9.5 C
New York
Sunday, December 3, 2023

Buy now

spot_img

ನಿಮ್ಮ ಮಗು ಕಲಿಕೆಯಲ್ಲಿ ಹಿಂದೆ ಇದೆಯೇ?

ಮಗು ಶಾಲೆಯಲ್ಲಿ ಮಾರ್ಕ್ಸ್ ಕಡಿಮೆ ತೆಗೆಯುತ್ತಾ ಇದೇ ಅನ್ನುವುದು ತಾಯಿ ತಂದೆಯರಿಗೆ ಹಾಗೂ ಟೀಚರ್ಸ್‌ಗಳಿಗೆ ಬಹಳ ಟೆನ್ಶನ್ ತರುವ ವಿಚಾರ. ಆ ಕಾರಣ ಹಲವರು ಬಂದು ಮಗುವಿಗೆ ನೆನಪಿನ ಶಕ್ತಿಯ ಮಾತ್ರೆ ಕೇಳುತ್ತಾರೆ, ಕೆಲವರು ಮಾರ್ಕ್ಸ್ ತರಿಸಲು ಟಿಪ್ಸ್ ಕೇಳುತ್ತಾರೆ, ಇನ್ನೂ ಕೆಲವರು ದೇವರು, ದಿಂಡಿರು, ಪೂಜೆ, ಪುನಸ್ಕಾರಗಳ ಮಾಡಿಸುತ್ತಾರೆ. ಕಲಿಕಾ ಸಮಸ್ಯೆಗೆ ಕಾರಣ ಹುಡುಕಲು ಯಾರು ಹೋಗುವುದಿಲ್ಲ. ಶಾಲೆಯ ಟೀಚರ್ಸ್ ಕೂಡಾ ಅಷ್ಟೇ ಮಗುವಿನ ತಾಯಿತಂದೆಯರ ಕರೆದು ಕೌನ್ಸೆಲಿಂಗ್ ಮಾಡಿಸಿ ಸರಿ ಹೋಗುತ್ತದೆ ಎಂಬ ಸಲಹೆ ನೀಡಿ ಬಿಡುತ್ತಾರೆ. ಹೆಚ್ಚಿನ ತಾಯಿತಂದೆಯರು ಎಚ್ಚೆತ್ತು ಕೊಳ್ಳುವುದು ಹತ್ತನೇ ತರಗತಿಯಲ್ಲಿ. ಟೀಚರ್ಸ್ ಎಚ್ಚೆತ್ತುಕೊಳ್ಳುವುದು ಎಂಟನೇ ತರಗತಿಯಲ್ಲಿ. ಅವರಿಗೆ ಮಗು ಮುಂದೆ ಹತ್ತನೇ ತರಗತಿಯಲ್ಲಿ ಪಾಸ್ ಆಗದೇ ಇದ್ದರೆ ಎಂಬ ಟೆನ್ಶನ್. ಯಾಕಂದರೆ 100 ಪರ್ಸೆಂಟ್ ಫಲಿತಾಂಶ ಬೇಕಲ್ಲವೇ!

ಮಾರ್ಕ್ಸ್ ಕಡಿಮೆ ಬರುವುದು ಒಂದು ಗುಣಲಕ್ಷಣ ಮಾತ್ರ. ಕಾರಣಗಳು ಹಲವು ಇರುತ್ತದೆ. ಇದನ್ನು ಮನೆಯವರು ಹಾಗೂ ಶಿಕ್ಷಕರು ತಿಳಿದುಕೊಳ್ಳಬೇಕು.
ಕಲಿಕೆಯಲ್ಲಿ ಹಿಂದೆ ಉಳಿಯಲು ಕೆಲವೊಮ್ಮೆ ದೃಷ್ಟಿ ದೋಷ, ಶ್ರವಣ ದೋಷ, ಫಿಟ್ಸ್ ಮುಂತಾದ ದೈಹಿಕ ಸಮಸ್ಯೆಗಳು ಕಾರಣ. ಸಣ್ಣ ಮಕ್ಕಳು ಬೋರ್ಡ್ ಕಾಣುವುದಿಲ್ಲ, ಟೀಚರ್ ಮಾತನಾಡಿದ್ದು ಕೇಳುವುದಿಲ್ಲ ಎಂದೆಲ್ಲ ಹೇಳಿದಾಗ ಅವರ ಕಿವಿ, ಕಣ್ಣು ಪರೀಕ್ಷೆ ಅಗತ್ಯವಾಗಿ ಮಾಡಬೇಕು. ಕೆಲವು ಬಡ ಮತ್ತು ಹಿಂದುಳಿದ ಜನಾಂಗಗಳ ಮನೆಯ ಮಕ್ಕಳು ರಕ್ತದ ಕೊರತೆ, ಪೌಷ್ಟಿಕಾಂಶದ ಕೊರತೆಯಿಂದ ಕೂಡ ಸಮಸ್ಯೆ ಅನುಭವಿಸಬಹುದು.

ಹಾಗೆಯೇ ಕೆಲವು ಮಕ್ಕಳು ಬುದ್ಧಿ ಶಕ್ತಿಯ ಕೊರತೆಯಿಂದ ಕೂಡ ಸಮಸ್ಯೆ ಅನುಭವಿಸುತ್ತಾರೆ. ಹಾಗೆಯೇ ಕೆಲವು ಮಕ್ಕಳು ನಿರ್ದಿಷ್ಟವಾಗಿ ಕೆಲವು ವಿಷಯಗಳಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅಂದರೆ ಗಣಿತ ಅಥವಾ ಭಾಷೆಗಳ ಕಲಿಯುವುದು, ಬರೆಯುವುದು. ಇಂತಹ ಮಕ್ಕಳು ಕೆಲವು ವಿಷಯಗಳಲ್ಲಿ ತುಂಬ ಹುಷಾರ್ ಇದ್ದು ಇನ್ನೂ ಕೆಲವು ವಿಷಯಗಳಲ್ಲಿ ಬಹಳ ಹಿಂದೆ ಇರುತ್ತಾರೆ. ಹಾಗೆಯೇ ಕೆಲವು ಮಕ್ಕಳು ಅತೀ ಚಟುವಟಿಕೆ, ಪಾಠದಲ್ಲಿ ಗಮನ ಕೊಡಲು ಆಗದೇ ಇರುವುದು adhd ಅಂದರೆ attention deficit hyperactivity disorder ಎಂಬ ಸಮಸ್ಯೆಯ ಕಾರಣ (ಈ ಬಗ್ಗೆ ಹಿಂದೆ ಲೇಖನ ಬರೆಯಲಾಗಿದೆ). ಹಾಗೆಯೇ ಆತಂಕ, ಖಿನ್ನತೆ, ಸಿಟ್ಟು, ತಾಯಿ ತಂದೆಯರ ಮೇಲೆ ವಿರೋಧ ಮನೋಭಾವ ಇವೆಲ್ಲ ಕಾರಣಗಳಿಂದ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಹಾಗೆಯೇ ವಿಪರೀತವಾಗಿ ಟಿವಿ ಯಾ ಮೋಬೈಲ್ ವೀಕ್ಷಣೆ, ಸಿನಿಮಾ, ಆಟ, ನೃತ್ಯ, ನಾಟಕ ಮುಂತಾದ ವಿಷಯಗಳಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿ ಓದಿನತ್ತ ಗಮನ ಕಡಿಮೆ ಆಗಿರಬಹುದು. ಕೆಲವು ಮಕ್ಕಳು ಮನೆಯ ವಾತಾವರಣ ವಿದ್ಯಾರ್ಜನೆಗೆ ಪೂರಕ ಆಗಿಲ್ಲದ ಸಂದರ್ಭದಲ್ಲಿ ಕಲಿಕೆಯಲ್ಲಿ ಹಿಂದೆ ಬೀಳಬಹುದು. ಕುಡುಕ ತಂದೆ, ಮನೋ ವಿಕಲತೆಯಿಂದ ಬಳಲುತ್ತಾ ಇರುವ ತಾಯಿ, ಅಥವಾ ತೀವ್ರ ಬಡತನದಿಂದ ಹೊಟ್ಟೆ ಬಟ್ಟೆಗೆ ಸಮಸ್ಯೆ ಇರುವ ಮನೆಗಳಲ್ಲಿ ಓದಿಗೆ ಪ್ರಾಮುಖ್ಯತೆ ಕಡಿಮೆ ಆಗಿರಬಹುದು.

