spot_img
Saturday, December 7, 2024
spot_img

ಮೋದಿ ಸಾಧನೆಗಳಿಗೂ, ದೇಶವನ್ನು ಅತ್ಯಂತ ಅಪಾಯಕ್ಕೆ ತಳ್ಳಿದ್ದ 2014ರ ಹಿಂದಿನ ಯುಪಿಎ ಸರ್ಕಾರದ ಸಾಧನೆಗಳಿಗೂ ಅಜಗಜಾಂತರ ವ್ಯತ್ಯಾಸ : ರಾಜ್ಯ ಬಿಜೆಪಿ

ಜನಪ್ರತಿನಿಧಿ (ಬೆಂಗಳೂರು) :  ದಶಕಗಳ ಹಿಂದಿನ ಭಾರತಕ್ಕೂ ಇಂದಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸ. ಕೇವಲ ಹತ್ತು ವರ್ಷಗಳ ಹಿಂದೆ ಪ್ರಮುಖ ವಲಯಗಳಲ್ಲಿಯೂ ಅಧೋಗತಿಯತ್ತ ಸಾಗುತ್ತಿದ್ದ ಭಾರತದ ಪ್ರಗತಿ, ಇಂದು ಪ್ರತಿ ವಲಯದಲ್ಲಿಯೂ ಏರುಗತಿಯತ್ತ ಸಾಗುತ್ತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಲು ಏಕೈಕ ಕಾರಣವೆಂದರೆ, ಅದು ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ನಾಯಕತ್ವ ಎಂದು ರಾಜ್ಯ ಬಿಜೆಪಿ ಹೇಳಿದೆ.

ತನ್ನ ಅಧಿಕೃತ ಎಕ್ಸ್‌ ಖಾತೆಯ ಮೂಲಕ ನರೇಂದ್ರ ಮೋದಿ ಅವರ ನಾಯಕತ್ವವನ್ನು ಪ್ರಶಂಸೆ ಮಾಡಿಕೊಂಡ ರಾಜ್ಯ ಬಿಜೆಪಿ , ಮಾತಿಗಿಂತಲೂ ಕೃತಿಯೇ ಉತ್ತಮ ಎಂದು ನಂಬಿರುವ ಪ್ರಧಾನಮಂತ್ರಿ ಮೋದಿಯವರ ಸಾಧನೆಗಳಿಗೂ ಹಾಗೂ ದೇಶವನ್ನು ಅತ್ಯಂತ ಅಪಾಯಕ್ಕೆ ತಳ್ಳಿದ್ದ 2014ರ ಹಿಂದಿನ ಯುಪಿಎ ಸರ್ಕಾರದ ಸಾಧನೆಗಳಿಗೂ ಅಜಗಜಾಂತರ ವ್ಯತ್ಯಾಸ ಎಂದು ಕಾಂಗ್ರೆಸ್‌ ಆಡಳಿತವನ್ನು ಟೀಕಿಸಿದೆ.

ಇನ್ನು, ಭಾರತ ಬಡ ದೇಶ ಎಂದು ಹಂಗಿಸುತ್ತಿದ್ದವರಿಗೆ ಮೋದಿ ಸರ್ಕಾರ ತನ್ನ ಸಾಧನೆ ಮೂಲಕವೇ ಕಪಾಳಮೋಕ್ಷ ಮಾಡಿದೆ. ಯುಪಿಎ ಅವಧಿಯಾಗಿದ್ದ  2014 ರಲ್ಲಿ  ಶೇ.29.2 ರಷ್ಟು ಜನ ಭಾರತದಲ್ಲಿ ಬಡತನದ ರೇಖೆಗಿಂತಲೂ ಕೆಳಗಿದ್ದರು. ಇಂದು ಭಾರತದಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವವರ ಸಂಖ್ಯೆ ಕೇವಲ ಶೇ.11.3 ರಷ್ಟು.

ಕೇವಲ 10 ವರ್ಷಗಳ ಸಮರ್ಥ ಹಾಗೂ ಭ್ರಷ್ಟಾಚಾರ ರಹಿತ ಆಡಳಿತದಲ್ಲಿ ಮೋದಿ ಸರ್ಕಾರವು ಭಾರತದ ಶೇ.17.9 ರಷ್ಟು ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ ಎಂಬುದು ಅತ್ಯಂತ ಗಮನಾರ್ಹವಾದ ಅಂಶ. ಯಪಿಎ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿದ್ದವರು ಶೇ.25.7 ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಕೇವಲ ಶೇ.7.2.

