Wednesday, September 11, 2024

ಅಭೇದ್ಯವ್ಯೂಹಗಳ ಭೇದಿಸುವ ಪಾಠ ಕಲಿಸಿಕೊಡದಿದ್ದರೆ ಇದೇ ಸ್ಥಿತಿಗತಿ

ರಾಜಕೀಯದಲ್ಲಿ ಚಕ್ರವ್ಯೂಹ ಪ್ರಸಂಗ !

ಶ್ರೀಕೃಷ್ಣನ ಸೋದರಳಿಯ ಅಭಿಮನ್ಯು. ಅರ್ಜುನ, ಸುಭದ್ರೆಯರ ಮಗ. ತಾಯಿಯ ಗರ್ಭದಲ್ಲಿರುವಾಗಲೇ ಮಾವ ಶ್ರೀಕೃಷ್ಣ ತನ್ನ ತಾಯಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದಿಸುವುದರ ಬಗ್ಗೆ ಕಥೆಯ ರೂಪದಲ್ಲಿ ಹೇಳುವಾಗಲೇ ಕೇಳಿ ತಿಳಿದಿದ್ದ ಅಭಿಮನ್ಯು. ಎಲ್ಲಾ ತಪ್ಪುಗಳನ್ನು ಎದುರಿಸುವುದಕ್ಕೆ ಮದವೇರಿದ ಆನೆಯಂತೆ ಎದ್ದು ನಿಲ್ಲುವ ವ್ಯಕ್ತಿತ್ವ ಹೊಂದಿದವ. ಎದೆಗಾರಿಕೆ ತುಸು ಹೆಚ್ಚೇ ಅಭಿಮನ್ಯುವಿನಲ್ಲಿತ್ತು. ಮಹಾಭಾರತದಲ್ಲಿ ಸತ್ಯ ಮಾರ್ಗದಲ್ಲಿ ಹೋರಾಡಿ ಹತರಾದ ಯೋಧರಲ್ಲಿ ಅಭಿಮನ್ಯು ಕೂಡ ಒಬ್ಬ ಎನ್ನುವುದನ್ನು ಕಥೆ ರೂಪದಲ್ಲಿ ನಾವೆಲ್ಲರೂ ನೋಡಿ ಕೇಳಿ ತಿಳಿದಿದ್ದೇವೆ. ಅತ್ಯಂತ ಧೈರ್ಯಶಾಲಿ, ವೀರ, ಸಕಲ ಯುದ್ಧ ಕಲೆಗಳನ್ನು ಬಲ್ಲ ಯೋಧನಾಗಿದ್ದರೂ, ಮಹಾಭಾರತ ಯುದ್ಧದಲ್ಲಿ ಕೌರವರು ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಲ್ಲುತ್ತಾರೆ.

ಹೀಗೆ ವ್ಯೂಹ ರಚಿಸಿ ಸಿಲುಕಿಸುವ ಪದ್ಧತಿ ರಾಜಕಾರಣದಲ್ಲಿಯೂ ಇದೆ. ಅಧಿಕೃತವಾಗಿ ಈ ವಿಚಾರವನ್ನು ರಾಹುಲ್‌ ಗಾಂಧಿಯಿಂದ ಮೇಲೆತ್ತಿದ್ದಾರೆ. ಅಭಿಮನ್ಯುವಿನಂತಹ ಎಳೆಚಿಗುರು ಪರಾಕ್ರಮಿಯೊಬ್ಬನಿದ್ದಾನೆ ಎಂಬುವುದನ್ನು ನಿರೀಕ್ಷಿಸಿರದ ಕೌರವರು ಈ ʼಬಾಲಕʼ ಈ ಪರಾಕ್ರಮಿಗಳನ್ನು ಏನೂ ಮಾಡುವುದಕ್ಕೂ ಸಾಧ್ಯವಿಲ್ಲ ಎಂದು ಅತಿ ಮನಸ್ಥಿತಿಯ ಉಡಾಫೆಯಿಂದಲೇ ನಡೆದುಕೊಂಡಿದ್ದರು. ರಾಷ್ಟ್ರ ರಾಜಕಾರಣದಲ್ಲಿಯೂ ಇಂತದ್ದೆ ಪ್ರಸಂಗ ಆಗಿ ಹೋಗಿದೆ. ನುರಿತ ಪರಾಕ್ರಮಿಗಳಿಗೂ ಯಾವುದೇ ರೀತಿಯಲ್ಲೂ ಕಡಿಮೆಯಲ್ಲ ಎಂಬ ರೀತಿಯಲ್ಲಿ ಅಭಿಮನ್ಯು ಕೌರವರ ಮನಸ್ಸಿನಲ್ಲೊಂದು ಭಾವ ಮೂಡಿಸಿದ್ದ. ರಾಜಕಾರಣದಲ್ಲೂ ಆ ʼಧ್ವನಿʼ ಈಗ ಅದೇ ಭಾವ ಮೂಡಿಸಿದೆ.

