spot_img
Sunday, February 15, 2026
spot_img

ಪರಿಸ್ಥಿತಿಗಳನ್ನು ಎದುರಿಸುವ ಹೆಣ್ಣು : ನಂಜಮ್ಮನ ಗೃಹಭಂಗ

ಸರಸ್ವತಿ ಪುತ್ರರಾದ ಭೈರಪ್ಪ ಯಾವಾಗಲೂ ನನ್ನ ನೆಚ್ಚಿನ ಬರಹಗಾರರಲ್ಲಿ ಒಬ್ಬರು. ಉತ್ತರ ಕಾಂಡ, ಪರ್ವ, ದಾಟು, ದೂರ ಸರಿದರು, ವಂಶ ವೃಕ್ಷ, ಗೃಹಭಂಗ ಭೈರಪ್ಪನವರ ಯಾವುದೇ ಕಾದಂಬರಿ ಓದಿದರೆ ನಿಮಗೆ ಖಂಡಿತ ಕಾರಣ ತಿಳಿಯುತ್ತದೆ. ಇವರು ಎಷ್ಟೆಲ್ಲಾ ಸಂಶೋಧನೆಯನ್ನು ನಡೆಸಿ ಒಂದು ಕಾದಂಬರಿಯನ್ನು ರಚಿಸುತ್ತಾರೆ. “ಗೃಹಭಂಗ” ಕೃತಿಯನ್ನು ಇತ್ತೀಚಿಗಷ್ಟೇ ಓದಿ ಮುಗಿಸಿದೆ. ಅವರ ರಚನಾ ಕೌಶಲ್ಯಕ್ಕೆ ಈ ಕೃತಿ ಒಂದು ಕೈಗನ್ನಡಿಯಾಗಿದೆ. ಹೆಣ್ಣು ಕುಲದ ಪ್ರತೀಕವಾಗಿ ನಂಜಮ್ಮಳ ಚಿತ್ರಣವಾಗಿದೆ.

ಒಂದು ಕಥೆ ಎಷ್ಟು ದಿನಗಳವರೆಗೆ ನೆನಪಿನಲ್ಲಿ ಉಳಿಯಬಹುದು? ಅದರ ಪಾತ್ರಗಳು ಮತ್ತು ಸನ್ನಿವೇಶಗಳು ಎಷ್ಟರ ಮಟ್ಟಿಗೆ ಹೃದಯವನ್ನು ಕಲಕಬಹುದು? ಒಂದೇ ಕಥೆ ಎಷ್ಟು ಬಾರಿ ಕಣ್ಣೀರನ್ನು ಜಿನುಗಿಸಬಹುದು? ಈ ಪ್ರಶ್ನೆಗಳಿಗೆ ಪ್ರತಿಯೊಂದು ಕಥೆಯು ವಿಭಿನ್ನ ಉತ್ತರ ನೀಡುತ್ತದೆ. ಆದರೆ ಎಸ್. ಎಲ್. ಭೈರಪ್ಪನವರ ಗೃಹಭಂಗ ಎಂಬ ಈ ಕಥೆ ಎಂದಿಗೂ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವಂತಹ ಅಪೂರ್ವ ಅನುಭವವಾಗಿದೆ. ಓದುಗನನ್ನು ಕಥೆಯ ಭಾಗವಾಗಿ ಪರಿವರ್ತಿಸಿ ಅಂತಃಕರಣವನ್ನು ತಟ್ಟುವ ಮೇರು ಕೃತಿ.

ಒಂದು ಕಾಲಘಟ್ಟದ ಒಂದು ಸೀಮೆಯ ಒಂದು ಪರಿವಾರದ ಜೀವನವನ್ನು ಚಿತ್ರಿಸುವ ಕಾದಂಬರಿ. ಹೃದಯ ತಟ್ಟುವ ಪಾತ್ರಗಳು, ಏನನ್ನು ಸಾಧಿಸಬೇಕಿಲ್ಲದ ನಿಲುವು ಒಂದೆಡೆಯಾದರೆ; ಕಷ್ಟದ ಪರಿಸ್ಥಿತಿಯಲ್ಲಿಯೂ ಏನನ್ನಾದರೂ ಸಾಧಿಸುವ ಮನಸ್ಥಿತಿ, ಯಾವುದನ್ನು ಊಹೆಗೆ ಬಿಡದೆ ಚಿತ್ರಿಸುವ ರೀತಿ ಒಂದು ಸುಂದರ ಸಿನಿಮಾದಂತೆ ಹರಿಯುತ್ತದೆ.

