-5.6 C
New York
Saturday, January 22, 2022

Buy now

spot_img

ಪರೀಕ್ಷೆಗಳು ರದ್ದು: ಗಳಿಸಿದ್ದೇನು?


ವರ್ಷ ಪಿಯುಸಿ ಪರೀಕ್ಷೆಯಿಲ್ಲ, ಎಲ್ಲರೂ ಉತ್ತೀರ್ಣ ಎಂದು ಘೋಷಣೆ ಹೊರಬಿದ್ದು ಸುಮಾರು ದಿನಗಳು ಕಳೆದಿವೆ. ನಾಮಕಾವಸ್ತೆಗಷ್ಟೇ ಎಂಬ ಹಣೆಪಟ್ಟಿಯೊಂದಿಗೆ ಹತ್ತನೇ ತರಗತಿಯ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ವಿಚಾರ ಕೇಳಿ ಅರ್ಧಕ್ಕರ್ಧ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ಕೆಲವೇ ಕೆಲವರು ನಿರ್ಲಿಪ್ತರಷ್ಟೇ.., ತುಂಬು ಅಂಕಗಳೊಂದಿಗೆ ರಾರಾಜಿಸಬೇಕೆಂದು ಕನಸು ಹೊತ್ತಿದ್ದ ಹಲವು ವಿದ್ಯಾರ್ಥಿಗಳು ಸಿಕ್ಕಾಪಟ್ಟೆ ಭ್ರಮನಿರಸನಗೊಂಡಿರುತ್ತಾರೆ. ತಮ್ಮ ಮಕ್ಕಳ ಅಂಕಗಳನ್ನು ಬಂಧು ಬಾಂಧವರ ಮುಂದೆಲ್ಲಾ ಹೇಳಿಕೊಂಡು ಬೀಗ ಬೇಕೆಂದಿದ್ದ ಕೆಲವು ಪೋಷಕರು ನಿರಾಶೆ ಅನುಭವಿಸಿರುತ್ತಾರೆ. ಕೆಲವು ಅಮ್ಮಂದಿರಂತೂ ಹತಾಶೆಯಿಂದ ಗೋಳೋ ಎಂದು ಅತ್ತಿರಲೂ ಬಹುದು. ಕೆಲವು ಪ್ರಚಂಡ ಮಕ್ಕಳು ಹೆತ್ತವರ ಹತಾಶೆಗೆ ದನಿಗೂಡಿಸಿದರೂ ಒಳಗೊಳಗೆ ಮುಸಿಮುಸಿ ನಕ್ಕಿರಲೂಬಹುದು. ಅಲ್ಲೆಲ್ಲೋ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು ಎಂಬ ಸುದ್ದಿ ಹರಿದಾಡುತ್ತಿದೆ. ಪರೀಕ್ಷೆ ಮಾಡದೇ ಸರಕಾರ ಮಕ್ಕಳ ಭವಿಷ್ಯವನ್ನೇ ಹಾಳುಗೆಡವಿಬಿಟ್ಟಿದೆ ಎಂಬ ಬಡಬಡಿಕೆ ಎಲ್ಲೆಲ್ಲೂ ಕೇಳಿಬರುತ್ತಿದೆ.


