Thursday, November 21, 2024

ವಿಶ್ವದಾಖಲೆ ಸನಿಹದಲ್ಲಿ ’ಟೆನಿಸ್ ಕಿಂಗ್’ ಜೊಕೋವಿಕ್


(ಎಸ್.ಜಗದೀಶಚಂದ್ರ ಅಂಚನ್, ಸೂಟರ್ ಪೇಟೆ)

’ಟೆನಿಸ್ ಕಿಂಗ್’ ಎಂದು ವರ್ತಮಾನ ಕಾಲದಲ್ಲಿ ಗುರುತಿಸಿಕೊಂಡಿರುವ ನೊವಾಕ್ ಜೊಕೋವಿಕ್ ಜಾಗತಿಕ ಟೆನಿಸ್ ರಂಗದ ಅತ್ಯದ್ಭುತ ಆಟಗಾರ. ಟೆನಿಸ್ ರಂಗದಲ್ಲಿ ತನ್ನದೇ ಆದ ಪ್ರಭುತ್ವವನ್ನು ಸ್ಥಾಪಿಸಿರುವ ಈ ಖ್ಯಾತ ಆಟಗಾರ ಕಳೆದ ೧೮ ವರ್ಷಗಳ ಟೆನಿಸ್ ಪಯಣದಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವರು. ವಿಶ್ವದ ನಂ.೧ ಆಟಗಾರರಾಗಿರುವ ಜೊಕೋವಿಕ್ ಈಚೆಗೆ ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಟೈಟಲ್ ನ್ನು ಗೆದ್ದು ಟೆನಿಸ್ ಲೋಕದಲ್ಲಿ ಹೊಸ ಭಾಷ್ಯ ಬರೆದಿದ ಅದ್ಭುತ ಆಟಗಾರ. ಸುದೀರ್ಘ ಕಾಲ ಎಡಬಿಡದೆ ಟೆನಿಸ್ ಆಡುತ್ತಿರುವ ಜೊಕೋವಿಕ್ ತನ್ನ ಕ್ರೀಡಾ ಬದುಕಿನಲ್ಲಿ ಏಳು-ಬೀಳುಗಳನ್ನು ಕಂಡರೂ ಅಪ್ರತಿಮ ಸಾಧನೆಯೊಂದಿಗೆ ಟೆನಿಸ್ ಜಗತ್ತಿನಲ್ಲಿ ಮೆರೆದಿರುವರು.


“ಕ್ಲೇ ಕೋರ್ಟ್ ಕದನ” ಎಂದೇ ಕರೆಯಿಸಿಕೊಂಡ ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಜೊಕೋವಿಕ್ ಗೆ ಸ್ಮರಣೀಯ ಎನಿಸಿತು. ಕ್ಲೇ ಕೋರ್ಟ್ ಕಿಂಗ್ ರಾಫೆಲ್ ನಡಾಲ್ ಅವರನ್ನೇ ಸೆಮಿಫೈನಲ್ ಪಂದ್ಯದಲ್ಲಿ ಹೆಡೆಮುರಿಕಟ್ಟಿದ ಜೊಕೋವಿಕ್ ಆಡಿದ ರೀತಿ ಟೆನಿಸ್ ದಿಗ್ಗಜರನ್ನೇ ದಿಗ್ಭ್ರಮೆಗೊಳಿಸಿತು. ಜೊಕೋವಿಕ್ ಪ್ಯಾರಿಸ್ ಅಂಗಳದಲ್ಲಿ ಆಡಿದ ಎಲ್ಲಾ ಪಂದ್ಯಗಳ ಪೈಕಿ ಇದು ಅತ್ಯುತ್ತಮ ಪಂದ್ಯವಾಗಿತ್ತು. ಜೊತೆಗೆ ಈ ಗೆಲುವು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತದ್ದು ಕೂಡ. ಕ್ಲೇ ಕೋರ್ಟ್ ನಲ್ಲಿ ೧೩ಬಾರಿ ಚಾಂಪಿಯನ್ ಆಗಿ ಮೆರೆದಾಡಿದ ರಫೆಲ್ ನಡಾಲ್ ಅವರನ್ನು ಸುಮಾರು ನಾಲ್ಕೂವರೆ ಗಂಟೆಗಳ ಸುದೀರ್ಘ ಹೋರಾಟದಲ್ಲಿ ಜೊಕೋವಿಕ್ ಸೋಲಿಸಿ ಫೈನಲಿಗೆ ಎಂಟ್ರಿಯಾಗಿದ್ದರು.

