spot_img
Monday, March 23, 2026
spot_img

ಮನೆ-ಮನ ಬೆಳಗುವ ಬೆಳಕಿನ ಹಬ್ಬ ದೀಪಾವಳಿ

-ಪ್ರಫುಲ್ಲಾ.ಬಿ
ಭಾಷಾ ಪ್ರಾಧ್ಯಾಪಕರು, ಭಂಡಾರ್ಕಾರ್ಸ್ ಮಹಾವಿದ್ಯಾಲಯ


ಭಾರತದ ಪುಣ್ಯ ಭೂಮಿಯಲ್ಲಿ ಮನುಕುಲವು ತನ್ನ ಸುಖ, ಸಂತೋಷ, ನೆಮ್ಮದಿಗಾಗಿ, ಸಂಬಂಧದ ಆತ್ಮೀಯತೆಗಾಗಿ, ಸಾಮಾಜಿಕ ಒಗ್ಗಟ್ಟಿಗಾಗಿ , ಬದುಕಿನ ಅಭ್ಯುದಯಕ್ಕಾಗಿ ಹಲವು ಧಾರ್ಮಿಕ ಹಬ್ಬ, ಉತ್ಸವಗಳನ್ನು ಆಚರಿಸುತ್ತಾ ಬಂದಿದೆ. ಹಬ್ಬದ ಹೆಸರಿನಲ್ಲಿ ಪೂಜೆ, ಜಪ, ತಪ, ಭಜನೆ, ತೈಲಾಭ್ಯಂಜನ, ಸ್ನಾನ ಇತ್ಯಾದಿ ಕಾರ್ಯಗಳನ್ನು ಮಾಡುತ್ತಾ ಮನಸ್ಸಿಗೆ ಮುದ ಪಡೆಯುವುದರೊಂದಿಗೆ ದುಃಖದ ಸಮಯ ಕಳೆದು ಸುಖದ ದಿನಗಳನ್ನು ಸ್ವಾಗತಿಸುವುದು ಇದರ ಉದ್ದೇಶವಾಗಿದೆ.

      "ದೀಪಾವಳಿ" ಎಂದರೆ ಕತ್ತಲು ಬೆಳಕಿನ ಸಂಘರ್ಷದಲ್ಲಿ ಗೆಲ್ಲುವ ಬೆಳಕಿನ  ಹಬ್ಬ.  "ತಮಸೋಮ ಜ್ಯೋತಿರ್ಗಮಯ" ಎಂಬಂತೆ  ದೀಪಾವಳಿಯು ಕತ್ತಲೆಯಿಂದ ಬೆಳಕಿನೆಡೆಗೆ ದಾರಿತೋರುವ ಅಜ್ಞಾನದಿಂದ ಸುಜ್ಞಾನದತ್ತ ಮುನ್ನಡೆಸುವ  ಹಬ್ಬವಾಗಿದೆ.  ದೀಪಾವಳಿ ಹಬ್ಬವು ಶರದೃತುವಿನ ಮಧ್ಯಭಾಗದಲ್ಲಿ ಬರುವ ಶುಭ ಸಮಯ. ಮುಂಗಾರು ಬೆಳೆ ಧಾನ್ಯ ಲಕ್ಷ್ಮೀಯ ರೂಪದಲ್ಲಿ ರೈತನ ಮನೆಯಂಗಳದಲ್ಲಿ ರಾರಾಜಿಸುವ ಅನ್ನ ಬ್ರಹ್ಮನ ಅವತಾರದ ಕಾಲ. ದೀಪಾಲಿ, ದಿವಾಲಿ, ದೀಪಾಲಿಕಾ ಎಂದು ಕರೆಯಲ್ಪಡುವ ದೀಪಾವಳಿಯು ಅಕ್ಟೋಬರನ ಅಂತಿಮ ಅಥವಾ ನವಂಬರನ ಮೊದಲ ವಾರದಲ್ಲಿ ಬರುತ್ತದೆ. ಆಶ್ವಯುಜ ಮತ್ತು ಕಾರ್ತಿಕ ಮಾಸಗಳನ್ನು ಬೆಸೆಯುವ ಹಬ್ಬ ,ದೀಪಾವಳಿಯು  ವೈವಿಧ್ಯಮಯ ಆಚರಣೆಯುಳ್ಳದ್ದಾಗಿದೆ. ದೀಪಾವಳಿಯಂದು ಮನೆಮನೆಗಳಲ್ಲಿ ದೀಪಗಳ ಅವಳಿ (ಸಾಲು) ಗಳು, ಆಕಾಶದೀಪ ಅಥವಾ ಗೂಡುದೀಪಗಳಿಂದ ಬೆಳಕು ಪ್ರಜ್ವಲಿಸುತ್ತದೆ .ಅಂದು ಆಕಾಶದಲ್ಲಿ ಚಂದ್ರನಿರುವುದಿಲ್ಲ, ಮಾನವರು ಹಚ್ಚುವ ದೀಪ ದಿಂದಲೇ ಆಕಾಶ ಪ್ರಕಾಶಿಸಲೆಂದು ನಿಸರ್ಗವೇ ಆ ರಾತ್ರಿಯನ್ನು ಅಂಧಕಾರ ಗೊಳಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಲಕ್ಷ್ಮೀಯ ಸ್ಥಾನವಿದೆ.  ದೀಪವು  ಜ್ಞಾನ ಮತ್ತು ಶುಭದ ಸಂಕೇತವಾಗಿದೆ. ದೀಪವನ್ನು ಪರಬ್ರಹ್ಮನ ಸಂಕೇತವೆಂದೂ ಕರೆಯುತ್ತಾರೆ. ಮೊದಲು ದೀಪ ಹಚ್ಚಿ ಕಾರ್ಯಾರಂಭ  ಮಾಡುವುದು ಭಾರತೀಯ ಪದ್ಧತಿ.

