spot_img
Saturday, December 7, 2024
spot_img

‘ಇಂಡಿಯಾ’ ಮೈತ್ರಿಕೂಟ ಸಂಸದೀಯ ವ್ಯವಸ್ಥೆಯಲ್ಲಿ ‘ಬುಲ್ಲೋಜರ್‌ ನ್ಯಾಯ’ ಮೇಲುಗೈ ಸಾಧಿಸಲು ಬಿಡುವುದಿಲ್ಲ : ಖರ್ಗೆ ಕಿಡಿ

ಜನಪ್ರತಿನಿಧಿ (ನವದೆಹಲಿ) : ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಪರಿವರ್ತನೆ ಮಾಡುವ ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳು ಇಂದಿನಿಂದ(ಜುಲೈ 1, ಸೋಮವಾರ)  ಜಾರಿಗೆ ಬಂದಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಳೆದ ಲೋಕಸಭೆಯಲ್ಲಿ 146 ಸಂಸದರನ್ನು ಅಮಾನತು ಮಾಡುವ ಮೂಲಕ ಒತ್ತಾಯಪೂರ್ವಕವಾಗಿ ಈ ಮೂರು ಕ್ರಿಮಿನಲ್‌ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಇದು ದೇಶದಲ್ಲಿ ಸಂಸದೀಯ ವ್ಯವಸ್ಥೆಯನ್ನು ನಾಶಪಡಿಸುವ ‘ಬುಲ್ಲೋಜರ್ ನ್ಯಾಯ” ಎಂದು ಅವರು ಟೀಕಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಂಡಿರುವ ಕಾಯ್ದೆಗಳಾಗಿವೆ.

163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ, 126 ವರ್ಷಗಳ ಹಿಂದಿನ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳು ಜಾರಿಗೆ ಬಂದಿವೆ.

ಸಮಾಜದ ವಾಸ್ತವಾಂಶ ಮತ್ತು ಅಪರಾಧಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಕಾರ್ಯವಿಧಾನವನ್ನು ಹೊಸ ಕಾನೂನುಗಳ ಮೂಲಕ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಚುನಾವಣೆಯಲ್ಲಿ ರಾಜಕೀಯ ಹಾಗೂ ನೈತಿಕ ಆಘಾತ ಅನುಭವಿಸಿದ ಬಳಿಕ ಮೋದಿ ಜೀ ಹಾಗೂ ಬಿಜೆಪಿ ಸಂವಿಧಾನವನ್ನು ಗೌರವಿಸುವ ರೀತಿ ನಾಟಕ ಮಾಡುತ್ತಿದ್ದಾರೆ. ಸತ್ಯವೇನೆಂದರೆ, ಇಂದು ಜಾರಿಗೆ ಬರುತ್ತಿರುವ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಲೋಕಸಭೆಯಲ್ಲಿ 146 ಸಂಸದರನ್ನು ಅಮಾನತು ಮಾಡಿ ಒತ್ತಾಯಪೂರ್ವಕವಾಗಿ ಜಾರಿಗೆ ತಂದವುಗಳಾಗಿವೆ’ ಎಂದವರು ಕಿಡಿ ಕಾರಿದ್ದಾರೆ.

‘ಇಂಡಿಯಾ’ ಮೈತ್ರಿಕೂಟ ಸಂಸದೀಯ ವ್ಯವಸ್ಥೆಯಲ್ಲಿ ಈ ‘ಬುಲ್ಲೋಜರ್‌ ನ್ಯಾಯ’ ಮೇಲುಗೈ ಸಾಧಿಸಲು ಬಿಡುವುದಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಹೊಸ ಕಾನೂನುಗಳು ಶೀಘ್ರ ನ್ಯಾಯ ಒದಗಿಸಲು ಆದ್ಯತೆ ನೀಡುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸೋಮವಾರದಿಂದ, ಎಲ್ಲ ಹೊಸ ಎಫ್‌ಐಆರ್‌ಗಳನ್ನು ಬಿಎನ್‌ಎಸ್‌ ಅಡಿಯಲ್ಲಿ ದಾಖಲಿಸಲಾಗುತ್ತದೆ. ಈ ಹಿಂದೆ ದಾಖಲಾದ ಪ್ರಕರಣಗಳನ್ನು ಹಳೆಯ ಕಾನೂನುಗಳ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!