ಒಂದು ಪುಸ್ತಕ, ಒಂದು ಕಥೆ, ಒಂದು ಪಾತ್ರ ಅತಿಯಾಗಿ ಕಾಡಿದ್ದು ಪೂರ್ತಿ ಮನಸ್ಸನ್ನು ಆವರಿಸಿದ್ದು ಎಸ್. ಎಲ್. ಭೈರಪ್ಪನವರ ಗೃಹಭಂಗ ಕಾದಂಬರಿಯಲ್ಲಿ. ನಂಜಮ್ಮಳನ್ನು ನಾಯಕ ಎಂದು ಹೇಳಲೋ ನಾಯಕಿ ಎಂದು ಹೇಳಲೋ ತಿಳಿಯುತ್ತಿಲ್ಲ, ಸ್ತ್ರೀ ಶಕ್ತಿ ಮತ್ತು ಸ್ತ್ರೀವಾದಕ್ಕೆ ಉತ್ತಮ ಉದಾಹರಣೆ. ಜೊತೆಗೆ ಇದು ಕೇವಲ ಸಾಮಾಜಿಕ ಕಾದಂಬರಿ ಅಲ್ಲ, ಬರೀ ನಂಜಮ್ಮನ ಕುಟುಂಬದ ಹೆಣಗಾಟದ ವಿವರಣೆಯೂ ಅಲ್ಲ. ಕಥೆಗೂ ಮೀರಿದ ಸತ್ಯದ ಅನಾವರಣವಿದೆ. ಸಮಾಜದ ಒಂದು ಮುಖ್ಯ ವಿಷಯದ ಸುತ್ತ ಕಥೆ ಹೆಣೆದು ಓದುಗರ ಮನಸ್ಸು ಮುಟ್ಟುವ ಹಾಗೆ ಬರೆಯೋಕೆ ಸಾಧ್ಯ ಸರಸ್ವತಿ ಪುತ್ರರಾದ ಭೈರಪ್ಪನವರ ಬರವಣಿಗೆಯ ಹಿರಿಮೆ.

ಗೃಹಭಂಗ ಇದೊಂದು ಪುಸ್ತಕ ಎಂದರೆ ತಪ್ಪು. ಗೃಹಭಂಗ ಎಂದರೆ ಬದುಕು. ಬದುಕಿನ ಸಂಕೋಲೆಗಳ ಪದರವನ್ನು ಎಳೆ ಎಳೆಯಾಗಿ ತೆರೆದಿಡುವ ಪುಸ್ತಕ. ಓದಿದ ನಂತರ ಮನಸೆಲ್ಲಾ ಸಂಕಟ, ಏನೋ ಒಂದು ರೀತಿಯ ಪ್ರಶ್ನೆ, ಕಳವಳದ ಭಾವ. ಒಂದೆಡೆ ಎರಡು ಪೀಳಿಗೆಯನ್ನು ಕುರಿತು ಹೇಳುವ ಕಥೆಯಾದರೆ; ಇನ್ನೊಂದೆಡೆ ಬದುಕಿನ ಅರ್ಥವನ್ನು ತಿಳಿ ಹೇಳಿ, ಹುಟ್ಟು ಎಂದರೆ ಏನು? ಸಂಬಂಧಗಳ ಅರ್ಥವೇನು? ಬದುಕಿನ ಜಂಜಾಟ ಹೋರಾಟವನ್ನು ಬಿಂಬಿಸುವ ಕಥೆ. ಪ್ರತಿ ಅಧ್ಯಾಯವು ಒಬ್ಬ ಓದುಗನ ಮನಸಿನ ಆಳಕ್ಕೆ ಹೇಗೆ ಹೋಗಬೇಕು ಎಂದು ಭಾವಿಸಿ ಬರೆದಿರುವ ಪುಸ್ತಕ.

