spot_img
Friday, August 14, 2026
spot_img

ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ, ಯಕ್ಷಗುರು ಮೊಗೆಬೆಟ್ಟು ಹೆರಿಯ ನಾಯ್ಕ ಅವರಿಗೆ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ

ವೇಷಧಾರಿಯಾಗಿ, ಭಾಗವತರಾಗಿ, ಸಂಘಟಕರಾಗಿ, ನೇಪಥ್ಯ ಕಲಾವಿದರಾಗಿ, ಯಕ್ಷಗುರುವಾಗಿ ಸುಮಾರು 55 ವರ್ಷಗಳ ಕಾಲ ಬಡಗುತಿಟ್ಟು ಯಕ್ಷಗಾನಕ್ಕೆ ಬಹುನೆಲೆಯಲ್ಲಿ ಸೇವೆ ನೀಡಿದವರು ಮೊಗೆಬೆಟ್ಟು ಹೆರಿಯ ನಾಯ್ಕರ ಅನುಪಮ ಕಲಾಸೇವೆಗೆ 2026ನೇ ಸಾಲಿನ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸಿ ಲಭಿಸಿದೆ.

80ರ ದಶಕದಲ್ಲಿ ಘಟಾನುಘಟಿ ಕಲಾವಿದರ ಸಾಂಗತ್ಯ, ಪಾತ್ರ ಬೇಧವಿಲ್ಲದೆ ಸವ್ಯಸಾಚಿಯಾಗಿ ಮಿಂಚಿದ ವೇಷಧಾರಿ, ಕೂಟದಲ್ಲೂ ವಾಕ್ಪಟುತ್ವ ಮೆರೆದ ವಾಗ್ಮಿ ಹೆರಿಯ ನಾಯ್ಕರನ್ನು ಯಕ್ಷಗಾನದ ಸಾಂಬಾರು ಬಟ್ಟಲು ಎಂದೇ ಬಣ್ಣಿಸಬಹುದಾಗಿದೆ.

ಕಂದಾಪುರ ತಾಲೂಕು ಬೇಳೂರು ಗ್ರಾಮದ ಮೊಗೆಬೆಟ್ಟು ವೀರ ನಾಯ್ಕ ಮತ್ತು ಚಂದಮ್ಮ ಮೊಗೇರ್ತಿ ದಂಪತಿಯ ಸುಪುತ್ರರಾಗಿ 1952ರಲ್ಲಿ ಇವರು ಜನಿಸಿದರು. ಅಂದಿನ ದಿನಗಳಲ್ಲಿಯೇ 3ನೇ ತರಗತಿಯ ತನಕ ಶಿಕ್ಷಣ ಪಡೆದಿದ್ದು ಇವರ ಹೆಗ್ಗಳಿಕೆ. ಅಂದಿನ ಕಾಲದಲ್ಲಿ ಪರಿಣಾಮಕಾರಿ ಮನೋರಂಜನಾ ಮಾದ್ಯಮವಾಗಿದ್ದ ಯಕ್ಷಗಾನ ಬಯಲಾಟಗಳು ಇವರ ಅಂತರ್ಯದ ಕಲಾ ಪೋಷಣೆಗೆ ಕಾರಣವಾಯಿತು. ಆಟ ನೋಡಲು ಎಳೆಯ ಬಾಲಕ ಗಾವುದ ಗಟ್ಟಲೇ ದೂರ ಕಾಲ್ನಡಿಗೆಯಲ್ಲಿಯೇ ನಡೆದರು. ಇಡೀ ರಾತ್ರಿ ಆಟವನ್ನು ಎವಕ್ಕದೆ ನೋಡಿದರು. ಹೀಗೆ ಆಟ ನೋಡುತ್ತಾ ನೋಡುತ್ತಾ ಅವರೊಳಗೆ ಓರ್ವ ಕಲಾವಿದ ಜನ್ಮಿಸಿದ್ದ.

