Friday, April 19, 2024

 ಮಾಟ ಮಂತ್ರ, ಜಿನ್ ಉಚ್ಚಾಟನೆ , ಹೀಲಿಂಗ್ retreats ಮಾನಸಿಕ ಕಾಯಿಲೆಗೆ ಮದ್ದಲ್ಲ !

ಮಾನಸಿಕ ಕಾಯಿಲೆಗಳು ಉಂಟಾಗಲು ಬಹಳಷ್ಟು ವೈಜ್ಞಾನಿಕ ಕಾರಣಗಳು ಇವೆ. ಮಿದುಳಿನಲ್ಲಿ ಆಗುವ ನರವಾಹಕಗಳ ಬದಲಾವಣೆಗಳು, ಮನುಷ್ಯನಿಗೆ ಪರಿಸ್ಥಿತಿಯ ಒತ್ತಡ ಹಾಗೂ ‘ಜೈವಿಕ ಭೇದ್ಯತೇ’ ಅಂದರೆ ಅವನ ಕುಟುಂಬದಲ್ಲಿ ಮಾನಸಿಕ ಕಾಯಿಲೆಗಳ ಒಂದು ಜೀನ್ (gene) ಇರುವುದು ಆದರೆ ಆ ಸಂದರ್ಭದಲ್ಲಿ ಪರಿಸ್ಥಿತಿಯ ಒತ್ತಡ ಬಂದಾಗ ಆತನಿಗೆ ಆ ಕಾಯಿಲೆ ಬರಬಹುದು. ಒಟ್ಟಿನಲ್ಲಿ ಜೈವಿಕ ಕಾರಣ ಅಥವಾ ಒತ್ತಡದಿಂದ ಮಿದುಳಿನ ಮೇಲ್ಮೈಯಲ್ಲಿ ಅಥವಾ ಒಳಮೈಯಲ್ಲಿ ಆಗುವ ಬದಲಾವಣೆಗಳಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಆಧುನಿಕ ವೈದ್ಯಕೀಯ ವಿಜ್ಞಾನದ ಪಿತಾಮಹಾ ಹಿಪ್ಪಾಕ್ರೇಟ್ಸ್ ಮೊಟ್ಟ ಮೊದಲು ಬಣ್ಣಿಸಿದ ಮಾನಸಿಕ ಸಮಸ್ಯೆ ಎಪಿಲೆಪ್ಸಿ ಅಥವಾ ಫಿಟ್ಸ್ ಕಾಯಿಲೆ ಈಗ ಇದನ್ನು ಹೆಚ್ಚಾಗಿ ನರರೋಗ ತಜ್ಞರು ನೋಡುತ್ತಾರೆ. ಆದರೆ ನರರೋಗ ತಜ್ಞರು ಮಾನಸಿಕ ತಜ್ಞರಿಗಿಂತ ಬಹಳ ಕಡಿಮೆ ಇದ್ದಾರೆ ಆದ್ದರಿಂದಲೇ ಇವತ್ತಿಗೂ ಮಾನಸಿಕ ತಜ್ಞರನ್ನು ಜನಸಾಮಾನ್ಯರು ನರ ಮಾನಸಿಕ ತಜ್ಞರು ನ್ಯೂರೋ ಸೈಕ್ಯಾಟ್ರಿಸ್ಟ್ ಅಂತ ಗುರುತಿಸುತ್ತಾರೆ. ಮಿದುಳಿನ ವಿದ್ಯುತ್ ಅಲೆಗಳಲ್ಲಿ ವ್ಯತ್ಯಾಸ ಕೂಡ ಕೆಲವೊಮ್ಮೆ ಮಾನಸಿಕ ಸಮಸ್ಯೆಗಳಿಗೆ ಕಾರಣ ಎಂದು ಹೇಳಲಾಗಿದೆ.