ನಂಜಮ್ಮ ಈ ಕಾದಂಬರಿಯ ಉಸಿರು ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ಅಸಹಜವಾದ ಒಂದು ಕುಟುಂಬಕ್ಕೆ ಸೊಸೆಯಾಗಿ ಬಂದು, ಬೇಜವಾಬ್ದಾರಿ ಪತಿ, ಮಾತುಗಳಿಂದಲೇ ಕೊಲ್ಲುವ ಅತ್ತೆ, ವಿಚಿತ್ರ ಬುದ್ಧಿಯ ಮೈದುನನ ವರ್ತನೆಗಳನ್ನು ಸಹಿಸುತ್ತಾ, ಸಮಾಜದ ನಿಂದನೆಯನ್ನು ಎದುರಿಸುತ್ತಾ ಹೋರಾಡುವ ಬದುಕು, ತಂದೆ ಮನೆ ಮತ್ತು ಗಂಡನ ಮನೆ ಎರಡರಲ್ಲೂ ಕಾಣದ ಸುಖ…

ಹೆಸರಿಗಷ್ಟೇ ಶಾನುಭೋಗನಾಗಿರುವ ಅವಳ ಗಂಡ ಚೆನ್ನಿಗರಾಯ “ತನ್ನ ಹೊಟ್ಟೆ ತುಂಬಿದರೆ ಸಾಕು; ಬೇರೆಯವರಿಗೆ ಏನಾದರೂ ಆಗಲಿ. ಅದಕ್ಕೂ ನನಗೂ ಸಂಬಂಧವೇ ಇಲ್ಲ” ಎನ್ನುವ ವ್ಯಕ್ತಿ. ಜೀವನದಲ್ಲಿ ಗಂಡನಿಂದ ದೊರೆಯದ ಪ್ರೀತಿ, ಮಮತೆ, ಅವನಾಡುವ ಬೈಗುಳದ ಮಾತುಗಳು, ದುಡಿಯದ ಬೇಜವಾಬ್ದಾರಿ, ತನ್ನ ಸುಖವನ್ನಷ್ಟೇ ನೋಡಿಕೊಳ್ಳುತ್ತಿದ್ದ ವ್ಯಕ್ತಿ ತನ್ನದೇ ಮಗು ಹುಟ್ಟಿದಾಗ ಅದನ್ನು ಎತ್ತಿಕೊಳ್ಳಲೂ ಸಹ ಯೋಚಿಸದ ಆತನ ಜೊತೆ ಗಟ್ಟಿಗಿತ್ತಿಯಾಗಿ ನಿಂತು ಇಡೀ ಸಂಸಾರದ ಜವಾಬ್ದಾರಿಯನ್ನು ತಾನು ಒಬ್ಬಳೇ ಹೇಗೆ ನಿರ್ವಹಿಸುತ್ತಾಳೆ ಎನ್ನುವುದನ್ನು ಓದುತ್ತಿದ್ದರೆ ಮೈ ರೋಮಾಂಚನವಾಗುತ್ತದೆ.

ಚೆನ್ನಿಗರಾಯನಂತಹ ಕೆಲಸಕ್ಕೆ ಬಾರದ ವ್ಯಕ್ತಿ, ಸ್ವಂತ ಮಕ್ಕಳಿಗೂ ಉಳಿಸದೆ ತಿಂಡಿಯನ್ನು ಖಾಲಿ ಮಾಡುವ ಅಲ್ಪಬುದ್ಧಿ ಉಳ್ಳವ, ಇನ್ನು ಅವನ ತಮ್ಮ ಅಪ್ಪಣ್ಣಯ್ಯ ಸ್ವಂತ ಅತ್ತಿಗೆಯನ್ನು ಒದೆಯುತ್ತಾನೆ. ಅಂತವನ ಜೊತೆ ಮತ್ತೆ ಮಾತನಾಡಲು ಮನಸ್ಸಾಗದು. ಆದರೆ ನಂಜಮ್ಮ ಮತ್ತೆ ಹೇಗೆ ಅವನನ್ನು ಮಾತನಾಡಿಸಲು ಸಾಧ್ಯ??

