spot_img
Thursday, December 5, 2024
spot_img

ಕ್ರಿಶ್ಚಿಯನ್ ಟ್ರಂಪ್ ಗೆಲುವಿಗೆ, ಭಾರತೀಯ ಹಿಂದುತ್ವವಾದಿಗಳ ಸಂಭ್ರಮ !

ಕಮಲಾ ಹ್ಯಾರಿಸ್‌ ಮತ್ತು ಭಾರತ ವಿಶ್ವಗುರು ಗುರಿಯೊಳಗಿನ ಸೈದ್ಧಾಂತಿಕ ಗೊಂದಲ !?

ಟ್ರಂಪ್‌ ಭಾಷಣ ಮಾಡುತ್ತಿದ್ದ ಸ್ಥಳದಿಂದ ಕೇವಲ 150 ಮೀಟರ್‌ ದೂರದ ಕಟ್ಟಡದ ಮೇಲೆ ಕುಳಿತು ಯುವಕನೊಬ್ಬ ಗುಂಡಿನ ದಾಳಿಯನ್ನು ನಡೆಸಿದ್ದ. ಅಂದು ಟ್ರಂಪ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಇದು ಟ್ರಂಪ್‌ ಪಾಲಿಗೆ ಮರುಜೀವವೇ ಎಂಬಂತಾಗಿತ್ತು. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿನ ಬಗ್ಗೆ ಮೇಲ್ನೋಟಕ್ಕೆ ಅಷ್ಟೇನೂ ವಿಶ್ವಾಸವಿರಲಿಲ್ಲ. ಆದರೇ, ಅಮೇರಿಕಾದ ಬುದ್ದಿಜೀವಿಗಳು ಟ್ರಂಪ್‌ ಗೆಲುವಿಗೆ ಆಘಾತಕ್ಕೊಳಗಾಗಿದ್ದಾರೆ. ಟ್ರಂಪ್‌ ಗೆಲುವು ಪ್ರಜಾಪ್ರಭುತ್ವದ ನಿರಾಕರಣೆ ಎಂಬ ಮಟ್ಟಿಗೆ ಅಲ್ಲಿನ ರಾಜಕೀಯ ವಲಯದಲ್ಲಿ ಚರ್ಚೆ ಆಯ್ತು ಎಂದರೇ ಆಶ್ಚರ್ಯಪಡಬೇಕಿಲ್ಲ. ಅದಿರಲಿ, ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ಡೊನಾಲ್ಡ್‌ ಟ್ರಂಪ್‌ ಎನ್ನುವ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ಕಾರಣಕ್ಕೆ ಹಿಂದುತ್ವ ಸಿದ್ದಾಂತವನ್ನು ಒಪ್ಪುವ ವರ್ಗ ಸಂಭ್ರಮ ಪಟ್ಟಿದ್ದು ನಿಜಕ್ಕೂ ಆಶ್ಚರ್ಯದ ಸಂಗತಿ. ಭಾರತೀಯ ಮೂಲದ ಅಭ್ಯರ್ಥಿ ಕಮಲಾ ಹ್ಯಾರೀಸ್‌ ಸೋಲಿಗೆ ಶೋಕ ವ್ಯಕ್ತಪಡಿಸಬೇಕಿರುವ ಬದಲು, ʼಅಮೇರಿಕಾದ ಇವಾಂಜೆಲಿಕಲ್‌ ಚರ್ಚ್‌ ನ ಬೆಂಬಲಿತ ಒಬ್ಬ ಕ್ರಿಶ್ಚಿಯನ್‌ ಅಭ್ಯರ್ಥಿʼ ಗೆದ್ದಿರುವುದಕ್ಕೆ ಸಂಭ್ರಮ ಪಟ್ಟಿದೆ.

