9.5 C
New York
Sunday, December 3, 2023

Buy now

spot_img

ವೈದ್ಯೋ ನಾರಾಯಣೋ ಹರಿ

ಜುಲೈ ಒಂದು ವೈದ್ಯರ ದಿನಾಚರಣೆ. ವೈದ್ಯರೇ ಅವರಿಗೆ ಶುಭ ಹಾರೈಸಿ ಪೇಪರ್ ಜಾಹಿರಾತು ಕೊಡುವ ಒಂದು ಕಾಲ ಘಟ್ಟದಲ್ಲಿ ನಾವು ಇದ್ದೇವೆ. ದಿವಂಗತ ಬಿ.ಸಿ ರಾಯ್ ಎಂಬ ವೈದ್ಯರು ರಾಜಕಾರಣಿಯೂ ಬಂಗಾಳದ ಮುಖ್ಯ ಮಂತ್ರಿಗಳು ಆಗಿದ್ದರು. ಅವರ ನೆನಪಿನಲ್ಲಿ ರಾಷ್ಟೀಯ ವೈದ್ಯರ ದಿನಾಚರಣೆ ಆಚರಿಸುತ್ತೇವೆ. ಮನೋವೈದ್ಯನಾಗಿ ಹಲವು ವೈದ್ಯರ ಮಾನಸಿಕ ತೊಳಲಾಟಗಳನ್ನು ಕಣ್ಣಾರೆ ಅವರ ವೈದ್ಯಕೀಯ ಸಮಸ್ಯೆಗಳ ಚಿಕಿತ್ಸೆಗೆ ಬಂದಾಗ ಕಂಡಿದ್ದೇನೆ.

MBBS ಪದವಿ ಓದಲು ನಲವತ್ತು ಲಕ್ಷ ಲೋನ್ ಮಾಡಿ ಓದಿ ಮುಗಿದ ಮೇಲೆ ಉಡುಪಿಯ ಹತ್ತಿರದ ಸಣ್ಣ ಊರಿನಲ್ಲಿ ತನ್ನ ವೈದ್ಯಕೀಯ ವೃತ್ತಿ ಪ್ರಾರಂಭಿಸಿ, ಸಾಲದ ಹೊರೆಯಿಂದ ಖಿನ್ನತೆಗೆ ಒಳಗಾದ ವೈದ್ಯ ಅದರ ನಿವಾರಣೆಗೆ ನಿದ್ರೆಯ ಮಾತ್ರೆಗಳ ಅವಲಂಬನೆಗೆ ಒಳಗಾಗಿ ಆಸ್ಪತ್ರೆ ಸೇರಿದ ವೈದ್ಯ, ಕೋವಿಡ್ ಸಂದರ್ಭದಲ್ಲಿ ತನಗೆ ಕೋವಿಡ್ ಬರಬಹುದು, ತನ್ನ ಮನೆಯಲ್ಲಿ ಇರುವ ವೃದ್ಧ ತಾಯಿ ತಂದೆಯರಿಗೆ, ತನ್ನ ಮಗುವಿಗೆ ಕೋವಿಡ್ ಬರಬಹುದು ಎಂದು ಹೆದರಿ ಕಂಗಾಲಾಗಿ ತನ್ನ ಕ್ಲಿನಿಕ್ ತೊರೆದ ವೈದ್ಯ, ಅತಿಯಾದ ಮಹತ್ವಾಕಾಂಕ್ಷೆಯ ಪ್ರಾಕ್ಟೀಸ್ ಬೆಳೆಸಿ, ಒಬ್ಬರಿಗೊಬ್ಬರು ಸಮಯ ನೀಡಲು ಆಗದೆ ವೈವಾಹಿಕ ಮನಸ್ತಾಪ ಮಾಡಿಕೊಂಡು ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಲು ಏರಿದ ವೈದ್ಯ ದಂಪತಿಗಳು, ರಸ್ತೆ ಅಪಘಾತದಲ್ಲಿ ಬೆನ್ನು ಹುರಿಗೆ ಪೆಟ್ಟುಬಿದ್ದು ಆ ಸಮಯದಲ್ಲಿ ಕೊಟ್ಟ ನೋವು ನಿವಾರಕ “ಅಲ್ಟ್ರ ಸೆಟ್” ಮಾತ್ರೆಯ ದುರ್ಬಳಕೆ ಮಾಡಿ ಪುನರ್ವಸತಿ ಕೇಂದ್ರ ಸೇರಿದ ವೈದ್ಯ, ಖಿನ್ನತೆಯಿಂದ ಬಳಲಿ ಸರಿಯಾದ ವೈದ್ಯಕೀಯ ಚಿಕಿತ್ಸೆಗೆ ಒಳಗಾಗದೆ ಆತ್ಮ ಹತ್ಯೆ ಮಾಡಿಕೊಂಡ ಹಿರಿಯ ವೈದ್ಯ, ಹೀಗೆ ಹಲವು ವೈದ್ಯರ ಸಮಸ್ಯೆ ನೋಡಿದ್ದೇನೆ, ನೊಂದಿದ್ದೇನೆ.