ಅತ್ತೆ ಗಂಗಮ್ಮಳ ಬಾಯಲ್ಲಿ ಬರೀ ಕೆಟ್ಟ ಮಾತುಗಳೇ… ಬಾಯಿ ತೆರೆದರೆ ಏನೇನೋ ಬೈಗುಳಗಳ ಸುರಿಮಳೆ. ತನ್ನದೇ ನಡೆಯಬೇಕೆಂಬ ಹಠ. ಸೊಸೆ ನಂಜಮ್ಮಳನ್ನು ಕಂಡರೆ ಅತಿ ಕೋಪ. ಅವಳನ್ನು ಮನೆಯಿಂದ ಹೊರ ಕಳಿಸಿ ಕಷ್ಟಪಡುವಂತೆ ಮಾಡಿದಳು. ಆದರೂ ಗಂಗಮ್ಮ ಹೊಟ್ಟೆಗಿಲ್ಲದೆ ಬಂದಾಗ ಮಾನವೀಯತಾ ದೃಷ್ಟಿಯಿಂದ ನಂಜಮ್ಮ ಧಾನ್ಯವನ್ನು ನೀಡಿದರೆ ಅದನ್ನು ಅವಳ ತಲೆ ಮೇಲೆ ಸುರಿಯುತ್ತಾಳೆ ಎಂತಹ ಕೆಟ್ಟ ಹೆಂಗಸು. ತನ್ನ ಸ್ವಂತ ಅತ್ತಿಗೆಯನ್ನು ಒದೆಯುವಂತೆ ಮಗನನ್ನು ಪ್ರೇರೇಪಿಸುವ ಕ್ರೂರ ಅತ್ತೆ. ನಂಜಮ್ಮನ ಕೌಟುಂಬಿಕ ಜೀವನವನ್ನು ನೆನೆದರೆ ಕಣ್ಣಲ್ಲಿ ನೀರು ಬರುತ್ತದೆ. ಆಕೆಯ ಸಹಾಯಕ್ಕಾಗಿ ಮನೆಯಲ್ಲಿ ಯಾರು ಇಲ್ಲ. ಶಾನುಭೋಗಿಕೆಯ ಲೆಕ್ಕವನ್ನು ಬರೆಯುವುದರ ಜೊತೆಗೆ ಮುತ್ತುಗದ ಎಲೆಯನ್ನು ಹಚ್ಚುತ್ತಾ ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಳು.

ಆದರೆ ಸಾಮಾಜಿಕವಾಗಿ ಆಕೆಗೆ ಎಷ್ಟೊಂದು ಗೌರವ? ಏನೂ ಸಂಬಂಧವಿಲ್ಲದಿರುವ ಮಾದೇವಯ್ಯನವರಿಗೆ ನಂಜಮ್ಮನೆಂದರೆ ಎಷ್ಟು ಪ್ರೀತಿ? ಆಕೆಗಾಗಿ ಎಷ್ಟೆಲ್ಲ ಸಹಾಯ ಮಾಡಿದರು? ಅವಳ ಜೀವನದ ಮಾರ್ಗದರ್ಶಕರಾಗಿದ್ದರು. ಇಂದಿನ ಕಾಲಘಟ್ಟದಲ್ಲಿ ಇಂತಹ ಮನುಷ್ಯರು ಎಲ್ಲಿಯಾದರೂ ಸಿಗುತ್ತಾರೆಯೇ ಎನ್ನುವುದೇ ನನಗೆ ಕಾದಂಬರಿ ಉದ್ದಕ್ಕೂ ಕಾಡುತ್ತಿದ್ದ ಪ್ರಶ್ನೆ.