ಭಾಂಗ್ಲಾದೇಶ ಮತ್ತು ಕೆನಾಡದಲ್ಲಿ ಹಿಂದೂಗಳ ಮೇಲೆ ಹತ್ಯೆ ನಡೆದಾಗ ಆಕ್ರೋಶಗೊಂಡ ಈ ವರ್ಗ, ಅಮೇರಿಕಾದಂತಹ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ, ಹಿಂದೂ ಮಹಿಳೆ ಕಮಲಾ ಹ್ಯಾರೀಸ್‌ ಸೋತಾಗ ವಿಜಯೋತ್ಸವ ಎಂಬಂತೆ ಸಂಭ್ರಮ ಪಟ್ಟಿರುವಂತೆ ಮನೋ ಧೋರಣೆಯನ್ನ ತೋರಿಸಿತ್ತೆನ್ನುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ʼಕಮಲಾ ದೇವಿ ಹ್ಯಾರೀಸ್‌ʼ ಹಿಂದೂ ಧರ್ಮದಿಂದ ಬಂದ ಮಹಿಳೆ. ಆಕೆ ತನ್ನ ಹಿಂದೂ ಧರ್ಮದ ಮೂಲದ ಬಗ್ಗೆ ಹೆಮ್ಮೆ ಪಡುತ್ತಾಳೆ. ಹಿಂದೂ ಧರ್ಮದ ಮಹಿಳೆಯೊಬ್ಬಳು ಅಮೇರಿಕಾದ ಹಾಲಿ ಉಪಾಧ್ಯಕ್ಷೆ. ಭಾರತೀಯ ಮೂಲದ ಒಬ್ಬ ಮಹಿಳೆ ಅಮೇರಿಕಾದಂತಹ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಇಲ್ಲದ ಸಂಭ್ರಮ, ಯುನೈಟೆಡ್‌ ಕಿಂಗ್ಡಮ್‌ ನಲ್ಲಿ ಭಾರತದ ಮೂಲದ ರಿಷಿ ಸುನಾಕ್‌ ಪ್ರಧಾನಿ ಆದಾಗ ಇಡೀ ದೇಶಕ್ಕೆ ದೇಶವೇ ಸಂಭ್ರಮಿಸಿತು ಎನ್ನುವಷ್ಟರ ಮಟ್ಟಿಗೆ ಈ ವರ್ಗ ಬಿಂಬಿಸಿತ್ತು. ಇದು ಲಿಂಗ ತಾರತಮ್ಯವೋ ಅಥವಾ ಸೈದ್ಧಾಂತಿಕ ಭಿನ್ನಮತವೋ ತಿಳಿಯುತ್ತಿಲ್ಲ.

ಕಮಲಾ ಹ್ಯಾರಿಸ್‌ ಹಿಲರಿ ಕ್ಲಿಂಟನ್‌ರಂತಲ್ಲ(2016 ಚುನಾವಣೆಯಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಮಹಿಳಾ ಅಭ್ಯರ್ಥಿ), ಕಮಲಾ ಕಠಿಣ ಪರಿಶ್ರಮದಿಂದ ಈ ಎತ್ತರಕ್ಕೆ  ಏರಿದ ಮಹಿಳೆ. ಈ ಕಾರಣಕ್ಕಾಗಿಯಾದರೂ ಭಾರತ ಸಣ್ಣ ಮಟ್ಟದ ಹೆಮ್ಮೆಪಡಬೇಕಿತ್ತು.

ಆದರೆ, ಕಮಲಾ ಅವರ ಸೋಲಿಗೆ ಹಿಂದುತ್ವ ಸಿದ್ದಾಂತವನ್ನು ಒಪ್ಪುವ ಜನರು ಯಾಕೆ ಸಂಭ್ರಮಿಸುತ್ತಿದ್ದಾರೆ? ಎನ್ನುವುದು ಆಶ್ಚರ್ಯ. ಭಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಕಮಲಾ ಧ್ವನಿ ಎತ್ತಿಲ್ಲ ಎನ್ನುವ ಕಾರಣಕ್ಕಾಗಿಯೇ ? ಅಥವಾ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಸದಾ ಮಾತನಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ? ಬಹುಮತದ ರಾಜಕಾರಣವನ್ನು ಆಕೆ ಬೆಂಬಲಿಸದ ಕಾರಣಕ್ಕಾಗಿಯೇ ? ಅಥವಾ ಟ್ರಂಪ್ ಮಾಡುವಂತೆ ಕಮಲಾ ಕ್ರೂರ ಮತ್ತು ಸೆಕ್ಸಿಸ್ಟ್ ಜೋಕ್‌ಗಳನ್ನು(ಅಶ್ಲೀಲ ಹಾಸ್ಯ)ಮಾಡದ ಕಾರಣಕ್ಕಾಗಿಯೇ? ಒಂದೂ ತಿಳಿಯುತ್ತಿಲ್ಲ.

