spot_img
Friday, March 27, 2026
spot_img

ʼಗಾಂಧಿ ಆಗುವುದು ಅಷ್ಟು ಸುಲಭವಲ್ಲ ಬಿಡಿʼ

-ಶ್ರೀರಾಜ್‌ ವಕ್ವಾಡಿ

ಹೇಳಿದ್ದೆಲ್ಲಾ ಕೇಳುವುದಕ್ಕೆ ಸರ್ದಾರ್ ಪಟೇಲರು ಗಾಂಧಿಗೆ ಅಧೀನರಾಗಿದ್ದರೇ ?  

ಈ ದೇಶದಲ್ಲಿ ʼಅಹಿಂಸೆʼಯನ್ನೇ  ಗುಂಡು ಹೊಕ್ಕಿತ್ತು.  ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖರಾಗಿ ಕಾಣಿಸಿಕೊಂಡಿದ್ದ ಮಹಾತ್ಮ ಗಾಂಧಿಯ ಮೈಯ ನೆತ್ತರು ದೇಶದ ಮಡಿಲಿಗೆ ಚೆಲ್ಲಿತ್ತು. ಬಾಪೂವಿನೆದೆ ಸಾವಲ್ಲೂ ಸಂಭ್ರಮಿಸಿತ್ತು. ಈ ಕ್ಷಣಕ್ಕೆ ಭವ್ಯ ಭಾರತದ ಮಡಿಲಲ್ಲಿ ಕೆಟ್ಟದ್ದೊಂದು ಬೀಜ ಬಿತ್ತಿತ್ತು ಎನ್ನುವುದು ಈ ದೇಶದ  ದುರಂತಗಳಲ್ಲಿ ಒಂದು. “ಗಾಂಧಿ ನಮ್ಮನ್ನು ಕ್ಷಮಿಸಿ ಬಿಡಿ”. ಗಾಂಧೀಜಿ ಸಾವು ಈ ದೇಶದಲ್ಲಿ ಸಿದ್ಧಾಂತಗಳಲ್ಲಿ ಒಡೆದು ಹೋಗಿರುವ ದೇಶದ ಮತ್ತೊಂದು ಮುಖವನ್ನು ತೆರೆದಿಟ್ಟಿತ್ತು. ಚಿಂತನಾಶೀಲ ಹಾಗೂ ಕ್ರೀಯಾಶೀಲವಾದ ಬಾಳ್ವೆಯೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ದೇಶದ ಉದ್ದಗಲಕ್ಕೂ ನಡೆದಾಡಿ ಉಪವಾಸಗಳನ್ನು, ಸತ್ಯಾಗ್ರಹವನ್ನು ಮಾಡಿದ ಗಾಂಧಿ ವಿರುದ್ಧವೂ ಕೂಡ ಸಿದ್ಧಾಂತದ ಆಧಾರದಲ್ಲಿ ದೇಶ ಅಳೆಯುವುದಕ್ಕೆ ಆರಂಭಿಸಿತ್ತು.‌ ಇತ್ತೀಚೆಗಿನ ವರ್ಷಗಳಲ್ಲಂತೂ ಅದು ತುಸು ಹೆಚ್ಚು ಸ್ಥಾನವನ್ನೇ ಪಡೆದುಕೊಂಡಿದೆ. ಗಾಂಧಿ ಒಬ್ಬರೇ ಸ್ವಾತಂತ್ರ್ಯ ತಂದುಕೊಟ್ಟರು ಎಂಬುವುದಲ್ಲ, ಸ್ವಾತಂತ್ರ್ಯಕ್ಕಾಗಿ ಅನೇಕರು ಶ್ರಮಿಸಿದ್ದಾರೆ. ಗಾಂಧಿ ನೇತೃತ್ವವನ್ನು ಗೌರವಿಸಲೇ ಬೇಕಲ್ಲವೇ ?

