಭಾವನಾತ್ಮಕ ಸಮಸ್ಯೆಗಳು, ಸಮಸ್ಯೆಗಳನ್ನು ಎದುರಿಸುವ ಬಗೆ ಹೇಗೆ? ಸಿಟ್ಟಿನ ನಿರ್ವಹಣೆ, ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಬಗ್ಗೆ ಅವರ ಅಭಿಪ್ರಾಯಗಳು ಇವುಗಳ ಬಗ್ಗೆ ಚರ್ಚೆಯಾಗಬೇಕು. ಮದುವೆಯ ಪೂರ್ವ ಲೈಂಗಿಕ ಜೀವನದ ಬಗ್ಗೆ ಕೂಡ ಚರ್ಚೆ ಅಗತ್ಯ ಆದರೆ ಚರ್ಚೆಯಾಗುವುದು ಕಷ್ಟ.

ಭಾರತೀಯ ಸಮಾಜ ದಲ್ಲಿ ಇವತ್ತಿಗೂ ಕೂಡ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜನ ಹಿಂಜರಿಯುತ್ತಾರೆ. ಹಿಂದೆ ಕೂಡು ಕುಟುಂಬಗಳಿದ್ದಾಗ ಸಮಸ್ಯೆಗಳು ತಲೆದೋರಿದಾಗ ಯಾರೊಂದಿಗಾದರು ಮಾತನಾಡುವ ಅವಕಾಶಗಳೂ ಇದ್ದವು. ಇವಾಗಿನ ವಿಭಕ್ತ ಕುಟುಂಬಗಳು ಇಂತಹ ಅವಕಾಶಗಳು ಸಿಗದಂತೆ ಮಾಡಿದೆ.

ಲೈಂಗಿಕ ದೃಷ್ಟಿಕೋನ ಈ ಬಗ್ಗೆ ಮುಕ್ತವಾದ ಚರ್ಚೆ ಅಗತ್ಯ ಆದರೆ ಕಷ್ಟಸಾಧ್ಯ. ಆದರೂ ವ್ಯವಸ್ಥಿತವಾಗಿ ಈ ಬಗ್ಗೆ ಚರ್ಚೆ ತರಲು ವಿವಾಹಪೂರ್ವ ಆಪ್ತ ಸಮಾಲೋಚನಾ ಮಾಹಿತಿ ಕಾರ್ಯಾಗಾರಗಳು ಅಗತ್ಯ. ಹಲವರು ಅನ್ಯ ಲಿಂಗದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಕೂಡ ಸಮಾಜದ ಒತ್ತಾಯಕ್ಕೆ ಮಣಿದು ಮದುವೆಯಾಗಿ ಆಮೇಲೆ ಬೇರೆಯಾಗುತ್ತಿರುವುದನ್ನು ನೋಡುತ್ತಿದ್ದೆವೇ. ಲೈಂಗಿಕ ದೃಷ್ಟಿಕೋನ, ಲೈಂಗಿಕ ಅಲ್ಪಸಂಖ್ಯಾತರ ಇರುವಿಕೆ ಸಮಾಜದಲ್ಲಿ ಗೌರವಿಸಬೇಕಾದದ್ದು. ಧರ್ಮಗಳು ಜಾತಿಗಳು ಈ ಬಗ್ಗೆ ಚರ್ಚೆ ಮಾಡುವುದು ಸೂಕ್ತ. ಹಾಗೆಯೇ ಮದುವೆಯಾಗುವ ವಧುವರರಿಗೆ ಈ ಬಗ್ಗೆ ಮಾಹಿತಿಗಳು ಚರ್ಚೆಗಳು ಅತಿ ಅಗತ್ಯ.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!