spot_img
Saturday, March 14, 2026
spot_img

ಜನಸ್ನೇಹಿತ್ವ ಸಹಕಾರ ವ್ಯವಸ್ಥೆಯ ವಿಶೇಷತೆ-ಡಾ.ಎಂ.ಎನ್.ರಾಜೇಂದ್ರ ಕುಮಾರ್ | ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ನೂತನ ಕಟ್ಟಡ ‘ರೈತಸೌಧ’ ಉದ್ಘಾಟನೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಮಾ.14: ರೈತಾಪಿಗಳು ಹಾಗೂ ಜನಸಾಮಾನ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಿ, ಅವರ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸುವ ಜನಸ್ನೇಹಿ ಮನೋಭಾವ ಸಹಕಾರ ವ್ಯವಸ್ಥೆಯಲ್ಲಿ ಇರುವುದರಿಂದ ಸಹಕಾರ ಕ್ಷೇತ್ರ ಇಷ್ಟೊಂದು ವ್ಯಾಪಕವಾಗಿ ಬೆಳೆದಿದೆ. ಅಭಿವೃದ್ಧಿ, ಸ್ವಾವಲಂಬನೆ ಸಾಧಿಸುವ ಮೂಲಕ ವಾಣಿಜ್ಯ ಬ್ಯಾಂಕುಗಳಿಗಿಂತ ಬಲಿಷ್ಠವಾಗಿ ಸಹಕಾರ ವ್ಯವಸ್ಥೆ ಬೆಳೆಯುತ್ತಿದೆ. ಸ್ವಂತ ಕಟ್ಟಡ, ಹವಾನಿಯಂತ್ರಿತ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಆಧುನಿಕತೆಗೆ ತೆರೆದುಕೊಂಡಿರುವ ಸಹಕಾರ ಸಂಘಗಳ ಹೆಗ್ಗಳಿಕೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಮಾ.14ರಂದು ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ನೂತನ ಕಟ್ಟಡ ರೈತ ಸೌಧವನ್ನು ಉದ್ಘಾಟಿಸಿ ಮಾತನಾಡಿದರು.

ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ಎಲ್ಲರ ಪರಿಶ್ರಮದಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಯಿತು. ಲಿಪ್ಟ್, ಹವಾನಿಯಂತ್ರಿತ ವ್ಯವಸ್ಥೆ, ಸಭಾಂಗಣ ಹೀಗೆ ಸಾಕಷ್ಟು ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ಈ ಕಟ್ಟಡಕ್ಕೆ ಹತ್ತು ಲಕ್ಷ ರೂಪಾಯಿ ನೀಡುತ್ತೇನೆ, ಹಾಗೆಯೇ ನನ್ನ ಹೆಸರಲ್ಲಿ ಸಭಾಂಗಣ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಪೀಠೋಪಕರಣದ ವೆಚ್ಚವನ್ನು ಕೊಡುತ್ತೇನೆ ಎಂದರು.
ಇವತ್ತು ಸಹಕಾರ ಸಂಘಗಳು ಲಾಕರ್ ವ್ಯವಸ್ಥೆ ಕಲ್ಪಿಸುವಂತೆ ಮಹಿಳಾ ಸದಸ್ಯರಿಗೆ ಅನುಕೂಲವಾಗುವಂತೆ ಡ್ರಸ್ಸಿಂಗ್ ಕೊಠಡಿಯ ವ್ಯವಸ್ಥೆ ಮಾಡುವ ಬಗ್ಗೆಯೂ ಚಿಂತನೆ ನಡೆಸಬೇಕು. ಅಲ್ಲಿ ಅಲಂಕಾರಿಕ ಸಾಧನಗಳು ಇರುವಂತೆ ವ್ಯವಸ್ಥೆ ಮಾಡಬೇಕು, ಅದಕ್ಕೆ ತಗಲುವ ವೆಚ್ಚವನ್ನು ನಾನು ಕೊಡುತ್ತೇನೆ ಎಂದರು.