ದೀಪಾವಳಿಯು ಮೂರು ದಿನಗಳಲ್ಲಿ ಆಚರಿಸಲ್ಪಡುವ ಹಬ್ಬವಾಗಿದ್ದು ಮೊದಲ ದಿನದ ನರಕ ಚತುರ್ದಶಿ ಗೆ ಮಹತ್ವದ ಸ್ಥಾನವಿದೆ.  ತ್ರಯೋದಶಿಯ ಸಂಜೆಯೇ  ಮನೆಯ ಸ್ತ್ರೀಯರೆಲ್ಲ ಸೇರಿ ಮನೆ, ಸ್ನಾನ ಗೃಹ, ನೀರು ಕಾಯಿಸುವ ಹಂಡೆ, ಕೊಡಪಾನ ಇತ್ಯಾದಿ ಪಾತ್ರೆಗಳನ್ನೆಲ್ಲ ತೊಳೆದು ಶುದ್ಧಮಾಡುತ್ತಾರೆ.  ಹಂಡೆಗೆ, ಹೂ ಮಾಲೆ, ಮುಳ್ಳುಸೌತೆ ಅಥವಾ ಮಹಾಲಿಂಗ ಬಳ್ಳಿ ಕಟ್ಟಿ ಸುಣ್ಣ- ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಸಂಜೆ ಎಲ್ಲರೂ  ಸೇರಿ ಬಾವಿಯಿಂದ ನೀರು ಸೇದಿಕೊಂಡು  ಶಂಖ, ಜಾಗಟೆಗಳ ಮಂಗಳ ಧ್ವನಿಯ ಮೆರವಣೆಗೆಯೊಂದಿಗೆ ಹಂಡೆಗೆ ನೀರು ತುಂಬುತ್ತಾರೆ. ಇದನ್ನು "ನೀರು ಹಬ್ಬ" ವೆಂದು ಕರೆಯುತ್ತಾರೆ. ಈದಿನ ರಾತ್ರಿ ಅಪಮೃತ್ಯು ನಿವಾರಣೆಗಾಗಿ ಎಳ್ಳೆಣೆಯ ದೀಪ ಹಚ್ಚಿ ಮನೆಯ ಮುಂದೆ ಎತ್ತರವಾದ ಸ್ಥಳದಲ್ಲಿ ಇಡಬೇಕು. ಮೃತ್ಯು ನಿವಾರಣೆಗಾಗಿ ಮತ್ತು ಯಮನ ಪ್ರೀತಿಗಾಗಿ ಇಡುವ ಈ ದೀಪಕ್ಕೆ "ಯಮದೀಪ"ವೆಂದು ಹೆಸರು. 

