Sunday, September 8, 2024

ಮನಸೂರೆಗೊಂಡ ಶ್ರೀರಾಮ ದರ್ಶನಂ: ಮತ್ಸ್ಯಗಂಧ ಪ್ರಸ್ತುತಿ

ಬಗ್ವಾಡಿ ಯಕ್ಷಗಾನದ ಆಶ್ರಯತಾಣ. ಇಲ್ಲಿ ಹಿಂದೆ ಹರಕೆ ಬಯಲಾಟದ ಮೇಳ ಇತ್ತು. ಯಕ್ಷಗಾನ ಕಲೆಗೆ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನ ಅನಾದಿ ಕಾಲದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರತಿ ವರ್ಷ ವಾರ್ಷಿಕ ರಥೋತ್ಸವದಂದು ದೇವಿಯ ಪ್ರೀತ್ಯಾರ್ಥವಾಗಿ ಇಲ್ಲಿ ಯಕ್ಷಗಾನ ಸೇವೆ ನಡೆಯುತ್ತದೆ. ಈ ಬಾರಿ ನಡೆದ ಯಕ್ಷಗಾನ ತುಸು ಭಿನ್ನ. ಮೊಗವೀರ ಹವ್ಯಾಸಿ ಕಲಾವಿದರನ್ನು ಸಂಘಟಿಸುವ ಒಂದು ಪುಟ್ಟ ಪ್ರಯತ್ನ ಇಲ್ಲಿ ನಡೆದಿತ್ತು.

ಮತ್ಸ್ಯಗಂಧ ಹೆಸರಿನಡಿ ಹವ್ಯಾಸಿ ಮೊಗವೀರ ಕಲಾವಿದರ ಒಕ್ಕೂಟ ಇಲ್ಲಿ ಒಂದು ಉತ್ಕೃಷ್ಟ ಪ್ರದರ್ಶನಕ್ಕೆ ಸಾಕ್ಷಿ ಎನಿಸಿಕೊಂಡಿದ್ದಾರೆ. ಹವ್ಯಾಸಿ ಕಲಾವಿದರು ತುಂಬಾ ಜನ ಇದ್ದಾರೆ. ಹರಿದು ಹಂಚಿ ಹೋಗಿರುವ ಹವ್ಯಾಸಿಗಳನ್ನು ಒಂದೆಡೆ ಸಂಘಟಿಸಿ ಒಂದು ಪೂರ್ವ ತಾಲೀಮು ನೀಡಿ ಯಶಸ್ವಿ ಪ್ರದರ್ಶನ ನೀಡಿದ್ದು ಶ್ಲಾಘನಾರ್ಹ.

ಶ್ರೀರಾಮ ದರ್ಶನಂ ಕಥಾವಸ್ತುಗಳನ್ನು ಆಯ್ದುಕೊಂಡಿದ್ದು, ಸಮಯದ ಇತಿಮಿತಿಯೊಳಗೆ ಪ್ರಸಂಗವನ್ನು ಹೃಸ್ವಗೊಳಿಸಿ ಪ್ರದರ್ಶಿಸಲಾಯಿತು. ಪ್ರಸಂಗದ ಉದ್ದಕ್ಕೂ ಕೂಡಾ ರಂಗದ ಶಿಸ್ತು, ಪ್ರಬುದ್ಧತೆ, ಪ್ರಸಂಗದ ನಡೆ, ಸಂಭಾಷಣೆ ಗಮನ ಸಳೆಯಿತು. ಪ್ರಮುಖವಾಗಿ ಕಲಾವಿದರ ಸಮನ್ವಯತೆ ಪ್ರಬುದ್ಧ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಹಿಮ್ಮೇಳದಲ್ಲಿ ಪ್ರತಿಭಾಸಂಪನ್ನರ ಬಳಗವಿತ್ತು. ಮುಮ್ಮೇಳ ಕೂಡಾ ಅಷ್ಟೇ ಪಕ್ವತೆಯಿಂದ ಕೂಡಿತ್ತು.