ಪರೀಕ್ಷೆ ನಡೆಯದೇ ಮಿಸ್ಸಾಗಿ ಹೋದ ವಿಚಾರಗಳು ಬಹಳಷ್ಟಿವೆ. ಎಲ್ಲವೂ ಸರಿಯಾಗಿದ್ದರೆ ಇಷ್ಟರೊಳಗೆ ಪರೀಕ್ಷೆಗಳು ಮುಗಿದು ಫಲಿತಾಂಶ ಘೋಷಣೆಯಾಗಿ ಕೆಲವು ದಿನಗಳು ಕಳೆದಿರುತ್ತಿದ್ದವು. ರಿಸಲ್ಟಿನ ದಿನ ನಾವುಗಳು, (ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನ) ಟಿ.ವಿ. ಮೊಬೈಲಿನ ಎದುರು ಯಾರು ಫಸ್ಟು ಎಂದು ನೋಡಲಿಕ್ಕಿದ್ದಿತ್ತು. ಹತ್ತನೇ ತರಗತಿಯ ರಿಸಲ್ಟಿನಂದು ನಮ್ಮ ಜಿಲ್ಲೆಗಳ ರ್‍ಯಾಂಕು ಮೂರೋ ನಾಲ್ಕೋ ಐದೋ ಆಗಿರುವುದನ್ನು ಕಂಡು ನಿಟ್ಟುಸಿರಿಟ್ಟು, ಆ ಜಿಲ್ಲೆಗಳಲ್ಲಿ ನಕಲು ಮಾಡುತ್ತಾರೆ ಎಂದು ಗೊಣಗಿಕೊಂಡು ಮೀಸೆ ಮಣ್ಣಾಗಿಲ್ಲ ಎಂಬ ಭಾವಕ್ಕೆ ಬರುವುದಿತ್ತು. ಪಿಯುಸಿ ರಿಸಲ್ಟ್ ಬಂದಾಗ ’ನೋಡಿ ನೋಡಿ, ನಾವೇ ಮುಂದೆ’ ಎಂದು ಬೀಗುತ್ತಾ ಫೇಸ್ಬುಕ್ಕು ವಾಟ್ಸಪ್ಪಿನಲ್ಲೆಲ್ಲಾ ಸ್ಟೇಟಸ್ ಹಾಕಲಿಕ್ಕಿತ್ತು. ನಮ್ಮ ಆಚೆ ಈಚೆ ಮನೆ, ಬಂಧು ಬಾಂಧವರು, ಹಾದಿಬೀದಿಯಲ್ಲಿ ಸಿಗುವವರು ಎಲ್ಲರಲ್ಲಿಯೂ ನಿಮ್ಮ ಹುಡುಗ/ಗಿಗೆಷ್ಟು ಮಾರ್ಕು ಎಂದು ಕೇಳುವುದಿತ್ತು. ಹೆಚ್ಚು ಮಾರ್ಕಿದ್ದರೆ ಅವರು ಭಾರೀ ಹೆಮ್ಮೆಯಿಂದ ಹೇಳುವುದಿತ್ತು. ಸ್ವಲ್ಪ ಕಡಿಮೆಯೆನಿಸಿದರೆ ಅವನ ಮಂಡೆ ಇರುವ ಲೆಕ್ಕಕ್ಕೆ ಕಡಿಮೆ ಆಯ್ತು, ಚೂರೂ ಪುಸ್ತಕ ಮುಟ್ಟುದಿಲ್ಲ, ಆದ್ರೂ ಇಷ್ಟು ಬಂತು ಹಾಗೆ ಹೀಗೆ ಎಂದು ಡೈರಕ್ಟಾಗಿ ಮಗನನ್ನೂ ಬೈಯತ್ತಾ, ಒಳಗೊಳಗೆ ಹೊಗಳುತ್ತಾ ಇರುವುದಿತ್ತು. ಇನ್ನೂ ಕೆಲವರು ಅವಳಿಗೆ ಪರೀಕ್ಷೆ ಸಮಯದಲ್ಲಿ ತಲೆನೋವು ಬಂದಿದ್ದು, ಕೊರೋನಾ/ ಲಾಕ್ಡೌನಿಂದಾಗಿ ಓದಲಿಕ್ಕಾಗ್ಲಿಲ್ಲ, ನಾನು ಬಿಜಿಯಾಗಿಬಿಟ್ಟೆ, ಅವಳ ಹಿಂದೆ ಬೀಳ್ಲಿಕ್ಕಾಗ್ಲಿಲ್ಲ, ಟೀಚರ್ ಸ್ವಲ್ಪ ಕನ್ಫ್ಯೂಸ್ ಮಾಡಿದರು ಎಂಬಿತ್ಯಾದಿ ಕಾರಣ ಕೊಡುವುದಿತ್ತು. ಮಾರ್ಕುಗಳನ್ನು ಕೇಳಿದ ನಮ್ಮಂಥವರು ಹೊಗಳಿಕೆಯೋ ಸಾಂತ್ವನವೋ ಏನಾದರೊಂದಕ್ಕೆ ನಮ್ಮ ಜ್ಞಾನ ಭಂಡಾರವನ್ನೂ ಸೇರಿಸಿ ಪುಟ್ಟ ಭಾಷಣ ಮಾಡಲಿಕ್ಕಿತ್ತು. ಅಮ್ಮಂದಿರು ನೆರೆಯಾಕೆಯ ಮಕ್ಕಳ ಮಾರ್ಕಿನೊಂದಿಗೆ ಹೋಲಿಸಿಕೊಂಡು ಖುಷಿಯನ್ನೋ, ಬೇಸರವನ್ನೋ ಅನುಭವಿಸುವುದಿತ್ತು. ಕೆಲವು ಎಜುಕೇಟೆಡ್ ಮಮ್ಮಿಯರಂತೂ ತುಸು ಕಮ್ಮಿಯಿರುವ ತಮ್ಮ ಮಗ/ಮಗಳ ಅಂಕವನ್ನು ಆಗಾಗ್ಗೆ ಇನ್ನೊಬ್ಬರೊಡನೆ ಹೇಳಬೇಕಾಗಿ ಬಂದಾಗ ಘೋರ ಅವಮಾನವೆನಿಸಿ, ಕಷ್ಟದಲ್ಲಿ ಅದನ್ನು ಅದುಮಿಟ್ಟುಕೊಂಡು, ಮನೆಗೆ ಬಂದು ಮಕ್ಕಳೆದುರು ದಿನದಿನವೂ ಸ್ಫೋಟಿಸಲಿದ್ದಿತ್ತು, ನಿಮ್ಮಿಂದಲೇ ಅವಳು ಹಾಳಾಗಿದ್ದು ಎಂದು ಯಜಮಾನರಿಗೂ ಒಂದು ಮಂಗಳಾರತಿ ಭಾಗ್ಯವಿದ್ದಿತ್ತು. ರಿಸಲ್ಟು ನೋಡಿದ ಕೆಲವು ಮಕ್ಕಳು ತಾವೆಷ್ಟೇ ಅಂಕ ಗಳಿಸಿದ್ದರೂ ಒಂದೋ ಎರಡೋ ಅಂಕಗಳು ಕಡಿಮೆಯಾಯಿತೆಂದು ಗೋಳೋ ಅನ್ನಲಿಕ್ಕಿತ್ತು, ಕೆಲವರು ಖಿನ್ನರಾಗಿ ಕೌನ್ಸೆಲಿಂಗಿಗೂ ಹೋಗಬೇಕಾಗುತ್ತಿತ್ತು. ಹೆಚ್ಚು ಅಂಕ ಪಡೆದವರೆಲ್ಲಾ ಟಿ.ವಿ., ಪೇಪರ್, ಫ್ಲೆಕ್ಸ್, ವಾಟ್ಸಾಪ್ ಸ್ಟೇಟಸ್ ಮಾತ್ರವಲ್ಲದೆ ಊರ ಜನಗಳ ನಾಲಗೆಯ ಮೇಲೂ ರಾರಾಜಿಸಬೇಕಿತ್ತು.