ಚತುರ್ದಶಿಯ ದಿನ ಸೂರ್ಯೋದಯಕ್ಕೆ ಮುನ್ನ ಎಳ್ಳೆಣ್ಣೆ ಹಚ್ಚಿಕೊಂಡು  ಮನೆಯವರೆಲ್ಲ ಅಭ್ಯಂಜನ ಸ್ನಾನ ಮಾಡಬೇಕು. ನಂತರ ಯಮ ದೇವನಿಗೆ ಒಂದು ದೀಪವನ್ನು ಹಚ್ಚಿಡಬೇಕು. ಮೃತ್ಯುದೇವತೆಯೂ ನರಕಾಧಿಪತಿಯೂ ಆದ ಯಮನನ್ನು ಪೂಜಿಸಿ ನರಕದ  ನೋವಿನಿಂದ ಪಾರು ಮಾಡೆಂದು ಬೇಡುವ ದಿನ ಎನ್ನುತ್ತಾರೆ. ಶ್ರೀಕೃಷ್ಣನು ಪ್ರಾಗ್ಜ್ಯೋತೀಪುರದ (ಅಸ್ಸಾಂ) ರಾಜನಾದ ನರಕಾಸುರನ್ನನ್ನು ವಧಿಸಿ ಅವನು ಅಪಹರಿಸಿದ ಹದಿನಾರು ಸಾವಿರ ಕನ್ಯೆಯರನ್ನು ಮತ್ತು ತ್ವಷ್ಪ್ರವಿನ ಮಗಳಾದ ಚತುರ್ದಶಿಯನ್ನುಮುಕ್ತಿ ಪಡಿಸಿ ಗೆದ್ದ ವಿಜಯೋತ್ಸವದ ದಿನವೆಂದೂ ಹೇಳುತ್ತಾರೆ. ಇಲ್ಲಿ ವಿದ್ಯೆಗೆ ಪರ್ಯಾಯ ಶಬ್ದ ಚತುರ್ದಶಿ ಎನ್ನುತ್ತಾರೆ. ನರಕಾಸುರ ಅಪಹರಿಸಿರುವ ಚತುರ್ದಶಿ ಎಂದರೆ  ಪುರಾಣ, ಧರ್ಮಶಾಸ್ತ್ರ, ಶಿಕ್ಷಾ, ಕಲ್ಪ, ವ್ಯಾಕರಣ, ಛಂದಸ್ಸು, ಜ್ಯೋತಿಷ್ಯ, ನಾಲ್ಕು ವೇದಗಳು, ಮೀಮಾಂಸ,ನಿರುಕ್ತ, ತರ್ಕ ಎಂಬ ಹದಿನಾಲ್ಕು ವಿದ್ಯೆಗಳು ಮಾಯವಾಗಿ ಜಗತ್ತಿನಲ್ಲಿ ಅಜ್ಞಾನವೇ ತುಂಬಿದಾಗ ಶ್ರೀಕೃಷ್ಣನು ಸುಜ್ಞಾನದ ಮಾರ್ಗ ತೋರಿದ  ಜ್ಞಾನದ ದಿನವೆಂದು ದೀಪ ಬೆಳಗುವ ಪದ್ಧತಿ ಬೆಳೆದು ಬಂದಿದೆ ಎನ್ನುತ್ತಾರೆ. ಚತುರ್ದಶಿಯ ದಿನ ಹಬ್ಬ ಆರಂಭವಾಗುವುದರಿಂದ ಹದಿನಾಲ್ಕು ಬಗೆಯ ಕಾಯಿಪಲ್ಯಗಳ ಭೋಜನ  ಮಾಡಬೇಕು. ಸಂಜೆ ಮನೆಯ ಎಲ್ಲಾ ದಿಕ್ಕುಗಳಲ್ಲೂ ಬೆಳಕಾಗುವಂತೆ ಸಾಲು ದೀಪಗಳಿಂದ ಅಲಂಕರಿಸಬೇಕು. ಊರಿನ ನ್ಯಾಯ ಕಟ್ಟೆಗಳಲ್ಲಿ, ದೇಗುಲಗಳಲ್ಲಿ ದೀಪಾಲಂಕಾರ ಮಾಡುವುದು ಸಂಪ್ರದಾಯ. 