ಸಾಮಾಜಿಕ ಮಾಧ್ಯಮಗಳು ಈ ದೇಶದ ಮತ್ತೊಂದು ದುರಂತ. ಸಾಮಾಜಿಕ ಜಾಲತಾಣಗಳ ಅಗತ್ಯದ ಬಗ್ಗೆ ಆಕ್ಷೇಪ ಮಾಡುವುದಲ್ಲ. ಆದರೇ ಅದು ಇಲ್ಲಿ ಬಳಕೆಯಾಗಿರುವುದರ ಬಗೆಗಿನ ಆಕ್ಷೇಪ ಇದು. ಈಚೆಗೆ “ನಾನು ನಿಮಗೆ ಕಲಿಸಲು ಹೊಸದೇನೂ ಇಲ್ಲ, ಸತ್ಯ ಮತ್ತು ಅಹಿಂಸೆಯು ಬೆಟ್ಟದಷ್ಟು ಹಳೆಯದು.” ಎಂದು ಸದಾ ಹೇಳುತ್ತಿದ್ದ ಮಹಾತ್ಮ ಗಾಂಧೀಜಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ದೂರುಗಳು ಬಂದಿದ್ದನ್ನು ಈ ದೇಶ ಕಂಡಿದೆ. ಸ್ವಾತಂತ್ರ್ಯಕ್ಕೆ ಸುಭಾಷ್ ಚಂದ್ರ ಬೋಸ್ ಕಾರಣರೇ ಹೊರತು ಗಾಂಧಿಯಲ್ಲ ಎಂದು ಕೆಲವರು ದೂರುತ್ತಾರೆ. ಕೆಲವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ದೇಶದ ಮೊದಲ ಪ್ರಧಾನಿಯಾಗವುದನ್ನು ತಡೆದವರು ಗಾಂಧಿ ಎಂದು ಭಿನ್ನ ಮಾತಾಡುತ್ತಾರೆ. ನೆಹರೂ ಪರವಾಗಿ ಇದ್ದು ಸರ್ದಾರ್ ಪಟೇಲ್ ರನ್ನು ಭಾರತದ ಮೊದಲ ಪ್ರಧಾನಿಯಾಗದಂತೆ ಮಾಡಿದ್ದೇ ಗಾಂಧೀಜಿ ಎಂದು ಹೇಳುತ್ತಾರೆ. ನೆಹರೂ ಅವರಿಗಿಂತ ಸರ್ದಾರ್ ಪಟೇಲ್ ಸಮರ್ಥರಾಗಿದ್ದರು ಎಂಬ ವಾದವೂ ಇದೆ. ಇದೇ ಕಾರಣಕ್ಕೆ ಸರ್ಧಾರ್‌ ವಲ್ಲಭಬಾಯಿ ಪಟೇಲ್‌ ಅವರ ಪ್ರತಿಮೆ ಗುಜರಾತ್‌ ನಲ್ಲಿ ತಲೆ ಎತ್ತಿ ನಿಂತಿಲ್ಲವೇ ? ಅಂದು ಗಾಂಧೀಜಿಯವರ ನಿರ್ಧಾರ ಸರಿಯೇ ಆಗಿತ್ತು ಎಂದು ಲೋಕವನ್ನು ತಿದ್ದುವ ಕೆಲಸವಿದಲ್ಲ. ಆದರೇ, ಅಂದು ನಡೆದದ್ದನ್ನೂ ಕೂಡ ಗಮನಿಸಬೇಕಾದದ್ದು ಈಗಿನ ತುರ್ತು.  ಗಾಂಧಿ ಸೂಚಿಸಿದಂತೆ ಸರ್ದಾರ್ ಪಟೇಲ್ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿಲ್ಲವೇ ? ಪಟೇಲ್ ಯಾಕೆ ಹೀಗೆ ಮಾಡಿದರು? ಸರ್ದಾರ್ ಪಟೇಲ್ ರಾಷ್ಟ್ರೀಯ ಹಿತಾಸಕ್ತಿಗಾಗಿ ರಾಜಿ ಮಾಡಿಕೊಂಡರೆ ? ಗಾಂಧಿ ಹೇಳಿದ್ದೆಲ್ಲವನ್ನು ಅನುಸರಿಸುವಷ್ಟು ಸರ್ದಾರ್ ಪಟೇಲ್ ಅವರು ಗಾಂಧಿಗೆ ಅಧೀನರಾಗಿದ್ದರೇ ? ಇಲ್ಲ ಎನ್ನುವವರು ಪಟೇಲರು ಗಾಂಧಿಯವರ ಸೂಚನೆಯನ್ನು ಒಪ್ಪಿದ್ದಕ್ಕಾಗಿ, ಆ ಸೂಚನೆಯು ಸರಿಯಾಗಿತ್ತು ಎಂದು ಯಾಕೆ ಹೇಳುವುದಿಲ್ಲ ? ಗಾಂಧಿ ಮುಸ್ಲಿಂ ಜನಾಂಗದ ಪರ ಮತ್ತು ಹಿಂದೂ ವಿರೋಧಿ ಎಂದು ಹಲವರು ದೂರುತ್ತಾರೆ. ಇತ್ಯಾದಿ ಇತ್ಯಾದಿ. ಸಾಮಾಜಿಕ ಜಾಲತಾಣಗಳ ಒಳಹೊಕ್ಕರೆ ಇಂತಹ ಹಲವು ದೂರುಗಳು ಕಾಣಬಹುದಾಗಿದೆ.