ಟ್ರಂಪ್ ಕಾರಣಕ್ಕಾಗಿ ಮತ್ತು ಅವರ ಅಧ್ಯಕ್ಷ ಸ್ಥಾನದ ಕಾರಣಕ್ಕಾಗಿ ಭಾರತಕ್ಕೆ ಲಾಭವಾಗಲಿದೆ ಎಂದು ಭಾವಿಸಿ ಸಂಭ್ರಮಿಸುತ್ತಿರುವವರು ಮೂರ್ಖರೆಂದೇ ಹೇಳಬೇಕಾಗುತ್ತದೆ. ಟ್ರಂಪ್ ಒಬ್ಬ ಅಮೇರಿಕನ್ ಮತ್ತು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ವ್ಯಕ್ತಿ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ʼಅಮೇರಿಕಾವನ್ನು ಮತ್ತೆ ಶ್ರೇಷ್ಠವನ್ನಾಗಿ ಮಾಡುವುದು ಟ್ರಂಪ್ ಭರವಸೆ. ಭಾರತವನ್ನಲ್ಲʼ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಅಮೇರಿಕಾವನ್ನು ಮತ್ತೊಮ್ಮೆ ಶ್ರೇಷ್ಠವನ್ನಾಗಿ ಮಾಡುವ ತನ್ನ ಭರವಸೆಯನ್ನು ಈಡೇರಿಸಲು ಟ್ರಂಪ್ ತೆಗೆದುಕೊಳ್ಳುವ ಯಾವುದೇ ಕ್ರಮಗಳು ಭಾರತದ ಮತ್ತು ಪ್ರಪಂಚದ ಇತರೆ ದೇಶಗಳ ಬೇರೆ ಬೇರೆ ಮೂಲದಿಂದ ಬರಬಹುದು. ಭಾರತದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾದರೆ, ಟ್ರಂಪ್‌ ಅದಕ್ಕೂ ಹಿಂಜರಿಯುವುದಿಲ್ಲ.

ಟ್ರಂಪ್ ಅವರ ರಾಜಕೀಯ ಸಿದ್ಧಾಂತವಲ್ಲ. ಅದೊಂದು ವಹಿವಾಟು. ಟ್ರಂಪ್‌ ಸೃಷ್ಟಿಸಿದ ಸಿನಿಕತನದ ಪರಿಣಾಮವನ್ನು ಭಾರತ ಶೀಘ್ರದಲ್ಲೇ ಎದುರಿಸಬಹುದು ಎಂಬ ಚರ್ಚೆ ಸ್ವತಃ ಭಾರತೀಯ ರಾಜಕೀಯ ವಲಯದಲ್ಲೇ ಇದೆ. ಟ್ರಂಪ್ ಯುನೈಟೆಡ್ ಸ್ಟೇಟ್ಸ್‌ಗೆ ಭಾರತೀಯರ ಪ್ರವೇಶದ ಮೇಲೆ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆ, “ಸುಂಕಗಳನ್ನು ಕಡಿತಗೊಳಿಸುವಂತೆ” ಭಾರತ ಸರ್ಕಾರವನ್ನು ಒತ್ತಾಯಿಸಬಹುದು ಮತ್ತು “ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಬಹುದು”. ಯುಎಸ್‌ ನೊಂದಿಗಿನ ವ್ಯಾಪಾರ ವಹಿವಾಟು ಹೆಚ್ಚು ಸವಾಲಿನದಾಗಿರಬಹುದು ಎಂಬ ಚರ್ಚೆ ಇದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ. ಚುನಾವಣೆಯ ಪೂರ್ವದಲ್ಲಿ ನೀಡಿದ, ವಲಸಿಗರನ್ನು ಹೊರಹಾಕುವ ಭರವಸೆಯನ್ನು ಹೇಳಿದಂತೆಯೇ ಅನುಸರಿಸಿದರೆ, ಟ್ರಂಪ್‌ ನೀತಿಯಿಂದ ಭಾರತೀಯರೇನು ಹೊರಗುಳಿಯುವುದಿಲ್ಲ.