1975ರ ಸುಮಾರಿಗೆ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಐರೋಡಿ ಸದಾನಂದ ಹೆಬ್ಬಾರರು ನೆಡೆಸುತ್ತಿದ್ದ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಉಪ್ಪರಿಗೆಯ ಯಕ್ಷಗಾನ ತರಗತಿಗೆ ಸೇರ್ಪಡೆಗೊಂಡರು. ಅಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರಿಂದ ತಾಳಗಾರಿಕೆ ಕಲಿಕೆ, ಹಿರಿಯ ಮದ್ದಳೆಗಾರರಾದ ಬೇಳಂಜೆ ತಿಮ್ಮಪ್ಪ ನಾಯ್ಕರಿಂದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದರು. ಬಳಿಕ ಮಂದಾರ್ತಿ ಮೇಳಕ್ಕೆ ಸಂಗೀತಗಾರರಾಗಿ ಸೇರ್ಪಡೆಗೊಂಡರು. ಇವರಲ್ಲಿ ಉತ್ತಮ ಸ್ವರವಿತ್ತು. ಪ್ರಾರಂಭದಲ್ಲಿಯೇ ಇವರು ಭಾಗವತಿಕೆಯ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಧ್ವನಿಸ್ಪಷ್ಟತೆ ಹಾಗೂ ಯಕ್ಷಗಾನದ ಏರುಧ್ವನಿ ಇವರಲ್ಲಿ ದೈವಿದತ್ತವಾಗಿತ್ತು. ಹಾಗೆಯೇ ಸಹಭಾಗವತಿಕೆಯನ್ನು ಮಾಡಿದ ಅನುಭವ ಹೊಂದಿದ್ದರು. ಯಕ್ಷಗಾನದ ಸರ್ವ ಅಂಗಗಳಲ್ಲೂ ಸಿದ್ಧಿ ಸಂಪಾದಿಸಿದ ಇವರು ವೇಷಧಾರಿಯಾಗಿ ಮಾರಣಕಟ್ಟೆ, ಅಮೃತೇಶ್ವರಿ, ರಂಜದಕಟ್ಟೆ ಮೇಳಗಳಲ್ಲಿ ಸುಮಾರು 16 ವರ್ಷಗಳ ಕಾಲ ವೃತ್ತಿ ತಿರುಗಾಟ ಮಾಡಿದರು. ಕಿರೀಟ ವೇಷ ಪಾತ್ರದಲ್ಲಿ ಪ್ರಾವೀಣ್ಯತೆ ಸಾಧಿಸಿದ ಇವರು, ಮುಂಡಾಸು ವೇಷ, ಸ್ತ್ರೀವೇಷ, ಕಿರಾತ, ಬಣ್ಣದ ವೇಷ, ಹಾಸ್ಯ ಹೀಗೆ ಎಲ್ಲ ವೇಷ ವೈವಿಧ್ಯತೆಯಲ್ಲೂ ಅನುಭವಿಯಾಗಿದ್ದರು. ಯಕ್ಷಗಾನದ ಸಾಂಬಾರು ಬಟ್ಟಲು ಎಂದೇ ಇವರನ್ನು ಆ ಕಾಲದಲ್ಲಿ ಗುರುತಿಸಲಾಗುತ್ತಿತ್ತು. ಬಹುವೇಷ ಪ್ರವೀಣರಾಗಿದ್ದ ಇವರು ಸಾಂದರ್ಭಿಕವಾಗಿ ಎಂಥಾ ವೇಷವನ್ನೂ ನಿಭಾಯಿಸಬಲ್ಲ ಪೋಷಕ ವೇಷಧಾರಿಯೂ ಆಗಿದ್ದರು. ಇವರ ದೇವೇಂದ್ರ ಪಾತ್ರ ಬಹಳ ಪ್ರಸಿದ್ಧಿ ಪಡೆದಿತ್ತು. ಸಂಪ್ರದಾಯಬದ್ಧ ದೇವೇಂದ್ರ ವೇಷಗಾರಿಕೆರ, ಒಡ್ಡೋಲಗ, ಗಾಂಭೀರ್ಯ, ಪಾತ್ರವನ್ನು ಕಡೆದುಕಟ್ಟುತ್ತಿದ್ದ ಬಗೆಯನ್ನು ಇವರ ಒಡನಾಡಿ ಕಲಾವಿದರೂ ಈಗಲೂ ಸ್ಮರಿಸುತ್ತಾರೆ. ಶತ್ರುಘ್ನ, ಪರಶುರಾಮ, ಭೀಮ, ಸಂಜಯ, ಕರಾಳನೇತ್ರೆ, ಹಂಸದ್ವಜ, ಕಮಲಭೂಪ, ಅರ್ಜುನ ಹೀಗೆ ವೈವಿಧ್ಯಮಯ ಪಾತ್ರಗಳು ಆ ಕಾಲದಲ್ಲಿ ಜನಮೆಚ್ಚುಗೆ ಗಳಿಸಿತ್ತು.