ಈ ವರ್ಷ ಪರೀಕ್ಷೆ ರದ್ದಾಗಿದೆ, ಹಾಗಾಗಿ ಇವ್ಯಾವುದೂ ಇಲ್ಲವಾಗಿದೆ. ನಾನು ಬರೆದುದನ್ನೆಲ್ಲಾ ಓದುವಾಗ ನಾನು ಇಡೀ ಪರೀಕ್ಷಾ ವ್ಯವಸ್ಥೆಯನ್ನೇ ಹಿಲಾಲು ಮಾಡುತ್ತಿದ್ದೇನೆ ಎಂದು ನಿಮಗನಿಸಿದರೆ ತಪ್ಪೇನೂ ಇಲ್ಲ. ವಾಸ್ತವವಾಗಿ ನಾನು ಪರೀಕ್ಷೆ -ಅಂಕ ಪದ್ಧತಿ ಇತ್ಯಾದಿಗಳ ಕಡು ವಿರೋಧಿಯೇನೂ ಅಲ್ಲ. ನಾನೀಗ ತಿಳಿಸಿರುವುದು ಪರೀಕ್ಷೆ ಮತ್ತದರ ಫಲಿತಾಂಶ ಸಮೂಹ ಸನ್ನಿಯ ತೆರದಲ್ಲಿ ಸಮಾಜವನ್ನು ಆವರಿಸಿದ್ದರಿಂದ ಉಂಟಾಗಿರುವ ಅವಾಂತರಗಳನ್ನಷ್ಟೆ.