ಒಂದು ದೇಶದ ಪ್ರಗತಿ ನಿರ್ಧಾರವಾಗುವುದು ಆ ದೇಶದಲ್ಲಿನ ವಿದೇಶಿ ನೇರ ಹೂಡಿಕೆ ಹೆಚ್ಚಾದಾಗ ಹಾಗೂ ಆಮದು ಕಡಿಮೆಯಾಗಿ ರಫ್ತು ಹೆಚ್ಚಾದಾಗ. ಪ್ರಧಾನಿ ಮೋದಿಯವರ ನಾಯಕತ್ವವನ್ನು ವಿಶ್ವದ ಇತರ ರಾಷ್ಟ್ರಗಳು ಅಪ್ಪಿ ಒಪ್ಪಿಕೊಂಡಿರುವ ಕಾರಣ, ಭಾರತದಲ್ಲಿ ಮೋದಿ ಆಡಳಿತ 10 ವರ್ಷಗಳಲ್ಲಿ ವಿದೇಶಿ ನೇರ ಹೂಡಿಕೆಯ ಪ್ರಮಾಣ ಸಾಗರೋಪಾದಿಯಲ್ಲಿ ಹೆಚ್ಚಾಗಿದೆ ಎಂದು ಹೇಳಿದೆ.

ದೇಶದ ಚುಕ್ಕಾಣಿ ಸಮರ್ಥ ನಾಯಕನ ಕೈಲಿದ್ದರೆ, ದೇಶ ಹೇಗೆ ಸದೃಢವಾಗುತ್ತದೆ ಎಂಬುದಕ್ಕೆ ಭಾರತಕ್ಕೆ ದಾಖಲೆ ಪ್ರಮಾಣದಲ್ಲಿ ಹರಿದ ವಿದೇಶಿ ನೇರ ಬಂಡವಾಳ ಹೂಡಿಕೆಯೇ ಸಾಕ್ಷಿ. ಹಿಂದಿನ ಯುಪಿಎ ಸರ್ಕಾರದ 2005-2014 ರ ಅವಧಿಯಲ್ಲಿ ಭಾರತಕ್ಕೆ ವಿದೇಶಿ ನೇರ ಹೂಡಿಕೆ ಹರಿದು ಬಂದಿದ್ದು ಕೇವಲ $305 ಬಿಲಿಯನ್‌. ಆದರೆ ಅದೇ ಪ್ರಧಾನಿ ಮೋದಿ ನಾಯಕತ್ವದ ಈ ದಶಕ 2014-2023 ರವರಗೆ ಹರಿದು ಬಂದ ಒಟ್ಟು ವಿದೇಶಿ ನೇರ ಬಂಡವಾಳ ಪ್ರಮಾಣ ಬರೋಬ್ಬರಿ $596.5 ಬಿಲಿಯನ್.

ದೇಶದಲ್ಲಿ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ ಆದಾಯ ತೆರಿಗೆ ಸಲ್ಲಿಸುವವರ ಸಂಖ್ಯೆ ಸಹ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು ಯು.ಪಿ.ಎ ಸರ್ಕಾರದ ಅವಧಿಯಲ್ಲಿ 3.8 ಕೋಟಿ ಜನ ಆದಾಯ ತೆರಿಗೆ ಸಲ್ಲಿಸುತ್ತಿದ್ದರೆ, ಅದೇ  ಮೋದಿ ಸರ್ಕಾರದ ಅವಧಿಯಲ್ಲಿ ಆದಾಯ ತೆರಿಗೆ ಸಲ್ಲಿಸುವವರ ಸಂಖ್ಯೆ 7.78 ಕೋಟಿಗೆ ತಲುಪಿದ್ದು ಮತ್ತಷ್ಟು ವೇಗದಲ್ಲಿ ಮುಂದುವರೆಯುತ್ತಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತಿಕ ನಾವೀನ್ಯತೆಯ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿದ್ದ ಭಾರತ ಇಂದು ಮೋದಿ ಸರ್ಕಾರದ ಅವಧಿಯಲ್ಲಿ 40 ನೇ ಸ್ಥಾನ ಅಲಂಕರಿಸಿದೆ. 10 ವರ್ಷಗಳ ಹಿಂದೆ ಕೇವಲ ನಗದು ವಹಿವಾಟಿನ ಮೇಲೆ ಅವಲಂಬಿತವಾಗಿದ್ದ ಭಾರತದಲ್ಲಿ ಇಂದು 12,735 ಕೋಟಿಯಷ್ಟು  ಡಿಜಿಟಲ್‌ ವಹಿವಾಟುಗಳು ನಡೆಯುತ್ತಿವೆ.

