Saturday, October 12, 2024

ಪೊಳ್ಳು ಹಿಂದುತ್ವವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ- ಬಿ.ವೈ.ರಾಘವೇಂದ್ರ ತಿರುಗೇಟು

ಬೈಂದೂರು: ಪಕ್ಷದ ಚೌಕಟ್ಟಿನಲ್ಲಿ ಪಕ್ಷದ ಅಭ್ಯರ್ಥಿ ಘೋಷಣೆ ಆದ ನಂತರದಲ್ಲಿ ಅದೇ ಅಧಿಕೃತವಾಗಲಿದೆ. ಹಿಂದುತ್ವವಾದ ವಿಚಾರದಲ್ಲಿ ನಮ್ಮ ಮೈಯಲ್ಲಿ ಹರಿಯುತ್ತಿರುವ ಒಂದೊಂದು ಹನಿ ರಕ್ತವೂ ಕೂಡ ಹಿಂದುವೇ ಆಗಿದೆ. ದೇಶದಲ್ಲಿರುವ ಎಲ್ಲರೂ ಹಿಂದುಗಳೇ ಆಗಿದ್ದಾರೆ. ಪೊಳ್ಳು ಹಿಂದುತ್ವ ವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗುಡುಗಿದರು.

ನಾಗೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ವೈ.ರಾಘವೇಂದ್ರ ಎಂಬುದನ್ನು ಪಕ್ಷವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಅವರ ಪಕ್ಕದಲ್ಲೇ ನನ್ನನ್ನು ನಿಲ್ಲಿಸಿಕೊಂಡು ಪ್ರಚಾರವನ್ನು ಮಾಡಿ, ರಾಘವೇಂದ್ರ ಅವರಿಗೆ ಹಾರೈಸಿ, ಆಶೀರ್ವಾದ ಮಾಡಿದ್ದಾರೆ. ಇಡೀ ಬಿಜೆಪಿ, ಪರಿವಾರ ನಮ್ಮ ಜತೆಗೆ ಇದೆ ಎಂದರು.

ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶಿಸುವವರು ನಾವಲ್ಲ:
ದೇಶದಲ್ಲಿರುವ ಎಲ್ಲರೂ ಹಿಂದೂ ವಾದಿಗಳು. ನಾನು ಮಾತೃವಲ್ಲ, ಬಿ.ಎಸ್. ಯಡಿಯೂರಪ್ಪನವರು ಅಯೋಧ್ಯೆಯ ರಾಮಜನ್ಮಭೂಮಿ ಆಂದೋಲನದ ಕರಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡು, ಆರೆಸ್ಸೆಸ್ ಪ್ರಚಾರಕರಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಹೋರಾಟ ಇರಬಹುದು, ಮುರಳಿ ಮನೋಹರ್ ಜೋಶಿಯವರು ಕರೆಕೊಟ್ಟ ಸಂದರ್ಭದಲ್ಲಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಉಗ್ರಗಾಮಿಗಳ ದಾಳಿಯ ಮಧ್ಯದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಭಾಗವಹಿಸಿದ್ದರು. ಹೀಗಾಗಿ ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶನ ಮಾಡುವ ಅವಶ್ಯಕತೆ ನಮಗಿಲ್ಲ ಎಂದರು.

ಬಿ.ಎಸ್.ವೈ ಯೋಜನೆ ಬಲ:
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಂದಿರುವ ಒಂದೊಂದು ಯೋಜನೆಯನ್ನು ಜನ ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಗೋ ಹತ್ಯೆ ನಿಷೇಧಕ್ಕೆ ಬಿಗಿ ಕಾನೂನು ತಂದಿದ್ದಾರೆ. ಭಾಗ್ಯ ಲಕ್ಷ್ಮೀ ಯೋಜನೆ ಮೂಲಕ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವ ದೊಡ್ಡ ಪ್ರಯತ್ನ ಮಾಡಿದ್ದಾರೆ. ಕನಕದಾಸ ಜಯಂತಿ, ವಾಲ್ಮೀಕಿ ಜಯಂತಿ ಸೇರಿ ಅನೇಕ ಮಹನೀಯರ ಜಯಂತಿ, ಎಲ್ಲ ಮಠ ಮಂದಿರಗಳ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಿದ್ದರು. ಚುನಾವಣೆಗಾಗಿ ಹಿಂದುತ್ವ ನಮ್ಮದಲ್ಲ. ವೋಟಿಗಾಗಿ ಹಿಂದುತ್ವ ಬಳಸಿಕೊಳ್ಳುವವರಿಂದ ಪಾಠ ಅಗತ್ಯವಿಲ್ಲ ಎಂದು ಹೇಳಿದರು.

ಎರಡು ವಾರದಲ್ಲಿ ಏನಾಯ್ತು?:
ಯಡಿಯೂರಪ್ಪನವರ ಕುಟುಂಬ ಎಲ್ಲ ಸಮಾಜವನ್ನು ಸಮಾನವಾಗಿ ಕಂಡಿದೆ ಮತ್ತು ಕಾಣುತ್ತಿದೆ ಎಂದು ಕಳೆದ ಎರಡು ವಾರದ ಕೆಳಗೆ ಈಶ್ವರಪ್ಪನವರು ಶಿಕಾರಿಪುರಕ್ಕೆ ಬಂದಿದ್ದಾಗ ಹೇಳಿದ್ದರು. ಐದು ಲಕ್ಷಕ್ಕೂ ಆಧಿಕ ಅಂತರದಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಅವರೇ ಹೇಳಿದ್ದರು.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಅವರೇ ಹಾರೈಸಿದ್ದರು. ಕೇವಲ ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು? ಇದನ್ನೆಲ್ಲವನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಗುರುರಾಜ ಗಂಟಿಹೊಳೆ, ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!