Sunday, September 8, 2024

ಕೇಂದ್ರದಲ್ಲಿ ಮಂತ್ರಿಯಾಗಲಿ, ಆಗದೇ ಇರಲಿ ನನಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ | ಗಂಗೊಳ್ಳಿ- ಕುಂದಾಪುರ ಸೇತುವೆ ನಿರ್ಮಾಣಕ್ಕೆ ಪ್ರಯತ್ನ : ಬಿ.ವೈ.ರಾ ಭರವಸೆ

ಜನಪ್ರತಿನಿಧಿ (ಹೆಮ್ಮಾಡಿ) : ಪಕ್ಷ ಕಟ್ಟುವ ಕಾರ್ಯವನ್ನು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮಾಡಿದ ತಪಸ್ಸಿನಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಿಮ್ಮ ರಾಘಣ್ಣ ಮರಳಿ ಗೆದ್ದಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ ರಾಘವೇಂದ್ರ ಹೇಳಿದರು.

ಅವರು ಇಲ್ಲಿನ ಜಯಶ್ರೀ ಸಭಾವನದಲ್ಲಿ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ವತಿಯಿಂದ ನಡೆದ ಅಭಿನಂದನಾ ಸಮಾರಂಭ ಹಾಗೂ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಪಕ್ಷಗಳು ಸುಳ್ಳು ಪ್ರಚಾರಗಳಿಂದ ಬಿಜೆಪಿಯನ್ನು ಸೋಲಿಸುವಂತಹ ಷಡ್ಯಂತ್ರ ಮಾಡಿದವು. ಬೈಂದೂರಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಎಲ್ಲಾ ಮೋರ್ಚಾದ ಸದಸ್ಯರ ಪರಿಶ್ರಮದಿಂದ ಮತ್ತೆ ಗೆಲ್ಲುವ ಹಾಗೆ ಆಯ್ತು. ಇದು ಇಲ್ಲಿನ ಕಾರ್ಯಕರ್ತರ ಶಕ್ತಿ ಎಂದು ಅವರು ಶ್ಲಾಘಿಸಿದರು.

ಬೈಂದೂರಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ನೀಡಲಿ. ಕೇಂದ್ರದಿಂದ ಸಂಸದನಾಗಿ ಇಲ್ಲಿನ ಅಭಿವೃದ್ದಿಗೆ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದಿದ್ದಲ್ಲದೇ, ರಾಜ್ಯ ಸರ್ಕಾರ ಇಂಧನ ಬೆಲೆ ಏರಿಸಿರುವ ಬಗ್ಗೆ ಆಕ್ರೋಶ ಹೊರ ಹಾಕಿದರು.

ಕೊಲ್ಲೂರು ತಾಯಿ ಮೂಕಾಂಬಿಕೆಯ ಆಶೀರ್ವಾದ ಇರುವವರೆಗೆ ಕ್ಷೇತ್ರದ ಅಭಿವೃದ್ಧಿಗೆ ತಡೆ ಮಾಡುವ ಶಕ್ತಿ ಪ್ರತಿಪಕ್ಷಗಳಿಗಾಗಲಿ ಅಥವಾ ಯಾರಿಗೂ ಇಲ್ಲ. ಕೇಂದ್ರದಲ್ಲಿ ಮಂತ್ರಿಯಾಗಲಿ, ಆಗದೇ ಇರಲಿ ನನಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಎಂದವರು ಹೇಳಿದರು.

