Saturday, April 20, 2024

‘ಕಾಂತಾರ’ದಲ್ಲಿ ಅಬ್ಬರಿಸಿದ ಪಂಜುರ್ಲಿ

‘ಕಾಂತಾರ’ ಅಂದ್ರೆ ಕಾಡು, ಕಾಂತಾರ ಕಂಬಳ ನೆನಪಿಸಿಕೊಳ್ಳುವಂತ ಹೆಸರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಂಡ ರಿಷಬ್ ಶೆಟ್ಟಿ ನಟನೆ ನಿರ್ದೇಶನದ ಈ ಚಿತ್ರ ನೋಡಲು ಚಿತ್ರ ಮಂದಿರತ್ತ ದಾಂಗುಡಿ ಇಡುತ್ತಿದ್ದಾರೆ ಅಬಾಲವೃದ್ಧರು. ಅಂತದ್ದೇನು ಬಿಗ್ ಬಜೆಟ್ ಚಿತ್ರವಲ್ಲದಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿಕೊಂಡ ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರಕ್ಕೆ ವೆಚ್ಚ ಮಾಡಿದ್ದು ಕೇವಲ 7 ಕೋಟಿಯಂತೆ. ದೀವಟಿಗೆ ಹಿಡಿದು ಚಿತ್ರದ ನಡು ನಡುವೆ ಅಬ್ಬರಿಸುವ ಪಂಜುರ್ಲಿ ದೈವವನ್ನು ನೋಡುವುದೆ ಒಂದು ವಿಶಿಷ್ಟ ಅನುಭೂತಿ ನಮ್ಮೊಳಗೆ. ಅಬಾ! ಆ ಕ್ಷಣದ ತೀವ್ರತೆಯು ಮೈನರವೇಳಿಸುತ್ತದೆ.

ನಮ್ಮ ಕರಾವಳಿಯ ಸಂಸ್ಕೃತಿಯನ್ನು ವಿಭಿನ್ನ ರೂಪವಾಗಿ ರಜತ ಪರದೆಯ ಮೇಲೆ ಅನಾವರಣಗೊಳಿಸಿರುವ ಪರಿ ಅದ್ಭುತ. ಕೋಣ ಓಡಿಸುವುದಾಗಲಿ, ಯಕ್ಷಗಾನವಿರಲಿ, ಕೋಳಿಪಡೆ, ಶಿಕಾರಿ ಎಲ್ಲವನ್ನು ಹಿತಮಿತವಾಗಿ ದೃಶ್ಯಕ್ಕೆ ಅಳವಡಿಸಿವುದು ಶ್ಲಾಘನೀಯ. ಕೇವಲ ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಈ ಚಿತ್ರ ವಿಶ್ವದೆಡೆ ಯಶಸ್ವಿಯಾಗಿ ಸ್ಯಾಂಡಲ್‌ವುಡ್‌ನತ್ತ ಎಲ್ಲರು ತಿರುಗಿ ನೋಡುವಂತಾಗಿದ್ದು ಪಂಜುರ್ಲಿ ದೈವ ಮಹಿಮೆ ಅಂತ ಹೇಳಬಹುದಾದರೂ, ಶೆಟ್ರು ಟೀಮ್ ಚಿತ್ರ ಗೆಲ್ಲುವಲ್ಲಿ ಶ್ರಮ ಪಟ್ಟಿದೆ ಅನ್ನುದಕ್ಕೆ ಚಿತ್ರವೇ ಸಾಕ್ಷಿ.