ಮಿತ್ರರೇ, ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ನಿಮ್ಮ ಆರೋಗ್ಯವನ್ನು ಕಾಪಾಡುವ ವೈದ್ಯರುಗಳಾದ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದೇ ಇಲ್ಲ. ಇದು ಅಂಕಿ ಅಂಶಗಳು ತಿಳಿಸುತ್ತಿವೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಹೈದರಾಬಾದ್‌ನ ಹಿರಿಯ ವೈದ್ಯರೊಬ್ಬರು 54 ಪ್ರಾಯದಲ್ಲಿ ಇಂಗ್ಲೆಂಡಿನ ಕಾನ್ಫರೆನ್ಸ್ ಒಂದರಲ್ಲಿ ಅಸುನೀಗಿದ್ದರ ಬಗ್ಗೆ ವರದಿ ಮಾಡಿದೆ. ನನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ವೈದ್ಯರ ಜೀವನಶೈಲಿ ಮತ್ತು ಮಾನಸಿಕ ಆರೋಗ್ಯ ಒಂದು. ನಾನು ಅರ್ಧ ಬರೆದಿರುವ ಪುಸ್ತಕಗಳಲ್ಲಿ “ವೈದ್ಯ ರಿಲ್ಯಾಕ್ಸ್ ಪ್ಲೀಸ್” ಎಂಬ ಪುಸ್ತಕ ಸುಮಾರು ವರ್ಷಗಳಿಂದ ನನ್ನ ಫೋನ್‌ಗಳು ಮತ್ತು ಹಳೆಯ ಡೈರಿಗಳ ಮಧ್ಯದಲ್ಲಿ ಹಾಗೂ ನನ್ನ ನೆನಪಿನಂಗಳದಲ್ಲಿ ಉಳಿದು ಹೋಗಿದೆ.

