Friday, May 17, 2024

ಸೊಲ್ಲೆತ್ತಿದರೆ ದ್ವೇಷವನ್ನೇ ಉಗುಳುವ ಸಾಮಾಜಿಕ ಮನಸ್ಥಿತಿಯ ಕೇವಲತನಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲವೇ ?

ʼದ್ವೇಷʼ ಮತ್ತು ʼಹೆಣ್ಣುʼ ರಾಜಕೀಯ ಭೋಗಕ್ಕೆ ಬಳಸಿಕೊಳ್ಳುವ ವಸ್ತುಗಳೆ !?

ಸುಳ್ಳನ್ನು ಸಹಿಸಿಕೊಳ್ಳುವುದಕ್ಕೂ ಕೂಡ ಬಹುಶಃ ಒಂದು ಮಿತಿ ಇದೆ. ಈ ದೇಶವನ್ನು ಸುಳ್ಳಿನಿಂದಲೇ ಮುಳುಗಿಸಿದ ರಾಜಕೀಯಕ್ಕೆ ದೊಡ್ಡ ಇತಿಹಾಸವಿದೆ. ಮನಃಶಾಸ್ತ್ರದ ಪ್ರಕಾರ ಒಂದು ವಿಷಯ ಅದು ಸತ್ಯವೇ ಆಗಿರಲಿ, ಸುಳ್ಳೇ ಆಗಿರಲಿ, ಅದನ್ನು ಕನಿಷ್ಠ ಇಪ್ಪತ್ತೊಂದು ಸಾರ್ತಿ ಮತ್ತೆ ಮತ್ತೆ ಹೇಳಿದರೇ, ಅದೇ ಸತ್ಯವೋ ಅಥವಾ ಸುಳ್ಳಾಗಿ ಅಚ್ಚಾಗಿ ಒಬ್ಬನ ಮನಸ್ಸಿನಲ್ಲಿ ಉಳಿಯುತ್ತದೆ ಅಥವಾ ಅದನ್ನು ಸಾಮಾಜಿಕ ಬುದ್ಧಿ ಸ್ವಂತ ಯೋಚನೆಗೂ ಸಮಯಕಾಶ ಕೊಡದೇ ಒಪ್ಪುತ್ತದೆ. ಭಾರತದ ರಾಜಕೀಯದಲ್ಲಿ, ಅದರಲ್ಲೂ ಇತ್ತೀಚೆಗಿನ ರಾಜಕೀಯ ಇತಿಹಾಸದಲ್ಲಿ ಈ ಬಗೆಯ ತಂತ್ರಗಾರಿಕೆಯನ್ನು ಹೇರಳವಾಗಿಯೇ ಬಳಸಿಕೊಳ್ಳಲಾಗಿದೆ. ಅದು ಈ ದೇಶದ ರಾಜಕೀಯದ ದುರಂತವೂ ಹೌದು ಎನ್ನುವುದರಲ್ಲಿ ಸಂಶಯವೇ ಇಲ್ಲ.