ಮರುದಿನದ ಅಮಾವಾಸ್ಯೆ ವರ್ಷದ ಅತ್ಯಂತ ಕತ್ತಲೆಯ ದಿನ. ಈ ದಿನ ವಿಷ್ಣು ಲಕ್ಷ್ಮೀಯರ ಪುನರ್ಮಿಲನದ ದಿನ.ಅಂದು ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ರಂಗೋಲಿ ಹಾಕಿ, ಧನಲಕ್ಷ್ಮೀಪೂಜೆ ಮಾಡುತ್ತಾರೆ. ಹಿಂದಿನ ರಾತ್ರಿಯಂತೆ ಈ ದಿನ ರಾತ್ರಿಯೂ ದೀಪಾಲಂಕಾರ ಆಗಬೇಕು. ಅಂದು ವ್ಯಾಪಾರಿಗಳು, ಕಂಪನಿ ಮಾಲೀಕರು ಧನಲಕ್ಷ್ಮೀ ಪೂಜೆ, ಲೆಕ್ಕದ ಪುಸ್ತಕದ ಪೂಜೆ ಮಾಡಿ  ಹೊಸ ಲೆಕ್ಕದ ಪುಸ್ತಕಗಳನ್ನಿಡುತ್ತಾರೆ. ತಮ್ಮ ದುಡಿಮೆಯ ಸಾಧನ, ವಾಹನಗಳ ಪೂಜೆಯನ್ನೂ ಮಾಡುತ್ತಾರೆ. ಬಂಗಾಳದಲ್ಲಿ ಈ ಅಮಾವಾಸ್ಯೆಯನ್ನು ಕಾಳೀಪೂಜಾ ದಿನವೆಂದು ಲಕ್ಷ್ಮೀಪೂಜೆಗೆ ಬದಲಾಗಿ ಕಾಳೀದೇವಿಯ ಪೂಜೆ ಮಾಡುತ್ತಾರೆ.     