ನೀವೇಕೆ ಮಕ್ಕಳನ್ನು ಶಾಲೆ/ಕಾಲೇಜಿಗೆ ಕಳಿಸುತ್ತೀರಿ ಎಂದು ಕೇಳಿದಾಗ ನಿಮ್ಮ ಉತ್ತರ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು ಎಂಬುದಾಗಿದ್ದರೆ ನೀವು ಸರಿಯಾದ ಹಾದಿಯಲ್ಲಿಲ್ಲ ಎಂದೇ ಅರ್ಥ. ವಾಸ್ತವವಾಗಿ ಶಾಲೆ ಕಾಲೇಜುಗಳಲ್ಲಿ ಆಗಬೇಕಾಗಿರುವುದು ಕಲಿಕೆ, ಪರೀಕ್ಷೆಯ ತಯಾರಿಯಲ್ಲ. ಕಲಿಕೆ ಸರಿಯಾಗಿದೆಯೇ, ಯಾವ ಮಟ್ಟದಲ್ಲಾಗಿದೆ ಎಂದು ತಿಳಿಯಲಿಕ್ಕಷ್ಟೇ ಪರೀಕ್ಷೆ ಬೇಕಾಗುವುದು. ವಿದ್ಯಾರ್ಥಿ ಮುಂದಿನ ತರಗತಿಗೆ ಹೋಗುವಾಗ ಈ ತರಗತಿಯಲ್ಲಿ ಕಲಿತಿರುವುದನ್ನು ಎಷ್ಟು ತಲೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದು ಮುಖ್ಯವಾಗುತ್ತದೆಯೇ ಹೊರತು ಅಂಕಗಳಲ್ಲ. ತೊಂಭತ್ತು ಶೇಕಡಾ ಅಂಕಗಳನ್ನು ಪಡೆದು ಪರೀಕ್ಷೆ ಮುಗಿದ ನಂತರ ಎಲ್ಲವನ್ನೂ ಮರೆತಿರುವ ಹುಡುಗನಿಗಿಂತ, ಅರವತ್ತು ಶೇಕಡಾ ಅಂಕ ಪಡೆದು ಕಲಿತ ಯಾವುದನ್ನೂ ಮರೆಯದ ಹುಡುಗನೇ ಉತ್ತಮ ಎನಿಸಿಕೊಳ್ಳುತ್ತಾನೆ.


ಪರೀಕ್ಷೆ ಮತ್ತು ಅಂಕಗಳು ಬೇಡವೇ ಬೇಡ ಎಂದೇನೂ ನಾನು ಹೇಳುವುದಿಲ್ಲ. ಪರೀಕ್ಷೆ ಮತ್ತು ಅಂಕ/ ಗ್ರೇಡ್ ಪದ್ಧತಿ ಮಕ್ಕಳ ಕಲಿಕೆಗೆ ಉತ್ತೇಜನ ನೀಡುತ್ತದೆ, ಕಲಿಕೆಯನ್ನು ಸರಾಗಗೊಳಿಸುತ್ತದೆ ಎಂಬುದೆಲ್ಲವೂ ಸತ್ಯವೇ. ಬೋರ್ಡ್ ಪರೀಕ್ಷೆಗಳಾದ ಹತ್ತನೇ ತರಗತಿ ಮತ್ತು ಪಿ.ಯು.ಸಿ. ಪರೀಕ್ಷೆಗಳು ಮಕ್ಕಳಿಗೆ ವೈಯಕ್ತಿಕವಾಗಿ ಕಲಿಕಾ ಸಾಧನೆಯ ಮೈಲುಗಲ್ಲುಗಳಂತೆ ಗುರುತಿಸಲ್ಪಟ್ಟಿರುವುದರಿಂದ ಮಕ್ಕಳು ಕಲಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎನ್ನುವುದೂ ನಿಜ. ಆದರೆ ಇದು ವೈಯಕ್ತಿಕ ಸಾಧನೆಗಷ್ಟೇ ಸೀಮಿತವಾಗಿರದೆ ಜಿಲ್ಲೆ ಜಿಲ್ಲೆಗಳ ನಡುವೆ ಸ್ಪರ್ಧೆಯ, ಮಕ್ಕಳ ನಡುವೆ ಅನಾರೋಗ್ಯಕರ ಪೈಪೋಟಿಯ ಮತ್ತು ಕುಟುಂಬಗಳ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿವರ್ತನೆಗೊಂಡಿರುವುದು ಅಪೇಕ್ಷಣೀಯವಲ್ಲ.