ರಾಜಕೀಯ ವರ್ಚಸ್ಸು ವೃದ್ಧಿಸಿಕೊಳ್ಳುವುದಕ್ಕೆ ಈ ತಂತ್ರಗಾರಿಕೆಯನ್ನು ಈ ದೇಶದಲ್ಲಿ ಬಳಸಿಕೊಳ್ಳಲಾಗಿದೆ. ಈ ದೇಶದ ಜನರೂ ಕೂಡ ಅದನ್ನೇ ನಂಬಿ ಮೋಸ ಹೋಗಿದ್ದಾರೆ. ಜನರ ಮನಸ್ಸುಗಳನ್ನು ಮತ್ತು ಭಾವನೆಗಳನ್ನು ಕೆರಳಿಸಿ ಮಾಡುವ ರಾಜಕೀಯ ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಪ್ರಚಲಿತದಲ್ಲಿರುವುದು ಇಂದು ದೇಶ ದುರಿತ ಕಾಲವನ್ನು ಅನುಭವಿಸುತ್ತಿದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿ. ತಾನಿರುವ ಹುದ್ದೆಯ ಸಾಮಾನ್ಯ ಪ್ರಜ್ಞೆಯೂ ಇಲ್ಲದೇ ಬಹಿರಂಗವಾಗಿ ವಿಷ ಉಗುಳುವ ಕೆಟ್ಟ ಬುದ್ದಿ ಇಲ್ಲಿನ ಪ್ರಮುಖ ರಾಜಕೀಯ ನಾಯಕರಿಗೆ ಇದೆ ಎನ್ನುವುದು ದುರಂತವೇ ಸರಿ. ಇದು ಹತಾಶೆಯ ಪರಮಾವಧಿಯೋ ಅಥವಾ ದುರ್ಬುದ್ಧಿಯೋ ತಿಳಿಯುತ್ತಿಲ್ಲ. ಈಗ ಲೋಕಸಭಾ ಚುನಾವಣೆಯ ರಂಗು. ಈ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ದೇಶದ ಉದ್ದಗಲಕ್ಕೂ ರಾಜಕೀಯವಾಗಿ ಮತದಾರರನ್ನು ವಿಭಜಿಸಲು ನಡೆದ ಯತ್ನಗಳು ತಲುಪಿರುವ ಮಟ್ಟ ನಿಜಕ್ಕೂ ಹೇಸಿಗೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಹತಾಶೆಯ ಮಟ್ಟ ಈ ದೇಶದ ರಾಜಕಾರಣವನ್ನು ಕನಿಷ್ಠ ಸೌಜನ್ಯವನ್ನೂ ಲೆಕ್ಕಿಸದೇ ಅತ್ಯಂತ ಕೆಳಮಟ್ಟಕ್ಕೆ ತೆಗದುಕೊಂಡು ಹೋಗಿದೆ. ಸ್ವಾತಂತ್ರ್ಯ ನಂತರದ ಇಷ್ಟು ವರ್ಷಗಳ ಸುದೀರ್ಘ ರಾಜಕೀಯ, ಬದಲಾವಣೆಯ ಅಲೆ, ಆ ಅಲೆ, ಈ ಅಲೆ, ಮತ್ತೊಂದು, ಮಗದೊಂದು ಎಂಬ ದಿಸೆಯಲ್ಲಿ ನಾವು ಹೊಸತೇನು ಸಾಧಿಸಿಲ್ಲ ಎನ್ನುವುದು ಇಲ್ಲಿ ನಾವೆಲ್ಲರೂ ಅರಿತುಕೊಳ್ಳಲೇಬೇಕಿದೆ. ಹೆಸರು, ಪಕ್ಷ, ಧರ್ಮ ಎಲ್ಲವನ್ನೂ ಬಿಟ್ಟು ಈ ಕಾಲದ ʼರಾಜಕೀಯ ಹತಾಶೆʼಯನ್ನು ನಾವಿಲ್ಲಿ ಗಮನಿಸಬೇಕಾದ ತುರ್ತಿದೆ. ಇಲ್ಲಿನ ಪ್ರತಿಯೊಬ್ಬ ಬಯಸುವುದು ಕೂಡ ಒಂದು