spot_img
Friday, March 21, 2025
spot_img

ಆರ್‌ಸಿಬಿ  ತಂಡಕ್ಕೆ ಎಂತಹ ದುರ್ಗತಿ ಬಂತು  ನೋಡಿ……

ಎಸ್. ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ

‘ ಕಪ್ ನಮ್ದೆ ‘ ಎಂದು 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್  ಟೂರ್ನಿಯನ್ನು ಆಡಲು ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಈ ಬಾರಿಯೂ ಅದೇ ರಾಗ , ಅದೇ ಹಾಡು. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಆರ್ ಸಿಬಿ ಗೆದ್ದದ್ದು ಬರೀ ಒಂದು ಪಂದ್ಯವನ್ನು ಮಾತ್ರ. ಇದು ಐಪಿಎಲ್ ಆವೖತ್ತಿಯಲ್ಲಿ ಆರ್ ಸಿಬಿ ತಂಡದ ಅತ್ಯಂತ ಕಳಪೆ ಪ್ರದರ್ಶನ ಎಂದೇ ಹೇಳಬೇಕು.  ಐಪಿಎಲ್‌ ಆರಂಭವಾದ ಕಳೆದ ಹದಿನಾರು ವರ್ಷಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಮಹತ್ತರವಾದ ಬದಲಾವಣೆಗಳು ಆಗಿಹೋದರೂ ಕೂಡ ಆರ್ ಸಿಬಿ ತಂಡದ ಪರಿಸ್ಥಿತಿ ಮಾತ್ರ ಬದಲಾಗಾಲೇ ಇಲ್ಲ.

ಆರ್ ಸಿಬಿ  ತಂಡವನ್ನು ಕ್ರಿಕೆಟ್ ಜಗತ್ತಿನ ಹಲವು ದಿಗ್ಗಜ ಆಟಗಾರರು ಪ್ರತಿನಿಧಿಸಿದ್ದಾರೆ. ಅವರಿಂದಾಗಿಯೇ ತಂಡದ ಜನಪ್ರಿಯತೆ ಇತರ ತಂಡಗಳಿಗಿಂತ ತುಂಬಾ ಹೆಚ್ಚಾಗಿದೆ. ಆದರೆ , ಅಭಿಮಾನಿಗಳ ನೆಚ್ಚಿನ ತಂಡ ಆರ್ ಸಿಬಿಗೆ  ಐಪಿಎಲ್‌ ಪ್ರಶಸ್ತಿ ಮಾತ್ರ ಇನ್ನೂ ಕೂಡ ಮರೀಚಿಕೆಯಾಗಿದೆ. ಪ್ರತಿ ಬಾರಿಯೂ ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆ ಮಾಡುವ ಅಭಿಮಾನಿಗಳು ಆರ್‌ಸಿಬಿಯನ್ನು ಬೆಂಬಲಿಸುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ತಲಾ ಐದು ಬಾರಿ ಐಪಿಎಲ್‌ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್‌ ಹಾಗೂ  ಚೆನ್ನೈ ಸೂಪರ್ ಕಿಂಗ್ಸ್‌ಗಿಂತಲೂ ಆರ್‌ಸಿಬಿಗೆ ಬೆಂಬಲ ನೀಡುವ  ಅಭಿಮಾನಿಗಳ ದಂಡೇ ದೊಡ್ಡದು.

