spot_img
Thursday, December 5, 2024
spot_img

ಐಪಿಎಲ್‌ ಟ್ರೋಫಿಯನ್ನು ಐದು ಬಾರಿ ಗೆದ್ದ  ಮುಂಬೈ ಇಂಡಿಯನ್ಸ್‌ಗೆ  ಈ ಗತಿಯೇ….?

*ಎಸ್. ಜಗದೀಶ್ಚಂದ್ರ ಅಂಚನ್   ಸೂಟರ್ ಪೇಟೆ

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು. ಈ ಶ್ರೀಮಂತ ಕ್ರಿಕೆಟ್  ಲೀಗ್​​​ನಲ್ಲಿ ಅತ್ಯಧಿಕ ಬಾರಿ  ಟ್ರೋಫಿ ಜಯಿಸಿದ ಜಂಟಿ ಮೊದಲನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ  ಮುಂಬೈ ಇಂಡಿಯನ್ಸ್‌ ಕೂಡ ಇದೆ. ಹಾಗಾಗಿ ಐಪಿಎಲ್‌ 17ನೇ ಆವೃತ್ತಿಯಲ್ಲಿ ನೂತನ ನಾಯಕನೊಂದಿಗೆ ಸಾಕಷ್ಟು ನಿರೀಕ್ಷೆಗಳೊಂದಿಗೆ ಮುಂಬೈ ಇಂಡಿಯನ್ಸ್‌ ಕಣಕ್ಕಿಳಿದಿತ್ತು . ಆದರೆ, ಆಗಿದ್ದೇ ಬೇರೆ. ಅತ್ಯಂತ ಯಶಸ್ವಿ ತಂಡ ಎನ್ನುವ ಹೆಗ್ಗಳಿಕೆ ಹೊಂದಿದ್ದ ಮುಂಬೈ ಇಂಡಿಯನ್ಸ್‌  ಹೀನಾಯ ಪ್ರದರ್ಶನದಿಂದ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ.

ಹೌದು. ಯಾವುದೇ ಮನೆಯಲ್ಲಿ ಯಜಮಾನ ಸರಿ ಇದ್ದರೆ ಮಾತ್ರ ಮನೆ ಸುಸೂತ್ರವಾಗಿ ಸಾಗುತ್ತದೆ. ಆದರೆ,  ಮನೆ ಯಜಮಾನನೇ ಸರಿ ಇಲ್ಲದಿದ್ದರೆ ಅದು ಮನೆಯವರ ನೆಮ್ಮದಿಯನ್ನು  ಹಾಳು ಮಾಡುತ್ತದೆ. ಸದ್ಯ ಐಪಿಎಲ್‌ನಲ್ಲಿ 5 ಬಾರಿ ಗೆದ್ದ ಮುಂಬೈ ತಂಡದ್ದು ಅದೇ ಕಥೆ . ಮುಂಬೈ ಇಂಡಿಯನ್ಸ್‌ ತಂಡದ ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಿ ಕೊಂಡಿರುವ ರೋಹಿತ್ ಶರ್ಮ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದೆ ಮುಂಬೈ ತಂಡದ ಅಧಃಪತನಕ್ಕೆ ಕಾರಣವಾಯಿತು. ರೋಹಿತ್ ಶರ್ಮ ತನ್ನ ನಾಯಕತ್ವದ 10 ವರ್ಷಗಳ ಅವಧಿಯಲ್ಲಿ ಮುಂಬೈ ತಂಡಕ್ಕೆ  ಒಂದಲ್ಲ, ಎರಡಲ್ಲ 5 ಬಾರಿ ಟ್ರೋಫಿ  ಗೆಲ್ಲಿಸಿಕೊಟ್ಟಿದ್ದಾರೆ.

ರೋಹಿತ್ ಶರ್ಮ ನಾಯಕತ್ವದ ಯಶಸ್ಸಿನ ಶಿಖರದಲ್ಲಿರುವಾಗಲೇ ಮುಂಬೈ ಫ್ರಾಂಚೈಸಿ ಅವರನ್ನು ಕೆಳಗಿಳಿಸಿ , ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿತು. ಇದು ತಂಡದ ಗುಂಪುಗಾರಿಕೆ, ಒಳ ರಾಜಕೀಯಕ್ಕೆ ಕಾರಣವಾಯಿತು. ಇದರಿಂದ ತಂಡದ ಸಾಧನೆ ಅತ್ಯಂತ ಹೀನಾಯ ಪರಿಸ್ಥಿತಿಗೆ ತಲುಪಿತು. ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್‌  ಸೋಲಿನ ಪ್ರಪಾತಕ್ಕೆ ಕುಸಿಯಿತು. ಇದರಿಂದ ಲೀಗ್ ಹಂತದ 13 ಪಂದ್ಯಗಳ ( ಲೇಖನ ಬರೆಯುವ ಹೊತ್ತಿಗೆ)  ಪೈಕಿ 9ರಲ್ಲಿ ಸೋತು, 4ನ್ನು ಗೆದ್ದು 8 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಇದು ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ಅವರ ದುರಹಂಕಾರಿ ನಾಯಕತ್ವಕ್ಕೆ ಸಾಕ್ಷಿಯಾಯಿತು. ಒಂದು ಯಶಸ್ವಿ ತಂಡ ಈ ರೀತಿಯಾಗಿ ಐಪಿಎಲ್‌ ಪಂದ್ಯಾಟದ ಇತಿಹಾಸದಲ್ಲಿ ಹೀನಾಯವಾಗಿ ಸೋತ ನಿದರ್ಶನ ಇಲ್ಲ.