ಪಾಂಡವರು ಕೌರವವರ ಎದರು ಕೈ ಚೆಲ್ಲಿ ಕೂತಿದ್ದರು. ರಾಜಕಾರಣದಲ್ಲೂ ಕೂಡ ಒಂದು ಪಕ್ಷ ಆಂತರಿಕವಾಗಿ ಈ ಲೋಕಸಭಾ ಚುನಾವಣೆ ಪೂರ್ವದಲ್ಲಿ ಇದೇ ಸ್ಥಿತಿಯಲ್ಲಿತ್ತು. ದ್ರೋಣಾಚಾರ್ಯರ ನೇತೃತ್ವದಲ್ಲಿ ಕೌರವರ ಪಡೆ ಚಕ್ರವ್ಯೂಹವನ್ನು ರಚಿಸಿತ್ತು. ಚಕ್ರವ್ಯೂಹವನ್ನು ಭೇದಿಸಬಲ್ಲ ಅರ್ಜುನ ಆ ಸಂದರ್ಭದಲ್ಲಿರಲಿಲ್ಲ. ಅಭಿಮನ್ಯುವಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಅಭಿಮನ್ಯು ವಂಶ ರಕ್ಷಣೆಗೆ ಮುಂದಾಗುತ್ತಾನೆ. ಪಾಂಡವರಿಗೆ ಸಂಕಷ್ಟ ಕಾಲ. ರಾಜಕಾರಣದಲ್ಲೂ ಒಂದು ಸಂಕಷ್ಟ ಕಾಲ ಎದುರಾಗಿತ್ತು. ರಾಜಕಾರಣವೂ ಒಂದು ಮಹಾಭಾರತ. ಯುದ್ಧವನ್ನು ಎದುರಿಸಲೇ ಬೇಕು. ವ್ಯೂಹದಿಂದ ಹೊರಬರಲು ಗೊತ್ತಿಲ್ಲ ಎಂದು ತಿಳಿಸಿದರೂ, ಅಭಿಮನ್ಯುವನ್ನು ಒಪ್ಪಿಸಿ ಚಕ್ರವ್ಯೂಹ ಭೇದಿಸುವಂತೆ ಯುದಿಷ್ಠಿರ ಮಾಡುತ್ತಾನೆ. ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸುತ್ತಾನೆ. ಚಕ್ರವ್ಯೂಹದ ಮೊದಲ ವ್ಯೂಹವನ್ನು ಲೀಲಾಜಾಲವಾಗಿ ಅಭಿಮನ್ಯು ಬೇಧಿಸಿ ಒಳನುಗ್ಗುತ್ತಿದ್ದಂತೆಯೇ ಕೌರವರಲ್ಲಿ ಆತಂಕ ಎದುರಾಗುತ್ತದೆ. ಈ ಲೋಕಸಭಾ ಚುನಾವಣೆಯ ಕಾಲಮಾನ, ಫಲಿತಾಂಶ ನಿರೀಕ್ಷೆಗೂ ಮೀರಿದಾಗ ಇದೇ ರೀತಿಯ ಒಂದು ಆತಂಕ ಸೃಷ್ಟಿಯಾಗಿತ್ತು. ಅಭಿಮನ್ಯುವನ್ನು ಕೌರವರ ಪ್ರಮುಖರಾದ ಕರ್ಣ, ದುರ್ಯೋಧನ, ದುಶ್ಯಾಸನ, ದ್ರೋಣಾಚಾರ್ಯರು, ಅಶ್ವತ್ಥಾಮ ಮೊದಲಾದ ಪರಾಕ್ರಮಿಗಳು ಸುತ್ತುವರೆದರು. ರಾಜಕಾರಣದಲ್ಲೂ ಗೆಲುವಿಗಾಗಿ ಇಂತಹದ್ದೇ ಒಂದು ವ್ಯೂಹ ಸೃಷ್ಟಿಸಲಾಗಿತ್ತು. ವಯಸ್ಸಿನಲ್ಲಿಯೂ, ಶೌರ್ಯದಲ್ಲಿಯೂ ತನಗಿಂತ ಹಿರಿಯರಾಗಿದ್ದ ಎಲ್ಲರ ಎದುರು ಅಭಿಮನ್ಯು ಧೃತಿಗೆಡದೇ ಹೋರಾಡಿದ. ತನ್ನ ವಯಸ್ಸಿಗೂ ಮಿಗಿಲಾದ ಪರಾಕ್ರಮವನ್ನೂ ಶೌರ್ಯವನ್ನೂ ಮೆರೆದ. ಅಭಿಮನ್ಯವಿನ ಎದೆಗಾರಿಕೆಗೆ ಸ್ವತಃ ಕೌರವವರೇ ಆಶ್ಚರ್ಯಚಕಿತರಾಗಿದ್ದರು. ಚುನಾವಣಾ ಫಲಿತಾಂಶ ಹೊರಬಂದ ಮೇಲೆ ಅಮೂರ್ತವಾಗಿದ್ದ ಆ ʼಧ್ವನಿʼಯ ಶೌರ್ಯದ ಬಗ್ಗೆಯೂ ಬೆರಗು ಉಂಟಾಗಿತ್ತು. ಸ್ವತಃ ದ್ರೋಣಾಚಾರ್ಯಯರೇ ಅಭಿಮನ್ಯುವಿನ ಶೌರ್ಯವನ್ನು ಕೊಂಡಾಡಿದ್ದರು. ಆಮೇಲೆ ಚಕ್ರವ್ಯೂಹದಿಂದ ಹೊರಬರುವುದಕ್ಕಾಗದೇ ಅಭಿಮನ್ಯು ಪರದಾಡಿದ್ದು,ಅಕ್ಷರಶಃ ನಿರಾಯುಧನಾಗಿಯೂ ಕೌರವವರ ಎದುರು ಹೋರಾಟ ಮಾಡಿದನಾದರೂ ಚಕ್ರವ್ಯೂಹದಲ್ಲಿ ಹಿಂಸೆಯನ್ನು ಅನುಭವಿಸಿ ಅಭಿಮನ್ಯು ವೀರ ಮರಣ ಹೊಂದುತ್ತಾನೆ. ರಾಜಕಾರಣದಲ್ಲೂ ಹೀಗೆ ವಿರೋಚಿತ ಸೋಲು ಉಂಟಾಗಿತ್ತು. ರಾಜಕೀಯದಲ್ಲಿ ನಮ್ಮ ಮುಂದೆ ಯಾರೂ ಇಲ್ಲ ಎಂದವರು ತೀರ್ಪಿಗೆ ಶರಣಾದರು. ಅಭಿಮನ್ಯು ಸಾಯುವುದರ ಹಿಂದೆ ಅವನ ಪೂರ್ವಜನ್ಮದ ಫಲಾಪಲವೇನು, ಅಭಿಮನ್ಯು ಸಾವಿನ ಹಿಂದೆ ಶ್ರೀಕೃಷ್ಣನ ಪಾತ್ರವೇನಿತ್ತು ? ಅಭಿಮನ್ಯು ಹಿಂದಿನ ಜನ್ಮದಲ್ಲಿ ಕೃಷ್ಣನ ಶತ್ರುವಾಗಿದ್ದನೇ ಎಂಬ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಮಹಾಭಾರತವನ್ನೇ ತೆರೆದಿಡಬೇಕಾದೀತು. ರಾಜಕಾರಣದಲ್ಲಿಯೂ ಅಷ್ಟೇ ಪೂರ್ತಿ ಹೇಳುವುದಕ್ಕೆ ಹೊರಟರೆ, ಇತಿಹಾಸವನ್ನೇ ತೆರೆದಿಡಬೇಕಾಗುತ್ತದೆ. ಅದೇನೆ ಇರಲಿ. ಸದ್ಯ ಅಭಿಮನ್ಯು ಮತ್ತು ಚಕ್ರವ್ಯೂಹ ರಾಷ್ಟ್ರ ರಾಜಕಾರಣದಲ್ಲಿ ಸುದ್ದಿಯಲ್ಲಿದೆ.