ಪ್ಲೇಗ್ ಮಹಾಮಾರಿ ಬಂದಾಗ ಜನರೆಲ್ಲ ಊರ ಹೊರಗೆ ವಾಸಿಸುತ್ತಿದ್ದು, ಚರ್ಮರೋಗಗಳಿಂದ ಬಳಲಿದ್ದು, ಮಾಟ – ಮಂತ್ರ ಅಂತ ಜನಗಳಿಗೆ ಮೋಸ ಮಾಡುವವರು, ಕೋರ್ಟು – ಕೇಸು ಎಂದು ದುಡ್ಡು ಹೊಡೆಯುವವರು, ಅಂಥವರ ನಡುವೆ ಮಾದೇವಯ್ಯನವರು, ಗುಂಡೇಗೌಡರು ಮತ್ತು ಮೇಷ್ಟ್ರು ಇವರನ್ನೆಲ್ಲಾ ನೋಡಿದಾಗ ಮನುಷ್ಯತ್ವದ ಮೇಲೆ ಇನ್ನೂ ಭರವಸೆ ಅಳಿಯದೇ ಉಳಿಯುತ್ತದೆ.

ನಂಜಮ್ಮನಿಗೆ ಪ್ಲೇಗ್ ಆದಾಗ ತನ್ನ ಜೀವನವನ್ನೇ ನೆನೆಯುತ್ತಾಳೆ. ಗಂಡ ಅನ್ನಿಸಿಕೊಂಡವನು ಪ್ರಯೋಜನವಿಲ್ಲ. ತನಗೆ ಪ್ಲೇಗ್ ಆದಾಗ ಮಾದೇವಯ್ಯನವರನ್ನು ಕರೆತರಲು ಕೇಳಿಕೊಂಡಾಗ ತನಗೆ ನಿದ್ರಾಭಂಗವಾಗುತ್ತದೆಂದು ಮಲಗುತ್ತಾನೆ. ಇನ್ನು ಆತನ ಬಗ್ಗೆ‌ ನೆನಸಿಕೊಂಡರೆ ದೇವರೇ ಇಂತಹ ಗಂಡಂದಿರೂ ಇರುತ್ತಾರೆಯೇ ಎಂಬ ಯೋಚನೆ ಬರುತ್ತದೆ. ಹೆಣ್ಣಾದವಳು ತನ್ನ ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಬಂದರೆ ಆಕೆಯನ್ನು ಗಂಡನಾದವನು, ಅತ್ತೆಯಾದವರು ಸ್ವಂತ ಮಗಳಿನಂತೆ ಕಾಣಬೇಕು. ಆದರೆ ಅತ್ತೆ ಗಂಗಮ್ಮ, ಗಂಡ ಚನ್ನಿಗರಾಯರು ಹಾಗು ಮೈದುನ ಅಪ್ಪಣ್ಣಯ್ಯ ಈಕೆಯನ್ನು ಕಾಣುವುದು ನೆನೆದರೆ ಎಷ್ಟೋ ಹೆಣ್ಣು ಮಕ್ಕಳ ಜೀವನವೂ ನಂಜಮ್ಮನ ರೀತಿಯೇ ಇರಬಹುದೆಂದು ಅನಿಸುತ್ತಿದೆ.

ಪುಸ್ತಕದಲ್ಲಿ ಕಂಡು ಬರುವ ಸಾಮಾಜಿಕ ಸ್ಥಿತಿಗತಿ; ಅದರಲ್ಲೂ ಗ್ರಾಮೀಣ ಪ್ರದೇಶದ ರೀತಿ ರಿವಾಜುಗಳು ಹುಬ್ಬೇರಿಸುವಂತೆ ಮಾಡುತ್ತವೆ. ಸ್ತ್ರೀಶೋಷಣೆ, ಸಾಮಾಜಿಕ ಅಸಮಾನತೆ, ಮೈಗಳ್ಳತನ, ಹಸಿವು ಎಲ್ಲವನ್ನೂ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಹೆಣ್ಣು ಮಕ್ಕಳು ಪಟ್ಟ ಕಷ್ಟಗಳು, ಕೈಲಾಗದ ಗಂಡನನ್ನು ಕಟ್ಟಿಕೊಂಡು ಅನುಭವಿಸಿದ ವ್ಯಥೆ, ಮನೆಯನ್ನು ತೂಗಿಸುವ ರೀತಿ, ಬಾಲ್ಯ ವಿವಾಹ ಈ ಎಲ್ಲಾ ವಿಷಯಗಳು ಗಮನ ಸೆಳೆಯುತ್ತವೆ. ನಮ್ಮ ಸುತ್ತಮುತ್ತಲಿನಲ್ಲೇ ಘಟನೆ ನಡೆದಿರುವ ಹಾಗಿದೆ ಚಿತ್ರಣ. ಭೈರಪ್ಪನವರ ಸೃಜನಶೀಲತೆಯೊಂದಿಗೆ ಕಟು ಸತ್ಯ ತಳಕು ಹಾಕಿಕೊಂಡು ಓದುಗನ ಕಣ್ಣನ್ನು ತೇವಗೊಳಿಸುತ್ತದೆ. ನಂಜಮ್ಮ ಜೀವನದಲ್ಲಿ ಸ್ವಲ್ಪವಾದರೂ ಸುಖ ಅನುಭವಿಸಲಿಲ್ಲವಲ್ಲ; ಭೈರಪ್ಪನವರು ಚೂರಾದರೂ ಕರುಣೆ ತೋರಿಸಲಿಲ್ಲವಲ್ಲ ಎಂದೆನಿಸಿತು.