ಇನ್ನು, ʼಕಮಲಾ ದೇವಿ ಹ್ಯಾರಿಸ್‌ʼ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ, ಅವರು ಕೂಡ ತಮ್ಮ ಭಾರತೀಯ ಪರಂಪರೆಯ ಹೊರತಾಗಿ ಅಮೇರಿಕಾದ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕಾಗಿತ್ತು/ನೀಡುತ್ತಿದ್ದರು. ಆದ್ದರಿಂದ, ಯಾರೇ ಗೆದ್ದರೂ ಭಾರತಕ್ಕೆ ಸಂಭ್ರಮಿಸಲು ಇದರಲ್ಲಿ ಯಾವುದೇ ಕಾರಣವಿಲ್ಲ. ಟ್ರಂಪ್‌ ಅಮೇರಿಕಾದ ಅಧ್ಯಕ್ಷರಾದರು ಎಂಬ ಕಾರಣಕ್ಕೆ ಸಂಭ್ರಮಿಸದೇ, ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವತ್ತ ಗಮನಹರಿಸಬೇಕು. ಆದಾಗ್ಯೂ, ಟ್ರಂಪ್ ಅಸ್ಥಿರ ಸ್ವಭಾವದ ಅನಿರೀಕ್ಷಿತ ವ್ಯಕ್ತಿಯಾಗಿದ್ದು, ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಗುರುತರವಾಗಿ ಭಾರತಕ್ಕೇನೂ ಲಾಭವಾಗಿಲ್ಲ.

ಕ್ರಿಶ್ಚಿಯನ್ ಟ್ರಂಪ್, ಭಾರತೀಯ ಹಿಂದುತ್ವವಾದಿಗಳ ಸಂಭ್ರಮ !  

ಟ್ರಂಪ್ 2016ರಲ್ಲಿ ಶ್ವೇತಭವನವನ್ನು ಗೆದ್ದರು, “ಕ್ರಿಶ್ಚಿಯನ್ ಧರ್ಮಕ್ಕೆ ಅಧಿಕಾರವಿದೆ” ಎಂದು ಭರವಸೆ ನೀಡಿದ್ದರು. ಕ್ರಿಶ್ಚಿಯನ್ ವಿರೋಧಿ ಪಕ್ಷಪಾತದ ವಿರುದ್ಧ ಹೋರಾಡಲು ಕಾರ್ಯಪಡೆಯನ್ನು ಟ್ರಂಪ್‌ ರಚಿಸಿದ್ದರು. ಬಹಳ ಪ್ರಮುಖವಾಗಿ ಟ್ರಂಪ್‌ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಸಂಪ್ರದಾಯವಾದಿ ಕ್ರಿಶ್ಚಿಯನ್ ನಾಯಕರಿಗೆ ಅನುಕೂಲವಾಗುವ ಹಾಗೆ ಮಾಡುತ್ತೇನೆಂದು ಭರವಸೆ ನೀಡುತ್ತಾರೆ. ಹಾಗಾದರೇ, ಭಾರತದಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವವರು ಈಗ ಕ್ರಿಶ್ಚಿಯನ್ ರಾಷ್ಟ್ರೀಯತೆಯ ಉದಯವನ್ನು ಅನುಮೋದಿಸುತ್ತಿದ್ದಾರೆನ್ನುವುದು ಇದರ ಅರ್ಥವೇ? ಹಾಗಿದ್ದಲ್ಲಿ, ಹಿಂದುತ್ವದ ಪ್ರತಿಪಾದಕರು ಇಸ್ಲಾಂ ಧರ್ಮದ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಭಾರತದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕುವ ಶತ್ರು ಶಕ್ತಿಗಳು ಎಂದು ಯಾಕೆ ಟೀಕಿಸುತ್ತಾರೆ?, ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಲಕ್ಷಾಂತರ ಡಾಲರ್‌ಗಳನ್ನು ದೇಶದಲ್ಲಿರುವ ಕ್ರಿಶ್ಚಿಯನ್ ಮೆಷನರಿಗಳಿಗೆ ಹರಿಬಿಡುತ್ತಾರೆ ಎಂದು ಯಾಕೆ ಆರೋಪಿಸುತ್ತಾರೆ? ಈ ದ್ವಂದ್ವ ನಿಲುವಿನ ಬಗ್ಗೆ ಬಹಳಷ್ಟು ಗೊಂದಲಗಳಿವೆ.

ಮಾಧವ ರಾವ್‌ ಸದಾಶಿವರಾವ್ ಗೋಳ್ವಾಲ್ಕರ್ ಅವರು ಕ್ರಿಶ್ಚಿಯನ್ನರನ್ನು ಭಾರತದ ಶತ್ರುಗಳು ಎಂದು ಬಹಳ ಹಿಂದೆಯೇ ಹೇಳಿದ್ದರು. ಕ್ರಿಶ್ಚಿಯನ್ ಮಿಷನರಿಗಳು ಭಾರತವನ್ನು ಕ್ರಿಶ್ಚಿಯನ್ ಭೂಮಿಯನ್ನಾಗಿ ಪರಿವರ್ತಿಸಲು ನೆರವಿನ ನೆಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎನ್ನುವುದನ್ನು ಗಮನಿಸಬೇಕು.