ಏನೇ ಇರಲಿ , ಒಂದು ಯಶಸ್ವಿ ತಂಡವಾಗಿದ್ದ ಮುಂಬೈ ಇಂಡಿಯನ್ಸ್‌ ಟ್ರೋಫಿ ಗೆದ್ದ ಇತಿಹಾಸವನ್ನು ಈ ಕರಾಳ ಸೋಲಿನ ಮಧ್ಯದಲ್ಲಿ ಒಮ್ಮೆ ನೆನಪಿಸಿಕೊಳ್ಳೋಣ. ಐಪಿಎಲ್‌ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ನ ಸುವರ್ಣ ಯುಗವು 2013ರಲ್ಲಿ ಪ್ರಾರಂಭವಾಯಿತು. ಅದುವರೆಗೆ ನಾಯಕರಾಗಿದ್ದ ರಿಕಿ ಪಾಂಟಿಂಗ್  ನಾಯಕತ್ವದಿಂದ ಕೆಳಗಿಳಿದಾಗ ಸೀಸನಿನ ಮಧ್ಯದಲ್ಲಿ  ಓಪನಿಂಗ್ ಬ್ಯಾಟರ್  ರೋಹಿತ್ ಶರ್ಮ ಅವರಿಗೆ ತಂಡದ  ಹೊಣೆಗಾರಿಕೆ ನೀಡಲಾಯಿತು. ನಂತರ  ಮುಂಬೈ ಇಂಡಿಯನ್ಸ್ ಹೊಸ ಯುಗವನ್ನು ಪ್ರಾರಂಭಿಸಿತು.  ಪಾಂಟಿಂಗ್ ಸೂಕ್ತ  ಮಾರ್ಗದರ್ಶನದಲ್ಲಿ ಐಪಿಎಲ್ ಟೂರ್ನಿಯಲ್ಲಿ  ಪುನರಾಗಮನವನ್ನು ಮುಂಬೈ ಇಂಡಿಯನ್ಸ್ ಬಯಸಿತು .ತಮ್ಮ ಆರಂಭಿಕ ಪಂದ್ಯಗಳಲ್ಲಿ ಹೆಚ್ಚಿನದನ್ನು ಕಳೆದುಕೊಂಡ ನಂತರ, ಮುಂಬೈ ಇಂಡಿಯನ್ಸ್  ಲೀಗ್ ಹಂತದ ಉಳಿದ ಪಂದ್ಯಗಳಲ್ಲಿ ಭರ್ಜರಿ ಆಟವನ್ನು ಪ್ರದರ್ಶಿಸಿದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಫೈನಲ್ ಪಂದ್ಯ ಆಡಲು ಸಾಧ್ಯವಾಯಿತು. ಫೈನಲ್ ಪಂದ್ಯದಲ್ಲಿ ಮುಂಬೈ  ಇಂಡಿಯನ್ಸ್ ತಂಡದ ವೇಗದ ಬೌಲಿಂಗ್‌ನ  ಅದ್ಭುತ ಪ್ರದರ್ಶನದೊಂದಿಗೆ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಕಾಡೆ ಮಲಗಿಸಿತು. ಈ ಮೂಲಕ 2013ರ ಋತುವಿನಲ್ಲಿ  ಐಪಿಎಲ್ ಚಾಂಪಿಯನ್ ಆಗಿ ಮುಂಬೈ ಇಂಡಿಯನ್ಸ್ ಹೊರಹೊಮ್ಮಿತು.