ನೆಮ್ಮದಿಯ ನಾಳೆಗಳನ್ನು, ಪ್ರೀತಿ ಪೂರ್ವಕವಾದ ಸಮಾಜವನ್ನೇ ಹೊರತು ದ್ವೇಷಗಳನ್ನಲ್ಲ. ಒಬ್ಬ ʼಪ್ರಧಾನʼ ಹುದ್ದೆಯಲ್ಲಿರುವ ನಾಯಕ ತನ್ನ ಹುದ್ದೆಯ ಘನತೆ, ಗೌರವವನ್ನೂ ಲೆಕ್ಕಿಸದೇ ದ್ವೇಷಗಳನ್ನು, ವಿಷವನ್ನು ಮತ್ತೆ ಮತ್ತೆ ಉಗುಳುತ್ತಾನೆ ಎಂದರೇ, ಇದು ಪ್ರಜಾಪ್ರಭುತ್ವದ ಮೇಲೆ ಬಲವಂತವಾಗಿ ʼಪ್ರಭುತ್ವʼ ಧೋರಣೆಯನ್ನು ಬಿತ್ತುವ ಪ್ರಯತ್ನವೇ ಆಗಿದೆ. ಇದನ್ನು ಇಲ್ಲಿನ ಜನರು ಅರ್ಥೈಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿ ಹೀಗೆ ದ್ವೇಷ ಭಾಷಣಗಳನ್ನು ಮಾಡುವುದೇ ಪರಿಹಾರ ಎಂದು ಭಾವಿಸಿದರೇ ಅದರಷ್ಟು ಮೂರ್ಖತನ ಮತ್ತೊಂದಿಲ್ಲ. ಅಧಿಕಾರ ಹಿಡಿಯುವ ಪ್ರಯತ್ನದ ಸ್ಪರ್ಧೆಯಲ್ಲಿ ಮನಸೋಇಚ್ಛೆಯಂತೆ ಹೋದಲ್ಲೆಲ್ಲಾ ಬಿಗಿಯುತ್ತಿರುವ ʼದ್ವೇ಼ಷ ಭಾಷಣʼಗಳ ಸರದಾರರ ಪಟ್ಟಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರೇನು ಹೊರತಲ್ಲ. ಇದನ್ನು ವ್ಯಕ್ತಿ, ಪಕ್ಷ, ಧರ್ಮಗಳನ್ನು ಮೀರಿ ಇಡೀ ದೇಶದ ಜನರು ಪ್ರಶ್ನಿಸುವ ಅಗತ್ಯವಿದೆ.

ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧಾರ್ಮಿಕ ವಿಚಾರಗಳನ್ನು ಪ್ರಸ್ತಾಪಿಸಿ ಮಾಡಿದ ಭಾಷಣ ಅತ್ಯಂತ ಕೆಳಮಟ್ಟದಾಗಿತ್ತು ಎನ್ನುವುದನ್ನು ಇಡೀ ದೇಶ ಒಪ್ಪಿಕೊಳ್ಳಲೇ ಬೇಕಿದೆ. ಭಾರತೀಯ ಜನತಾ ಪಕ್ಷ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸ ಬಲವಾಗಿ ಹೊಂದಿದ್ದು ನಿಜವೇ ಆಗಿದ್ದರೇ ʼಮಂಗಳಸೂತ್ರವೂ ನಿಮ್ಮ ಬಳಿ ಉಳಿಯುವುದಿಲ್ಲʼ ಎಂದು ಹೇಳಿ ದ್ವೇಷವನ್ನು ಬಿತ್ತುವ ಅಗತ್ಯವೇನಿತ್ತು? ಈ ದೇಶದ ನಾಗರಿಕರು ಈ ಹಿಂದಿನ ಸರ್ಕಾರಗಳ ಆಡಳಿತವನ್ನು ನೋಡಿಲ್ಲವೇ ? ಇಂತಹದ್ದೇನಾದರೂ ಘಟನೆಗಳು ನಡೆದಿವೆಯೇ ? ಜನರನ್ನು ಮರಳು ಮಾಡುವ ರಾಜಕೀಯಕ್ಕೂ ಒಂದು ಮಿತಿ ಇದೆ.

