Sunday, September 8, 2024

ಸಂಪ್ರದಾಯದ ಸಿರಿವಂತಿಕೆಯ ದೀಪಾವಳಿ ಹಬ್ಬ

ಸಾಧನಾ ಶಾಸ್ತ್ರೀ
ಪ್ರಥಮ ಬಿ.ಎ., ಪತ್ರಿಕೋದ್ಯಮ ವಿಭಾಗ, ಭಂಡಾರ್ಕಾಸ್ ಕಾಲೇಜು ಕುಂದಾಪುರ

ದೀಪಾವಳಿ ಒಂದು ರೀತಿಯ ಮಹಾಪರ್ವವೇ ಸರಿ…. ಹಬ್ಬ ಮೂರು ದಿನಕ್ಕೆ ಮೀಸಲಾದರು ಸಹ ತಯಾರಿಯಲ್ಲೆ ವಾರಗಳು ಕಳೆದು ಹೋಗುತ್ತದೆ.
ಇದು ವಯೋಮಾನಕ್ಕೆ ಸೀಮಿತವಾದ ಹಬ್ಬವಂತು ಅಲ್ಲವೇ ಅಲ್ಲ! ಹಬ್ಬದ ಮೊದಲ ದಿನವನ್ನು ನರಕ ಚತುರ್ದಶಿ ಎಂದು ಆಚರಿಸುತ್ತೇವೆ ಭೂಲೋಕಕ್ಕೆ ಕಂಟಕವಾದ ನರಕಾಸುರನನ್ನು ಶ್ರೀ ಕೃಷ್ಣನು ಸತ್ಯಭಾಮೆಯ ಸಹಾಯದಿಂದ ಸಂಹರಿಸಿದನು. ಹಿಂದಿನ ದಿನ ರಾತ್ರಿ ನೀರು ತುಂಬಿಸುವ ಹಬ್ಬ ಎಂದೇ ಆಚರಿಸುವರು ಆ ರಾತ್ರಿ ಹಂಡೆಯನ್ನು ಸ್ವಚ್ಛಗೊಳಿಸಿ ನೀರು ತುಂಬಿಸಿ ಕಹಿ ಹಿಂಡಲೆ ಎಂಬ ಬಳ್ಳಿಯನ್ನು ಹಂಡೆಗೆ ಸುತ್ತಿ ಅದಕ್ಕೆ ದನದ ಸಗಣಿಯಲ್ಲಿ ದೂರ್ವೆ ನೆಡುವರು. ನಂತರ ಕೆಮ್ಮಣ್ಣು ಮಿಶ್ರಣವನ್ನು ಮತ್ತು ಸುಣ್ಣದ ಮಿಶ್ರಣವನ್ನು ಪಟ್ಟೆ ಬಳಿಯುವರು.
ಮಾರನೇ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಹರಳೆಣ್ಣೆ ಹಚ್ಚಿಕೊಂಡು ಅಭ್ಯಂಜನ ಮಾಡುವರು ಅಂದಿನ ದಿನ ಹೆಚ್ಚಾಗಿ ಬೆಳಗ್ಗಿನ ಉಪಹಾರಕ್ಕೆ ಸಿಹಿಕುಂಬಳದ ಕಡಬನ್ನು ಮಾಡುವರು ಮಾರನೆಯ ದಿನ ದೀಪಾವಳಿಯ ಅಮಾವಾಸ್ಯೆ ಅಂದು ಶ್ರೀಲಕ್ಷ್ಮಿ ದೇವಿಯ ಆರಾಧನೆ ಮಾಡುವರು ಅಂದು ಆರಾಧಿಸಿದರೆ ಸಂಪತ್ತು ವೃದ್ದಿಸುವುದೆಂಬ ನಂಬಿಕೆ ಅಂದಿನ ಸಂಜೆ ಗೋಪೂಜೆಗೆ ಸಿದ್ಧತೆಗಾಗಿ ವಿವಿಧ ಹೂವುಗಳು ತರಹೇವಾರಿ ಪತ್ರೆಗಳು ಜೊತೆಗೆ ಅಡಿಕೆ ಕಾಯಿ ಪಚ್ಚೆತೆನೆ ಸೇರಿಸಿ ಮಾಲೆಗಳನ್ನು ತಯಾರಿಸುವರು ಮಲೆನಾಡು ಭಾಗದಲ್ಲಿ ಗಿಲಿಗಿಚ್ಚಿ ಹಾಗೂ ಉಗುಣೆ ಎಂಬ ಕಾಡುಸಸ್ಯದ ಕಾಯಿಗಳನ್ನು ಪೋಣಿಸಿ ಮಾಲೆ ಮಾಡಲಾಗುತ್ತದೆ.