ಹಾಗೇಯೇ ತಾಯಿತಂದೆ ನಡುವೆ ಜಗಳಗಳು, ಶಾಲೆಯಲ್ಲಿ ಹೆದರಿಸುವ ಮಿತ್ರರು, ತುಂಬಾ ಬಯ್ಯುವ ಶಿಕ್ಷಕರು, ಪದೇಪದೇ ಶಾಲೆ ಬದಲಾವಣೆ ಮುಂತಾದ ವಿಷಯಗಳು ಮಕ್ಕಳ ಕಲಿಯುವಿಕೆ ಮೇಲೆ ಪ್ರಭಾವ ಬೀರಬಹುದು. ಹಾಗೆಯೇ ಮಕ್ಕಳನ್ನು ಪದೇಪದೇ ಮೂದಲಿಸಿ ಮಾತಾಡುವುದು, ಮಕ್ಕಳಿಗೆ ತಾಯಿ ತಂದೆ ಯಾ ಶಿಕ್ಷಕರು ಹೊಡೆಯುವುದು, ದಂಡಿಸುವುದು ಕಲಿಕೆಯ ಬಗ್ಗೆ ಅಸಹನೆ ಸೃಷ್ಟಿಸಬಹುದು.
ಮೇಲೆ ತಿಳಿಸಿದ ಕಾರಣಗಳಲ್ಲಿ ಒಂದಕ್ಕಿಂತ ಹೆಚ್ಚೂ ಕಾರಣಗಳಿಂದ ಮಗು ಶಿಕ್ಷಣದಲ್ಲಿ ಹಿಂದೆ ಬೀಳಬಹುದು. ಚೆನ್ನಾಗಿ ಓದುತ್ತಾ ಇದ್ದ ಮಗು ಇದ್ದಕಿದ್ದಂತೆ ಶೈಕ್ಷಣಿಕವಾಗಿ ಹಿಂದೆ ಬಿದ್ದರೆ ಮನೋಸಾಮಾಜಿಕ ಕಾರಣಗಳು, ಖಿನ್ನತೆ, ಆತಂಕ, ಯಾರಿಂದಲೋ ದೈಹಿಕ ಅಥವಾ ಲೈಂಗಿಕ ಶೋಷಣೆ ಇವುಗಳು ಇರಬಹುದು. ಇದನ್ನು ಪೋಷಕರು ಮತ್ತು ಶಿಕ್ಷಕರು ನೆನಪಿಟ್ಟು ಕೊಳ್ಳಬೇಕು.

ತಾಯಿ ತಂದೆಯರು ಶಿಕ್ಷಕರು ಮಗುವಿನ ಬಗ್ಗೆ ಈ ಎಲ್ಲಾ ವಿಷಯಗಳ ಬಗ್ಗೆ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ಕಲಿಕೆಯಲ್ಲಿ ಹಿಂದೆ ಉಳಿದ ಮಕ್ಕಳನ್ನು ಮನೋವೈದ್ಯರ ಬಳಿ ಹೋಗಿ ಎಂದು ಶಿಕ್ಷಕರು ಹೇಳಿದಾಗ ಕೆಲವು ತಾಯಿ ತಂದೆಯರು ಸಿಟ್ಟು ಮಾಡಿಕೊಳ್ಳುತ್ತಾರೆ ಇನ್ನು ಕೆಲವರು ತಮ್ಮ ಮಕ್ಕಳು ಮನೋವೈದ್ಯರ ಬಳಿ ಹೋದರೆ ವಿಚಲಿತರಾಗಿ ಇನ್ನೂ ಶಿಕ್ಷಣದಲ್ಲಿ ಹಿಂದೆ ಬೀಳುತ್ತಾರೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಕೌನ್ಸೆಲಿಂಗ್ ಬಂದು ಒಂದೆರಡು ಸಾರಿ ಮನೋವೈದ್ಯರ ಹತ್ತಿರ ಮಾತನಾಡಿದರೆ ಮುಗಿಯಿತು ಅಂದುಕೊಳ್ಳುತ್ತಾರೆ. ಮತ್ತೆ ಕೆಲವರು ಬುದ್ಧಿಮತ್ತೆ ಜಾಸ್ತಿ ಮಾಡುವ ಹರ್ಬಲ್ ಔಷಧಿ, ಅಥವಾ ಸಿರಪ್ ನಿರೀಕ್ಷೆ ಮಾಡುತ್ತಾರೆ. ಕೆಲವು ಸುಶಿಕ್ಷಿತ ತಾಯಿತಂದೆಯರು ಮಾತ್ರೆ ಅಗತ್ಯ ಇರುವ ಸಂದರ್ಭಗಳು (adhd, ಖಿನ್ನತೆ, ತೀವೃ ಆತಂಕ ಮುಂತಾದವು) ಇದ್ದರು ಮಾತ್ರೆ ಇಲ್ಲದೆ ಪ್ರಯತ್ನಿಸಿ ಅಂತ ವೈದ್ಯರ ಮೇಲೆ ಒತ್ತಡ ತರುತ್ತಾರೆ.
ನಿಮ್ಮ ಮಗು ಕಲಿಕೆಯಲ್ಲಿ ಹಿಂದೆ ಉಳಿದಿದ್ದರೆ ಮನೋವೈದ್ಯರ ಬಳಿ ಹೋದರೆ ಮನೋವೈದ್ಯರು ಮಗುವಿನೊಂದಿಗೆ ಮತ್ತು ನಿಮ್ಮೊಂದಿಗೆ ಮಾತನಾಡಿ ಮಗುವಿಗೆ ಮನಶಾಸ್ತ್ರಜ್ಞರು ಅಥವಾ ಕೌನ್ಸೆಲರ್ ಬಳಿಗೆ ಕಳಿಸುತ್ತಾರೆ. ಮನೋವೈದ್ಯರು ಅಥವಾ ಅವರ ಸಹಾಯಕರ ನೀವು ಭೇಟಿ ಮಾಡುವಾಗ ಮಗುವಿನ ಶಾಲಾ ಪಠ್ಯ ಹಾಗು ಮಗು ಬರೆದ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ. ಅದನ್ನು ಅವರು ನೋಡಿ ಮಗುವಿನ ಸಮಸ್ಯೆ ಕಂಡುಹಿಡಿಯಲು ಸಹಾಯ ಆಗುತ್ತದೆ. ಹಾಗೇಯೇ ಮನೆಯ ಪರಿಸ್ಥಿತಿ, ಮಗುವಿನ ಮಾನಸಿಕ ಪರಿಸ್ಥಿತಿಯ ಹದೆಗೆಡಿಸಿದ ಏನಾದರು ಘಟನೆಗಳು ಇದ್ದಲ್ಲಿ ಮರೆಮಾಚಲು ಹೋಗಬೇಡಿ.