ಡಿಫರೆಂಟ್ ಗೇಮ್:
ನಾಲ್ಕು ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಗಳ ಪೈಕಿ ಯು‌ಎಸ್ ಓಪನ್ ಹಾಗೂ ಆಸ್ಟ್ರೇಲಿಯಾ ಓಪನ್ ಟೂರ್ನಿಗಳನ್ನು ಹಾರ್ಡ್ ಕೋರ್ಟ್ ಗಳಲ್ಲೂ, ವಿಂಬಲ್ಡನ್ ಟೂರ್ನಿಯನ್ನು ಹುಲ್ಲಿನ ಅಂಗಣದಲ್ಲೂ, ಫ್ರೆಂಚ್ ಓಪನ್ ಟೂರ್ನಿಯನ್ನು ಕ್ಲೇ ಕೋರ್ಟ್‌ನಲ್ಲೂ ಆಡಲಾಗುತ್ತದೆ. ಹೀಗಾಗಿ ಆಸ್ಟ್ರೇಲಿಯನ್ ಓಪನ್ ವಿಜೇತರು ಯು‌ಎಸ್ ಓಪನ್ ನಲ್ಲೂ ಜಯಿಸುತ್ತಾರೆ ಎಂದು ಭವಿಷ್ಯ ನುಡಿದರೆ ಅದು ನಿಜವಾಗಲೂ ಬಹುದು. ಆದರೆ, ಉಳಿದೆರಡು ಟೂರ್ನಿಗಳಲ್ಲಿ ಹಾಗೆ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಕ್ಲೇ ಕೋರ್ಟ್ ಟೂರ್ನಿಯಲ್ಲಿ ಯಾರು ಪ್ರಶಸ್ತಿ ಜಯಿಸುತ್ತಾರೆ ಎಂಬ ವಿಷಯದಲ್ಲಿ ಟೆನಿಸ್ ಪಂಡಿತರಷ್ಟೇ ಅಲ್ಲ, ಆಟಗಾರರೂ ಸ್ವಲ್ಪಮಟ್ಟಿಗೆ ಲೆಕ್ಕಾಚಾರ ತಪ್ಪುತ್ತಾರೆ. ಹಾಗಾಗಿ ಕಳೆದ ಆವೃತ್ತಿಯ ಚಾಂಪಿಯನ್ ರಾಫೆಲ್ ನಡಾಲ್ ಸೆಮಿಫೈನಲ್ ಪಂದ್ಯದಲ್ಲೇ ಮುಗ್ಗರಿಸಿದ್ದು ಗಮನಿಸತಕ್ಕ ವಿಷಯ.


ಹೌದು, ೨೦೦೫ರಲ್ಲಿ ತನ್ನ ಮೊದಲ ಫ್ರೆಂಚ್ ಓಪನ್ ಟೆನಿಸ್ ಪ್ರಶಸ್ತಿಯನ್ನು ಮತ್ತು ೨೦೨೦ರಲ್ಲಿ ತನ್ನ ಕೊನೆಯ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದ ರಾಫೆಲ್ ನಡಾಲ್, ಈ ಅವಧಿಯಲ್ಲಿ ಕೇವಲ ಮೂರು ಬಾರಿ ಈ ಟೂರ್ನಿಯಲ್ಲಿ ಸೋತಿದ್ದಾರೆ. ಅವರು ೨೦೦೯ರಲ್ಲಿ ನಾಲ್ಕನೇ ಸುತ್ತಿನಲ್ಲಿ ರಾಬಿನ್ ಸೋಡ್ಲಿಂಗ್, ೨೦೧೫ ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್ ವಿರುದ್ಧ ಸೋತಿದ್ದರು.೨೦೧೬ರಲ್ಲಿ ಗಾಯದಿಂದಾಗಿ ಅವರು ಮೂರನೇ ಸುತ್ತಿನಿಂದ ಹೊರಗುಳಿದಿದ್ದರು. ಇಂತಹ ಮಹಾನ್ ಸಾಧಕ ನಡಾಲ್ ೨೦೨೧ರ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಜೊಕೋವಿಕ್ ಅವರ ಆಕ್ರಮಣಕಾರಿ ಆಟಕ್ಕೆ ಮಣಿಯಲೇ ಬೇಕಾಯಿತು.