ಜೀವನದಂತ ಕರುಣಾಮಯಿ ಇಲ್ಲ; ಜೀವನದಂತ ರಕ್ಕಸನು ಇಲ್ಲ. ಗೃಹಭಂಗ ಬದುಕನ್ನು ಎಳೆ ಎಳೆಯಾಗಿ ತೆರೆದಿಡುತ್ತದೆ. ನಾವು ವಿಧಿ ಎಂಬ ಸಾರೋಟಿನಡಿಯಲ್ಲಿ ಸಿಲುಕುವ ಮುನ್ನ ಏನೋ ಸಾಧಿಸಲು ಹೊರಟವರು ಅನಿಸಿಬಿಡುತ್ತದೆ. ಯಾವುದೋ ಅದಮ್ಯ ಶಕ್ತಿಯ ಎದುರು ಕ್ಷುದ್ರ ಶಕ್ತಿಯೊಂದು ಗೆಲುವು ಸಾಧಿಸಿದಂತೆ ಎನಿಸುತ್ತದೆ. ಭಗವಂತನಿಗೆ ಪ್ರಿಯವಾಗುವುದು ಸಜ್ಜನ ಮತ್ತು ಸತ್ವವುಳ್ಳ ಜನರೇ ಎಂದೆನಿಸುತ್ತದೆ. ದೇವರು ಕ್ಷುದ್ರ ಶಕ್ತಿಯ ಎದುರು ಸೋತಂತೆನಿಸುತ್ತದೆ. ಅವನು ಸರ್ವ ಶಕ್ತನಲ್ಲ ಎಂಬ ಅಸಹಾಯಕ ಭಾವ ಒಂದು ಪುಸ್ತಕದ ಕೊನೆ ಪುಟದ ನಿಟ್ಟುಸಿರಿನಲ್ಲಿ ಹುಟ್ಟಿ ನಂಬಿಕೆಯ ಜೀವ ಜಲ ಸಿಗದೆ ಕೈಕಾಲು ಬಡಿದುಕೊಂಡು ಕಿರುಚುತ್ತದೆ.

ಬಾನಗಲದ ಮನಸ್ಸು ಅವಳದು
ಕಾಲ ತುಳಿದರು ಹಿಸುಕಿದರು ಅಳುಕಲಿಲ್ಲ ಅವಳು
ಬೈಗುಳ, ನೋವು ಮೆಟ್ಟಿನಿಂತ ವೀರ ಅವಳು
ನಿಕೃಷ್ಟ ಜೀವನಕ್ಕೆ ಅರ್ಥ ತುಂಬಲು ಹೊರಟ ಪ್ರೀತಿಯ ಅಮ್ಮ ಅವಳು
ಅವಳೇ ಗೃಹಭಂಗದ ನಂಜಮ್ಮ…

ರಶ್ಮಿ ಉಡುಪ ಮೊಳಹಳ್ಳಿ
SKVMS GFGC Kundapura, Koteshwara

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!