ಹೌದು, ರಾಷ್ಟ್ರ ರಾಜಕಾರಣದಲ್ಲಿ ಈಗ ಪಾಂಡವರು ಯಾರು ? ಕೌರವವರು ಯಾರು ? ಅಭಿಮನ್ಯು ಯಾರು ? ದ್ರೋಣಾಚಾರ್ಯ ಯಾರು ? ಚಕ್ರವ್ಯೂಹ ಯಾವುದು ? ಶ್ರೀಕೃಷ್ಣ ಯಾರು ? ಎನ್ನುವುದೇ ದೊಡ್ಡ ಪ್ರಶ್ನೆ. ಇರಲಿ, ಬಜೇಟ್‌ ಅಧಿವೇಶನದ ಮೇಲಿನ ಚರ್ಚೆಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಈ ಅಭಿಮನ್ಯು ಚಕ್ರವ್ಯೂಹ ಪ್ರಸಂಗವನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿದ್ದಾರೆ. ರಾಹುಲ್‌ ಗಾಂಧಿ ಪ್ರಸ್ತುತ ರಾಜಕಾರಣವನ್ನು ಅಭಿಮನ್ಯು ಚಕ್ರವ್ಯೂಹ ಪ್ರಸಂಗಕ್ಕೆ ಹೋಲಿಸಿ ಹೇಳಿರುವುದು ಸರಿ ಎಂದೇ ಅರ್ಥೈಸಿಕೊಂಡರೂ ಕೆಲವು ಜಿಜ್ಞಾಸೆಗಳಿವೆ.

ಲೋಕಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ರಾಹುಲ್‌ ಗಾಂಧಿ, ʼಕುರುಕ್ಷೇತ್ರದಲ್ಲಿ ಆರು ಮಂದಿ ಚಕ್ರವ್ಯೂಹದಲ್ಲಿ ಅಭಿಮನ್ಯುವನ್ನು ಸಿಲುಕಿಸಿ, ಆತನನ್ನು ಕೊಂದಿದ್ದರು. ಇಂದು ಇಡೀ ಭಾರತದ ಯುವಜನರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೂ ಚಕ್ರವ್ಯೂಹದಲ್ಲಿ ಸಿಲುಕಿಸಲಾಗುತ್ತಿದೆ. ಅಂದು ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ ಇದ್ದಂತೆ, ಇಂದು ಕೂಡ ‘ಚಕ್ರವ್ಯೂಹ’ದ ಕೇಂದ್ರದಲ್ಲಿ ಆರು ವ್ಯಕ್ತಿಗಳಿದ್ದಾರೆ, ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಹಾಗೂ ಅದಾನಿ ಎಂದು ರಾಹುಲ್‌ ಗಂಭೀರ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರದ ಬಜೆಟ್‌ನ ಏಕೈಕ ಗುರಿ ಏಕಸ್ವಾಮ್ಯ ಉದ್ಯಮದ ಚೌಕಟ್ಟನ್ನು ಬಲಪಡಿಸುವುದು ಆಗಿದೆ ಎನ್ನುವ ಅಭಿಪ್ರಾಯವನ್ನು ʼಚಕ್ರವ್ಯೂಹʼ ಬಳಸಿ ರಾಹುಲ್‌ ವ್ಯಕ್ತಪಡಿಸಿದ್ದರು.

ನಮ್ಮ ದೇಶದ ಜನರು 2024ರ ಚುನಾವಣೆಯಲ್ಲಿ ಸರ್ಕಾರವನ್ನು ಮಾತ್ರವಲ್ಲದೆ ಪ್ರತಿಪಕ್ಷವನ್ನೂ ಆಯ್ಕೆ ಮಾಡುವುದಕ್ಕೆ ಬೇಕಾಗಿ ತೀರ್ಪು ನೀಡಿದ್ದಾರೆ. ಪಿಎಂಒ ಆದೇಶಕ್ಕೆ ರಬ್ಬರ್ ಸ್ಟಾಂಪ್ ಆಗಿರಲು ಸಂಸತ್ತು ಇನ್ನು ಮುಂದೆ ವೇದಿಕೆಯಾಗಿರಲ್ಲ. ದೇಶದ ಜನರ ಅನೇಕ ಪ್ರಶ್ನೆಗಳ ಧ್ವನಿಗಳನ್ನು ಪ್ರತಿನಿಧಿಸಲು ಸಂಸತ್ತು ಮತ್ತೊಮ್ಮೆ ಚರ್ಚೆಗೆ, ಸಂವಾದಕ್ಕೆ ವೇದಿಕೆಯಾಗಿರಲಿದೆ. ಹೇಗೆ ಸುಮ್ಮನೆ ಮೋದಿ ಆಗಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿತ್ತೋ ಹಾಗೆಯೆ, ಸುಮ್ಮನೆ ರಾಹುಲ್‌ ಗಾಂಧಿ ಕೂಡ ಆಗುವುದಕ್ಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಈ ಲೋಕಸಭಾ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ. ರಾಹುಲ್‌ ಗಾಂಧಿ ತಮಗೆ ತಾವೇ ಪರೋಕ್ಷವಾಗಿ ಅಭಿಮನ್ಯು ಎಂದುಕೊಂಡರೇ, ಅಥವಾ ರಾಹುಲ್‌ ಗಾಂಧಿಯವರಲ್ಲಿ ಅಭಿಮನ್ಯವಿನಲ್ಲಿರುವ ಗುಣಲಕ್ಷಣಗಳಿವೆಯೇ ? ಅಥವಾ ರಾಹುಲ್‌ ತಾವಿರುವ ಪಕ್ಷವನ್ನು ಪಾಂಡವರ ಪಕ್ಷವೆಂದು ಪರೋಕ್ಷವಾಗಿ ಹೇಳಿಕೊಂಡರೇ ? ಅವರವರನ್ನು ಸಮರ್ಥಿಸಿಕೊಳ್ಳುವುದು ರಾಜಕಾರಣದಲ್ಲಿ ತೀರಾ ಸಾಮಾನ್ಯ.