ಆದರೇ, ಕ್ರಿಶ್ಚಿಯನ್ ಮಿಷನರಿಗಳ ಬಗ್ಗೆ ಅಥವಾ ಅವರ ಸಿದ್ಧಾಂತದ ಬಗ್ಗೆ ಆರ್‌ಎಸ್‌ಎಸ್ ತನ್ನ ನಿಲುವನ್ನು ಈಗ ಬದಲಾಯಿಸಿದೆಯೇ ಎನ್ನುವುದು ತಿಳಿಯುತ್ತಿಲ್ಲ. ಆರ್‌ಎಸ್‌ಎಸ್ ಕ್ರಿಶ್ಚಿಯನ್ ರಾಷ್ಟ್ರೀಯತೆಯೊಂದಿಗೆ ಮೃದು ಒಪ್ಪಂದಕ್ಕೆ ತಲುಪಿದೆಯೇ ?. ನಿರಾಕರಿಸಲಾಗದ ಸಂಗತಿಯೆಂದರೆ, ಟ್ರಂಪ್‌ರ ಅಮೇರಿಕ ನಾಗರಿಕತೆಗಳ ಘರ್ಷಣೆ ಮತ್ತು ಹಿಂದೂ ರಾಷ್ಟ್ರೀಯತೆಯ ಹಿಂದುತ್ವದ ಸಿದ್ಧಾಂತವನ್ನು ದುರ್ಬಲಗೊಳಿಸದೆ ಟ್ರಂಪ್‌ರ ಕ್ರಿಶ್ಚಿಯನ್ ರಾಷ್ಟ್ರೀಯತೆಯ ಅಮೇರಿಕಾ ಬೆಳೆಯುವುದಿಲ್ಲ. ಆದಾಗ್ಯೂ, ಟ್ರಂಪ್‌ ಬಗ್ಗೆ ಯಾಕೆ ಇಷ್ಟು ಒಲವು ? ಚುನಾವಣೆಯ ಲಾಭಕ್ಕಾಗಿ, ಜಾಗತಿಕವಾಗಿ ಹಿಂದೂ ಹಿತಾಸಕ್ತಿಗಳನ್ನು, ಹಿಂದೂಗಳ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿಕೆ ನೀಡಿರುವುದು ಒಂದೇ ಕಾರಣವೇ ? ಗೊತ್ತಿಲ್ಲ.

ಒಂದು ಕಡೆ, ಹಿಂದುತ್ವದ ಅನುಯಾಯಿಗಳು ಭಾರತದಲ್ಲಿ ಹಿಂದೂ ಐಕ್ಯಕ್ಕಾಗಿ ಘೋಷಣೆಯನ್ನು ಹೊರಡಿಸಿದರೆ, ಮತ್ತೊಂದೆಡೆ, ವಿದೇಶದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ ಹಿಂದೂ ಮೂಲದ ಮಹಿಳೆ ಕಮಲಾ ದೇವಿ ಹ್ಯಾರಿಸ್‌ ಅವರನ್ನು ಬೆಂಬಲಿಸಲು ಸಿದ್ಧರಿಲ್ಲ. ಇದು, ಭಾರತವನ್ನು ಶ್ರೇಷ್ಠಗೊಳಿಸುವುದಾಗಿ ಮತ್ತು ಭಾರತವನ್ನು ವಿಶ್ವಗುರು ಎಂದು ಪ್ರತಿಪಾದಿಸುವ ಗುರಿಯೊಳಗಿನ ಒಂದು ರೀತಿಯ ಸೈದ್ಧಾಂತಿಕ ಗೊಂದಲ ಮತ್ತು ವಿರೋಧಾಭಾಸವನ್ನು ಇದು ಸೂಚಿಸುವುದಿಲ್ಲವೇ? ಈ ವಿಷಯ ಗಂಭೀರ ಚಿಂತನಾರ್ಹವಾಗಿದೆ.

-ಶ್ರೀರಾಜ್‌ ವಕ್ವಾಡಿ. 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!