ನಿಖರವಾಗಿ ಹೇಳಬೇಕೆಂದರೆ ಮನೋವೈದ್ಯಕೀಯ ಕಾಯಿಲೆಗಳು ಮೆದುಳಿನ ಮೇಲಿನ ಮೇಲ್ಮೈಯಲ್ಲಿನ ಭೌತಿಕ ಬದಲಾವಣೆಗಳು, ಮೆದುಳಿನ ಆಂತರಿಕದಲ್ಲಿನ ರಾಸಾಯನಿಕ ಬದಲಾವಣೆಗಳು ಅಥವಾ ಮೆದುಳಿನ ವಿದ್ಯುತ್ ಚಟುವಟಿಕೆಯ ಬದಲಾವಣೆಗಳಿಂದ ಉಂಟಾಗುತ್ತವೆ.

ಜನಸಾಮಾನ್ಯರಲ್ಲಿ ಮಾನಸಿಕ ಕಾಯಿಲೆಗೆ ಕಾರಣಗಳ ಬಗ್ಗೆ ಬಹಳಷ್ಟು ಅಪನಂಬಿಕೆಗಳು ಇವೆ. ಮಾಟ ಮಂತ್ರ, ಮದ್ದು ಹಾಕಿದ್ದಾರೆ, ಜಾತಕ ದೋಷ, ನಾಗದೋಷ, ಬ್ರಹ್ಮರಾಕ್ಷಸನ ಉಪದ್ರವ, ಅತಿಯಾದ ವೀರ್ಯ ನಷ್ಟದಿಂದ ಸಮಸ್ಯೆ , ಮದುವೆಯಾಗದೆ ಹುಚ್ಚು ಬಿಡಲ್ಲ, ಹುಚ್ಚು ಬಿಡದೆ ಮದುವೆ ಆಗಲ್ಲ, ಅಮವಾಸ್ಯೆ ಹುಣ್ಣಿಮೆಯ ಸಮಯದಲ್ಲಿ ಮಾನಸಿಕ ಕಾಯಿಲೆಗಳಲ್ಲಿ ಏರು ತಗ್ಗು ಇರುತ್ತದೆ, ಪೂರ್ವಜನ್ಮದ ಪಾಪದಿಂದ ಮಾನಸಿಕ ಕಾಯಿಲೆ ಬರುತ್ತದೆ, ಈಡೇರಿಸಲಾಗದ ಹರಕೆಗಳು ಮಾನಸಿಕ ಖಾಹಿಲೆಗೆ ಕಾರಣ ಎಂದು ನಂಬುವವರು ಇದ್ದಾರೆ.
ಇದಕ್ಕೆ ಅನುಗುಣವಾಗಿ ಯಾವುದೋ ದೇವಸ್ಥಾನ/ ದರ್ಗಾ/ ಚರ್ಚ್‌ಗೆ ಹೋದರೆ ಮಾನಸಿಕ ಕಾಯಿಲೆ ಗುಣವಾಗುತ್ತದೆ ಅಥವಾ ಹೋಮ ಹವನಗಳಿಂದ ಯಾವುದೇ ಕಾಯಿಲೆಗಳು ಗುಣವಾಗುತ್ತದೆ ಅಥವಾ ಕೆಲವೊಮ್ಮೆ ಮೈಮೇಲೆ ದೇವರು ದೆವ್ವ ಬರುತ್ತದೆ ಅದರ ಉಚ್ಚಾಟನೆಯಿಂದ ಕಾಯಿಲೆ ಗುಣವಾಗುತ್ತದೆ. ಹೀಗೆ ಹಲವಾರು ಬಗೆಯ ಅಪನಂಬಿಕೆಗಳನ್ನು ಜನಸಾಮಾನ್ಯರು ಹೊಂದಿರುತ್ತಾರೆ. ಅದಕ್ಕೆ ಸರಿಯಾಗಿ ಮಾನಸಿಕ ಕಾಯಿಲೆಗಳ ಚಿಹ್ನೆಗಳು ಹಾಗೆಯೇ ಇರುತ್ತದೆ. ಉನ್ಮಾದ ಸ್ಥಿತಿಯಲ್ಲಿ ದೇವಿ ಮೈಮೇಲೆ ಬರುವುದು, ಮೇನಿಯಾ ಕಾಯಿಲೆಯಲ್ಲಿ ನನಗೆ ಯಾವುದೊ ದೇವರ “ಪವರ್” ಇದೆ ಎಂದು ಹೇಳುವ ರೋಗಿ, ಖಿನ್ನತೆಯಲ್ಲಿ ಇನ್ನೇನು ಸ್ವಾಮಿಯವರು ಭವಿಷ್ಯ ನುಡಿದಿರುವ ಪ್ರಳಯ ಇನ್ನೇನು ಉಂಟಾಗುತ್ತದೆ ಎಂದು ಹೇಳುವ ರೋಗಿ, ಚಿತ್ತವಿಕಲತೆಯಲ್ಲಿ ತನ್ನ ಮನಸ್ಸನ್ನು “ಭೂತ” ಒಂದು ಕಂಟ್ರೋಲ್ ಮಾಡುತ್ತಾ ಇದೆ ಅಂತ ಹೇಳುವ ರೋಗಿ, ಸಾಲದೇ ಇರುವುದಕ್ಕೆ ಕೆಲವು ಮಾನಸಿಕ ರೋಗದ ಲಕ್ಷಣಗಳು ವಿಚಿತ್ರವಾಗಿಯೂ ಇರುತ್ತವೆ. ಮೇನಿಯಾ ಕಾಯಿಲೆಯಲ್ಲಿ ಅತಿಯಾದ ದೇವರ ಭಕ್ತಿಯನ್ನು ಮಾಡುವವರು, ಚಿತ್ತವಿಕಲ ತೆಯಲ್ಲಿ “ನಾನು ರಾಧೆ” ಎಂದು ಕುಣಿಯುವ ಗಂಡಸು, ಸತ್ತು ಹೋದ ತಂದೆ ಮೈಮೇಲೆ ಬಂದಾಗ ಮದ್ಯಪಾನ ಸೇವಿಸಬೇಕಾಗುತ್ತದೆ ಎಂದು ಹೇಳುವ ಒಬ್ಬ ವ್ಯಕ್ತಿ. ಹೀಗೆ ಜನಮಾನಸದಲ್ಲಿ ಇಂತಹುದನ್ನು ನೋಡಿ ಯಾವುದೋ ಒಂದು ಅತೀಂದ್ರಿಯ ಕಾರಣದಿಂದ ಮಾನಸಿಕ ಕಾಯಿಲೆ ಬರುತ್ತದೆ ಎಂದು ಅಂದುಕೊಳ್ಳುತ್ತಾರೆ. ಹಿಂದೂ ಕ್ರೈಸ್ತ ಮುಸಲ್ಮಾನ ಎಲ್ಲರೂ ಕೂಡ ಜಾತ್ಯತೀತವಾಗಿ ಇಂತಹ ನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ. ಭಟ್ಟರು, ಪಾದ್ರಿಗಳು, ತಂಗಳರು ಎಲ್ಲರೂ ಕೂಡ ಈ ಕಾಯಿಲೆಗೆ ಚಿಕಿತ್ಸೆಯನ್ನು ನೀಡುತ್ತಾರೆ. ಹಲವು ಅಮಾಯಕ ಜನರು ಈ ಕಾಯಿಲೆಯಿಂದ ಬಳಲುವಾಗ ಬರೆ ಬೀಳಿಸಿಕೊಳ್ಳುವುದು, ಪೆಟ್ಟು ತಿನ್ನುವುದು, ಅತ್ಯಾಚಾರಕ್ಕೆ ಒಳಗಾಗುವುದು ಸಾಮಾನ್ಯ. ಮಾನಸಿಕ ಕಾಯಿಲೆಯಿಂದ ಬಳಲುವವರ ಮಾನವ ಹಕ್ಕುಗಳು ಸಮಾಜದಲ್ಲಿ ಎಲ್ಲ ಸ್ತರದಲ್ಲೂ ಉಲ್ಲಂಘನೆ ಗೊಳ್ಳುತ್ತಿದ್ದು ಎರಡು ಸಾವಿರದ ಒಂದರಲ್ಲಿ ಎರವಾಡಿಯ ಒಂದು ದರ್ಗಾದಲ್ಲಿ ಸಂಕೋಲೆಗಳಿಂದ ಕಟ್ಟಲ್ಪಟ್ಟ ಮಾನಸಿಕ ರೋಗಿಗಳು ಸುಟ್ಟು ಬೂದಿಯಾದಗ ಸುಪ್ರೀಂ ಕೋರ್ಟ್ ಕಿಡಿ ಕಾರಿದಾಗ ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡವು. ಅಷ್ಟರವರೆಗೆ ಮಾನಸಿಕ ರೋಗಗಳ ಬಗ್ಗೆ ಮಲತಾಯಿ ಧೋರಣೆಯನ್ನು ಸರ್ಕಾರ ಹೊಂದಿತ್ತು. ಈಗಲೂ ಏನೋ ಅಂತಹ ಮಹಾನ್ ಬದಲಾವಣೆ ಆಗದಿದ್ದರೂ ಜನಸಾಮಾನ್ಯರಲ್ಲಿ ಮಾನಸಿಕ ಕಾಯಿಲೆಗಳ ಅರಿವು ಬಹಳಷ್ಟು ಬರುತ್ತಾ ಇದೆ. ಮಾನಸಿಕ ಕಾಯಿಲೆಗಳು ದೈಹಿಕ ಕಾಯಿಲೆಗಳ ಹಾಗೆ. ಬಿಪಿ, ಸಕ್ಕರೆ ಕಾಯಿಲೆ ಹೇಗೆ ಬರುತ್ತದೆಯೋ ಹಾಗೇಯೇ ಮಿದುಳಿನ ನರ ವಾಹಕದಲ್ಲಿ ಬದಲಾವಣೆಗಳಿಂದ ಮಾನಸಿಕ ಕಾಯಿಲೆ ಬರುತ್ತದೆ. ಮಾನಸಿಕ ಕಾಯಿಲೆಗಳ ಮಾತ್ರೆಗಳಿಲ್ಲ ಎಂಬುದು ಅವೈಜ್ಞಾನಿಕ ನಂಬಿಕೆ. ಮನೋರೋಗ ತಜ್ಞರು ಬರೆಯುವ ಮಾತ್ರೆಗಳೆಲ್ಲ ನಿದ್ರೆ ತರಿಸುವ ಮಾತ್ರೆಗಳಿಲ್ಲ , ಮತ್ತು ಭರಿಸುವ ಮಾತ್ರೆಗಳಲ್ಲ ಹಾಗೂ ಎಲ್ಲಾ ಮಾತ್ರೆಗಳು “ಎಡಿಕ್ತಿವ್” ಅಲ್ಲ. ಇದನ್ನು ಜನಸಾಮಾನ್ಯರು ತಿಳಿದುಕೊಳ್ಳಬೇಕು. ಈ ಹಿಂದೆ ಬರೆದಂತೆ ಮಿದುಳಿನ ಮೇಲ್ಮೈ ಅಥವಾ ಒಳ ಮೈಯಲ್ಲಿ ಉಂಟಾಗಿರುವ ನರವಾಹಕಗಳ ಅಥವಾ ವಿದ್ಯುತ್ ತರಂಗಗಳ ಬದಲಾವಣೆಗಳ ಸರಿಪಡಿಸಲು ಮಾತ್ರೆ ಚಿಕಿತ್ಸೆ ಉಪಯೋಗಿಸಲಾಗುತ್ತದೆ.