ಕಳೆದ ಹತ್ತು ವರ್ಷಗಳಿಂದ ಈ ದೇಶದ ರಾಜಕಾರಣ ಮನಸ್ಸು ಮತ್ತು ಬುದ್ಧಿಗೆ ಹೆಣೆದ ಚಕ್ರವ್ಯೂಹದಿಂದ ಇನ್ನೂ ಹೊರಬರುವುದಕ್ಕೆ ಆಗಿಲ್ಲ. ಈಗ ರಾಹುಲ್‌ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ ಎಂದು ಹೇಳುತ್ತಿದ್ದಾರೆ.‌ ಆಡಳಿತವನ್ನು ಪ್ರಶ್ನಿಸುವ ಭರದಲ್ಲಿ ರಾಹುಲ್‌ ಜವಾಬ್ದಾರಿಯನ್ನು ಮರೆಯುವಂತಿಲ್ಲ. ಜನ ರಾಹುಲ್‌ ಮೇಲೆ ಇಟ್ಟಿರುವ ನಂಬಿಕೆ ಈ ಚುನಾವಣೆಯ ಫಲಿತಾಂಶದಿಂದ ಗೊತ್ತಾಗಿದೆ. ಅಭೇದ್ಯವ್ಯೂಹಗಳ ಭೇದಿಸುವುದಕ್ಕೆ ರಾಹುಲ್ ತಯಾರಾಗುತ್ತಿರುವುದನ್ನು ದೇಶ ನೋಡುತ್ತಿದೆಯೇ ? ಈ ನಂಬಿಕೆಯನ್ನು ಉಳಿಸಿಕೊಳ್ಳಲು ಸ್ವತಃ ರಾಹುಲ್‌ ಅರ್ಜುನನಂತಾಗಲು ಪ್ರಯತ್ನಿಸಬೇಕಿದೆ. ಜನರಿಗೂ ಅಭೇದ್ಯವ್ಯೂಹ ಭೇದಿಸುವ ಪಾಠ ಕಲಿಸಿಕೊಡಬೇಕಿದೆ. ಸರ್ಕಾರದ ಆಡಳಿತವನ್ನು ಜನರೇ ಪ್ರಶ್ನಿಸುವಂತೆ ಮಾಡುವವರೆಗೆ ರಾಹುಲ್‌ ಅಭಿಮನ್ಯು ಆಗಿಯೇ ಉಳಿಯುತ್ತಾರೆಯೆ ಹೊರತು ಅರ್ಜುನನಾಗುವುದಿಲ್ಲ. ವಿರೋಧ ಪಕ್ಷದಲ್ಲಿ ಕೂತು ರಾಹುಲ್‌ ಜನರಿಗೆ ಅರ್ಜುನನ ಪಟ್ಟ ಕಟ್ಟುವುದಷ್ಟೇ ಅಲ್ಲ, ತಾವೂ ಅರ್ಜುನನಾಗುವುದರ ಜೊತೆಗೆ ಸಹಸ್ರ ಅರ್ಜುನರನ್ನು ತಯಾರು ಮಾಡಬೇಕಿದೆ. ಇದೇ ರಾಹುಲ್‌ ಮುಂದಿರುವ ದಾರಿ.

ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!