spot_img
Thursday, June 18, 2026
spot_img

ಹೀಗೊಂದು ಬಯೋಡ್ರಾಮಾ ‘ಖಾಕಿಯೊಳಗಿನ ಸಂತ’ | ಬಿಎಂಟಿಸಿ ಕಲಾವಿದರಿಂದ ಕೆ. ಮಧುಕರ್ ಶೆಟ್ಟಿ ಜೀವನಗಾಥೆ ಪ್ರಯೋಗ

ವ್ಯಕ್ತಿಗಳ ಜೀವನ-ಸಾಧನೆ ಕುರಿತ ಬಯೋಪಿಕ್‍ಗಳು, ಘಟನೆ-ವಿದ್ಯಮಾನಗಳ ಫೈಲ್‍ಗಳು ಬೆಳ್ಳಿ ತೆರೆಯಲ್ಲಿ ರಾರಾಜಿಸುವ ಕಾಲಘಟ್ಟದಲ್ಲಿ ಅಪರೂಪಕ್ಕೆ ಎಂಬಂತೆ ಇದೇ ಪ್ರಕಾರಕ್ಕೆ ಸೇರಬಹುದಾದ ಒಂದು ಬಯೋಡ್ರಾಮಾ ರಂಗಭೂಮಿಯಲ್ಲಿ ಪ್ರದರ್ಶನಗೊಂಡಿರುವುದು ಗಮನಾರ್ಹವಾಗಿದೆ.

ಪ್ರತಿ ಹುಣ್ಣಿಮೆಯಂದು ವೈವಿಧ್ಯಮಯ ಚಟುವಟಿಕೆಗಳ ಮೂಲಕ ಕರ್ನಾಟಕದ ಸಾಂಸ್ಕøತಿಕ ಚಳವಳಿಯ ಲೋಕದಲ್ಲಿ ಗುರುತಿಸಿಕೊಂಡಿರುವ ಕೋಲಾರದ `ಆದಿಮ’ ಸಂಘಟನೆಯ 230ನೇ `ಹುಣ್ಣಿಮೆ ಹಾಡು’ ಕಾರ್ಯಕ್ರಮದಲ್ಲಿ ಪ್ರಸ್ತುತಿಗೊಂಡ `ಖಾಕಿಯೊಳಗಿನ ಸಂತ’ -ಇದುವೇ ಆ ನಾಟಕ.

ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಸಾಂಸ್ಕøತಿಕ ಕಲಾ ಕುಟೀರದ ಕಲಾವಿದರು ತೇರಹಳ್ಳಿ ಬೆಟ್ಟದ ಬಂಡೆಗಳ ನಡುವಿನ ಬಯಲು ರಂಗಮಂದಿರದಲ್ಲಿ ನಾಟಕವನ್ನು ಪ್ರದರ್ಶಿಸಿದರು.

ಭ್ರಷ್ಟಾಚಾರದ ಹುಲ್ಲುಗಾವಲು ಹಾಗೂ ದರ್ಪ-ಕ್ರೌರ್ಯದತಾಣವೆಂಬ ಕಪ್ಪುಚುಕ್ಕೆ ಹೊಂದಿರುವ ಪೊಲೀಸ್ ಇಲಾಖೆಯನ್ನು ಆ ಕಳಂಕದಿಂದ ಹೊರತರುವ ರೀತಿಯಲ್ಲಿ ಪೊಲೀಸ್ ಸೇವೆಯಲ್ಲಿದ್ದೇ ಪ್ರಾಮಾಣಿಕತೆ ಹಾಗೂ ಮಾನವೀಯ ಅಂತಃಕರಣದಿಂದ ನಡೆದು ಮಾದರಿಯಾದ ಐಪಿಎಸ್ ಅಧಿಕಾರಿ ಡಾ. ಕೆ. ಮಧುಕರ ಶೆಟ್ಟಿ ಅವರ ಜೀವನ ಆಧಾರಿತ ನಾಟಕವೆನ್ನುವುದೇ ಇದರ ವಿಶೇಷತೆಯಾಗಿದೆ.