ಕನ್ನಡಿಗರ ಅತ್ಯಂತ ನೆಚ್ಚಿನ ತಂಡ ಆರ್​ಸಿಬಿ ಐಪಿಎಲ್​ನಲ್ಲಿ ಅತ್ಯಂತ ಜನಪ್ರಿಯ ತಂಡವಾಗಿದೆ. ಅದರ ಭಾವೋದ್ರಿಕ್ತ ಅಭಿಮಾನಿ ಬಳಗ ತಂಡದ ಗುರುತಿಗೆ ಹೆಸರುವಾಸಿಯಾಗಿದೆ. ಆರ್ ಸಿಬಿ ತಂಡವು  ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಇದುವರೆಗೂ ಕಪ್​ ಗೆಲ್ಲದೇ ಇರುವುದು ದುರಾದೃಷ್ಟಕರ. ಅದರಲ್ಲೂ ಈ ಬಾರಿಯ 17ನೇ ಐಪಿಎಲ್‌ ಆವೃತ್ತಿಯಲ್ಲೂ ಆರ್ ಸಿಬಿ ತಂಡ ಅತ್ಯಂತ ಹೀನಾಯವಾಗಿ ಸೋಲುತ್ತಿದ್ದೆ. ಈ ಬಾರಿಯ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನ ನಾವು   ‘ ಹೊಸ ಅಧ್ಯಾಯ ‘ ತೆರೆಯುತ್ತೇವೆ ಎಂದು ಹೇಳಿಕೊಂಡಿದ್ದ ಆರ್​ಸಿಬಿ  ತಂಡದ  ಪ್ಲೇ ಆಫ್​ ಕನಸು ಭಗ್ನಗೊಂಡಿದೆ.

ಗೆಲ್ಲುವ ಸಾಧ್ಯತೆ ಇರುವ ಪಂದ್ಯಗಳನ್ನು ಕೈ ಚೆಲ್ಲಿರುವ  ಆರ್ ಸಿಬಿ ಸದ್ಯ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಮಾಜಿ ನಾಯಕ ವಿರಾಟ್​ ಕೊಹ್ಲಿಯನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಪಂದ್ಯಾಟದಲ್ಲಿ  ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ . ಪ್ರತಿ ಪಂದ್ಯದಲ್ಲೂ ವಿರಾಟ್  ಕೊಹ್ಲಿ ಏಕಾಂಗಿ ಹೋರಾಟ ನೀಡುತ್ತಿದ್ದಾರೆ. ಸೋಲಿನ ಪ್ರಪಾತಕ್ಕೆ ಕುಸಿದಿರುವ ಆರ್ ಸಿಬಿ ತಂಡದ ಪ್ರದರ್ಶನ ಕಂಡು ಈಗಾಗಲೇ ಅಭಿಮಾನಿಗಳು ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2024ರ ಐಪಿಎಲ್  ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರಂಭದಲ್ಲೇ  ಸೋತು ಎಡವಿದ ಆರ್​ಸಿಬಿ, ಬಳಿಕ  ಒಂದು ಪಂದ್ಯವನ್ನು ಬಿಟ್ಟರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ. ಇದು 17 ವರ್ಷಗಳಿಂದ ತಮ್ಮ ನೆಚ್ಚಿನ ತಂಡ ಕಪ್​ ಗೆಲ್ಲಲಿ ಎಂದು ಆಶಿಸಿ, ಭರವಸೆಯ ಮೂಟೆ ಹೊತ್ತು ಕ್ರೀಡಾಂಗಣಕ್ಕೆ ಬರುತ್ತಿರುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರೀ ನೋವು ತಂದಿದೆ. ಕಳೆದ 16 ವರ್ಷಗಳಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಪ್ರೋತ್ಸಾಹಿಸಿ,  ಕಪ್ ಗೆಲ್ಲದೆ ನಿರಾಸೆ ಮೂಡಿಸಿದರೂ ಅದೇ ಅಭಿಮಾನ, ಪ್ರೀತಿ, ನಂಬಿಕೆಗೆ ಅಭಿಮಾನಿಗಳಿಂದ ಯಾವತ್ತೂ ಕೊರತೆಯಾಗಿಲ್ಲ.