ಇನ್ನು, ಗಂಗೊಳ್ಳಿ-ಕುಂದಾಪುರ ಸಂಪರ್ಕಿಸುವ ಸೇತುವೆಯನ್ನು ಆದ್ಯತೆಯಲ್ಲಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಗಂಗೊಳ್ಳಿ ಕುಂದಾಪುರ ಸಂಪರ್ಕ ಸೇತುವೆಗೆ ಕೇಂದ್ರದಲ್ಲಿರುವ ವಿಶೇಷ ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಬಿಟ್ಟರೇ ಬೇರೆ ಆಯ್ಕೆ ಜನರ ಮುಂದಿಲ್ಲ : ಕಿಶೋರ್‌ ಕುಮಾರ್‌
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಚುನಾವಣಾ ಪೂರ್ವದಲ್ಲಿದ್ದ ಭಯವನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನವಣಾ ಫಲಿತಾಂಶ ದೂರ ಮಾಡಿದೆ. ನಮ್ಮ ಜಿಲ್ಲೆಯಲ್ಲಿ ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಗಳ ಆಯ್ಕೆ ಜನರ ಮುಂದಿಲ್ಲ. ಶಿವಮೊಗ್ಗದ ಸಂಸದರು ಕೇಂದ್ರ ಸಚಿವರಾದರೇ ಬೈಂದೂರು ಇನ್ನೂ ಹೆಚ್ಚಿನ ಮಟ್ಟಿನಲ್ಲಿ ಅಭಿವೃದ್ಧಿ ಆಗುವುದು ನಿಶ್ಚಿತ ಎಂದರು.

ಕಾರ್ಯಕರ್ತನೇ ಬೈಂದೂರು ಬಿಜೆಪಿಗೆ ಸಾರ್ವಭೌಮ : ಗಂಟಿಹೊಳೆ
ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬೈಂದೂರು ಕಾರ್ಯಕರ್ತರ ಕ್ಷೇತ್ರ. ಗೊಂದಲಗಳು ಬೈಂದೂರಿಗೆ ಹೊಸತಲ್ಲ. ಅದನ್ನು ಮೀರಿ ಗೆಲುವು ತಂದುಕೊಡುವ ಶಕ್ತಿ ಯಾರಿಗಾದರೂ ಇದೆ ಎಂದಾದರೇ ಅದು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾರ್ಯಕರ್ತರಿಗಿದೆ. ಕಾರ್ಯಕರ್ತನೇ ಬೈಂದೂರಿನಲ್ಲಿ ಸಾರ್ವಭೌಮ ಎಂದು ಹೇಳಿದರು.

ಕೊಲ್ಲೂರು ಕಾರಿಡಾರ್ ಮತ್ತು ತಾಯಿ ಮೂಕಾಂಬಿಕೆಯನ್ನು ನೆನಪಿಸಿಕೊಂಡು ಸಂಸದನಾಗಿ ಸಂಸತ್ ಪ್ರವೇಶಿಸಿದ ನಾಯಕ ನಮಗೆ ಸಿಕ್ಕಿರುವಾಗ ಕ್ಷೇತ್ರದ ಕನಸು ನನಸಾಗದೇ ಉಳಿಯುವುದಕ್ಕೆ ಸಾಧ್ಯವಿದೆಯೇ ? ಎಂದು ಕೇಳಿದ ಅವರು, ಸಂಸದರು ಕ್ಷೇತ್ರಕ್ಕೆ ನೀಡಿದ ಭರವಸೆ ನೆನಪಿಸಿಕೊಂಡಿದ್ದಾರೆ. ಕೊಟ್ಟ ಭರವಸೆ ಸಂಸದರು ಶೀಘ್ರವಾಗಿ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಬೈಂದೂರು ಮಂಡಲದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಮತ್ತು ಕಂಬದಕೋಣೆ, ಶಿರೂರು, ವಂಡ್ಸೆ, ಸಿದ್ದಾಪುರ, ಕಾರ್ವಾಡಿ, ಬೈಂದೂರು, ತ್ರಾಸಿ, ಕೊಲ್ಲೂರು ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕೇಂದ್ರ ಅಗ್ನಿವೀರ್ ಯೋಜನೆಗೆ ಆಯ್ಕೆಯಾದ ಅಕ್ಷಯ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಬೈಂದೂರು ಬಿಜೆಪಿ ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಗಳೂರು ಬಿಜೆಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ‌ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಗಂಗೊಳ್ಳಿ- ಕುಂದಾಪುರ ಸೇತುವೆ ನಿರ್ಮಾಣಕ್ಕೆ ಪ್ರಯತ್ನ
ಬಹುಕಾಲದ ಬೇಡಿಕೆಯಾಗಿರುವ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆದ್ಯತೆಯಲ್ಲಿ ಪ್ರಯತ್ನಿಸುತ್ತೇನೆ. ವ್ಯಾವಹಾರಿಕವಾಗಿ ಗಂಗೊಳ್ಳಿ ಮತ್ತು ಕುಂದಾಪುರದ ನಡುವೆ ನಿಕಟ ಸಂಬಂಧ ಇರುವುದರಿಂದ ಸೇತುವೆ ನಿರ್ಮಾಣವಾದಲ್ಲಿ ಗಂಗೊಳ್ಳಿ ಹಾಗೂ ಕುಂದಾಪುರ ಏಕಕಾಲದಲ್ಲಿ ಬೆಳವಣಿಗೆ ಕಂಡುಕೊಳ್ಳುವುದಲ್ಲದೇ ಸಂಪರ್ಕ ಅತ್ಯಂತ ನಿಕಟವಾಗಲಿದೆ, ಕ್ಷೇತ್ರದ ಅಭಿವೃದ್ಧಿಯೂ ಆಗಲಿದೆ ಎನ್ನುವ ವಿಚಾರ ಗಮನದಲ್ಲಿದೆ. ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ತಂದು ಶೀಘ್ರದಲ್ಲಿ ಸೇತುವೆ ನಿರ್ಮಾಣ ಕಾರ್ಯ ಮಾಡುವ ಪ್ರಯತ್ನ ಮಾಡುತ್ತೇನೆ.  
-ಬಿ. ವೈ ರಾಘವೇಂದ್ರ
ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ

2028ಕ್ಕೆ ಗಂಟಿಹೊಳೆ ಅವರೇ ನಮ್ಮ ಅಭ್ಯರ್ಥಿ
ಬೈಂದೂರು ವಿಧಾನಸಭಾ ಕ್ಷೇತ್ರದಿಂದ ದೊಡ್ಡ ಅಂತರವನ್ನು ತಂದುಕೊಡುವಲ್ಲಿ ಸಹಕರಿಸಿದ ಪಕ್ಷದ ಕಾರ್ಯಕರ್ತರನ್ನು ಹಾಗೂ ಶಾಸಕರನ್ನು ಅಭಿನಂದಿಸುತ್ತೇನೆ. ಬೈಂದೂರಿನಲ್ಲಿರುವುದು ಗೋಲ್ಡನ್‌ ಕಾರ್ಯಕರ್ತರು. ಶಾಸಕರು ರಾಜ್ಯ ಸರ್ಕಾರದ ಅನುದಾನವಿಲ್ಲದೇ ಇದ್ದರೂ ʼಸಮೃದ್ಧ ಬೈಂದೂರುʼ ಯೋಜನೆಯ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ದೇವ ದುರ್ಲಬ ಕಾರ್ಯಕರ್ತರು ಮತ್ತು ಶಾಸಕರು ಬೈಂದೂರಿನಲ್ಲಿರುವವರೆಗೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುವುದಿಲ್ಲ.  

ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಮುಂದೆಯೂ ಶಾಸಕರೊಡಗೂಡಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧ. 2028ಕ್ಕೆ ಗಂಟಿಹೊಳೆ ಅವರೇ ನಮ್ಮ ಅಭ್ಯರ್ಥಿ. ನಾನೇ ಅಧ್ಯಕ್ಷನಾಗಿರುತ್ತೇನೆ. ಮತ್ತೆ ಜೊತೆಗೂಡಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇವೆ.
-ದೀಪಕ್‌ ಕುಮಾರ್‌ ಶೆಟ್ಟಿ
ಅಧ್ಯಕ್ಷರು, ಬೈಂದೂರು ಬಿಜೆಪಿ ಮಂಡಲ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!