ಮೂರನೇ ದಿನ ಬಲಿಪಾಡ್ಯಮಿ ಅಥವಾ ಬಲಿಪ್ರತಿಪದ್ ಎಂದು ಕರೆಯಲ್ಪಡುವ ಕಾರ್ತಿಕ ಮಾಸದ ಮೊದಲ ದಿನ.  ಶೋಣಿತಪುರದ ರಾಜ, ಪ್ರಹ್ಲಾದನ ಮೊಮ್ಮಗ, ಮಹಾದಾನಿ, ವಿಷ್ಣು ಭಕ್ತ ಬಲಿಚಕ್ರವರ್ತಿಯನ್ನು ವಿಷ್ಣುವು  ತನ್ನ ವಾಮನಾವತಾರದಲ್ಲಿ ಪಾತಾಳಕ್ಕೆ ಮೆಟ್ಟಿದ ಪುರಾಣ ಕಥೆಯಿದೆ. ಅವನ ದಾನಶೂರತ್ವಕ್ಕೆ ಮೆಚ್ಚಿದ ಮಹಾವಿಷ್ಣು ನಿನಗೆ ಬೇಕಾದ ವರವನ್ನು ಬೇಡು ಎಂದಾಗ, ಬಲಿಯು ವರ್ಷದಲ್ಲಿ ಮೂರು ದಿನ ನನ್ನ ರಾಜ್ಯವನ್ನು ನೋಡುವ ಅವಕಾಶ ಕೊಡು ಹಾಗೂ ಈ ಮೂರು ದಿನ ಯಾರು ದೀಪ ಬೆಳಗುತ್ತಾರೋ ಅವರ ಮನೆಯಲ್ಲಿ ಮಹಾಲಕ್ಷ್ಮೀ ಸ್ಥಿರವಾಗಿ ನೆಲೆಸಲಿ ಎಂದು ವಿಷ್ಣುವಿನಲ್ಲಿ ಬೇಡಿದನೆಂದು ಹೇಳಲಾಗಿದೆ. ತಾನು ಎಲ್ಲವನ್ನು ಕಳೆದುಕೊಂಡರೂ ಭೂಲೋಕದ  ಜನ ಸುಖವಾಗಿರಲೆಂದು ವರ ಬೇಡಿದ ಬಲಿಯ ವ್ಯಕ್ತಿತ್ವ ಅತೀ ಶ್ರೇಷ್ಟವಾದದ್ದು. ಬಲಿಪ್ರತಿಪದಾವನ್ನು "ದ್ಯೂತಪ್ರತಿಪದಾ" ಎಂದೂ ಕರೆಯುತ್ತಾರೆ. ಈ ದಿನ ದೇವಿ ಪಾರ್ವತಿಯು ಮಹಾಶಿವನನ್ನು ಪಗಡೆಯಾಟದಲ್ಲಿ ಸೋಲಿಸಿ ಆನಂದದಿಂದ ಕುಣಿದಳೆಂದು ಪುರಾಣದ ಕಥೆಯಲ್ಲಿದೆ. ಗೋವುಗಳ ಪೂಜೆ ಮಾಡುವ  ಈ ದಿನವನ್ನು "ಗೋಸಂವರ್ಧನ" ದಿನವೆಂದು ಕರೆಯುತ್ತಾರೆ. 