ಚಿತ್ರದೂದ್ದಕ್ಕು ಎಲ್ಲಿಯೂ ಬೋರ್ ಎನಿಸದೇ ಫಸ್ಟ್ ಹಾಫ್‌ನಿಂದ ಸೆಕೆಂಡ್ ಹಾಫ್ ತನಕವು ಹಾಸ್ಯದ ಪಂಚ್ ಮೂಲಕ ನಮ್ಮ ವಾಸ್ತವ ಜೀವನದಲ್ಲಿ ಪವಾಡ ರೂಪವಾಗಿ ನಡೆಯುವ ಘಟನೆಗಳು ನಮ್ಮ ಎದುರಿನಲ್ಲಿ ನಡೆಯುತ್ತವೆ ಅನ್ನುವಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಭಾವನಾತ್ಮಕವಾಗಿ ಕನೆಕ್ವೆಡ್. ಮರದ ಮೇಲೆ ಅಟ್ಟಣೆಗೆ ಹಾಕಿ ಅದೇ ನನ್ನ ಕೈಲಾಸವೆನ್ನುವ ನಾಯಕ ಶಿವ (ರಿಷಬ್) ಆತನಿಗೆ ನಾಯಕಿಯಾಗಿ ಲೀಲಾ (ಸಪ್ತಮಿ ಗೌಡ) ಅಭಿನಯದ ಓಟಕ್ಕೆ ಗಾಲಿಯಾಗಿದ್ದಾಳೆ. ಇದು ಬರೀ ಸಿನಿಮಾವಾಗದೇ ಪ್ರೇಕ್ಷಕರಿಗೆ ಒಂದು ರೀತಿಯಲ್ಲಿ ಎಮೋಶನ್ ಟಚ್ ನೀಡುತ್ತದೆ. ಅಂದ್ರೆ ಆಧ್ಯಾತ್ಮಿಕವಾಗಿ ಕರ ಜೋಡಿಸುವಂತೆ ಭಕ್ತಿಯ ಭಾವನೆ ಮೂಡಿಸುತ್ತೆ.
ಭೂತ ದೈವ ಎಷ್ಟು ನಿಜ. ಅದರ ನೇಮನಿಷ್ಠೆ, ಶಕ್ತಿ ಅದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಕತೆ ಕಟ್ಟಿ ಕೊಟ್ಟ ರಿಷಬ್‌ರವರ ಕಲ್ಪನಾಶಕ್ತಿ ಮೆಚ್ಚುವಂತದ್ದು, ಹಾಗೇ ತುಂಬಾ ಸೂಕ್ಷ್ಮತೆಯಿಂದ ಆಚಾರ-ವಿಚಾರಕ್ಕೆ ವಿವಾದಾತ್ಮಕವಾಗಿ ಅಸ್ಪದ ನೀಡದೆ ದೈವ ದೇವರ ಬಗ್ಗೆ ಜನರು ಅರ್ಥ ಮಾಡಿಸಿಕೊಳ್ಳುವಂತೆ ಚಿತ್ರೀಕರಿಸಿದ ರಿಷಬ್ ನವರ ತಂತ್ರಜ್ಞಾನವನ್ನು ಅಭಿನಂದಿಸಲೇಬೇಕು. ಇಲ್ಲಿ ಸಂಘರ್ಷದ ಜೊತೆಯಲ್ಲಿ ಕೋಲ ಕಟ್ಟುವ, ಕಥೆಯೊಂದಿಗೆ ಪ್ರೇಮಕಥೆಗೂ ಜಾಗವಿದೆ. ವಿಜಯಪ್ರಕಾಶ್ ಹಾಡಿರುವ ’ಸಿಂಗಾರ ಸಿರಿ’ದ ಗೀತೆಗೆ ಪ್ರಮೋದ್ ಮರವಂತೆ ಸಾಹಿತ್ಯವಿದೆ, ಸುಮಧರವಾಗಿ ಕೇಳಿಬರುವ ಈ ಚಿತ್ರಕ್ಕೆ ಅದ್ಬುತ ಧ್ವನಿಶಕ್ತಿಯನ್ನು ನೀಡಿರುವ ಅಜನೀಶ್ ಲೋಕನಾಥ, ರಕ್ಷಿತ್ ಹಾಗು ರಿಷಬ್‌ರ ಚಿತ್ರಕ್ಕೆ ಖಾಯಂ ಸಂಗೀತ ನಿರ್ದೇಶಕರು.

ಕುಟುಂಬ ಸಮೇತ ಚಿತ್ರ ನೋಡಿ ಶಿಳ್ಳೆ ಚಪ್ಪಾಳೆ ತಟ್ಟಿರುವುದು ನಾ ನೋಡಿದ್ದು ಇದೇ ಮೊದಲ ಸಲ. ಅರವಿಂದ ಕಶ್ಯಪ್‌ನವರ ಸುಂದರ ಛಾಯಾಗ್ರಹಣದಲ್ಲಿ ದೈವದ ದೃಶ್ಯದಲ್ಲಿ ಬೆಂಕಿ ಉಂಡೆನಂತ ಸುತ್ತುವ ಪುಷ್ಪದ ದೃಶ್ಯಕಾವ್ಯದ ನೋಟಕ್ಕೆ ಮನಸೋಲದವರ್‍ಯಾರು? ಬಹುತೇಕ ಕುಂದಾಪ್ರ ಕನ್ನಡದಲ್ಲಿ ಚಿತ್ರೀತಗೊಂಡ ಕಾಂತರದ ಕತೆಯಲ್ಲಿ ಭೂಭಾಗವನ್ನು ಒತ್ತುವರಿ ಮಾಡಿಕೊಂಡ ಕಾಡಂಚಿನ ಜನರನ್ನು ಜನರನ್ನು ಒಕ್ಕಲೆಬ್ಬಿಸುವ ತಂತ್ರ ಊರಿನ ಮುಖ್ಯಸ್ಥನದು. ದೈವ ಆರಾಧಿಸಲ್ಪಡುವ ಕಾಡ ಜನರ ದೈವ ನರ್ತಕನ ಬಳಿ ’ಮುಕ್ಕಾಲು ಘಳಿಗೆ ನುಡಿ ಕೊಡುವ ದೈವ ನುಡಿಯ ನಂತರ ಬಾಕಿಯ ನುಡಿ ತನ್ನದಾಗಿರಬೇಕೆಂಬ ಊರಿನ ನಾಯಕನ ಹಠಕ್ಕೆ ವಿರೋಧ ವ್ಯಕ್ತಪಡಿಸುವ ಪಾತ್ರಿಯನ್ನೆ ಕೊಲೆ ಮಾಡುತ್ತಾನೆ. ಈ ಊರಿನ ನಾಯಕನನ್ನು ಮುಗಿಸುವ ಚಿತ್ರದ ನಾಯಕನ ಮೈ ಮೇಲೆ ಗುಳಿಗ ದೈವದ ಪರಕಾಯ ಪ್ರವೇಶದೊಂದಿಗೆ ಚಿತ್ರ ಸುಖಾಂತಗೊಳ್ಳುತ್ತದೆ. ಶಿವನ ತಾಯಿಯಾಗಿ ಮಾನಸಿ ಶ್ರೀಧರ್, ಹಾಗೆ ಹೊಟ್ಟೆ ತುಂಬಾ ನಗಿಸಲು ನವೀನ್ ಪಡೀಲ್, ಲಚ್ಚು ರಂಜನ್, ರಾಂಪ್ರಕಾಶ್, ರಘು ಪಾಂಡೇಶ್ವರ ಜೊತೆಯಲ್ಲಿ ಅರಣ್ಯಾಧಿಕಾರಿಯಾಗಿ ಕಿಶೋರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎಲ್ಲಿಯೂ ಕೂಡಾ ಯಾರ ಅಭಿನಯದಲ್ಲಿಯೂ ಅತಿರೇಕ ಕಾಣಿಸಲಿಲ್ಲ.