ಇಡೀ ಭಾರತದಲ್ಲಿರುವ ಹೆಣ್ಣುಮಕ್ಕಳಿಗೆ ರಕ್ಷಕ ತಾನೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದ ಪ್ರಧಾನಿಗಳು ಮಹಿಳಾ ಕುಸ್ತಿಪಟುಗಳು ತಮ್ಮ ಫೆಡರೇಷನ್‌ನ ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ದಿನಗಟ್ಟಲೇ ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ಮೌನ ವಹಿಸಿದ್ಯಾಕೆ ? ಮಣಿಪುರದಲ್ಲಿ ಮಹಿಳೆಯೋರ್ವವರನ್ನು ಅರೆಬೆತ್ತಲು ಮಾಡಿ ಮೆರವಣಿಗೆ ಮಾಡಿದರೂ, ಅಲ್ಲಿ ಎರಡು ಸಮುದಾಯಗಳ ನಡುವೆ ಬೆಂಕಿಯೇ ಬಿದ್ದರೂ ಕನಿಷ್ಠ ಸೌಜನ್ಯ ತೋರಿಸಿಲ್ಲ ಯಾಕೆ ? ಉತ್ತರಪ್ರದೇಶದಲ್ಲಿ ದಲಿತ ಯುವತಿಯೊಬ್ಬಳ ಮೇಲೆ ಅತ್ಯಚಾರ ಮಾಡಿ ಕೊಲೆ ಮಾಡಿದಾಗ ಇಡೀ  ಪ್ರಕರಣವನ್ನೇ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ರಾಜ್ಯ ಸರ್ಕಾರ ಸಾಕ್ಷ್ಯ ನಾಶ ಮಾಡುವಾಗ ತಮ್ಮ ಆಕ್ರೋಶ, ಸಿಟ್ಟು, ಸೆಡವು, ಕೋಪವೆಲ್ಲಾ ಎಲ್ಲಿ ಹೋಯಿತು ? ಕರ್ನಾಟಕದಲ್ಲಿ ತಮ್ಮದೇ ಮೈತ್ರಿ ಪಕ್ಷ ಜೆಡಿಎಸ್‌ನ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ದೇಶವ್ಯಾಪಿ ಸದ್ದು ಮಾಡಿದರೂ ಪ್ರಧಾನಿಗಳು ಈ ಬಗ್ಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ ಯಾಕೆ ? ತುಮಕೂರಿನ ರುಕ್ಸಾನ ಕೊಲೆಯಾದಾಗ ಇವರ ಧ್ವನಿ ಏರುವುದಕ್ಕೆ ಕೇಳಲೇ ಇಲ್ಲ. ಸೌಜನ್ಯ ಅತ್ಯಚಾರ ಮತ್ತು ಕೊಲೆ ಪ್ರಕರಣಕ್ಕೆ ಧರ್ಮದ ರಕ್ಷಣೆ, ಹಿಂದೂ ಹೆಣ್ಣುಮಗಳ ರಕ್ಷಣೆ ಎಂಬ ಮಾತುಗಳೆಲ್ಲಾ ಇವರಿಂದ ಕೇಳಿ ಬರಲೇ ಇಲ್ಲ. ಉಡುಪಿಯಲ್ಲಿ ಒಬ್ಬಾತ ಹಾಡುಹಗಲಲ್ಲೇ ಮುಸ್ಲೀಂ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಹೋದಾಗ ಆಕ್ರೋಶ, ಸಿಟ್ಟು, ಕೇಕೆ, ಟೀಕೆ, ಕೋಪ ತಾಪಗಳೆಲ್ಲವೂ ತಣ್ಣಗಾಗಿದ್ದವು, ಅವುಗಳು ಸದ್ದು