ರುಕ್ಮಾಂಗನಾಗಿ ಪ್ರದೀಪ್ ಕಾಂಚನ್ ಯಡಾಡಿ. ಶುಭಾಂಗನಾಗಿ ಶ್ರೀಲಕ್ಷ್ಮಿ ಗುಜ್ಜಾಡಿ ಪ್ರಾರಂಭದಿಂದಲೇ ಭರವಸೆ ಮೂಡಿಸಿದರು. ರುಕ್ಮಾಂಗ ಹೆಚ್ಚು ಅವಕಾಶಗಳನ್ನು ಪಡೆದುಕೊಂಡರೂ ಶುಭಾಂಗನ ಪಾತ್ರಧಾರಿ ಕೂಡಾ ತಾನೇನು ಕಡಿಮೆಯಿಲ್ಲ ಎನ್ನುವುದನ್ನು ಸಾಭೀತು ಪಡಿಸಿದರು. ಕುಣಿತದಲ್ಲಿನ ವೇಗ, ಚುರುಕು, ನಿಲುವು, ವೀರಮಣಿ ಆಸ್ಥಾನದ ದೃಶ್ಯ ಎಲ್ಲವೂ ಕೂಡಾ ಅರ್ಥಪೂರ್ಣವಾಗಿಸಿದರು. ಪರಿಕಿಸು ಸಹಜ ನೀಯುಪವನ ಸಿರಿಯಾ| ಹಾಗೂ ಕನಕಮಯಧಾಭರಣ ಶೋಭಿತ| ಘನತರದ ವಾಜಿಯನು ಪರಕಿಸೆ| ಪದ್ಯವನ್ನು ಮೊಗೆಬೆಟ್ಟು ಜೀವಸ್ಪರ್ಶ ನೀಡಿದರೆ ಪಾತ್ರದಾರಿಗಳು ಇನ್ನಷ್ಟು ನೇರ್ಪುಗೊಳಿಸಿದರು. ವೀರಮಣಿಯಾಗಿ ಸುಧೀರ ನಾಯ್ಕ ಮಂಕಿಯವರದ್ದು ಪ್ರಬುದ್ಧ ಅಭಿನಯ. ಗಾಂಭೀರ್ಯತೆಯೊಂದಿಗೆ ರಂಗದಲ್ಲಿ ಜಾಪು-ಜರಿಯ ಹೆಜ್ಜೆಯನ್ನಿರಿಸಿದರು. ಸಂಧಾನದ ಸನ್ನಿವೇಶವನ್ನು ಮಾತಿನ ವೈಖರಿಯೊಂದಿಗೆ ರಂಗವನ್ನು ಧೂಳೆಬ್ಬಿಸಿದರು. ವೀರಮಣಿಯಾಸ್ತಾನದಿ| ವಿಷ್ಟರವ| ನೇರಿ ಕುಳಿತಿರೆ ಮೋದದಿ

ವೀರಮಣಿಯು ಹೂಂಕರಿಸುತಲಾಕ್ಷಣ| ಪದ್ಯಗಳು ಅದಕ್ಕೆ ತಕ್ಕ ಅಭಿನಯ ಅದ್ಭುತ. ಹನುಮಂತನಾಗಿ ಪ್ರವೀಣ ಬಾಳಿಕೆರೆ ಅದ್ಬುತವಾದ ಅಭಿನಯ ನೀಡಿದರು. ವೇಷವೂ ಕೂಡಾ ಅವರಿಗೆ ಒಪ್ಪಂದವಾಗಿತ್ತು. ಹನುಮನ ಸಾಂಪ್ರಾದಾಯಿಕ ನಿಲುವು ಮತ್ತು ಕುಣಿತ ಅವರಲ್ಲಿನ ಅಧ್ಯಯನದ ಹಸಿವು ತೋರಿಸಿತು. ಯಾತಕಿಂತು ನುಡಿವೆ ಮೂರ್ಖನೆ| ಲೋಕಮಾತೆ ಸೀತೆ ಭುವನ ಖ್ಯಾತೆಯಾದಿಶಕ್ತಿ ಮೂಢನೆ ಪದ್ಯಕ್ಕೆ ಕುಣಿತ ಅದ್ಭುತ. ಶತ್ರುಘ್ನನಾಗಿ ಕುಮಾರ ಶಂಕರನಾರಾಯಣ ತನ್ನ ಸಾಂಪ್ರಾದಾಯಿಕ ಅರ್ಥವೈಭವದಿಂದ ಗಮನ ಸಳೆದರು. ಕೂಟದಲ್ಲಿ ಪರಿಚಿತರು ಕುಮಾರ ಮಾಸ್ಟ್ರು. ಕುಣಿತದಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟರು.

ದಮನನಾಗಿ ಕುಶ ಮೊಗವೀರ ವಂಡ್ಸೆ, ಪುಷ್ಕನಾಗಿ ಶ್ರೇಷ್ಟ ಹಾಲಾಡಿ, ವೀರಭದ್ರನಾಗಿ ಶರತ್ ನಾಯ್ಕ ಪಡುಕೆರೆ, ಈಶ್ವರನಾಗಿ ರಾಘವೇಂದ್ರ ಬಗ್ವಾಡಿ ಉತ್ತಮವಾದ ಅಭಿನಯ ನೀಡಿದರು.