ಜನಸಾಮಾನ್ಯರು ಬಳಲುವ ಹೆಚ್ಚಿನ ರೋಗಗಳಿಂದ ನಿಮ್ಮನ್ನು ಶುಶ್ರೂಷೆ ಮಾಡುವ ವೈದ್ಯರು ಕೂಡ ಬಳಲುತ್ತಾರೆ. ನಿಮಗೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರಿಸಿ ಎಂದು ಹೇಳುವ ವೈದ್ಯರು ನಿಮಗೆ ದಿನನಿತ್ಯ ವಾಕಿಂಗ್ ಮಾಡಿ ಆಹಾರ ಪಥ್ಯ ಮಾಡಿ, ಒತ್ತಡ ಕಡಿಮೆ ಮಾಡಿ ಎಂದು ಹೇಳುತ್ತಾರೆ ಆದರೆ ತಾವು ಮಾತ್ರ ಈ ಜಾಗೃತೆಗಳನ್ನು ವಹಿಸುವುದೇ ಇಲ್ಲ. ಇದು ಹಲವು ಸಂಶೋಧನೆಗಳಿಂದ ತಿಳಿದು ಬಂದಿದೆ. ಜಾರ್ಜ್ ಬರ್ನಾಡ್ ಶಾ ತನ್ನ ಹಲವು ನಾಟಕಗಳಲ್ಲಿ ವೈದ್ಯರನ್ನು ಲೇವಡಿ ಮಾಡಿದ್ದು “ಡಾಕ್ಟರ್ಸ್ ಡೈಲೆಮ್ಮ” ಎಂಬ ಒಂದು ಸಂಪೂರ್ಣ ನಾಟಕವನ್ನು ಬರೆದಿದ್ದಾರೆ, ಅದರಲ್ಲಿ ವೈದ್ಯರುಗಳು ಹಿಂದಿನ ಕಾಲದಲ್ಲಿ ಒಂದು ತಾಮ್ರದ ಪ್ಲೇಟನ್ನು ಹಾಕಿಕೊಳ್ಳುತ್ತಿದ್ದರಂತೆ. ಅದರಲ್ಲಿ ಅವರ ಹೆಸರುಗಳು ಬರೆಯಲಾಗುತ್ತಿತಂತೆ, ಆ ಹೆಸರಿನೊಂದಿಗೆ “ತಾವು ಕೂಡ ಮುಂದೊಂದು ದಿನ ಸಾಯುವವರೇ” ಎಂಬುದನ್ನು ನಮೂದಿಸಬೇಕು ಎಂದು ಬರ್ನಾರ್ಡ್ ಶಾ ಈ ನಾಟಕದಲ್ಲಿ ಹೇಳುತ್ತಾರೆ.