ಮಾಡಲೇ ಇಲ್ಲ. ಚುನಾವಣೆಯ ಉನ್ಮಾದಕ್ಕೆ ಇವರಿಗೆ ಲಾಭ ತಂದುಕೊಡುವ ಕೊಲೆ, ಧರ್ಮದ ಲೇಪ ಬೇಕು ಅಷ್ಟೇ, ಅದನ್ನು ಹೊರತಾಗಿ ಇಲ್ಲಿ ಎಷ್ಟೇ ಬಲಿಯಾದರೂ ಅದು ಗಣನಗೆ ಬರುವವುಗಳೇ ಅಲ್ಲ. ಇವರದ್ದೇ ʼಬೇಟಿ ಬಚಾವೋ ಬೇಟಿ ಪಡಾವೋʼ ಮಾತು ಯಾಕೆ ಇಷ್ಟು ಬೇಗ ಮರೆಯಲ್ಲಿ ಉಳಿದು ಹೋಯಿತೇ ಎನ್ನುವ ಪ್ರಶ್ನೆ ಸಹಜವಾಗಿ ಮುನ್ನೆಲೆಗೆ ಬಂದಿದೆ.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣವನ್ನು ದ್ವೇಷದ ಉಗುಳು ಹೆಚ್ಚಿಸಿಕೊಳ್ಳುವುದಕ್ಕೆ ತೋರಿದ ಜಾಣ್ಮೆ ಉಳಿದೆಡೆ ಯಾಕಿರಲಿಲ್ಲ ಪ್ರಧಾನಿಯವರೇ ಎನ್ನುವ ಪ್ರಶ್ನೆಯನ್ನು ಪ್ರತಿಯೊಬ್ಬ ಪ್ರಜೆ ಕೇಳಬೇಕಿದೆ. ಬಹುಶಃ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೇ ಪ್ರಧಾನಿಯವರು ರಾಜ್ಯದ ಎಲ್ಲಾ ಚುನಾವಣಾ ಪ್ರಚಾರ ಸಭೆಯಲ್ಲಿ, ಸುದ್ದಿಯಲ್ಲಿರುವ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ವಿರುದ್ಧ ಪ್ರಸ್ತಾಪಿಸಿ ರಾಜ್ಯದಲ್ಲಿ ʼಕಾನೂನು ವ್ಯವಸ್ಥೆ ಹದಗೆಟ್ಟಿದೆʼ, ಈ ಸರ್ಕಾರದ ಅಡಿಯಲ್ಲಿ ʼಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲʼ ಎಂದು ಮತ್ತಷ್ಟು ವಿಷ ಉಗುಳುತ್ತಿದ್ದರೇನೋ, ಪ್ರಧಾನಿ ಮೋದಿ ನೇತೃತ್ವ ಬಿಜೆಪಿಯ ದೃಷ್ಟಿಯಲ್ಲಿ ಆಗ ʼರಾಜ್ಯದ ಹೆಣ್ಣುಮಕ್ಕಳಿಗೆ ಅನ್ಯಾಯʼವಾಗುತ್ತಿತ್ತೇನೋ. ಜನ ಇವತ್ತು ಮೊದಲು ಪ್ರಶ್ನೆ ಮಾಡಬೇಕಾಗಿರುವುದು ಇಂತಹುಗಳನ್ನೇ. ಯಾವುದನ್ನು ಪ್ರಶ್ನೆ ಮಾಡಬೇಕೋ ಅದರ ಬಗ್ಗೆ ಜನ ಮೌನ ತಾಳಿರುವುದು ದುರಂತವೇ ಸರಿ. ಪ್ರಧಾನಿಯವರೇನು ಪ್ರಶ್ನಾತೀತರೇ ? ಪ್ರಜಾಪ್ರಭುತ್ವದಲ್ಲಿ ಸಾಮಾನ್ಯನ ಮಾತು ಮೌನವಾದರೇ ಅದು ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಅಪಾಯಕಾರಿ ಎನ್ನುವುದು ಅಕ್ಷರಶಃ ಸತ್ಯ.