ಇಲ್ಲಿ ಹೇಳಲು ಹೊರಟಿರುವ ವಿಷಯಕ್ಕೆ ಬರುವುದಕ್ಕೆ ಯಾಕೆ ಇಷ್ಟೆಲ್ಲಾ ಹೇಳುತ್ತಿರುವುದು ಮತ್ತು ಮುಂದೆ ಹೇಳುವುದಕ್ಕೆ ಹೊರಟಿರುವುದೆಂದು ನಿಮಗೆ ಓದುವಾಗ ತಿಳಿಯುತ್ತದೆ. ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆಲ್ಲಾ ಗಾಂಧಿವಾದಿಗಳು ಎಂದು ಕೂಡ ಈ ಸಮಾಜ ಕರೆದಿದೆ. ಈ ವಾದ ಈಗ ಬಲು ಜೋರಾಗಿಯೇ ಇದೆ. ಎಲ್ಲಿಯವರೆಗೆ ಅಂದರೇ, ಗಾಂಧೀಜಿ ಬಗ್ಗೆ ಮಾತಾಡಿದರಷ್ಟೇ ಸಾಕು, ಈತ ಹಿಂದೂ ಧರ್ಮದ ವಿರೋಧಿ ಎಂಬಷ್ಟರ ಮಟ್ಟಿಗೆ. ಆದರೇ, ರಾಷ್ಟ್ರಪಿತ ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರು ಆಗಾಗ್ಗೆ ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದರು. ಕೇವಲ ಹಿಂದೂ ಅಲ್ಲ, ಹೆಮ್ಮೆಯ ಸನಾತನ ಹಿಂದೂ ಎಂದು ಕೂಡ ಹೇಳಿಕೊಳ್ಳುತ್ತಿದ್ದರು. ಅವರ ಆತ್ಮ, ಆಲೋಚನೆಗಳು ಮತ್ತು ಕ್ರಿಯೆಯಲ್ಲಿ, ಅವರು ಸನಾತನ ಹಿಂದೂ ಆಗಿದ್ದರು. ಅವರು ಸನಾತನ ಹಿಂದೂ ಧರ್ಮವನ್ನು ತಮ್ಮ ಜೀವನಕ್ಕೆ ಸ್ಫೂರ್ತಿಯಾಗಿ ಕಂಡುಕೊಂಡಿದ್ದರು.

ಗುಜರಾತ್‌ ನ ಪೋರಬಂದರ್‌ ನಲ್ಲಿ ಸಾಂಪ್ರದಾಯಿಕ ಹಿಂದೂ ಮೇಲ್ಜಾತಿ ಕುಟುಂಬದಲ್ಲಿ ಜನಿಸಿದ ಅವರು ಸನಾತನ ಸಂಸ್ಕೃತಿಯಲ್ಲಿ ಬೆಳೆದರು ಮತ್ತು ಸನಾತನ ಹಿಂದೂ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು ಮತ್ತು ಅವರು ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮದ ಪ್ರಭಾವದಿಂದಲೇ ಜೀವಿಸಿದರೂ ಕೂಡ. ಒಮ್ಮೆ ʼಹರಿಜನʼ ಪತ್ರಿಕೆಯಲ್ಲಿನ ಅವರ ಲೇಖನದಲ್ಲಿ, ಸನಾತನವು ಈ ಭರತವರ್ಷದ ಭೂಮಿಯಲ್ಲಿ ವಿಕಸನಗೊಂಡ ಮನುಕುಲವನ್ನು ವ್ಯಾಪಿಸಿರುವ, ಕಾಲಾತೀತ ಮತ್ತು ಸಾರ್ವತ್ರಿಕ ಮೌಲ್ಯಗಳ ಸಮೂಹವಾಗಿದೆ ಎಂದು ಅವರು ಹೇಳುತ್ತಾರೆ. ಅವರಿಗೆ ಹಿಂದೂ ಧರ್ಮ ಮತ್ತು ಸನಾತನ ಎರಡೂ ಕೂಡ ಒಂದೇ ಆಗಿತ್ತು.