ನವೋದಯ ಸ್ವಸಹಾಯ ಗುಂಪುಗಳ ರಚನೆಯ ಉದ್ದೇಶ ಮಹಿಳಾ ಸಬಲೀಕರಣ. ನಮಗೆ ಲಾಭ ಮಾಡುವ ಉದ್ದೇಶವಿಲ್ಲ. ನಾವು ಚಕ್ರ ಬಡ್ಡಿ ಹಾಕುವುದಿಲ್ಲ, ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಬೇಕು ಎನ್ನುವ ಉದ್ದೇಶದಿಂದ 25 ವರ್ಷಗಳ ಹಿಂದೆ ನವೋದಯ ಸಂಘಗಳ ಉದಯವಾಯಿತು. ಇವತ್ತು ಬಲಿಷ್ಠವಾಗಿ ಬೆಳೆದಿದೆ. 9 ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ರೋಶನಿ ಶೆಟ್ಟಿ ಅವರಂಥಹ ಮಹಿಳೆಯರು ಎಲ್ಲಾ ಕಡೆ ಹುಟ್ಟಿ ಬರಬೇಕು ಎಂದರು.

ಕಳಂಕರಹಿತ ಸಹಕಾರ ವ್ಯವಸ್ಥೆ:
ಅವಿಭಜಿತ ಜಿಲ್ಲೆಯಲ್ಲಿ ಸಹಕಾರ ವ್ಯವಸ್ಥೆ ಕಳಂಕ ರಹಿತವಾಗಿರಬೇಕು ಎನ್ನುವುದು ನಮ್ಮ ಉದ್ದೇಶ. ಈಗ ಸಿದ್ಧಾಪುರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಕಪ್ಪು ಚುಕ್ಕೆ ಇದೆ. ಕಳೆದ ಆರು ವರ್ಷಗಳಿಂದ ಸರಕಾರಿ ಲೆಕ್ಕಪರಿಶೋಧಕರು ಸತಾಯಿಸುತ್ತಿದ್ದಾರೆ. ಆಡಿಟ್ ಮಾಡದೆ ವರದಿ ಹೇಗೆ ಕೊಡುತ್ತಾರೆ? ಅವರು ಸರಿಯಾದ ವರದಿ ನೀಡಿದ್ದರೆ ಸಿದ್ದಾಪುರ ಸಂಘವನ್ನು ಸರಿಪಡಿಸಬಹುದಿತ್ತು. ಶೀಘ್ರ ಸಿದ್ಧಾಪುರ ಸಂಘವನ್ನು ಕಪ್ಪುಚುಕ್ಕೆಯಿಂದ ಮುಕ್ತ ಮಾಡುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಕೆ.ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಅಂಪಾರಿನ ಕನಸು ಇಂದು ನನಸಾಗಿದೆ. 1958ರಲ್ಲಿ ಪ್ರಾರಂಭಗೊಂಡ ಸಂಘ 1976ರಲ್ಲಿ ಶಂಕರನಾರಾಯಣ ಸಂಘದೊಂದಿಗೆ ವಿಲೀನವಾಯಿತು. ಬಳಿಕ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸ್ವತಂತ್ರ ಸಂಘವಾಯಿತು. ಒಂದು ಗ್ರಾಮಕ್ಕೇ ಸೀಮಿತವಾಗಿರುವ ಈ ಸಂಘಕ್ಕೆÀ 1997ರಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಯಿತು. ಎಲ್ಲರ ಸಹಕಾರದಿಂದ ಸಂಘ ಈಗ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಪುನಃ ಲಾಭದ ಪಥಕ್ಕೆ ಬರುತ್ತಿದೆ. ವ್ಯವಹಾರವನ್ನು ಅತ್ಯಂತ ಪಾರದರ್ಶಕವಾಗಿ ಮಾಡಲು ತಂತ್ರಜ್ಞಾನದ ಬಳಕೆಯೊಂದಿಗೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ. ಹವಾನಿಯಂತ್ರಿತ ಅತ್ಯುತ್ತಮ ಬ್ಯಾಂಕಿಂಗ್ ವಿಭಾಗ, ಸಾಮಾನ್ಯ ಸೇವಾ ಕೇಂದ್ರ, ಗೋದಾಮು ಕಟ್ಟಡ, ನ್ಯಾಯಬೆಲೆ ಅಂಗಡಿ, ಎರಡು ಸಭಾಂಗಣವನ್ನು ಹೊಂದಿರುವ ರೈತ ಸೌಧ ಲೋಕಾರ್ಪಣೆಗೊಂಡಿದೆ ಎಂದರು.