ರೋಚಕ ಫೈನಲ್ ಪಂದ್ಯ :
ಸೆಮಿಫೈನಲ್ ಪಂದ್ಯದಂತೆ ಫೈನಲ್ ಪಂದ್ಯವೂ ರೋಚಕವಾಗಿತ್ತು. ಬಹುಶಃ ಎಲ್ಲವೂ ಸರಿಯಾಗಿರುತ್ತಿದ್ದರೆ ಫೈನಲ್ ಪಂದ್ಯವನ್ನು ಜೊಕೊವಿಕ್ ಖಂಡಿತವಾಗಿಯೂ ಗೆಲ್ಲುತ್ತಿರಲಿಲ್ಲ. ಐದನೇ ಶ್ರೇಯಾಂಕದ ಸ್ಟೆಫಾನೊ ಸಿಟ್ಸಿಪಾಸ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಿಂಚಿನ ಪ್ರವೇಶ ಪಡೆದುಕೊಂಡ ಆಟಗಾರ. ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜೈರೆವ್ ಅವರನ್ನು ಸೋಲಿಸಿ ಮೊದಲ ಬಾರಿ ಗ್ರ್ಯಾಂಡ್ ಸ್ಲಾಮ್ ಫೈನಲ್ ಪಂದ್ಯಕ್ಕೆ ಸಿಟ್ಸಿಪಾಸ್ ಪ್ರವೇಶಿಸಿದ್ದರು. ಯುವ ಹಾಗೂ ಅನುಭವಿ ಟೆನಿಸ್ ಆಟಗಾರರ ನಡುವೆ ನಡೆದ ಫೈನಲ್ ಪಂದ್ಯವೂ ಸುಮಾರು ನಾಲ್ಕೂವರೆ ಗಂಟೆಗಳ ವರೆಗೆ ವಿಸ್ತರಿಸಲ್ಪಟ್ಟು ಟೆನಿಸ್ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸುತ್ತಾ ಸಾಗಿತ್ತು. ೨೨ರ ಹರೆಯದ ಸಿಟ್ಸಿಪಾಸ್ ಈ ರೋಚಕ ಫೈನಲ್‌ನ ಮೊದಲ ಎರಡು ಸೆಟ್‌ಗಳನ್ನು ೭-೬, ೬-೨ರಿಂದ ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಪಡೆದರು .ಆದರೆ, ಅಗ್ರ ಶ್ರೇಯಾಂಕದ ಜೊಕೊವಿಕ್ ಮುಂದಿನ ಎರಡು ಸೆಟ್‌ನ್ನು ತನ್ನ ಹಿಡಿತಕ್ಕೆ ತಂದು ೬-೩, ೬-೨ರಿಂದ ಗೆದ್ದುಕೊಂಡರು. ಐದನೇ ಮತ್ತು ಅಂತಿಮ ಸೆಟ್ ನಲ್ಲಿ ಮತ್ತೆ ಜೊಕೋವಿಕ್ ಪ್ರಾಬಲ್ಯ ಮೆರೆದು ಗೆಲುವಿನ ನಗೆಯನ್ನು ಬೀರಿದರು.