ಸ್ಟಾರ್ಟಪ್‌‌ಗಳ ಜಗತ್ತು ಎಂದೇ ಬದಲಾಗಿರುವ ಭಾರತದಲ್ಲಿ ಯುಪಿಎ ಅವಧಿಯಲ್ಲಿದ್ದ ಸ್ಟಾರ್ಟಪ್‌‌ಗಳ ಸಂಖ್ಯೆ ಕೇವಲ 300. ಅದೇ ಇಂದಿನ ಮೋದಿ ಸರ್ಕಾರದಲ್ಲಿ ಭಾರತದಲ್ಲಿ ನೋಂದಾವಣೆ ಮಾಡಿಕೊಂಡ ಸ್ಟಾರ್ಟಪ್‌‌ಗಳು 1 ಲಕ್ಷ 14 ಸಾವಿರಕ್ಕಿಂತಲೂ ಹೆಚ್ಚು.

ಎಲೆಕ್ಟ್ರಾನಿಕ್ಸ್‌ ಹಾಗೂ ರಕ್ಷಣಾ ವಲಯದಲ್ಲಿನ ರಫ್ತಿನಲ್ಲಿಯೂ ಸಹ ಹೊಸ ದಾಖಲೆ ನಿರ್ಮಿಸಿದೆ ಭಾರತ. ಯು.ಪಿ.ಎ ಸರ್ಕಾರದ ಅವಧಿಯಲ್ಲಿ  ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ಕೇವಲ 7.6 ಬಿಲಿಯನ್‌ ಡಾಲರ್‌‌ನಷ್ಟು ರಫ್ತು ಹೊಂದಿದ್ದ ಭಾರತ ಇಂದು ಬರೋಬ್ಬರಿ 22.7 ಬಿಲಿಯನ್‌ ಡಾಲರ್‌‌ನಷ್ಟು ಎಲೆಕ್ಟ್ರಾನಿಕ್ಸ್‌ ರಫ್ತನ್ನು‌‌ ಮಾಡುತ್ತಿದೆ.

ಇನ್ನು ರಕ್ಷಣಾ ವಲಯದಲ್ಲಿ ಸಹ ಆತ್ಮನಿರ್ಭರತೆಯನ್ನು ಸಾಧಿಸುತ್ತಿರುವ ಭಾರತ, ಮೋದಿ ಸರ್ಕಾರದ ಅವಧಿಯಲ್ಲಿ ಬರೋಬ್ಬರಿ ₹16 ಸಾವಿರ ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಯನ್ನು ರಫ್ತು ಮಾಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ರಕ್ಷಣಾ ರಫ್ತು ಇದ್ದದ್ದು ಕೇವಲ ₹686 ಕೋಟಿ.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತ ಇಂದು ಅತಿ ಹೆಚ್ಚು ಆರ್ಥಿಕತೆ ಹೊಂದಿರುವ ವಿಶ್ವದ ಐದನೇ ರಾಷ್ಟ್ರ. ಅತಿ ಹೆಚ್ಚು ಮೊಬೈಲ್‌ ಉತ್ಪಾದಿಸುವ ದೇಶಗಳಲ್ಲಿ ಭಾರತದ್ದು ಎರಡನೇ ಸ್ಥಾನ. ರಸ್ತೆ ಮೂಲ ಸಂಪರ್ಕ, ರೈಲ್ವೆ ಮೂಲ ಸಂಪರ್ಕ, ಮೆಟ್ರೋ ಜಾಲ ವಿಸ್ತರಣೆ ಹೀಗೆ ಈ ಎಲ್ಲಾ ವಲಯಗಳಲ್ಲಿಯೂ ಭಾರತ ವಿಶ್ವದ ಮೂರು ಹಾಗೂ ಎರಡನೇ ಸ್ಥಾನದಲ್ಲಿದೆ.

ಯುಪಿಎ ಸರ್ಕಾರದ ಅವಧಿಗಿಂತ ಪ್ರಗತಿ, ಕೀರ್ತಿ, ಜನಸಾಮಾನ್ಯರ ಸಂತೃಪ್ತಿ ವಿಷಯದಲ್ಲಿ ಮೋದಿ ಸರ್ಕಾರ ಗಾವುದ ದೂರ ಮುಂದೆ ಬಂದಿದೆ. ಭಾರತವೆಂದರೆ ಹಂಗಿಸುತ್ತಿದ್ದ ದೇಶಗಳೆಲ್ಲವೂ ಇಂದು ಭಾರತದೆದುರು ಮಂಡಿಯೂರುತ್ತಿರುವುದು ಪ್ರಧಾನಿ ಮೋದಿಯವರ ಸದೃಢ ನಾಯಕತ್ವಕ್ಕೆ ಹಾಗೂ ಭಾರತ ಮೋದಿಯವರ ಆಡಳಿತಾವಧಿಯಲ್ಲಿ ಮಾಡಿದ ಸಾಧನೆಯ ಪ್ರತೀಕ ಎಂದು ತನ್ನ ಬೆನ್ನನ್ನೇ ತಾನು ತಟ್ಟಿಕೊಂಡಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!