ಯಕ್ಷಗಾನದ ದಂತಕತೆಗಳಾದ ಹಾರಾಡಿ ಕುಷ್ಟ ಗಾಣಿಗ, ಶಿರಿಯಾರ ಮಂಜುನಾಯ್ಕ, ಹಳ್ಳಾಡಿ ಕೃಷ್ಣಪ್ಪ ರವರ ವೇಷದಿಂದ ಪ್ರಭಾವಿತರಾದ ಇವರು, ಹಾರಾಡಿ, ಶಿರಿಯಾರ, ಹಳ್ಳಾಡಿ ಕೃಷ್ಣಪ್ಪನವರ ಅನುಭವದ ಗರಡಿಯಲ್ಲಿ ಪಳಗಿದ ಹಿರಿಮೆ ಹೊಂದಿದ್ದಾರೆ. ಹಳ್ಳಾಡಿ ಮಂಜಯ್ಯ ಶೆಟ್ಟಿ, ಹಾಲಾಡಿ ಕೊರ್ಗು ಹಾಸ್ಯಗಾರ, ವಂಡ್ಸೆ ನಾರಾಯಣ ಗಾಣಿಗ, ಉಡುಪಿ ಬಸವ ಮೊದಲಾದ ಮೇರುಕಲಾವಿದರ ಒಡನಾಟ ಹೊಂದಿದ್ದಾರೆ. ಕೂಟದಲ್ಲಿ ಅಪಾರ ವಿದ್ವತ್ತು ಹೊಂದಿದ್ದಾರೆ. ಮಾರಾಳಿ ಭೋಜರಾಜ ಹೆಗ್ಡೆಯವರಿಂದ ಅರ್ಥಗಾರಿಕೆಯ ಮಾಹಿತಿ ಪಡೆದ ಇವರು ತಾಳಮದ್ದಳೆಯಲ್ಲಿ ಹವ್ಯಾಸೀ ಅರ್ಥಧಾರಿಯಾಗಿಯೂ ಭಾಗವಹಿಸಿದ್ದಾರೆ. ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿ ಇವರು ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದರು.

ವೃತ್ತಿ ಮೇಳ ಬಿಟ್ಟರೂ ಯಕ್ಷಗಾನವನ್ನು ಬಿಡಲಿಲ್ಲ. ಕೆಲವೊಂದು ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದಾರೆ. ಹವ್ಯಾಸೀ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಬಣ್ಣದ ಲೋಕದಲ್ಲಿ ೫೫ ವರ್ಷಗಳ ಕಲಾನುಭವ ಇವರದ್ದು.

80ರ ದಶಕದಲ್ಲಿಯೇ ಮೊಗೆಬೆಟ್ಟು ಚಿಕ್ಕು ಹಾಗುಳಿ ಯಕ್ಷಗಾನ ಕಲಾ ಸಂಘದ ಸ್ಥಾಪನೆ, ಸಕ್ಕಟ್ಟು ಶ್ರೀ ವಿನಾಯಕ ಕಲಾ ಸಂಘ ಸ್ಥಾಪನೆ, ನೂಜಿ ಚಟ್ಟರೆಕಲ್ಲು ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಸ್ಥಾಪನೆ, ಹೀಗೆ ನೂರಾರು ಯುವಕರಿಗೆ ಯಕ್ಷಗಾನ ತರಬೇತಿ ನೀಡಿ, ಅವರಿಗೆ ವೇಷ ಹಾಕಿಸಿ, ಆ ದಿನಗಳಲ್ಲಿಯೇ ಹವ್ಯಾಸೀ ಯಕ್ಷಗಾನಕ್ಕೊಂದು ಹೊಸ ದಿಕ್ಸೂಚಿ ನೀಡಿದವರು.

