Tuesday, October 8, 2024

ಶಾಲಾರಂಭದಂದೆ ಪಠ್ಯಪುಸ್ತಕ, ಸಮವಸ್ತ್ರ ಸಿಗುವಂತಾಗಲಿ

ಮುಂದಿನ ವಾರ ಶಾಲೆಗಳು ಮತ್ತೆ ಆರಂಭವಾಗಲಿವೆ. ಇನ್ನೊಂದು ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಸನ್ನದ್ಧರಾಗುತ್ತಿದ್ದಾರೆ. ಹೊಸ ಶೈಕ್ಷಣಿಕ ವರ್ಷ ಮಕ್ಕಳಿಗೆ ಹೊಸ ಅನುಭವಗಳನ್ನು ನೀಡುತ್ತದೆ. ಏಪ್ರಿಲ್ ೧೦ರಿಂದ ರಜೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು ರಜೆಯನ್ನು ಮುಗಿಸಿ ಶಾಲೆಯತ್ತ ಹೆಜ್ಜೆ ಹಾಕಲಿದ್ದಾರೆ. ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿ ಪುನರಪಿ ಸಾಧನೆಯ ಪಥದಲ್ಲಿ ಗುರುತಿಸಿಕೊಂಡಿದೆ. ಅದನ್ನು ನಿರಂತರತೆಗೊಳಿಸುವಲ್ಲಿ ಪ್ರತಿ ತರಗತಿಯಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವ ಅವಶ್ಯಕತೆಯನ್ನು ಶಿಕ್ಷಕರು, ಪೋಷಕರು ಮನಗಂಡಿದ್ದಾರೆ. ದಿಢೀರಾಗಿ ಯಾವುದೇ ಸಾಧನೆ ಮಾಡಲು ಸಾಧನೆ ಇಲ್ಲ, ನಿರಂತರ ಪರಿಶ್ರಮದಿಂದ ಸಾಧನೆಯ ಮಾರ್ಗ ಸುಲಭವಾಗುತ್ತದೆ. ಅದಕ್ಕೆ ಪೂರಕವಾಗಿ ಗುಣಮಟ್ಟದ ಶಿಕ್ಷಣ, ಇವತ್ತಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತಹ ಶಿಕ್ಷಣವನ್ನು ಮಗುವಿಗೆ ನೀಡುವ ಅವಶ್ಯಕತೆ ಇದೆ. ಶಾಲೆಯಲ್ಲಿ ಮಗುವಿಗೆ ಕಲಿಕಾ ಪೂರಕವಾದ ವಾತಾವರಣ ಇರಬೇಕಾಗುತ್ತದೆ. ಸರ್ಕಾರಿ ಶಾಲೆಗಳ ಸಾಧನೆ ಈಗಾಗಲೇ ರುಜುವತ್ತಾಗಿದೆ. ಸಂಸ್ಕಾರ, ಮೌಲ್ಯ, ಉತ್ತಮ ಶಿಕ್ಷಣ ಹಾಗೂ ಮಗುವಿನ ಸರ್ವತೋಮುಖ ಏಳ್ಗೆಯಲ್ಲಿ ಸರ್ಕಾರಿ ಶಾಲೆಗಳು ಪ್ರಯತ್ನ ಮಾಡುತ್ತಿವೆ. ಆದರೆ ಅದಕ್ಕೆ ಪೂರಕವಾದ ವಾತಾವರಣವನ್ನು ಸರ್ಕಾರ, ಇಲಾಖೆಗಳು, ಸಾರ್ವಜನಿಕರು ಒದಗಿಸಿಕೊಡಬೇಕಾಗುತ್ತದೆ. ಮೂಲಸೌಕರ್ಯ, ಹಾಗೂ ಶಿಕ್ಷಕರನ್ನು ಅಲ್ಲಿ ಸಜ್ಜುಗೊಳಿಸಬೇಕಾಗುತ್ತದೆ. ಶಿಕ್ಷಕರ ಕೊರತೆಯಿಂದ ಬಹುತೇಕ ಶಾಲೆಗಳು ಬಳಲುತ್ತಿವೆ. ವಿಷಯವಾರು ಶಿಕ್ಷಕರ ಬೇಡಿಕೆ ಈಡೇರಲಿಲ್ಲ, ಶಾಲೆಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿಯೂ ಪ್ರಯತ್ನಗಳು ಆಗಬೇಕಾಗಿವೆ. ಮುಖ್ಯವಾಗಿ ಶಾಲೆಗಳು ಆರಂಭವಾಗುವ ಹೊತ್ತಿಗೆ ಆಯಾಯ ತರಗತಿಯ ಪಠ್ಯ ಪುಸ್ತಕ, ಸಮವಸ್ತ್ರವನ್ನು ನೀಡಿದರೆ ಅದಕ್ಕಿಂತ ದೊಡ್ಡದು ಬೇರಿಲ್ಲ. ಸಮರ್ಪಕವಾಗಿ ಪಠ್ಯಪುಸ್ತಕಗಳು ಪೂರೈಕೆಯಾಗದೆ ಶೈಕ್ಷಣಿಕ ವರ್ಷದ ಅರ್ಧ ವರ್ಷಗಳನ್ನೇ ಕಾದ ಉದಾಹರಣೆಗಳು ಇವೆ. ಮಗುವಿಗೆ ತರಗತಿ ಆರಂಭದಂದೆ ಪುಸ್ತಕಗಳು ಸಿಕ್ಕಿದರೆ ಅನುಕೂಲ. ಅದನ್ನು ಸರ್ಕಾರಗಳು ಜವಬ್ದಾರಿಯಿಂದ ಮಾಡಬೇಕಾಗುತ್ತದೆ. ಇಲಾಖೆಗಳ ಜವಬ್ದಾರಿಗಳು ಕೂಡಾ ಇಲ್ಲಿ ಮಹತ್ತರದ್ದಾಗಿರುತ್ತದೆ. ಇವತ್ತು ಸರ್ಕಾರಿ ಶಾಲೆಗಳಲ್ಲಿ ಶಾಲಾ ವಾಹನದ ವ್ಯವಸ್ಥೆ ಹೊರತು ಪಡಿಸಿ (ಖಾಸಗಿ ಸಹಭಾಗಿತ್ವದಲ್ಲಿ ಇದೆ) ಉಳಿದ್ದೆಲ್ಲ ಸವಲತ್ತುಗಳು ಇರುತ್ತವೆ. ಆದರೆ ಅದು ಸಕಾಲಕ್ಕೆ ಮಾತ್ರ ಒದಗಿಬರುತ್ತಿಲ್ಲ. ನೀಡುವ ಸೌಕರ್ಯ ಮತ್ತು ಸೌಲಭ್ಯಗಳು ಪರಿಣಾಮಕಾರಿಯಾಗಿ ದೊರೆತಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಶಿಕ್ಷಣ ವ್ಯವಸ್ಥೆಯೂ ಕೂಡಾ ಹಾಗೆ. ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಆಸಕ್ತಿ ಹಾಗೂ ಮುತುವರ್ಜಿಯಿಂದ ನೋಡಬೇಕಾದ್ದು ಸರಕಾರಗಳ ಜವಬ್ದಾರಿಯಾಗಿದೆ. ಶಾಲೆಗಳ ಆರಂಭ ಶುಭಪ್ರದವಾಗಿರಲಿ, ೨೦೨೪-೨೫ ಶೈಕ್ಷಣಿಕ ವರ್ಷ ಯಶಸ್ಸನ್ನು ಸಾಧಿಸಲಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!