ಹಾಗಾಗಿ ಪರೀಕ್ಷೆಗಳು ನಡೆದಿಲ್ಲ ಎಂದು ಬೇಸರಿಸುವುದರಲ್ಲಿ ಅರ್ಥವೇ ಇಲ್ಲ. ಈ ವರ್ಷ ಕೋವಿಡ್ ಕಾರಣದಿಂದ ಕಲಿಕೆಗೆ ತೊಂದರೆ ಆಗಿದೆಯೇ ಹೊರತು ಪರೀಕ್ಷೆಗಳಿಲ್ಲದ್ದರಿಂದಲ್ಲ. ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ನಿರಾಸೆಯಾಗಿದ್ದು ಸಹಜವೇ. ಅವರು ಬೇಸರಿಸಬೇಕಾದದ್ದು ರಿಸಲ್ಟ್ ಬರುವ ದಿನದ ಸಂಭ್ರಮ ತಪ್ಪಿ ಹೋದದ್ದಕ್ಕಷ್ಟೇ ಆಗಿರಬೇಕೇ ಹೊರತು ಮತ್ತೇನೋ ದೊಡ್ಡ ಸಮಸ್ಯೆಯಾಯಿತೆಂದಾಗಬಾರದು. ಅವರು ಕಳೆದುಕೊಂಡಿರುವುದು ಒಂದೆರಡು ದಿನಗಳ ಕ್ಷಣಿಕ ಸಂಭ್ರಮವನ್ನಷ್ಟೇ ಎಂಬ ಸತ್ಯವನ್ನು ಅವರು ಅರ್ಥಮಾಡಿಕೊಳ್ಳಬೇಕು. ವಿದ್ಯಾರ್ಥಿಯಾದವನಿಗೆ ಕಲಿಕೆ ನಿರಂತರವಾಗಿರಬೇಕು, ಮತ್ತು ಆ ಕಲಿಕೆಯಷ್ಟೇ ಶಾಶ್ವತ, ಅಂಕಗಳಲ್ಲ ಎಂಬ ಅರಿವು ಅವರಲ್ಲಿ ಮೂಡಿದರೆ ಪರೀಕ್ಷೆಗಳು ತೀರಾ ನಗಣ್ಯವಾಗಿ ಕಾಣಿಸುತ್ತದೆ. ಈ ಅರಿವು ಈ ವರ್ಷ ಪರೀಕ್ಷೆಗಳು ನಡೆಯದಿರುವ ಕಾರಣದಿಂದಾಗಿ ಸಮಾಜದ ಎಲ್ಲರಲ್ಲೂ ಮೂಡುವಂತಾದರೆ ಪರೀಕ್ಷೆಗಳು ನಿಂತಿದ್ದಕ್ಕೂ ಒಂದು ಸಾರ್ಥಕತೆ ಸಿಗುತ್ತದೆ.

ಸದಾಶಿವ ಕೆಂಚನೂರು
ಶಿಕ್ಷಕರು, ಸ.ಮಾ.ಹಿ.ಪ್ರಾ. ಶಾಲೆ ವಂಡ್ಸೆ.

Related Articles

Stay Connected

21,961FansLike
3,126FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!