Tuesday, October 8, 2024

ಉತ್ತರ ಪ್ರದೇಶ ಸಂವಿಧಾನದ ರಕ್ಷಣೆ ಮಾಡಿದೆ | ʼಇಂಡಿಯಾʼ ಮೈತ್ರಿಕೂಟದೊಂದಿಗೆ ಚರ್ಚಿಸದೆ ಟಿಡಿಪಿ, ಜೆಡಿಯು ಪಕ್ಷಗಳ ಜೊತೆಗಿನ ಮೈತ್ರಿ ಬಗ್ಗೆ ಉತ್ತರಿಸುವುದಿಲ್ಲ : ರಾಗಾ

ಜನಪ್ರತಿನಿಧಿ (ನವ ದೆಹಲಿ) : ಇಂಡಿಯಾ ಮೈತ್ರಿಕೂಟದ ಇತರೆ ಪಕ್ಷಗಳೊಂದಿಗೆ  ಮಾತನಾಡದೆ ಟಿಡಿಪಿ ಮತ್ತು ಜೆಡಿಯು ಪಕ್ಷಗಳೊಂದಿಗೆ ಮೈತ್ರಿ ಬಗ್ಗೆ ಸದ್ಯ ಉತ್ತರಿಸುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್‌ ಮುಖ್ಯ ಕಚೇರಿಯಲ್ಲಿ ಇಂದು(ಮಂಗಳವಾರ) ಸಂಜೆ ಚುನಾವಣಾ ಫಲಿತಾಂಶದ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೋರ್ವರು ಕೇಳಿದ ʼಸರಕಾರ ರಚನೆಗೆ ಮುಂದಾಗುವಿರಾ?ʼ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಗಾ, ನಮ್ಮದು ʼಇಂಡಿಯಾʼ ಮೈತ್ರಿಕೂಟ ಭಾಗವಾಗಿರುವ ಪಕ್ಷ. ಮೈತ್ರಿಯ ಭಾಗವಾಗಿರುವ ಇತರೆ ಪಕ್ಷಗಳೊಂದಿಗೆ ಚರ್ಚಿಸದೆ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ನಾಳೆ ನಮ್ಮ ಮೈತ್ರಿಕೂಟದ ಸಭೆ ನಿಗದಿಯಾಗಿದೆ. ಅವರ ಅಭಿಪ್ರಾಯಗಳನ್ನು ಕೇಳಿ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಹಾಗೂ ಎನ್‌ಡಿಎ ಸರಕಾರ ದುರುಪಯೋಗ ಪಡಿಸಿಕೊಂಡ ಸ್ವತಂತ್ರ ಸಂಸ್ಥೆಗಳ ವಿರುದ್ಧ ಹೋರಾಡಿದ್ದೇವೆ. ನಮ್ಮ ಬ್ಯಾಂಕ್‌ ಖಾತೆಗಳನ್ನು ದುರುಪಯೋಗ ಪಡಿಸಿಕೊಂಡರು. ನಮ್ಮ ಮೈತ್ರಿಕೂಟದ ಸದಸ್ಯರನ್ನು ಜೈಲಿಗಟ್ಟಿ ತೊಂದರೆ ನೀಡಿದರು. ಆದರೂ ನಮಗೆ ಜನರ ಮೇಲೆ ನಮಗೆ ನಂಬಿಕೆಯಿತ್ತು. ಜನರು ಅದಕ್ಕೆಲ್ಲ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ” ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಟೀಕಿಸಿದರು.

ಜನರಲ್ಲಿದ್ದ ನರೇಂದ್ರ ಮೋದಿ ವಿರುದ್ಧದ ಭಾವನೆ ಈ ಚುನಾವಣೆಯ ಮೂಲಕ ಹೊರಬಂದಿದೆ. ಇವತ್ತು ನೀವು ಅದಾನಿ ಸ್ಟಾಕ್‌ಗಳನ್ನು ನೋಡಿದ್ದೀರಾ? ಎಲ್ಲವೂ ಬಿದ್ದು ಹೋಗಿದೆ. ಮೋದಿ ಇಲ್ಲದಿದ್ದರೇ ಅವರ್ಯಾರೂ ಇಲ್ಲ ಎನ್ನುವುದು ಇಂದು ಸಾಬೀತುಪಡಿಸಿದೆ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಇನ್ನು, ರಾಯ್‌ಬರೇಲಿ ಹಾಗೂ ಕೇರಳದ ವಯನಾಡು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿರುವುದರಿಂದ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎನ್ನುವ ಬಗ್ಗೆ ಈವರೆಗೆ ಆಲೋಚಿಸಿಲ್ಲ. ಎರಡೂ ಕ್ಷೇತ್ರದ ಜನತೆಗೆ ಧನ್ಯವಾದಗಳು. ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಗಾ ಮುಗುಳ್ನಕ್ಕರು.

ಉತ್ತರಪ್ರದೇಶದ ಜನರು ನೀಡಿರುವ ಅಚ್ಚರಿಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ಉತ್ತರ ಪ್ರದೇಶವು ಸಂವಿಧಾನದ ರಕ್ಷಣೆ ಮಾಡಿದೆ. ಉತ್ತರ ಪ್ರದೇಶದ ಜನರಿಗೆ ವಿಶೇಷ ಧನ್ಯವಾದಗಳು. ಉತ್ತರಪ್ರದೇಶದಂತೆಯೇ ಇತರ ಕೆಲವು ರಾಜ್ಯಗಳೂ ಉತ್ತಮ ಫಲಿತಾಂಶ ನೀಡಿವೆ. ಆದರೆ ಉತ್ತರಪ್ರದೇಶದ ಜನರ ನಡೆ ಗುರುತರವಾದದ್ದು” ಎಂದವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!