ಮೈಂದ ದಿವಿದ ಕಾಳಗದಲ್ಲಿ ಮೈಂದನಾಗಿ ಗುರುಪ್ರಸಾದ ಮೊಗವೀರ ಬಿದ್ಕಲ್ ಕಟ್ಟೆ, ದ್ವಿವಿದನಾಗಿ ನಿತಿನ್ ಮೊಗವೀರ ನೆಲ್ಲಿಕಟ್ಟೆ ರಂಗವಾಳಿದರು. ಉತ್ತಮ ಸಮನ್ವಯತೆಯ ಕುಣಿತ, ವೀರ ಕೆಚ್ಚು, ಸಿಡುಕು, ಆಕ್ರೋಶದ ಮೂಲಕವೇ ಪಾತ್ರವನ್ನು ಅತಿಕ್ರಮಿಸಿಕೊಂಡರು. ಕೃಷ್ಣನಾಗಿ ರಂಗಕ್ಕೆ ಚುರುಕು ನೀಡಿದ್ದು ಸಮೃದ್ಧಿ ಕೋಟೇಶ್ವರ. ಜನಪ್ರಿಯ ಪದ್ಯದ ಮೂಲಕವೇ ಮುದ್ದಾದ ಹೆಜ್ಜೆಗಳ ಮೂಲಕ ಪ್ರೇಕ್ಷಕರ ಕರತಾಡನ ಗಳಿಸಿದರು. ಸಿಕ್ಕಿರುವ ಅವಕಾಶವನ್ನು ಸದ್ಭಳಕೆರ ಮಾಡಿಕೊಂಡರು. ಬಲರಾಮನಾಗಿ ಮಂಜುನಾಥ ಮತ್ಯಾಡಿ, ಸಿಂಹಮುಖಿಯಾಗಿ ವಿನಯ ಹಟ್ಡಿಯಂಗಡಿ, ದೂತನಾಗಿ ಕುಶಲ ಕುಂದರ್ ಕೆದೂರು, ಗರುಡನಾಗಿ ಕೃಷ್ಣ ಮೊಗವೀರ ಬಿದ್ಕಲ್ಕಟ್ಟೆ ಸಾಂಘಿಕವಾಗಿ ಪಾತ್ರಗಳನ್ನು ಸಚೇತನಗೊಳಿಸಿದರು. ಪುಟಾಣಿ ದೀಪ್ತಾಳ ಬಾಲಗೋಪಾಲ ವೇಷ ಅತ್ಯುತ್ತಮ ನಾಂದಿ ಒದಗಿಸಿತು. ಹವ್ಯಾಸಿ ಕಲಾವಿದರಾದರೂ ಕೂಡಾ ಪಾತ್ರಕ್ಕೆ ಗರಿಷ್ಠ ನ್ಯಾಯ ಒದಗಿಸಿದ್ದು ಗಮನೀಯ.

ಭಾಗವತರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ತಮ್ಮ ಕಂಠಸಿರಿಯ ಮೂಲಕ ಪ್ರೇಕ್ಷಕರ ಮನಸೊರೆಗೊಂಡರು. ಹಲಸಿನಹಳ್ಳಿಯವರ ಪ್ರಸಂಗದ ಪದ್ಯಗಳು ಮೊಗೆಬೆಟ್ಟು ಅವರ ಕಂಠಸಿರಿಯಲ್ಲಿ ಮಾಗಿವೆ. ಕಂಠಸ್ಥಾಯಿ ಎನಿಸಿಕೊಂಡ ಪದ್ಯಗಳು ಮತ್ತೆ ನಿತ್ಯನೂತನ ಎನಿಸಿದವು.
ಮದ್ದಳೆಯಲ್ಲಿ ಭರತ್ ಚಂದನ್ ಕೋಟೇಶ್ವರ ಮದ್ದಳೆಯಲ್ಲಿ ಮೋಡಿ ಮಾಡಿದರು. ಚಂಡೆಯಲ್ಲಿ ಸುಜನ್ ಹಾಲಾಡಿ ಅದ್ಬುತ ಸಾಥ್ ನೀಡಿದರು. ಚಂಡೆಯ ಪೆಟ್ಟುಗಳು ಪ್ರೇಕ್ಷಕ ವರ್ಗಕ್ಕೆ ಜೋಷ್ ನೀಡಿತು. ಚಂಡೆಯ ಕೋಲುಗಳ ಚುರುಕುತನ, ಮದ್ದಳೆಯ ಸಾಥ್ ಹಿಮ್ಮೇಳವನ್ನು ವೈಭವೀಕರಿಸಿತು.

ಬೆಳಕು ಉತ್ತಮವಾಗಿದ್ದರೂ ಧ್ವನಿ ನಿರ್ವಹಣೆಯಲ್ಲಿ ತುಸು ಅಡಚಣೆಯಾಯಿತು ಬಿಟ್ಟರೆ ಮತ್ತೆ ಇಡೀ ಕಾರ್ಯಕ್ರಮ ಪ್ರಬುದ್ಧ ಪ್ರಸ್ತುತಿ. ಸುಧೀರ್ ನಾಯ್ಕ್, ಮಂಕಿ ಮತ್ತು ಪ್ರವೀಣ ಮೊಗವೀರ ಬಾಳಿಕೆರೆ ಅವರ ಸಂಯೋಜನೆ, ದೇವಸ್ಥಾನದ ಆಡಳಿತ ಮಂಡಳಿಯ ಪೂರ್ಣ ಸಹಕಾರದಿಂದ ಅತ್ಯುತ್ತಮ ರಂಗಪ್ರಯೋಗವೊಂದು ಸಾಕ್ಷತ್ಕಾತರಗೊಂಡಿತು.
-ನಾ ವಂಡ್ಸೆ

ಮಹಿಷಾಸುರಮರ್ದಿನಿ ದೇವಸ್ಥಾನದ ವತಿಯಿಂದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಗೌರವಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!