ಗ್ರೀಸ್‌ನ ಮೊದಲ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ಆಗಬೇಕೆಂಬ ಸ್ಟೆಫಾನೊ ಸಿಟ್ಸಿಪಾಸ್ ಅವರ ಕನಸು ಫೈನಲ್ ಪಂದ್ಯದ ಸೋಲಿನಿಂದ ನುಚ್ಚುನೂರಾಯಿತು. ಇದು ಜೊಕೋವಿಕ್ ಅವರ ವೃತ್ತಿಜೀವನದ ಎರಡನೇ ಫ್ರೆಂಚ್ ಓಪನ್ ಮತ್ತು ಅವರ ವೃತ್ತಿಜೀವನದ ೧೯ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ ಪ್ರಶಸ್ತಿ ಆಗಿದೆ. ಜೊಕೋವಿಕ್, ಸಿಟ್ಸಿಪಾಸ್ ಅವರನ್ನು ಸೋಲಿಸುವುದರ ಮೂಲಕ ೫೨ ವರ್ಷಗಳಲ್ಲಿ ಸತತವಾಗಿ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ರಾಯ್ ಎಮರ್ಸನ್ ಮತ್ತು ರಾಡ್ ಲಾವರ್ ಹೊರತುಪಡಿಸಿ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಎರಡು ಬಾರಿ ಗೆದ್ದ ಮೂರನೇ ಆಟಗಾರ ಜೊಕೋವಿಕ್. ೨೦ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್‌ಗೆ ಈ ಸಾಧನೆ ಸಾಧ್ಯವಾಗಿಲ್ಲ.

ವಿಶ್ವದಾಖಲೆಗೆ ಇನ್ನೆರಡು ಹೆಜ್ಜೆ :
ಬಹುಶಃ ವರ್ತಮಾನ ಕಾಲಘಟ್ಟದಲ್ಲಿ ಟೆನಿಸ್ ರಂಗದಲ್ಲಿ ’ಡಾನ್ ’ ಆಗಿ ಮೆರೆದಾಡುತ್ತಿರುವ ಜೊಕೋವಿಕ್ ಈಗ ವಿಶ್ವದಾಖಲೆಯ ಸನಿಹದಲ್ಲಿದ್ದಾರೆ. ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರ ೨೦ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ದಾಖಲೆ ಯನ್ನು ಸರಿಗಟ್ಟಲು ಜೊಕೊವಿಕ್ ಈಗ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ. ವಿಶ್ವದಾಖಲೆಗೆ ಎರಡನೇ ಹೆಜ್ಜೆಯನ್ನಿಟ್ಟರೆ ಅವರು ಜಾಗತಿಕ ಟೆನಿಸ್ ರಂಗದಲ್ಲಿ ಹೊಸ ಇತಿಹಾಸವನ್ನು ಬರೆಯಲಿದ್ದಾರೆ . ಅವರ ಈಗಿನ ಫಾರ್ಮ್ ನ್ನು ಗಮನಿಸಿದರೆ ಈ ಇತಿಹಾಸ ಈ ವರ್ಷವೇ ನಿರ್ಮಾಣವಾಗಬಹುದು ಎನ್ನುವುದು ಟೆನಿಸ್ ದಿಗ್ಗಜರ ಅನಿಸಿಕೆ.


೨೦೦೩ರಲ್ಲಿ ವೃತ್ತಿಪರ ಟೆನಿಸ್ ಜಗತ್ತಿಗೆ ಕಾಲಿಟ್ಟ ಜೊಕೋವಿಕ್ ಅವರಿಗೆ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಒಲಿದದ್ದು ೨೦೦೮ರಲ್ಲಿ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಗೆದ್ದ ನಂತರ ಇವರು ಹಿಂತಿರುಗಿ ನೋಡಲೇ ಇಲ್ಲ . ಸ್ಪರ್ಧಾತ್ಮಕ ಟೆನಿಸ್ ನಲ್ಲಿ ಜೊಕೋವಿಕ್ ಅವರ ಉನ್ನತ ಮಟ್ಟದ ಆಟ ಯುವ ಆಟಗಾರರಿಗೆ ಸ್ಪೂರ್ತಿಯಾಗಿದೆ. ೩೪ರ ಹರೆಯದಲ್ಲೂ ತಮ್ಮ ಫಿಟ್ನೆಸ್ ಕಾಪಾಡಿಕೊಂಡು ಜಾಗತಿಕ ಟೆನಿಸ್ ರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಅನುಭವ, ಆತ್ಮವಿಶ್ವಾಸ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಹೊಂದಿರುವ ಜೊಕೋವಿಕ್ ಎದುರಾಳಿಗಳಿಗೆ ಕಠಿಣ ಸವಾಲೊಡ್ಡುವ ಕಲೆಗಾರ. ಜೊಕೋವಿಕ್ ಇದುವರೆಗೆ ೨ ಬಾರಿ ಫ್ರೆಂಚ್ ಓಪನ್, ೯ ಬಾರಿ ಆಸ್ಟ್ರೇಲಿಯನ್ ಓಪನ್, ೫ ಬಾರಿ ವಿಂಬಲ್ಡನ್ ಹಾಗೂ ೩ ಬಾರಿ ಯು‌ಎಸ್ ಓಪನ್ ಟೆನಿಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.