ಮುಂಬೈ ಇಂಡಿಯನ್ಸ್  2015ರಲ್ಲೂ ಚಾಂಪಿಯನ್‌ :  ಮುಂಬೈ ಇಂಡಿಯನ್ಸ್ ತಂಡದ ಬೌಲರುಗಳ  ಶಿಸ್ತುಬದ್ದ ಬೌಲಿಂಗ್ ನಿರ್ವಹಣೆಯಿಂದ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಸೋಲನ್ನು ಕಾಣಬೇಕಾಯಿತು. ಮುಂಬೈ ಇಂಡಿಯನ್ಸ್ 2015ರ ಆವೃತ್ತಿಯಲ್ಲಿ ಸಂಪೂರ್ಣವಾಗಿ ಬಲಯುತವಾಗಿತ್ತು. ಜಸ್ಪ್ರಿತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಕ್ರುನಾಲ್ ಪಾಂಡ್ಯ ಸೇರಿದಂತೆ ಭವಿಷ್ಯದ ಕ್ರಿಕೆಟ್ ತಾರೆಗಳ ಮಿಶ್ರಣ ಮುಂಬೈ ಇಂಡಿಯನ್ಸ್ ತಂಡಕ್ಕೆ ವರದಾನವಾಗಿತ್ತು. ಲೀಗ್ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿತ್ತು . ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ (50ರನ್)  ಹಾಗೂ ಲೆಂಡ್ಲೆ ಸಿಮನ್ಸ್ (68ರನ್) ಅವರ ಸೊಗಸಾದ  ಅರ್ಧಶತಕದ ಸಹಾಯದಿಂದ 202ರನ್ ಗಳಿಸಿತು . ಈ ಬೃಹತ್ ಮೊತ್ತವನ್ನು ಬೆನ್ನಟ್ಟಲು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸಾಧ್ಯವಾಗಲಿಲ್ಲ. ಹಾಗಾಗಿ ಮುಂಬೈ ಇಂಡಿಯನ್ಸ್ ಅಂತಿಮವಾಗಿ 41ರನ್ ಅಂತರದಲ್ಲಿ ವಿಜಯಶಾಲಿಯಾಯಿತು.

ಮೂರನೇ ಬಾರಿ ಟ್ರೋಫಿ ಗೆದ್ದ  ಮುಂಬೈ ಇಂಡಿಯನ್ಸ್ : 2017ರ ಐಪಿಎಲ್ 10ನೇ ಆವೃತ್ತಿಯ ಫೈನಲ್ ಪಂದ್ಯ ಅತ್ಯಂತ ರೋಚಕತೆಯಲ್ಲಿ ಮುಕ್ತಾಯ ಗೊಂಡು ಹೊಸ ಇತಿಹಾಸ ನಿರ್ಮಿಸಿತು. ರೋಚಕ ಫೈನಲ್ ನಲ್ಲಿ 1 ರನ್ ನಿಂದ ರೈಸಿಂಗ್ ಪುಣೆ ಸೂಪರ್ ಜೈನ್ಟ್ ತಂಡವನ್ನು ಮಣಿಸುವ ಮೂಲಕ ಮೂರನೇ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿತು. ಕೇವಲ 130 ರನ್ ಗಳ ಟಾರ್ಗೆಟನ್ನು ಬೆನ್ನತ್ತುವಲ್ಲಿ ಪುಣೆ ತಂಡ ವಿಫಲವಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ,ಕುನಾಲ್ ಪಾಂಡೆ ಬಾರಿಸಿದ  47ರನ್ ಸಹಾಯದಿಂದ 129ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡ ಅಜಿಂಕ್ಯ ರಹಾನೆ(44ರನ್) ಹಾಗೂ ನಾಯಕನ ಆಟವಾಡಿದ ಸ್ಮಿತ್(51ರನ್)   ಹೊರತಾಗಿಯೂ ತಂಡವನ್ನು ಗೆಲ್ಲಿಸಲಾಗಲಿಲ್ಲ . ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಲಷ್ಟೇ ಪುಣೆ ತಂಡಕ್ಕೆ  ಸಾಧ್ಯವಾಯಿತು.