ಇವರಿಗೆ ಕಲೆಯ ಮೇಲಿನ ಶ್ರದ್ಧೆಯ ಜೊತೆಗೆ ಆಸಕ್ತಿಯ ಓದು, ನಿರಂತರ ಅಭ್ಯಾಸ, ಯಕ್ಷ ಸಾಹಿತ್ಯದಲ್ಲೂ ಹಿಡಿತ ಒದಗಿಸಿತ್ತು. ಅದ್ಭುತವಾದ ಮಸ್ತಕ ಜ್ಞಾನ, ಕಲ್ಪನಾಸಿದ್ಧಿ, ಕಾವ್ಯದ ಒಲವು ಇವರಿಗಿತ್ತು. ಚೈತ್ರ ಚಂದ್ರಿಕೆ, ಸಮರ, ಗಣೇಶ ಮಹಿಮೆ, ಸ್ವಪ್ನ ಮಂಟಪ, ಕಲ್ಯಾಣಿ-ರೂಪವಾಣಿ ಮೊದಲಾದ ಸಾಮಾಜಿಕ ಪ್ರಸಂಗಗಳ ಬರೆದಿರುವ ಪ್ರಸಂಗಕರ್ತರು ಇವರು. ಇವರ ಪ್ರಸಂಗಗಳು ವೃತ್ತಿ ಮೇಳಗಳಲ್ಲೂ ಪ್ರದರ್ಶನ ಕಂಡಿವೆ.

ಇವರ 55 ವರ್ಷಗಳ ಕಲಾಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿ ಗೌರವಗಳು ಸಂದಿವೆ. ಸಂಘ ಸಂಸ್ಥೆಗಳು ಗೌರವಿಸಿವೆ. ಉಡುಪಿಯ ಯಕ್ಷಗಾನ ಕಲಾರಂಗದ ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ, ಕಿರಾಡಿ ಯಕ್ಷ ಟ್ರಸ್ಟ್ ವತಿಯಿಂದ ಪುರಸ್ಕಾರ, ವಡ್ಡರ್ಸೆ ರಥಬೀದಿ ಫ್ರೆಂಡ್ಸ್, ಮುಳ್ಳುಗುಡ್ಡೆ ಮಹಾಗಣಪತಿ ಕಲಾ ಸಂಸ್ಥೆಯ ಗೌರವ, ರಂಗಸ್ಥಳ ಯಕ್ಷಮಿತ್ರ ಕೂಟ ರಿ., ಬೆಂಗಳೂರು ಇದರ ರಂಗಸ್ಥಳ ಪ್ರಶಸ್ತಿ-೨೦೨೫ ಹೀಗೆ ಹಲವಾರು ಸನ್ಮಾನ ಗೌರವಗಳು ಇವರ ಕಲಾ ಸೇವೆಗೆ ದೊರಕಿವೆ.

ಇನ್ನೂ ಕುಣಿಯುವ ಮನಸ್ಸಿದೆ, ಕಲೆಗಾಗಿ ದುಡಿಯುವ ಕನಸಿದೆ, ಆದರೆ ವೃದ್ದಾಪ್ಯ ಅದಕ್ಕೆ ಸಹಕರಿಸುತ್ತಿಲ್ಲ. ಯಕ್ಷರಂಗಕ್ಕೆ ಅನನ್ಯ ರತ್ನದಂತಿರುವ ಪ್ರಸಾದ್ ಕುಮಾರ್ ಮೊಗೆಬೆಟ್ಟು ಎನ್ನುವ ಸುಪುತ್ರರನ್ನು ನೀಡಿದ್ದಾರೆ. ಮಗನ ಸಾಧನೆ ಕಂಡು ಅತೀವ ಸಂತೋಷದ ಮಾತುಗಳನ್ನಾಡುತ್ತಾರೆ. ಈ ಕುಟುಂಬವೇ ಕಲೆಗಾಗಿ ಸಮರ್ಪಿತವಾದಂತಿದೆ. ಸೊಸೆ, ಮೊಮ್ಮಕ್ಕಳ ಜೊತೆ ಮೊಗೆಬೆಟ್ಟುವಿನಲ್ಲಿ ವಾಸವಾಗಿದ್ದಾರೆ.

ಯಕ್ಷಗಾನಕ್ಕೆ ಬಹುವಿಧದಲ್ಲಿ ಸೇವೆ ನೀಡಿದ ಹೆರಿಯ ಮೊಗವೀರ ಮೊಗೆಬೆಟ್ಟು ಅವರ ಕಲಾಸೇವೆಗೆ ಯೋಗ್ಯವಾಗಿಯೇ ಪ್ರಶಸ್ತಿ ದೊರಕಿದೆ. ಇನ್ನಷ್ಟು ಪ್ರಶಸ್ತಿಗಳು ಅವರ ಕಲಾಸೇವೆಗೆ ಲಭಿಸಲಿ.

(-ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!