ಗೋಲ್ಡನ್ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣು :
ಫ್ರೆಂಚ್ ಓಪನ್ ಟೆನಿಸ್ ಪ್ರಶಸ್ತಿ ಗೆದ್ದ ನಂತರ ಜೊಕೋವಿಕ್ ಕಣ್ಣು ಇದೀಗ ಗೋಲ್ಡನ್ ಗ್ರ್ಯಾಂಡ್ ಸ್ಲಾಮ್ ಮೇಲೆ ಬಿದ್ದಿದೆ. ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವ ಇವರು ಈಗ ಒಂದೇ ಋತುವಿನ ಎಲ್ಲಾ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲುವತ್ತ ತನ್ನ ಚಿತ್ತ ನೆಟ್ಟಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಎಲ್ಲವೂ ಸಾಧ್ಯ ಎನ್ನುವುದನ್ನು ರೂಪಿಸಿರುವ ಜೊಕೋವಿಕ್ ಕಳೆದ ಫೆಬ್ರವರಿ ತಿಂಗಳಲ್ಲಿ ದಾಖಲೆಯ ಒಂಭತ್ತನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಈಗ ಫ್ರೆಂಚ್ ಓಪನ್ ಟೆನಿಸ್ ಪ್ರಶಸ್ತಿ ಜಯಿಸಿರುವ ಇವರು ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಂಬಲ್ಡನ್‌ಗೆ ಸಿದ್ಧರಾಗುತ್ತಿದ್ದಾರೆ. ಕಳೆದ ಬಾರಿ ಜೊಕೋವಿಕ್ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿದ್ದರು. ವಿಂಬಲ್ಡನ್ ನಂತರ ಒಲಿಂಪಿಕ್ಸ್ ನಡೆಯಲಿದ್ದು ಆ ನಂತರ ಅಮೆರಿಕ ಓಪನ್ ಟೂರ್ನಿ ನಡೆಯಲಿದೆ. ಮುಂಬರುವ ಈ ಎಲ್ಲಾ ಪಂದ್ಯಾಟಗಳಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ಜೊಕೋವಿಕ್ ಹೊಂದಿದ್ದಾರೆ. ಪುರುಷರ ವಿಭಾಗದಲ್ಲಿ ಇದುವರೆಗೆ ಯಾರಿಗೂ ಗೋಲ್ಡನ್ ಗ್ರ್ಯಾಂಡ್ ಸ್ಲಾಮ್ ಗಳಿಸಲು ಸಾಧ್ಯವಾಗಲಿಲ್ಲ . ಮಹಿಳಾ ವಿಭಾಗದಲ್ಲಿ ಜರ್ಮನಿಯ ಸ್ಟೆಫಿ ಗ್ರಾಫ್ ೧೯೮೮ರಲ್ಲಿ ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಮತ್ತು ಒಲಿಂಪಿಕ್ ಚಿನ್ನದ ಪದಕ ಗಳಿಸಿದ್ದರು. ಇಂತಹ ಕಠಿಣ ಸವಾಲನ್ನು ಮುಂದಿಟ್ಟು ಗೋಲ್ಡನ್ ಗ್ರ್ಯಾಂಡ್ ಸ್ಲಾಮ್ ಸಾಧನೆ ಮಾಡುವ ಗುರಿಯನ್ನು ಜೊಕೋವಿಕ್ ಹೊಂದಿದ್ದಾರೆ. ಇದು ಅವರ ಮಹತ್ವದ ಕನಸು ಕೂಡ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!