ಇತರರನ್ನು ಗುಣಪಡಿಸುವ ಮೊದಲು ನಿನ್ನನ್ನು ನೀನೇ ಗುಣಪಡಿಸು Physician Heal Thyself ಎಂಬ ಮಾತು ಮನಸ್ಸಿಗೆ ಬರುತ್ತದೆ. ಒಬೊಬ್ಬ ವೈದ್ಯರದು ಒಂದೊಂದು ಗೋಳು. ಸರ್ಕಾರಿ ವೈದ್ಯರಿಗೆ ಬಹಳಷ್ಟು ರೋಗಿಗಳು ಆದರೆ ಚಿಕಿತ್ಸೆ ನೀಡಲು ಸೌಕರ್ಯಗಳ ಕೊರತೆ, ಚಿಕಿತ್ಸೆ ನೀಡಲು ಮಾತ್ರೆಗಳ ಕೊರತೆ. ಸರ್ಕಾರಿ ವ್ಯವಸ್ಥೆಯಲ್ಲಿ ರಾಜಕಾರಣಿ ಹಾಗು ವೈದ್ಯರಲ್ಲದ ಹಾಗು ವೈದ್ಯ ಅಧಿಕಾರಿಗಳ ಉಪಟಳ. ಖಾಸಗಿ ಕೊರ್ಪರೇಟ್ ವೈದ್ಯನಿಗೆ MBBS ಮಾಡಿದ ವೈದ್ಯರಲ್ಲದ ಸಿ‌ಇ‌ಓಗಳ ಟಾರ್ಗೆಟ್‌ಗಳು, ಅನಗತ್ಯ ರಕ್ತತಪಾಸಣೆ, ರೋಗ ಪತ್ತೆ ಹಚ್ಚಲು ಸಿಟಿ ಸ್ಕ್ಯಾನ್ MRI ಮಾಡಿಸಲು ಒತ್ತಾಯ, ಅನಗತ್ಯ ಒಳರೋಗಿಗಳನ್ನೂ ದಾಖಲು ಮಾಡಬೇಕೆಂದು ತಾಕೀತು. ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರಿಗೆ ಸೌಕರ್ಯಗಳ ಕೊರತೆ, ಸೇವೆ ಎಂಬ ಹೆಸರಿನಲ್ಲಿ ಸಂಸ್ಥೆಗಳ ಕ್ಯಾಂಪ್‌ಗಳು, ಉಚಿತ ರೋಗಿಗಳ ತಪಾಸಣೆ, ಎಲ್ಲಿ ಚಿಕಿತ್ಸಾ ಸಮಯದಲ್ಲಿ ಕೆಲವು ಟೆಸ್ಟ್ ಮಾಡಲು ಆಗದೆ ರೋಗಿಯ ಖಾಯಿಲೆ ಪತ್ತೆ ಹಚ್ಚುವುದರಲ್ಲಿ ಸಮಸ್ಯೆ ಆಗುವುದೋ ಎಂಬ ಗೊಂದಲ. ವೈದ್ಯಕೀಯ ಕಾಲೇಜುಗಳಲ್ಲಿ ಪಾಠ ಮಾಡುವ ವೈದ್ಯರ ಗೋಳಂತೂ ಹೇಳತೀರದು. ವೃದ್ಧ ನಾರಿ ಪತಿವ್ರತೆ ಎಂಬಂತೆ ತಾವು ಕಿರಿಯ ವೈದ್ಯರಾಗಿ ಸಂಸ್ಥೆಯ ಎಲ್ಲ ರೂಲ್ಸ್ ಗಾಳಿಗೆ ತೂರಿ ಕೆಲಸ ಮಾಡುತ್ತಾ ಇದ್ದವರು ಸಂಸ್ಥೆಯಲ್ಲಿ ಮೇಲಧಿಕಾರಿಗಳಾದಾಗ ಹೊಸ ಹೊಸ ಕಾನೂನು ತಂದು ರೋಗಿಗಳ ನೋಡುವುದು ಅಲ್ಲದೆ ಸಂಶೋಧನೆ ಮಾಡಿಯೆನ್ನುವುದು, ಬಾಂಗ್ಲಾದೇಶದ ಸಂಬಳ ಕೊಟ್ಟು, ಪಾಕಿಸ್ತಾನದ ಸೌಕರ್ಯ ಕೊಟ್ಟು ಅಮೇರಿಕಾ ದೇಶದಲ್ಲಿ ಕೆಲಸ ಮಾಡುವ ವೈದ್ಯರ ಹಾಗೆ ಕ್ಯೂ‌ಒನ್ ಜರ್ನಲ್‌ನಲ್ಲಿ ಪಬ್ಲಿಕೇಷನ್ ಬೇಕು ಎಂದು ಸಂಬಳದಲ್ಲಿ ತಾರತಮ್ಯ, ರೋಗಿಗಳ ಚಿಕಿತ್ಸೆ ಯಲ್ಲಿ ಮುಂಚೂಣಿಯಲ್ಲಿರುವ ಹಲವು ಉತ್ತಮ ವೈದ್ಯರನ್ನು ದೃತಿಗೆಡಿಸಿದೆ. mci, nmc ಮುಂತಾದ ಸಂಸ್ಥೆಗಳು ಹಗಲು ಒಂದು ಕಾನೂನು ರಾತ್ರಿ ಒಂದು ಕಾನೂನು ತಂದು ಪಾಠ ಮಾಡುವ ವೈದ್ಯರ ಪಾಡು ಹೇಳಲಾಗದು.

ಇನ್ನು ರೋಗಿ ಮತ್ತು ವೈದ್ಯರ ನಡುವೆ ಬಾಂಧವ್ಯದಲ್ಲಿ ಸಾಕಷ್ಟು ಕಂದಕ ಇದೆ. ಈ ಕಂದಕಕ್ಕೆ ಕಾರಣ ಇಂಟರ್ನೆಟ್ ಮತ್ತು ಗೂಗಲ್ ಡಾಕ್ಟರ್. ಹಾಗೆಯೇ TRP ಹುಚ್ಚಿನಲ್ಲಿ ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ದಿನವಿಡೀ ವೈದ್ಯರ ಮಾನಹಾನಿ ಮಾಡಿ ಅಥವಾ ವೈದ್ಯರ ಪ್ರಾಕ್ಟೀಸ್ ಹಾಳು ಮಾಡುತ್ತೇವೆ ಎಂದು ಬ್ಲಾಕ್ಮೇಲ್ ಮಾಡುವ ಪೀತ ಪತ್ರಿಕೆಗಳು ಇವರೆಲ್ಲ ಸೇರಿ ವೈದ್ಯರನ್ನು ರಕ್ಷಣಾತ್ಮಕ ಪ್ರಾಕ್ಟೀಸ್ ಅಂದರೆ ಅನಗತ್ಯ ಟೆಸ್ಟ್‌ಗಳು, ಬೇರೆ ವೈದ್ಯರಿಗೆ ರೆಫರ್ ಮಾಡುವಂತೆ ಮಾಡುವುದು ಮಾಡಿದೆ.

