Thursday, November 21, 2024

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೋಪೂಜೆ

ಕುಂದಾಪುರ: ಗೋ ಸಾಕ್ಷಾತ್ ದೇವರು. ಗೋವನ್ನು ಗೌರವಿಸಬೇಕು. ಗೋವುಗಳಿಗೆ ಸಂರಕ್ಷಣೆಯ ನಿಟ್ಟಿನಲ್ಲಿ ಸೌಕೂರು ದೇವಸ್ಥಾನದ ವತಿಯಿಂದ ಗೋಶಾಲೆ ಮಾಡುವ ಯೋಜನೆ ರೂಪಿಸಿ, ಕಾರ್ಯಪ್ರವೃತ್ತರಾಗಬೇಕಾಗಿದೆ. ಇದಕ್ಕೆ ಮೂಲಭೂತ ಅವಶ್ಯಕತೆಯನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ಶುಕ್ರವಾರ ಸಂಜೆ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸರ್ಕಾರದ ಆದೇಶದಂತೆ ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಗಳಲ್ಲಿ ಗೋಪೂಜೆ ನೆರವೇರಿಸಲಾಗುತ್ತಿದೆ. ಇದೊಂದು ಶ್ರೇಷ್ಠವಾದ ಕಾರ್ಯ ಎಂದು ಹೇಳಿದ ಅವರು, ಈ ಭಾಗದ ಧಾರ್ಮಿಕ ಸ್ಥಳಗಳಿಗೆ ಹೋಲಿಸಿದರೆ ಪುರಾತನವಾದ ಸೌಕೂರು ದೇವಸ್ಥಾನ ಅಭಿವೃದ್ದಿಯಲ್ಲಿ ಹಿಂದಿದೆ. ದೇವಿಯ ಶಕ್ತಿಗೆ ಹಿನ್ನೆಡೆಯಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಬರುವಂತೆ ಆಗಬೇಕು. ಭಕ್ತರಿಗೆ ಸೂಕ್ತ ಅನುಕೂಲತೆಗಳನ್ನು ಕಲ್ಪಿಸಿಕೊಡುವ ಕೆಲಸ ಆಗಬೇಕು. ನಿತ್ಯ ಅನ್ನಸಂತರ್ಪಣೆ, ಧಾರ್ಮಿಕ ವಿಧಿವಿಧಾನಗಳು ಕ್ರಮಬದ್ಧವಾಗಿ ನಡೆಯಬೇಕು ಎಂದರು.

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಮಾತನಾಡಿ, ‘ಪುಷ್ಪಪವಾಡ’ ಖ್ಯಾತಿಯ ಈ ದೇವಸ್ಥಾನಕ್ಕೆ 1600 ವರ್ಷಗಳ ಭವ್ಯ ಇತಿಹಾಸವಿದೆ. ಪುರಾಣ ಪ್ರಸಿದ್ಧವಾದ ಕ್ಷೇತ್ರವಿದು. ಈ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು. ದಿನಂಪ್ರತಿ ಅನ್ನಸಂತರ್ಪಣೆಯನ್ನು ಶೀಘ್ರ ಆರಂಭಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅನಂತ ಅಡಿಗ ಸೌಕೂರು, ಕುಪ್ಪ ಗುಲ್ವಾಡಿ, ರೀತಾ ದೇವಾಡಿಗ ಸೌಕೂರು, ಆಶಾ ಸಂತೋಷ್ ಪೂಜಾರಿ ಮುಕ್ಕೋಡು ನೇರಳಕಟ್ಟೆ, ಜಯರಾಮ ಶೆಟ್ಟಿ ಹಡಾಳಿ ಅಂಪಾರು, ಕೆ.ಸುಬ್ಬಣ್ಣ ಶೆಟ್ಟಿ ಕೆಂಚನೂರು, ಉಮೇಶ ಮೊಗವೀರ ಕಂಡ್ಲೂರು, ಜಿ.ಶೇಖರ ಪೂಜಾರಿ ಗುಲ್ವಾಡಿ ಹಾಗೂ ರಘುರಾಮ ಶೆಟ್ಟಿ, ದೇವಳದ ಅರ್ಚಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ದೇವಸ್ಥಾನದ ಅರ್ಚಕರು ಗೋಪೂಜೆಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!