ರಾಜಕೀಯ ನಾಯಕರ ಅಸೂಕ್ಷ್ಮ ಹೇಳಿಕೆಗಳು ಮತ್ತು ಆ ಹೇಳಿಕೆಗಳನ್ನೇ ನಿಜ ಎಂದು ನಂಬಿ ಮೊಳಗುವ ಕೇಕೆಯ ಒರಟುತನ ಈ ಸಮಾಜದಲ್ಲಿ ಉನ್ಮಾದವನ್ನು ಸೃಷ್ಟಿಸುವ ಪರಿ ನಿಜಕ್ಕೂ ಆತಂಕಕಾರಿಯಾಗಿದೆ. ನೇಹಾ ಕೊಲೆಯಾದಾಗ ಎದ್ದ ಕೇಕೆಗಳು, ಧರ್ಮದ ಲೇಪ ಇಲ್ಲೇ ತುಮಕೂರಿನ ರುಕ್ಸಾನ ಎಂಬ ಹೆಣ್ಣುಮಗಳೊಬ್ಬಳ ಕೊಲೆಯಾದಗ, ಸೌಜನ್ಯ ಕೊಲೆಯಾದಾಗ, ಪ್ರಜ್ವಲ್‌ ರೇವಣ್ಣ ಹೆಣ್ಣು ಮಕ್ಕಳನ್ನು ತಮ್ಮ ಕಾಮ ತೃಷೆಗೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಾಗ ಸೃಷ್ಟಿಯಾಗಿಲ್ಲ. ಇದು ಈ ಸಾಮಾಜಿಕ ಬುದ್ಧಿಯ ಬಡಸ್ತಿಕೆಯೋ ಅಥವಾ ಸಾಮಾಜಿಕ ಮನಸ್ಥಿತಿಯ ನಾಶದ ಸಂಕೇತವೋ ತಿಳಿಯುತ್ತಿಲ್ಲ. ಈ ದೇಶದ ಒಂದು ರಾಷ್ಟ್ರೀಯ ಪಕ್ಷದ ಮೂಲ ಸಂಘಟನೆ ಈ ದೇಶದುದ್ದಕ್ಕೂ ʼಹಸಿ ಬುದ್ಧಿʼಗಳಿಗೆ ಹೇರಿದ, ತೂರಿದ, ತುಂಬಿದ ʼದ್ವೇಷದ ಪಾಠʼದ ಕಾರಣದಿಂದಲೇ ಈ ದೇಶ ಇಂದು ಸಾಮಾಜಿಕವಾಗಿ ದುಸ್ಥಿತಿಯಲ್ಲಿದೆ ಎಂದರೇ ಯಾವುದೇ ಕಾರಣಕ್ಕೂ ತಪ್ಪಿಲ್ಲ. ʼದ್ವೇಷʼ ಹಾಗೂ ʼಹೆಣ್ಣುʼ ರಾಜಕೀಯ ಭೋಗಕ್ಕೆ ಬಳಸಿಕೊಳ್ಳುವ ವಸ್ತುಗಳಾಗಿ ಬದಲಾಗಿವೆ ಎನ್ನುವುದರಲ್ಲಿ ಅನಮಾನವೇ ಇಲ್ಲ.

ದ್ವೇಷ ಒಂದು ಮನರಂಜನೆಯ ಅಸ್ತ್ರವಾಗಿ ಬದಲಾಗಿದೆ ಎಂಬಂತೆ ಕಾಣಿಸುತ್ತಿದೆ. ಹೀಗಾಗುವುದಕ್ಕೆ ಇಲ್ಲಿನ ರಾಜಕೀಯ ಪಕ್ಷಗಳ, ರಾಜಕೀಯ ನಾಯಕರ ಕೊಡುಗೆ ಅಪಾರವಾದದ್ದಿದೆ. ದ್ವೇಷಕ್ಕೆ ಬರುವವರು, ಒಂದಾಗಿ ಬಾಳುವ ಎನ್ನುವ ಕರೆಗೆ ಕಿವಿ ಕೊಡದೇ ಇರುತ್ತಿರುವುದು ಒಂದು ಮಹತ್ತರವಾದ ಅಪಾಯದ, ಸಂಕಟದ ವಿಷಘಳಿಗೆಗೆ ಮುನ್ಸೂಚನೆ ಎಂಬಂತೆಯೇ ಕಾಣಿಸುತ್ತಿದೆ. ಒಂದು ಅತಿಸೂಕ್ಷ್ಮ ಘಟನೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಉದ್ದೇಶದಿಂದಲೇ ಕಾಯುವ ನಿರ್ಲಜ್ಜೆಯ ಧೋರಣೆ ಈ ಸಮಾಜವನ್ನು ಒಡೆದು ಚೂರು ಮಾಡುತ್ತಿದೆ. ಕಾನೂನನ್ನು, ಅಧಿಕಾರವನ್ನು ತಮ್ಮ ತಮ್ಮ ಹಿತಾಸಕ್ತಿಗೆ ಬೇಕಾದ ಒರಟುತನವನ್ನು ವೈಭವೀಕರಿಸಿಕೊಳ್ಳುವುದಕ್ಕೆ ಅತ್ಯಂತ ಕೆಟ್ಟ ಮಟ್ಟದಲ್ಲಿ ಬಳಸಿಕೊಳ್ಳುತ್ತಿರುವುದು ಕೂಡ ವಿಷಾದನೀಯ ಸಂಗತಿ.