ಸನಾತನ ಹಿಂದೂ ಧರ್ಮವು ಸಂಕುಚಿತ ಗಡಿಗಳಲ್ಲಿನ ವ್ಯಾಪ್ತಿಯೊಳಗಿನ ಧರ್ಮವೆಂದು ಅವರಿಗೆ ಕಾಣಿಸಲೇ ಇಲ್ಲ. ಅವರಿಗೆ ಅದು ಮಾನವ ಕುಲಕೋಟಿಯನ್ನು ಸ್ವೀಕರಿಸುವ ತತ್ವಶಾಸ್ತ್ರವಾಗಿತ್ತು. ಸನಾತನ ಹಿಂದೂ ಧರ್ಮವನ್ನು ಮಹಾನ್ ಸಾಗರ ಎಂದು ಗಾಂಧೀಜಿ ಕರೆದಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಸನಾತನ ಧರ್ಮವು ವಿಶಾಲವಾಗಿದೆ, ಸಮಗ್ರವಾಗಿದೆ ಮತ್ತು ಎಲ್ಲವನ್ನೂ ಒಳಗೊಂಡಿದೆ. ಇದೊಂದು ಧರ್ಮವಲ್ಲ, ಇದೊಂದು ಜೀವನ ವಿಧಾನ. ಇದು ಮಾನವಕುಲ. ʼಹರಿಜನʼ ಪತ್ರಿಕೆಯಲ್ಲಿನ ತನ್ನ ಪ್ರಸಿದ್ಧ ಲೇಖನವೊಂದರಲ್ಲಿ ಸನಾತನ ಹಿಂದೂ ಧರ್ಮವು ಜಗತ್ತಿನ ಅತ್ಯಂತ ಸಹಿಷ್ಣು ಧರ್ಮವಾಗಿದೆ ಎಂದು ಅವರು ಬರೆಯುತ್ತಾರೆ. “ಇದು ಕ್ರಿಶ್ಚಿಯನ್ನರಿಗೆ, ಯಹೂದಿಗಳಿಗೆ ಮತ್ತು ಪಾರ್ಸಿಗಳಿಗೆ, ಎಲ್ಲರಿಗೂ ಆಶ್ರಯ ನೀಡಿದೆ. ನಾನು ಈ ಸನಾತನ ಹಿಂದೂ ಧರ್ಮಕ್ಕೆ ಸೇರಿದವನು ಎಂದು ಹೆಮ್ಮೆಪಡುತ್ತೇನೆ. ಸನಾತನ ಧರ್ಮ ಎಲ್ಲವನ್ನೂ ಒಳಗೊಳ್ಳುವ ಮತ್ತು ಸಹಿಷ್ಣುತೆಯನ್ನು ಪ್ರತಿನಿಧಿಸುತ್ತದೆʼ ಎಂದು ಅವರು ಬರೆದಿದ್ದರು ಎನ್ನುವುದು ಇಲ್ಲಿ ಗಮನಾರ್ಹ ವಿಚಾರ.

ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಂತಹ ದುಷ್ಪರಿಣಾಮಗಳನ್ನು ಸುಧಾರಿಸಲು ಬಯಸಿದ್ದರು, ಆದರೆ ಈ ಸುಧಾರಣೆಗಳನ್ನು ಸನಾತನದ ಮೂಲ ಮೌಲ್ಯಗಳನ್ನು ತ್ಯಜಿಸದೆ ಒಳಗಿನಿಂದ ಕೈಗೊಳ್ಳಬೇಕು. ಈ ಸಮಸ್ಯೆಗಳು ಹಿಂದೂ ಧರ್ಮದ ಮೂಲ ಮೌಲ್ಯಗಳಿಂದ ವಿಚಲನಗಳಾಗಿವೆ ಎಂದು ಅವರು ನಂಬಿದ್ದರು. ಹಿಂದೂ ಸಮುದಾಯದೊಳಗಿನ ಈ ಆಚರಣೆಗಳನ್ನು ಸುಧಾರಿಸಲು ಅವರು ಅವಿರತವಾಗಿ ಶ್ರಮಿಸಿದರು. ಮತ್ತೊಂದು ಕುತೂಹಲವಾದ ವಿಚಾರ ಏನೆಂದರೇ, ಗಾಂಧೀಜಿ ಭಾರತದಲ್ಲಿರುವವರೆಲ್ಲರನ್ನೂ ಸನಾತನ ಹಿಂದೂಗಳೆಂದೇ ಪರಿಗಣಿಸಿದ್ದರು.

ಅವರಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಅನುಸರಿಸುವುದೇ ಜೀವನದ ಉದ್ದೇಶವಾಗಿತ್ತು. ಬೇರೆ ಯಾವುದೇ ಪುಸ್ತಕ ಅಥವಾ ಗ್ರಂಥಗಳು ಗಾಂಧಿಯವರ ಮೇಲೆ ಪ್ರಭಾವ ಬೀರಲಿಲ್ಲ, ಅವರ ಬದುಕನ್ನು ರೂಪಿಸಲಿಲ್ಲ ಮತ್ತು ಅವರ ಜೀವನವನ್ನು ಭಗವದ್ಗೀತೆಯಂತೆ ಗಾಢವಾಗಿ, ಸೂಕ್ಷ್ಮವಾಗಿ ಮತ್ತು ಶಾಶ್ವತವಾಗಿ ಪರಿವರ್ತಿಸಲಿಲ್ಲ. ಅವರು ಓದಿದ ಅನೇಕ ಪುಸ್ತಕಗಳಲ್ಲಿ, ʼಗೀತೆʼ ಅವರ ಜೀವನದ ಕರಾಳ ಸಂದರ್ಭದಲ್ಲಿ ಅವರನ್ನು ಹೆಚ್ಚು ಪ್ರಭಾವಿಸಿತ್ತು. ಭಗವದ್ಗೀತೆಯನ್ನು ತನ್ನ “ಶಾಶ್ವತ ತಾಯಿ” (ಎಟರ್ನಲ್‌ ಮದರ್) ಎಂದು ಭಾವಿಸಿದ್ದರು. ʼಗೀತೆʼಯನ್ನು ಮಹಾತ್ಮ ಗಾಂಧಿ ತನ್ನ ಹೆತ್ತ ತಾಯಿಗಿಂತಲೂ ಹೆಚ್ಚು ಗೌರವಿಸುತ್ತಿದ್ದರು.

ʼಗೀತೆʼಯಿಂದ ಗಾಂಧೀಜಿ ತಾನು ಮಹತ್ತರವಾದದ್ದನ್ನು ಕಲಿತಿದ್ದೇನೆ ಎಂದು ಹೆಮ್ಮೆಯಿಂದ, ಗೌರವದಿಂದ ಹೇಳಿಕೊಳ್ಳುತ್ತಾರೆ. ಬದುಕಿನ ಕೌಶಲ್ಯವನ್ನು,  ಸ್ಥಿತಪ್ರಜ್ಞನಾಗಿದ್ದು ಯಶಸ್ಸು ಕಾಣುವ ದಾರಿಯನ್ನು ಮತ್ತು ವೈಫಲ್ಯದಲ್ಲಿ ಮತ್ತೆ ಚೇತರಿಸಿಕೊಳ್ಳುವುದನ್ನು ಮತ್ತೆ ಮರಳಿ ಮುಂದಾಗಿ ಪ್ರಯತ್ನಕ್ಕೆ ಸಜ್ಜಾಗುವುದನ್ನು ಕಲಿಸಿದೆ ಎಂದು ಹೇಳಿಕೊಳ್ಳುತ್ತಾರೆ. ಸತ್ಯವನ್ನು ಅನುಕರಿಸುವ ಅದೇ ಆಲೋಚನೆಯೊಂದಿಗೆ, ಗಾಂಧಿಯವರು ʼಗೀತೆʼಯನ್ನು ಅಕ್ಷರಶಃ ಪಾಲಿಸುವುದರೊಂದಿಗೆ ಬದುಕನ್ನು ರೂಪಿಸಿಕೊಂಡಿದ್ದರು. ʼಗೀತೆʼಯ ಆದರ್ಶಗಳಾದ ಸತ್ಯ, ಅಹಿಂಸೆ (ಅಹಿಂಸೆ), ಬ್ರಹ್ಮಚರ್ಯ (ಬ್ರಹ್ಮಚರ್ಯ)ವನ್ನು ಒಳಗೊಂಡು ಇತರೆ ನಿಯಮಗಳನ್ನು ಸ್ವೀಕರಿಸಿ ತಮ್ಮಲ್ಲಿ ಆಚರಣೆಗೆ ತಂದುಕೊಂಡರೂ ಕೂಡ. ಅವರ ದೈನಂದಿನ ಚಟುವಟಿಕೆಗಳು ಮತ್ತು ದಿನಚರಿ ಕೇವಲ ಸನಾತನ ಮೌಲ್ಯಗಳೇ ಆಗಿತ್ತು. ಅಹಿಂಸೆ ಮತ್ತು ಸತ್ಯಾಗ್ರಹ (ಸತ್ಯಕ್ಕಾಗಿ ಹೋರಾಟ, ಅಹಿಂಸೆಯ ನಡೆ) ಸನಾತನದ ಮೂಲ ಮೌಲ್ಯಗಳು.