ತಾಯಿತಂದೆಯ ಮತ್ತು ಮಗುವಿನ ಜೊತೆ ಮಾತನಾಡಿದ ವೈದ್ಯರು ಬುದ್ಧಿ ಶಕ್ತಿ ಮಾಪನ, ನಿರ್ದಿಷ್ಟ ಕಲಿಕಾ ತೊಂದರೆಯ ಗುರುತು ಹಿಡಿಯಲ ಕೆಲವು ಟೆಸ್ಟ್ (sld nimhans battery), ಹಿಮೋಗ್ಲೋಬಿನ್, ಥೈರಾಯ್ಡ್ ಮುಂತಾದ ರಕ್ತ ಪರೀಕ್ಷೆ ಕೂಡ ಮಾಡಿಸಬಹುದು. ಹಾಗೆಯೇ ಮಗುವಿಗೆ ಪರಿಹಾರ ಭೋದನೆಗೆ ಮಕ್ಕಳ ಮಾರ್ಗದರ್ಶನ ಕೇಂದ್ರಕ್ಕೆ ಕಳಿಸಲು ಹೇಳಬಹುದು. ಮಕ್ಕಳ ಮಾರ್ಗದರ್ಶನ ಕೇಂದ್ರದಲ್ಲಿ ಮನೋ ಶಾಸ್ತ್ರಜ್ಞರು, ಮನೋಸಾಮಾಜಿಕ ಕಾರ್ಯಕರ್ತರು, ವಿಶೇಷ ಮಕ್ಕಳ ಶಿಕ್ಷಣ ನೀಡುವ ತಜ್ಞರು, ವಾಕ್ ಶ್ರವಣ ತಜ್ಞರು, ಔದ್ಯೋಗಿಕ ಚಿಕಿತ್ಸಾ ತಜ್ಞರು ಇರುತ್ತಾರೆ. ಅವರು ಮಗುವಿನ ಚಿಕಿತ್ಸೆ ಬಗ್ಗೆ ನಿರ್ಧರಿಸುತ್ತಾರೆ. ಚಿಕಿತ್ಸೆ ಅಂದರೆ ಪರಿಹಾರ ಭೋದನೆ. ಈ ಬಗ್ಗೆ ಮುಂದಿನ ಲೇಖನದಲ್ಲಿ ಮುಂದುವರೆಸುವೆ.

Related Articles

Stay Connected

21,961FansLike
3,912FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!