ದೀಪಾವಳಿಯ ಕೊನೆಯ ದಿನ ಬಲಿಪಾಡ್ಯಮಿ ಹಾಗೂ ಗೋಪೂಜೆ ಆಚರಿಸುವರು. ಬಲಿ ಚಕ್ರವರ್ತಿಯ ನೆನಪಿಗಾಗಿ ತುಳಸಿಕಟ್ಟೆ ಮುಂದೆ ಮೂರು ಮಣ್ಣಿನ ಮುದ್ದೆಗಳಿಂದ ಬಲೀಂದ್ರನ ಮೂರ್ತಿಯನ್ನು ಮಾಡಿ ಆರಾಧಿಸುವರು ಆ ದಿನ ಮುಂಜಾನೆ ಮನೆಯಲ್ಲಿರುವ ಎಲ್ಲ ಗೋವುಗಳಿಗೆ ಬಿಸಿ ನೀರಿನಿಂದ ಸ್ನಾನ ಮಾಡಿಸಿ ತಲೆಗೆ ಹಾಗೂ ಇಡೀ ಶರೀರಕ್ಕೆ ಹರಳೆಣ್ಣೆ ಹಚ್ಚಿ ಕೆಂಪು ಮತ್ತು ಬಿಳಿ ಬಣ್ಣದ ಪಟ್ಟೆ ಹಚ್ಚುತ್ತಾರೆ. ನಂತರ ಮನೆಯಲ್ಲಿ ಎಲ್ಲರೂ ಸ್ನಾನ ಮಾಡಿ ಹುಗ್ಗಿಯನ್ನು ಜೊತೆಗೆ ವಿಶೇಷ ಖಾದ್ಯವಾಗಿ ಹೋಳಿಗೆ ಮಾಡುವುದು ಪ್ರತೀತಿ ಸುಮುಹೂರ್ತದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಮಾಡಿ ಹುಗ್ಗಿಯನ್ನು ಅವುಗಳಿಗೆ ಕೊಡುವರು ನಂತರ ಬಲೀಂದ್ರನ ಪೂಜೆ ಮಾಡುವರು ವಿಶೇಷವಾಗಿ ಪಟಾಕಿ ಹೊಡೆಯುವರು.

ಬಲಿಯ ವಿಶೇಷತಯೆಂದರೆ ಈ ದಿನ ಮಾತ್ರ ವಾಮನನಿಂದ ಪಾತಾಳಕ್ಕೆ ಹೋದಂತಹ ಬಲಿಯು ತನ್ನ ಪ್ರಜೆಗಳ ಯೋಗಕ್ಷೇಮ ನೋಡಲು ವಾಮನನ ವರಬಲದಿಂದ ಭೂಲೋಕಕ್ಕೆ ಬರುವನು ಇದು ಹಬ್ಬದ ವಿಧಾನ.

ಮಲೆನಾಡು ಭಾಗದಲ್ಲಿ ದೀಪಾವಳಿ ಸ್ವಲ್ಪ ಭಿನ್ನವಾಗಿರುತ್ತದೆ ಅಂದು ಸಂಜೆ ಅಡಿಕೆ ದಬ್ಬೆಗಳಿಂದ ದೊಂದಿಯನ್ನು ತಯಾರಿಸಿ ನಂಬಿದ ದೇವರಿಗೆ ತೋಟಕ್ಕೆ ಗದ್ದೆಗೆ ಮುಂತಾದ ವಿಶೇಷ ಸ್ಥಳಗಳಿಗೆ ದೊಂದಿಯನ್ನು ದೀಪ್ ದೀಪೊಳಿಗೆ ಎನ್ನುವ ಪದ್ಯವನ್ನು ಹೇಳುತ್ತಾ ಇಟ್ಟು ತನ್ನನು ತನ್ನ ಪರಿವಾರವನ್ನು ರಕ್ಷಿಸು ಎಂದು ಬಲಿ ಮಹಾರಾಜರನ್ನು ಪ್ರಾರ್ಥಿಸುವರು.
ಇದು ಕೇವಲ ಹಬ್ಬವಲ್ಲ ಎಷ್ಟೇ ಸಾಮರ್ಥ್ಯವಿದ್ದರೂ ದೈವಿಕ ಶಕ್ತಿಯ ಮುಂದೆ ತಲೆಬಾಗಲೇ ಬೇಕು ಅದಕ್ಕೆ ಸ್ಪಷ್ಟ ನಿಲುವು ಬಲಿ ಚಕ್ರವರ್ತಿ ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಈಗಿನ ಕಾಲದಲ್ಲಿ ದೀಪಾವಳಿಯನ್ನು ಪ್ರತಿಷ್ಠೆಯ ಸಂಕೇತವಾಗಿ ಆಚರಿಸುತ್ತಾರೆ ಹೆಚ್ಚಾಗಿ ಯುವಜನತೆ ಪಟಾಕಿ ಸಿಡಿಸುವುದೊಂದೆ ಹಬ್ಬ ಎಂದು ತಿಳಿದಿದ್ದಾರೆ.

ಮೌಲ್ಯಗಳು ಕಾಲ ಸರಿದಂತೆ ಗೌಣವಾಗುತ್ತಿದೆ ಇನ್ನಾದರೂ ಹಬ್ಬದ ನಿಜ ಅರ್ಥವನ್ನು ತಿಳಿದು ಆಚರಿಸಬೇಕು ಮನಸ್ಸಿನ ಅಂಧಕಾರವನ್ನು ತೆಗೆದುಹಾಕಿ ಜ್ಞಾನದ ಬೆಳಕನ್ನು ಹರಿಸಬೇಕು ನಮ್ಮಲ್ಲಿನ ನಾನು ಎಂಬುದನ್ನು ತೊರೆದು ನಾವೆಂಬ ಭಾವನೆ ಬಿತ್ತಬೇಕು ಹೀಗಾದರೆ ಮಾತ್ರ ಅದು ನಿಜವಾದ ದೀಪಾವಳಿಯ ಆಚರಣೆಗೆ ಅರ್ಥ ದೊರೆಯುತ್ತದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!