ಮಾನಸಿಕ ಖಾಯಿಲೆ ತೀವ್ರವಾದಾಗ ಬರುವ “ಆತ್ಮಹತ್ಯೆ” ಧೋರಣೆ ಮಾತ್ರೆಗಳಿಗೆ ಬಗ್ಗದಿರುವ ಮಾನಸಿಕ ಕಾಯಿಲೆ ಇಂತಹ ಸಂದರ್ಭದಲ್ಲಿ ವಿದ್ಯುತ್ ಕಂಪನ ಚಿಕಿತ್ಸೆಯನ್ನು ಕೂಡ ಕೊಡಲಾಗುತ್ತದೆ. ಅರಿವಳಿಕೆ ಕೊಟ್ಟು ಈ ಚಿಕಿತ್ಸೆ ಕೊಡಲಾಗುತ್ತದೆ ರೋಗಿಗೆ ಇದರಿಂದ ಏನೂ ತೊಂದರೆ ಆಗುವುದಿಲ್ಲ.

ಮಾನಸಿಕ ಕಾಯಿಲೆಗಳಿಗೆ ಅಲ್ಪಮಟ್ಟದ ತೊಂದರೆಗಳಿರುವಾಗ ಕೌನ್ಸೆಲಿಂಗ್ ಆಪ್ತ ಸಲಹೆ, ನಡುವಳಿಕೆ ಚಿಕಿತ್ಸೆ, ನಮ್ಮ ನಕಾರಾತ್ಮಕ ಆಲೋಚನೆಗಳು ಮತ್ತು ತಪ್ಪು ಗ್ರಹಿಕೆಗಳು ಇವುಗಳನ್ನು ಬದಲಿಸಲು ಕಾಗ್ನಿಟಿವ್ ಬಿಹೇವಿಯರ್ ಚಿಕಿತ್ಸೆ, ಮುಂತಾದವುಗಳನ್ನು ವೈಜ್ಞಾನಿಕವಾಗಿ ಉಪಯೋಗಿಸಲಾಗುತ್ತದೆ.

ಆದ್ದರಿಂದ ಸ್ಪಷ್ಟವಾಗಿ ಹೇಳುತ್ತೇನೆ ಯಾವುದೇ ದೇವರು, ಭೂತ, ಜಿನ್, ಸೈತಾನ್ ಅಥವಾ ನಾಗದೋಷ, ಗ್ರಹಚಾರ ದೋಷ, ಮದ್ದು ಹಾಕುವುದು, ವಶೀಕರಣ, ಮನೆಯ ವಾಸ್ತು ದೋಷ ಮಾನಸಿಕ ಕಾಯಿಲೆಗೆ ಕಾರಣ ಅಲ್ಲಾ. ಹೋಮ, ಹವನ ಅಥವಾ healing retreats ಗಳು, ದರ್ಗಾಗಳಲ್ಲಿ ಜಿನ್ ಉಚ್ಚಾಟನೆ ಇಂತಹವುಗಳು ಮಾನಸಿಕ ಕಾಹಿಲೆಗಳನ್ನು ಗುಣ ಪಡಿಸಲು ಸಾಧ್ಯವಿಲ್ಲ. ಮನೋವೈದ್ಯರ, ಮನೋಚಿಕಿತ್ಸಕರ ಸಹಾಯ ಪಡೆಯಿರಿ.

ಒಟ್ಟಿನಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಇರುವಷ್ಟು ಮೂಢನಂಬಿಕೆಗಳು ಬೇರೆ ಯಾವುದೇ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲ. ಸುಶಿಕ್ಷಿತರು ಕೂಡ ಇದಕ್ಕೆ ಬಲಿಯಾಗುವುದು ಕಂಡಿದ್ದೇನೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!