ದೀಪಾವಳಿಯು ಧಾನ್ಯ ಬೆಳೆಯುವ ರೈತರಿಗೆ ಶ್ರೇಷ್ಟವಾದ ಹಬ್ಬ.ಉತ್ತರ  ಕರ್ನಾಟಕದಲ್ಲಿ ದೀಪಾವಳಿಯು "ಹಟ್ಟಿ ಹಬ್ಬ", ದಕ್ಷಿಣ ಕರ್ಣಾಟಕದ ಕೆಲವು ಜಿಲ್ಲೆಗಳಲ್ಲಿ "ಕೊಂತಿಪೂಜೆ" ಎಂದೂ ಪ್ರಸಿದ್ಧವಾಗಿದೆ.ಕರಾವಳಿಯ ಕುಂದಾಪುರದಲ್ಲಿ ದೀಪಾವಳಿಯ ನರಕ ಚತುರ್ದಶಿಯಂದು ಗದ್ದೆಯಲ್ಲಿ ಬೆಳೆದ ಭತ್ತದ ರಾಶಿಯನ್ನು , ಬಲಿಚಕ್ರವತಿಯನ್ನು ಪೂಜೆ ಮಾಡುವ ಸಾಂಪ್ರದಾಯಿಕ ಪದ್ಧತಿ ಇದೆ. ಬೆಳೆ ಬೆಳೆಯುವ ಗದ್ದೆಯಲ್ಲಿ ನೈವೇದ್ಯ ಇಟ್ಟು ಭೂಮಿ ಪೂಜೆ ಮಾಡುತ್ತಾರೆ. ಅ ಸಮಯದಲ್ಲಿ “ಹೊಲಿದೇವ್ರೋ ಬಲಿದೇವ್ರೋ ಹೊಲಿ ಕೊಟ್ಟ್ ಬಲಿ ತ್ಯೆಕಂಡ್ ತಮ್ಮ್ ರಾಜ್ಯಕ್ ತಾವೇ ಬಂದ ಹೊಲಿಯೆ ಬಾ “ಎಂದು ಬಲಿಯನ್ನು ಕರೆಯುತ್ತಾರೆ. ಮನೆಗೆ ಬಂದು ಹೊಲಿ (ಬೆಳೆ) ರಾಶಿಗೆ  ಅಂದರೆ ಧಾನ್ಯಲಕ್ಷ್ಮೀಯ ಪೂಜೆ ಮಾಡುತ್ತಾರೆ. ಬಲಿಪಾಡ್ಯಮಿಯಂದು ಎಲ್ಲರೂ ಗೋಪೂಜೆ ಮಾಡುತ್ತಾರೆ.ಉತ್ತರ ಭಾರತದವರಿಗೆ ದೀಪಾವಳಿ ವರ್ಷಾರಂಭದ ಹಬ್ಬ, ಬಲಿಪಾಡ್ಯಮಿ ವರ್ಷಾರಂಭದ ದಿನ. ಪಾಂಡವರು ಅಜ್ಞಾತವಾಸದಿಂದ ಮುಕ್ತಿ ಪಡೆದ ದಿನ. ದೀಪಾವಳಿಯಂದು ರಾಮನು ರಾವಣನನ್ನು ವಧಿಸಿ ವಿಜಯ ಸಾಧಿಸಿ, ಅಯೋಧ್ಯೆಗೆ ಮರಳಿ ಬಂದ ಸಂತೋಷಕ್ಕೆ ಜನರೆಲ್ಲ ತುಪ್ಪದ ದೀಪ ಹಚ್ಚಿ ಸಂತೋಷ ಪಟ್ಟ ದಿನವಾದ್ದರಿಂದ ರಾಮನ ವಿಜಯೋತ್ಸವದ ಸಂಕೇತವಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಈ ದಿನದಲ್ಲಿ ಹಸು ಎತ್ತುಗಳ ಪೂಜೆ, ಗೋವರ್ಧನ ಬೆಟ್ಟದ ಪೂಜೆ, ಕುಟುಂಬದ ಗಂಡಸರಿಗೆ ಹೆಂಗಸರು ಮಾರ್ಗಪಾಲಿ ಕಂಕಣ ಕಟ್ಟಿ ಆರತಿ ಮಾಡುವುದು, ಜನ ಸಂಚರಿಸುವ ಮಾರ್ಗದಲ್ಲಿ ಮಾರ್ಗಪಾಲಿ ದೇವಿಯ ಪೂಜೆ ಇತ್ಯಾದಿ ಸಾಂಪ್ರದಾಯಿಕ ಆಚರಣೆಗಳಿವೆ . 

ದೀಪಾವಳಿಯು ದೇಶದ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಸಾರ್ವತ್ರಿಕವಾಗಿ ಆಚರಿಸಲ್ಪಡುತ್ತಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಸೇರಿ ಹಣತೆ ಹಚ್ಚಿ,ಹೊಸ ಬಟ್ಟೆತೊಟ್ಟು, ಪಟಾಕಿ ಸಿಡಿಸಿ,ಸಡಗರದಿಂದ  ಆಚರಿಸುವ ಹಬ್ಬ. "ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು" ಎಂಬ ಕವಿತೆಯ ವಾಣಿಯಂತೆ ಮನದ ದು:ಖವನ್ನು ದೂರ ಮಾಡುವ, ಜೀವನೋತ್ಸಾಹ  ಹುಟ್ಟಿಸುವ  ಹಬ್ಬ. ಬಡವ-ಶ್ರೀಮಂತನೆಂಬ ಭೇಧವಿಲ್ಲದೆ ಎಲ್ಲರ ಮನೆ-ಮನ ಬೆಳಗುವ ಸಮಾನತೆಯ ಸಂಕೇತದ ವರ್ಣರಂಜಿತ ಹಬ್ಬ. ಬದುಕಿನಲ್ಲಿ ವಿಜಯ ಸಾಧಿಸಬೇಕಾದರೆ ಮನುಷ್ಯ ಪ್ರಯತ್ನಿಸಬೇಕೆಂಬ ತತ್ವ ಈ ಹಬ್ಬದ ಆಚರಣೆಯಲ್ಲಡಗಿದೆ.   

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!