ಸಮಾಜದಲ್ಲಿ ಮೌಲ್ಯಗಳು ಬದಲಾಗಿ ದುಡ್ಡಿದ್ದವನೇ ದೊಡ್ಡಪ್ಪ ಎನ್ನುವ ಈ ಕಾಲದಲ್ಲಿ ಬಹುಬೇಗ ಶ್ರೀಮಂತನಾಗಬೇಕು, ದೊಡ್ಡ ಬಂಗಲೆ ಕಟ್ಟಬೇಕು, ಅತ್ಯಂತ ದುಬಾರಿ ಕಾರ್ ನಲ್ಲಿ ಓಡಾಡಬೇಕು ಎಂಬ ಆಸೆ ಯುವ ವೈದ್ಯರಲ್ಲಿ ಬಂದರೆ ತಪ್ಪೇ? ಲಕ್ಷಗಟ್ಟಲೆ ಹಣ ಸುರಿದು ವಿದ್ಯಾಸಂಸ್ಥೆಗಳಿಂದ ಹೊರಗೆ ಬಂದ ವೈದ್ಯ ಸೇವೆ ಮಾಡಲು ಆಗುತ್ತದೆಯಾ? ಜನ ಹೊಡೆದಾರು ಎಂಬ ಹೆದರಿಕೆಯಲ್ಲಿ ಬದುಕುವ ವೈದ್ಯ ನಗುನಗುತ್ತಾ ಕೆಲಸ ಮಾಡಲು ಸಾಧ್ಯವಾ?

ಇಷ್ಟೆಲ್ಲಾ ನೆನಪಾಗಲು ಕಾರಣ ಸಣ್ಣ ಪತ್ರಿಕೆಯೊಂದು ವೈದ್ಯರ ದಿನಾಚರಣೆ wishes ಗಾಗಿ ಜಾಹಿರಾತು ಕೊಡಿ ಎಂದು ಫೋನ್ ಮಾಡಿದಾಗ.

ವೈದ್ಯರು ಕೂಡ ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ತಮ್ಮ ಮನೆಯವರೊಂದಿಗೆ ಸಮಯ ಕಳೆಯುವುದು, ಇತರ ವೃತ್ತಿಗಳಂತೆ ನಿರ್ದಿಷ್ಟ ಸಮಯ ಕೆಲಸ ಮಾಡುವುದು, ಆತ್ಮಾವಲೋಕನ ಮಾಡಿಕೊಂಡು ತಮ್ಮ ಆಹಾರ, ಜೀವನಕ್ರಮದಲ್ಲಿ ಬದಲಾವಣೆ ತರುವುದು, ತಮ್ಮ ಅರೋಗ್ಯ ತಪಾಸಣೆಯನ್ನು ಬೇರೊಬ್ಬ ವೈದ್ಯನ ಕೈಗೆ ಒಪ್ಪಿಸಿ ಆತನು ಹೇಳಿದಂತೆ ತಪಾಸಣೆಗೆ ಹೋಗುವುದು, ಪ್ರತಿ ದಿನ ಒಂದು ಘಂಟೆ ವ್ಯಾಯಾಮ, ದಿನಕ್ಕೆ ಆರರಿಂದ ಎಂಟು ಘಂಟೆ ನಿದ್ರೆ, ತಮ್ಮ ಸಹ ಉದ್ಯೋಗಿಗಳೊಂದಿಗೆ ಸಮಯ ಕಳೆಯುವುದು, ವಾರಕ್ಕೆ ಒಂದು ರಜೆ ತೆಗೆಯುವುದು ಇವೆಲ್ಲ ಅಗತ್ಯ.
ಹೋ ಡಾಕ್ಟರ್ relax please !!

Related Articles

Stay Connected

21,961FansLike
3,912FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!