Wednesday, September 11, 2024

ಸಂಸದರು ನಾಪತ್ತೆಯಾಗಿದ್ದಾರೆ ! ಸಂಕಷ್ಟದಲ್ಲಿ ಜನರೊಂದಿಗಿರಬೇಕೆಂಬ ಕನಿಷ್ಠ ಸೌಜನ್ಯ ತೋರಿಸಿಲ್ಲ : ಅರವಿಂದ ಪೂಜಾರಿ ಆಕ್ರೋಶ

ಜನಪ್ರತಿನಿಧಿ (ಬೈಂದೂರು) : ಸಂಸದ ಬಿ. ವೈ. ರಾಘವೇಂದ್ರ ನಾಪತ್ತೆಯಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತಕ್ಕಾಗಿ ಬೈಂದೂರಿಗೆ ಪದೇ ಪದೇ ಬಂದು ಹೋಗುವ ಸಂಸದರು ಈಗ ಜನರ ಬದುಕು ಚಿಂತಾಜನಕವಾಗಿರುವಾಗ ಅವರ ಸುಳಿವೇ ಇಲ್ಲ. ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿವೃಷ್ಠಿಯ ಕಾರಣದಿಂದ ನೆರೆ ಸೃಷ್ಟಿಯಾಗಿದೆ. ಎಷ್ಟೋ ಕಡೆಗಳಲ್ಲಿ ಊರಿಗೆ ಊರೇ ಮುಳುಗಿ ಹೋಗಿದೆ. ತಾಲೂಕಿನ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಕಡಲ್ಕೊರೆತ ಉಂಟಾಗಿದೆ ಸಂಸದರು ಈ ಕಡೆ ಮುಖ ಹಾಕಿಯೂ ನೋಡಿಲ್ಲ ಎಂದು ಬೈಂದೂರು ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಪೂಜಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಜನಪ್ರತಿನಿಧಿ ಪತ್ರಿಕೆಯೊಂದಿಗೆ ಮಾತನಾಡಿದ ಅರವಿಂದ ಪೂಜಾರಿ, ಹಿಂದುತ್ವದ ಹೆಸರಿನಲ್ಲಿ ಗೆಲ್ಲಬಹುದು ಎಂಬ ಅತಿಯಾದ ನಂಬಿಕೆಯಲ್ಲೇ ಇವರು(ಬಿಜೆಪಿ) ಅಭಿವೃದ್ಧಿ ಕೆಲಸಗಳೇ ಮಾಡುವುದಿಲ್ಲ. ಬೈಂದೂರಿಗೆ ಮೆಡಿಕಲ್‌ ಕಾಲೇಜು, ಏರ್‌ಪೋರ್ಟ್‌, ಕೊಲ್ಲೂರು ಕಾರಿಡಾರ್‌ ಅದು ಇದು ಅಂತ ಚುನಾವಣಾ ಸಂದರ್ಭಗಳಲ್ಲಿ ಭಾಷಣ ಮಾಡುವುದು ಬಿಟ್ಟರೇ ಅಭಿವೃದ್ಧಿ ಶೂನ್ಯ. ಮತದಾರರು ಮತ ಹಾಕಿ ಗೆಲ್ಲಿಸಿದ್ದಾರೆ. ಸಂಕಷ್ಟ ಕಾಲದಲ್ಲಿ ಅವರೊಂದಿಗೆ ಇರಬೇಕು ಎಂಬ ಕನಿಷ್ಠ ಸೌಜನ್ಯವನ್ನು ಸಂಸದರು ತೋರಿಸಿಲ್ಲ. ನೆರೆ ಪೀಡಿತ ಪ್ರದೇಶಗಳಿಗೆ ಸಂಸದರು ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.