ಆಡಳಿತ ಸಭಾಂಗಣವನ್ನು ಉದ್ಘಾಟಿಸಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಒಂದು ಗ್ರಾಮದ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ಇಷ್ಟೊಂದು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿರುವುದು ಆಡಳಿತ ಮಂಡಳಿ, ಸದಸ್ಯರು, ನೌಕರವೃಂದದ ಪರಿಶ್ರಮದ ಫಲ ಎಂದರು.

ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಮಾಜಿ ಶಾಶಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಹಕಾರ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿ ಮುನ್ನೆಡೆಯುತ್ತಿದೆ. ಜನತೆಯಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗುತ್ತಿದೆ. ಇವತ್ತು ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕುಗಳಲ್ಲಿ ಎಸ್.ಸಿ.ಡಿಸಿಸಿ ಬ್ಯಾಂಕ್ ಶ್ರೇಷ್ಠತೆ ಹೊಂದಿದೆ ಎಂದರು.

ಗೋದಾಮು ಕಟ್ಟಡವನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಉದ್ಘಾಟಿಸಿದರು. ಮೊಳಹಳ್ಳಿ ಶಿವರಾವ್ ಸಭಾಂಗಣವನ್ನು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಎಂ.ಮಹೇಶ ಹೆಗ್ಡೆ ಉದ್ಘಾಟಿಸಿದರು. ಸಾಮಾನ್ಯ ಸೇವಾ ಕೇಂದ್ರವನ್ನು ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಗೋದಾಮು ಕಟ್ಟಡವನ್ನು ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಜೆ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಕುಂದಾಪುರ ಇದರ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ರೋಶನಿ ಶೆಟ್ಟಿ ನವೋದಯ ಸಂಘದ ಮೂಲಕ ಆದ ಸ್ವ ಬದಲಾವಣೆ ವಿವರಿಸಿದರು.

ಸಂಘದ ನಿರ್ದೇಶಕರಾದ ಮೋಹನ ವೈದ್ಯ, ಕಿರಣ್ ಹೆಗ್ಡೆ, ಅರುಣ್ ಕುಮಾರ್ ಶೆಟ್ಟಿ, ಮನೋಹರ್ ಶೆಟ್ಟಿ, ಜಯರಾಮ ಶೆಟ್ಟಿ, ಉಮೇಶ ಕೊಠಾರಿ, ಅಜಿತ್ ಕುಮಾರ್, ಶೀಮತಿ ಜ್ಯೋತಿ ಉದಯ ಕುಮಾರ್ ಶೆಟ್ಟಿ, ಶ್ರೀಮತಿ ಭಾರತಿ ಬಾಲಕೃಷ್ಣ ಶೇಟ್, ಮಂಜುನಾಥ ನಾಯ್ಕ, ಸುನಿಲ್, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷರಾದ ನವೀನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಘದ ಸಿಬ್ಬಂದಿ ರವಿಕಲಾ ಜೋಗಿ ಪ್ರಾರ್ಥನೆ ಮಾಡಿದರು. ಗಾಯಕರಾದ ಉದಯಕುಮಾರ ಶೆಟ್ಟಿ ಮೂಡುಬಗೆ, ತನುಷಾ ಕುಂದರ್, ಕಾರ್ತಿಕರಾಜ್ ಪಾಂಡೇಶ್ವರ ರೈತಗೀತೆ ಹಾಡಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟ ವಂದಿಸಿದರು.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಿನಾದ ಮ್ಯೂಸಿಕಲ್ ಇವೆಂಟ್ಸ್ ಅಂಪಾರು ಇವರಿಂದ ಸಂಗೀತ ವೈಭವ, ಮಧ್ಯಾಹ್ನ 1 ಗಂಟೆಯಿಂದ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ನಂದಗೋಕುಲ ಕಲಾವಿದರಿಂದ ನೃತ್ಯ ವೈಭವ, ಮಧ್ಯಾಹ್ನ 3 ಗಂಟೆಯಿಂದ ಯಕ್ಷಗಾನ ವೈಭವ-ಮಾಗಧ ವಧೆ ಪ್ರದರ್ಶನಗೊಂಡಿತು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!