ಮುಂಬೈ ಇಂಡಿಯನ್ಸ್ ಗೆ ನಾಲ್ಕನೆ ಬಾರಿ  ಪ್ರಶಸ್ತಿ: ಐಪಿಎಲ್‌ 12ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬಯಿ ಇಂಡಿಯನ್ಸ್‌ ತಂಡಗಳು ನಾಲ್ಕನೇ ಬಾರಿ ಐಪಿಎಲ್‌ ಮುಕುಟ ಧರಿಸುವ ಗುರಿಯೊಂದಿಗೆ  ಕಣಕ್ಕಿಳಿದಿತ್ತು. ಉಭಯ ತಂಡಗಳು ಅದುವರೆಗೆ ಮೂರು ಬಾರಿ ಐಪಿಎಲ್‌ ಪ್ರಶಸ್ತಿ ಬಾಚಿಕೊಂಡಿತ್ತು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವನ್ನೇ ಮಣಿಸಿರುವ ಮುಂಬೈ ನೇರವಾಗಿ ಫೈನಲ್‌ಗೆ ಪ್ರವೇಶಿಸಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿರುವ ಚೆನ್ನೈ ಫೈನಲ್‌ಗೆ ಲಗ್ಗೆಯಿಟ್ಟಿತ್ತು . ಹಾಗಾಗಿ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು  ಸೇಡು ತೀರಿಸಿಕೊಳ್ಳುವ ತವಕದಲ್ಲಿತ್ತು . ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್‌ 20 ಓವರಿನಲ್ಲಿ 8 ವಿಕೆಟಿಗೆ 149ರನ್ ಗಳಿಸಿತು. ಕೀರನ್‌ ಪೊಲಾರ್ಡ್‌ 41 ರನ್‌ ಗಳಿಸಿದರು. ಗುರಿ ಬೆನ್ನಟ್ಟಿದ ಚೆನ್ನೈಗೆ ಭರ್ಜರಿ ಆರಂಭವೇ ದೊರೆಯಿತು. ಫಾಫ್‌ ಡು ಪ್ಲೆಸಿಸ್‌ ಗುಡುಗಿದರೆ, ಶೇನ್‌ ವ್ಯಾಟ್ಸನ್‌ ಬ್ಯಾಟಿನಿಂದ ಸಿಡಿಲು ಮಿಂಚುಗಳ ಸುರಿಮಳೆಯಾಯಿತು. ಆದರೆ, ಅಂತಿಮವಾಗಿ ಜಸ್‌ಪ್ರೀತ್‌ ಬುಮ್ರಾ , ಲಸಿತ್‌ ಮಾಲಿಂಗರಂಥ ಸುಂಟರಗಾಳಿ ವೇಗದ ಬೌಲರ್‌ಗಳ ಮುಂದೆ ಚೆನ್ನೈ ಆಟ ನಡೆಯಲಿಲ್ಲ. ಕೊನೆಯ ಓವರ್‌ನಲ್ಲಿ 9 ರನ್‌ ಬೇಕಿತ್ತು. ಆದರೆ, ಅಪಾರ ಅನುಭವಿ ಬೌಲರ್  ಮಾಲಿಂಗ ಮುಂಬೈ ಬ್ಯಾಟ್ಸ್‌ಮನ್‌ಗಳಿಗೆ ತನ್ನ ಯಾರ್ಕರ್‌ ಎಸೆತಗಳಿಂದ ಕಟ್ಟಿಹಾಕುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್  1 ರನ್‌ ಅಂತರದಿಂದ ಶರಣಾಯಿತು.ಮುಂಬೈ ಇಂಡಿಯನ್ಸ್ ಈ ಮೂಲಕ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಐದನೇ ಬಾರಿ ಐಪಿಎಲ್ ಟ್ರೋಫಿ ಎತ್ತಿದ ಮುಂಬೈ : ಐಪಿಎಲ್ ಟೂರ್ನಿ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್  ದಾಖಲೆಯ 5ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತು. 2020ರ 13ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್  ಬಗ್ಗುಬಡಿದು  ಚಾಂಪಿಯನ್ ಪಟ್ಟ ಅಲಂಕರಿಸಿತು . ಆದರೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಡೆಲ್ಲಿ ಕ್ಯಾಪಿಟಲ್ಸ್ ಕನಸು ನುಚ್ಚುನೂರಾಗಿದ್ದು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. 6 ಬಾರಿ ಫೈನಲ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ 5 ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಫೈನಲ್ ಪಂದ್ಯದ ಗೆಲುವಿಗೆ 157 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಡೀಸೆಂಟ್ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 45 ರನ್ ಜೊತೆಯಾಟ ನೀಡಿದರು. ಡಿಕಾಕ್ 20 ರನ್ ಸಿಡಿಸಿ ಔಟಾದರು. ರೋಹಿತ್ ಶರ್ಮಾ (68ರನ್) ಹಾಗೂ ಸೂರ್ಯಕುಮಾರ್ ಯಾದವ್ (19ರನ್)  ಮುಂಬೈ ಇಂಡಿಯನ್ಸ್ ಚೇತರಿಸಿಕೊಂಡಿತು. ಇವರು ಔಟಾದ ಬಳಿಕ ಮುಂಬೈ ತಂಡ ಆತಂಕಕ್ಕೆ ಒಳಗಾಗಲಿಲ್ಲ.  ಇಶಾನ್ ಕಿಶನ್ (33ರನ್) ಆಟ ಮುಂದುವರಿಸಿ  ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 18.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.  ಈ ಮೂಲಕ  ಮುಂಬೈ ಇಂಡಿಯನ್ಸ್ 2020ರ ಐಪಿಎಲ್ ಟ್ರೋಫಿಯನ್ನು  ವಶಪಡಿಸಿಕೊಂಡಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!