ಸಂಸದರೇ, ನೀವೇ ನೀಡಿದ ಭರವಸೆ ಮೆಡಿಕಲ್‌ ಕಾಲೇಜು, ಏರ್‌ ಪೋರ್ಟ್‌, ಕೊಲ್ಲೂರು ಕಾರಿಡಾರ್‌ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ವೈಜ್ಞಾನಿಕವಾಗಿ ಅಭಿವೃದ್ಧಿ ಕಾರ್ಯ ಮಾಡುವುದಾದರೇ ನಾವೆಂದಿಗೂ ಅಡ್ಡಿಪಡಿಸುವುದಿಲ್ಲ. ಆದರೇ ಇವೆಲ್ಲಾ ಆಗುವುದಕ್ಕಿಂತ ಮೊದಲು ಬೈಂದೂರಿಗೆ ಬೇಕಾದ ಮೂಲ ಸೌಕರ್ಯವನ್ನು ಕಲ್ಪಿಸುವಲ್ಲಿ ಕೆಲಸ ಮಾಡಿ. ಚುನಾವಣೆ ಬಂದಾಗ ಬೈಂದೂರು ಬೇಕು, ಚುನಾವಣೆ ಮುಗಿದ ಮೇಲೆ ಸಂಸದರಿಗೆ ಬೈಂದೂರು ಬೇಡ. ಸಂಸದರು ಬೈಂದೂರಿನಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದರೇ ನಮ್ಮ ವಿರುದ್ಧವೇ ಟೀಕೆ ಮಾಡುತ್ತಾರೆ. ಜನ ನಿಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಆ ಋಣ ತೀರಿಸುವುದಕ್ಕಾದರೂ ಬೈಂದೂರಿಗೆ ಬನ್ನಿ, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಿ. ಜನರು ನಿಮ್ಮನ್ನು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಂದು ಹೋಗುವುದಕ್ಕೆ ಸಂಸದರನ್ನಾಗಿ ಮಾಡಿಲ್ಲ ಎಂದು ರಾಘವೇಂದ್ರ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಎಷ್ಟೋ ಗ್ರಾಮ ಪಂಚಾಯತ್‌ ಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿ ಕಾಡುತ್ತದೆ. ಚುನಾವಣೆಯ ಭಾಷಣಗಳಲ್ಲಿ ನಾವು ಮನೆಮನೆಗೆ ನೀರು ಕೊಟ್ಟಿದ್ದೇವೆ ಎಂದು ಸುಳ್ಳು ಭಾಷಣ ಮಾಡಿ ಹೋಗುತ್ತಾರೆ. ಬಿ. ವೈ. ರಾಘವೇಂದ್ರ ಅವರು ನಾಲ್ಕನೇ ಅವಧಿಗೆ ಸಂಸದರಾಗುವುದಕ್ಕೆ ಬೈಂದೂರಿನ ಮತದಾರರ ಕೊಡುಗೆ ಮಹತ್ವದ್ದು. ಸಂಸದರು ಇಲ್ಲಿನ ಜನರ ಸಮಸ್ಯೆ ಪರಿಹಾರ ಮಾಡುವುದಕ್ಕೆ ಈವರೆಗೆ ಸಣ್ಣ ಪ್ರಯತ್ನವೂ ಮಾಡಿಲ್ಲ. ಬೈಂದೂರಿಗೆ ಒಮ್ಮೆ ಬಂದು ನೋಡಿದರೇ ಸಂಸದರು ಇಲ್ಲಿ ಏನು ಮಾಡಿದ್ದಾರೆ ಎಂದು ತಿಳಿಯುತ್ತದೆ. ಕಡಲ್ಕೊರೆತದಂತಹ ಸಮಸ್ಯೆಗಳಿಗೆ ಸಂಸದರು ಮನಸ್ಸು ಮಾಡಿದ್ದರೇ, ಇಷ್ಟೊತ್ತಿಗೆ ಶಾಶ್ವತ ಪರಿಹಾರ ಒದಗಿಸಬಹುದಿತ್ತು. ಸಂಸದರಿಗೆ ಬೈಂದೂರಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ಇಲ್ಲ. ಶಾಸಕರಿಗೂ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!