ದ್ವೇಷವನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಈ ದೇಶದ ಪ್ರಧಾನ ಹುದ್ದೆಯಲ್ಲಿರುವ ನಾಯಕನೋರ್ವ ಇಳಿದು ರಾಜಕೀಯ ಮಾಡುತ್ತಿದ್ದಾನೆ ಮತ್ತು ಅದಕ್ಕೆ ಈ ದೇಶ ದಿವ್ಯ ಮೌನವನ್ನು ವಹಿಸುತ್ತಿದೆ ಎಂದರೇ, ಇದು ಅತ್ಯಂತ ಅಪಾಯಕಾರಿ ನಾಳೆಗಳ ಮುನ್ಸೂಚನೆ ಎಂದೇ ಅರ್ಥೈಸಿಕೊಳ್ಳಬೇಕಾಗಿದೆ. ಒಂದು ಕೆಟ್ಟ ಬಗೆಯ ದ್ವೇಷ ರಾಜಕಾರಣ ಈ ದೇಶವನ್ನು ಆವರಿಸಿಕೊಂಡು ಬಿಟ್ಟಿದೆ. ಇದರಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಿದೆ ಎಂದು ಅನ್ನಿಸುತ್ತಿಲ್ಲ. ಪ್ರತಿಯೊಬ್ಬನ ಘನತೆಯ ಬದುಕನ್ನು ಖಾತ್ರಿಪಡಿಸುವ ಸಂವಿಧಾನದ ಅಡಿಯಲ್ಲೇ ಅಡಿಗಡಿಗೂ ಇಂಚಿಂಚಾಗಿ ಇಲ್ಲಿನ ಜನರನ್ನು ವಿಭಜಿಸಿ ಅವರ ಬದುಕನ್ನೇ ಹರಿದು ಮುಕ್ಕುವ ಕೃತ್ಯಗಳು ರಾಜಾರೋಷವಾಗಿ ಜಾರಿಗೆ ತರುವ ಎಲ್ಲಾ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಲಕ್ಷಣಗಳು ಕಾಣಿಸುತ್ತಿದೆ. ತಪ್ಪನ್ನು ತಪ್ಪು ಎನ್ನದೇ ಸಮರ್ಥಿಸಿಕೊಳ್ಳುವ ಮತ್ತು ಆ ಬಗ್ಗೆ ಬೇಜವಾಬ್ದಾರಿತನದಿಂದ ಮೌನ ವಹಿಸುವ ಪಲಾಯನವಾದಿತನ ಮೈತುಂಬಾ ಬೆಳೆಯಲು ಅವಕಾಶ ಮಾಡಿಕೊಟ್ಟರೇ, ಇಲ್ಲಿನ ಬದುಕು ತೀರಾ ಕಷ್ಟವನ್ನು ಕಾಣಬೇಕಾಗುವುದು ನಿಶ್ಚಿತ.

ಪ್ರೀತಿಯನ್ನು ಮತ್ತಷ್ಟು ಹಬ್ಬುವ ಅಗತ್ಯವಿದೆ. ಸೊಲ್ಲೆತ್ತಿದರೇ ದ್ವೇಷವನ್ನೇ ಉಗುಳುವ ಸಾಮಾಜಿಕ ಮನಸ್ಥಿತಿಯ ಕೇವಲತನಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲವೇ ? ದ್ವೇಷ ಅಳಿಯದೇ ಸಮಾಜ ಬದಲಾಗುವುದೆ ? ಯೋಚಿಸುವ ಅಗತ್ಯವಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!