ಪ್ರತಿ ಬಾರಿಯಂತೆ ಈ ಬಾರಿಯೂ ಆರ್ ಸಿಬಿ  ತಂಡ ನಿರಾಸೆಯೊಂದಿಗೆ ಟೂರ್ನಿಯಿಂದ ಹೊರಬೀಳುತ್ತಿದೆ. ಕಳೆದೆರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ಆರ್​ಸಿಬಿ, ಈ ಬಾರಿ ಲೀಗ್​ ಹಂತದಲ್ಲೇ ತನ್ನ ಪಯಣ ಮುಗಿಸುತ್ತಿದೆ.. ಪ್ರತಿ ಸೀಸನ್‌ನಂತೆ ಈ ಸೀಸನ್​ನಲ್ಲೂ ಆರ್‌ಸಿಬಿ ತನ್ನ ದುರ್ಬಲ ಬೌಲಿಂಗ್​ನಿಂದಾಗಿ ಲೀಗ್​ನಿಂದ ಹೊರಬೀಳಬೇಕಾಯಿತು. ಹರಾಜಿನಲ್ಲಿ ಉತ್ತಮ ವೇಗಿಗಳನ್ನು ಖರೀದಿಸಲು ಮುಂದಾಗದ ಆರ್​ಸಿಬಿ ಮ್ಯಾನೇಜ್‌ಮೆಂಟ್ ಇದೀಗ ತನ್ನ ತಪ್ಪಿಗೆ ಭಾರೀ ಬೆಲೆ ತೆರಬೇಕಾಯಿತು. ಆರ್​ಸಿಬಿ ಬೌಲಿಂಗ್ ವಿಭಾಗವನ್ನು ಇತರ ತಂಡಗಳು  ಲೇವಡಿ ಮಾಡುವಂತಾಗಿದೆ. ಅಷ್ಟರ ಮಟ್ಟಿಗೆ ಆರ್ ಸಿಬಿ ತಂಡದ ಬೌಲಿಂಗ್ ವಿಭಾಗ ವೀಕ್ ಆಗಿದೆ.

ಆರ್​ಸಿಬಿ ತಂಡದಲ್ಲಿ 10 ವಿದೇಶಿ ಆಟಗಾರು ಅಲ್ಲದೆ ತಂಡದಲ್ಲಿರುವ ಸಂಪೂರ್ಣ ಕೋಚಿಂಗ್ ಸಿಬ್ಬಂದಿಗಳು ಕೂಡ ವಿದೇಶಿಯರಾಗಿದ್ದಾರೆ. ಇದು ಮಾತ್ರವಲ್ಲದೆ ಪ್ರತಿಭಾನ್ವಿತ ಆಟಗಾರರು ತಂಡದಲ್ಲಿದ್ದರೂ ಕೂಡ ಕಳೆದ 2 ವರ್ಷಗಳಿಂದ ಇವರು ಬೆಂಚ್​ ಮೇಲೆಯೇ ಕುಳಿತಿದ್ದಾರೆ. ಇದುವೇ ಆರ್ ಸಿಬಿ  ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಕ್ರಿಕೆಟ್ ದಿಗ್ಗಜರ​ ಅಭಿಪ್ರಾಯವಾಗಿದೆ. ತಂಡದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಇದು ಸಹಜವಾಗಿ ಆರ್‌ಸಿಬಿ ತಂಡವನ್ನು ಸೋಲಿನ ಸುಳಿಗೆ ತಳ್ಳಿದೆ. 2024ರ ಐಪಿಎಲ್ ಟೂರ್ನಿ ಗೆದ್ದೇ ಗೆಲ್ಲುತ್ತೇವೆ ಎಂದು ಪಣತೊಟ್ಟು ಅಖಾಡಕ್ಕೆ ಆರ್ ಸಿಬಿ ಬಂದಿತ್ತು. ಆದರೆ, ತಂಡದಲ್ಲಿ ಸಂಘಟನಾತ್ಮಕ ಹೋರಾಟ ಕಂಡು ಬಾರದೆ  ಆರ್ ಸಿಬಿ ಹೀನಾಯವಾಗಿ ಸೋಲುತ್ತಿರುವುದು ದುರದೃಷ್ಟಕರ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!