ವಿಶ್ವದೆಲ್ಲೆಡೆ ಅಭುತಪೂರ್ವ ಪ್ರತಿಕ್ರಿಯೆ ದೊರೆತಿರುವ ಈ ಚಿತ್ರದಲ್ಲಿ ಬರುವ ಶಿವನ ಪಾತ್ರಕ್ಕೆ ಆಗಾಗ ಅಬ್ಬರದಿಂದ ಎಚ್ಚರಿಸುವ ಪಂಜುರ್ಲಿ ದೈವವೇ ಈ ಚಿತ್ರಕತೆಗೆ ಜೀವಾಳು. ತಮ್ಮೂರು ಕೆರಾಡಿಯನ್ನು ಸಿನಿ ಪ್ರಿಯರಿಗೆ ಪರಿಚಯಿಸಿದ ಬೀಡಿನ ಮನೆಯ ರಿಷಬ್‌ನವರ ಮೈಮೇಲೆ ಗುಳಿಗ (ಕ್ಷೇತ್ರಪಾಲ)ನ ಪರಕಾಯ ಪ್ರವೇಶವಾಗಿ ಆರ್ಭಟ ತೋರಿದಂತು ನಿಜ. ರಿಷಬ್ ಒಬ್ಬ ವೃತ್ತಿಪರ ದೈವಪಾತ್ರಿಗಿಂತಲು ಒಳ್ಳೆಯ ನೃತ್ಯ ಮಾಡಿದ್ದಾರೆ. ಆದರೇ ಏನೇಹೇಳಿ, ಇಡೀ ಚಿತ್ರದ ಹೈಲೈಟ್ಸ್‌ಯೆಂದರೆ ಕ್ಲೈಮ್ಯಾಕ್ಸ್‌ನ ಆ 20 ನಿಮಿಷಗಳ ಪಾತ್ರಾಭಿನಯ. ವಾಹ್! ಅದ್ಭುತ ನಟನೆ.

ಪ್ರತಿ ವಿಭಾಗದಲ್ಲೂ ಗೆದ್ದಿರುವ ಈ ಕಾಂತಾರ ಚಿತ್ರಕ್ಕೆ ರಾಷ್ಟ್ರ ಹಾಗು ರಾಜ್ಯ ಪ್ರಶಸ್ತಿ ದೊರಕುವ ಎಲ್ಲಾ ಲಕ್ಷಣ ಗೋಚರಿಸುತಿದೆ. ಪ್ರದರ್ಶನದ ವೇಳೆ ಕೆಲವು ದೈವಪಾತ್ರಿಗಳಿಗೆ ಮೈಮೇಲೆ ಆವಾಹನೆಯಾದ ಸುದ್ದಿ ಬರುತ್ತಿದ್ದ ಕಾರಣ, ಇನ್ನುಳಿದ ದೈವಪಾತ್ರಿಗಳು ಚಿತ್ರ ನೋಡಲು ಹಿಂದೇಟು ಹಾಕುತ್ತಿರುವುದು ದಿಟ.

(ಲೇಖನ: ವಿಜಯ ಪಿ.ಗಂಗೊಳ್ಳಿ
ಸ್ವಾಮಿ ಕೃಪಾ, ಗಂಗೊಳ್ಳಿ)

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!