ಸನಾತನ ಧರ್ಮ ಧಾರ್ಮಿಕ ಗಡಿಗಳನ್ನು ಮೀರಿದೆ ಮತ್ತು ಸತ್ಯದ ದಾರಿಯಲ್ಲಿ ಜನರನ್ನು ಪ್ರೇರೇಪಿಸುತ್ತದೆ ಎಂದು ಅವರು ನಂಬಿದ್ದರು. ಮಹಾತ್ಮ ಗಾಂಧೀಜಿಯವರಿಗಿಂತ ಸನಾತನ ಧರ್ಮವನ್ನು ಹೆಚ್ಚು ಗೌರವಿಸುವ ಮತ್ತು ಅನುಸರಿಸುವವರು ಇಲ್ಲವೇ ಇಲ್ಲ ಎಂದು ವಾದಿಸುವುದಕ್ಕಾಗಿ ಇಷ್ಟೆಲ್ಲಾ ವಿಚಾರವನ್ನು ನಾನು ಇಲ್ಲಿ ಪ್ರಸ್ತಾಪಿಸಿದ್ದಲ್ಲ ಅಥವಾ ಉಲ್ಲೇಖಿಸಿದ್ದಲ್ಲ. ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಜಗತ್ತನ್ನು, ದೇಶವನ್ನು ಕಾಣಬಯಸಿದವರು. ಅದಕ್ಕಾಗಿಯೇ ಅವರಿಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಇಂದಿಗೂ ಗೌರವವಿದೆ. ʼಸತ್ಯಕ್ಕಿಂತ ದೊಡ್ಡದಾದ ದೇವರು ಇಲ್ಲʼ ಎಂದು ಸದಾ ಗಾಂಧೀಜಿ ಹೇಳುತ್ತಿದ್ದರು. ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಮಾತ್ರ ಎಲ್ಲವನ್ನೂ ಒಳಗೊಳ್ಳುವುದಕ್ಕೆ ಸಾಧ್ಯ ಮತ್ತು ಶಾಶ್ವತವಾಗಿ ಎಲ್ಲರನ್ನೂ ಗೆಲ್ಲುವುದಕ್ಕೆ ಸಾಧ್ಯ ಎಂದು ಅವರು ಹೇಳುತ್ತಿದ್ದರು. ಇಂತಹ ಒಬ್ಬ ಮಹಾತ್ಮನನ್ನು ರಾಜಕೀಯಕ್ಕಾಗಿ ಮುಸ್ಲೀಂ ಪರವಾಗಿದ್ದರು, ಹಿಂದೂ ವಿರೋಧಿ ಎಂದು ಬಣ್ಣಿಸಿತ್ತು/ಇನ್ನೂ ಬಣ್ಣಿಸುತ್ತಲೇ ಇದೆ ಕೂಡ. ಗಾಂಧೀಜಿಯನ್ನು ಜರೆಯುವವರು ಗಾಂಧೀಜಿ ಬದುಕಿನ ಈ ಮುಖವನ್ನು ಖಂಡಿತ ನೋಡಿರುವುದಕ್ಕೆ ಸಾಧ್ಯವಿಲ್ಲ. ನೋಡಿಯೂ ಅದೇ ಭಿನ್ನ ಮಾತಾಡುತ್ತಾರೆಂದರೇ, ಅದು ರಾಜಕೀಯ ದುರುದ್ಧೇಶವೇ ಸರಿ. ʼಗಾಂಧಿ ಆಗುವುದು ಅಷ್ಟು ಸುಲಭವಲ್ಲ ಬಿಡಿʼ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!