ಪ್ರಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಪುತ್ರನಾಗಿದ್ದ ಮಧುಕರ, ಪೊಲೀಸ್ ಇಲಾಖೆಯಲ್ಲಿದ್ದರೂ ತಂದೆಯ ಜಾಡಿನಲ್ಲೇ ಸಾಗಿ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಮೆರೆದವರು. ಮಾನವೀಯ ಮೌಲ್ಯಗಳನ್ನು ರಕ್ತಗತ ಮಾಡಿಕೊಂಡಿದ್ದರೂ ಕರ್ತವ್ಯ ನಿರ್ವಹಣೆಯಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಮಧುಕರ, ಪೊಲೀಸ್ ಇಲಾಖೆ ಹಾಗೂ ಲೋಕಾಯುಕ್ತದಲ್ಲಿದ್ದಾಗ ಕ್ರಿಮಿನಲ್‍ಗಳು ಮತ್ತು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದರು. ಖಾದಿ ಮತ್ತು ಕಾವಿಗಳ ನಡುವೆ `ಸಂತ’ರುಮಾಯವಾಗುತ್ತಿದ್ದ ಸನ್ನಿವೇಶದಲ್ಲಿ ಖಾಕಿಯೊಳಗಿನ ಸಂತನಾಗಿ ಮೂಡಿಬಂದಿದ್ದ ಅನನ್ಯ ಜೀವನೋತ್ಸಾಹಿ, ಜೀವನ ಪ್ರೇಮಿ ಮಧುಕರ, 47ರ ಹರೆಯದ ತೀರಾ ಸಣ್ಣ ಪ್ರಾಯದಲ್ಲೇ (17.12.1971-28.12.2018) ಜೀವನಯಾತ್ರೆ ಮುಗಿಸಿದಾಗ ಆಘಾತದ ಅಲೆಯೇ ಎದ್ದಿತ್ತು. ಅನಾರೋಗ್ಯ ಪೀಡಿತರಾಗಿದ್ದ ಮಧುಕರ್‍ಗೆ ಸೂಕ್ತ ಚಿಕಿತ್ಸೆ ದೊರಕದೆ ಅವರು ಮೃತಪಟ್ಟರೆಂಬ ಆರೋಪವು ಕುಟುಂಬಸ್ಥರು ಹಾಗೂ ಅಭಿಮಾನಿ ವಲಯದಿಂದ ಕೇಳಿಬಂದಿತ್ತು.
ಕಣ್ಣಂಚಿನಲ್ಲಿ ನೀರು ಹನಿಸಿದ ಪ್ರಸಂಗಗಳು.

ಜೆಎನ್‍ಯುನಿಂದ ಎಂಎ ಹಾಗೂ ನ್ಯೂಯಾರ್ಕ್‍ನ ಆಲ್ಬನಿ ವಿವಿಯಿಂದ ಡಾಕ್ಟರೇಟ್ ಪದವಿ ಗಳಿಸಿದ್ದ ಮಧುಕರ್, ಪೊಲೀಸ್ ವೃತ್ತಿಗೆ ಸೇರಿದ ನಂತರ ಎದುರಿಸಿದ್ದ ಪ್ರಸಂಗಗಳನ್ನು ಎಚ್ಚರದಿಂದ ಪೋಣಿಸಿ ದೃಶ್ಯಗಳನ್ನಾಗಿ ರಂಗದ ಮೇಲೆ ಪ್ರಯೋಗಿಸಿದ್ದಾರೆ ನಾಟಕವನ್ನು ರಚಿಸಿ ನಿರ್ದೇಶನದ ಹೊಣೆಯನ್ನೂ ನಿರ್ವಹಿಸಿರುವ ಬಿಎಂಟಿಸಿ ಸಿಬ್ಬಂದಿ ಸಿದ್ದರಾಮ ಕೊಪ್ಪರ್.

ಕಡಲೆಕಾಯಿ ವ್ಯಾಪಾರಿಯೊಬ್ಬನಿಂದ ಒಬ್ಬ ಕಾನ್‍ಸ್ಟೇಬಲ್ 50 ರೂಪಾಯಿಕಿತ್ತು ಕೊಂಡಿದ್ದ ಆರೋಪ ಬಂದಿದ್ದಾಗ ಅವರಿಬ್ಬರನ್ನೂ ಕರೆಸಿಕೊಂಡು ಮಾತುಕತೆ ನಡೆಸಿ ತನ್ನಲ್ಲಿದ್ದ 1,350 ರೂ.ಗಳನ್ನು ಉಭಯತ್ರರಿಗೆ ಕೊಟ್ಟಿದ್ದ ಮಾನವೀಯ ಅಂತಃಕರಣದ ವ್ಯಕ್ತಿ ಮಧುಕರ. ಈ ಸನ್ನಿವೇಶರಂಗದ ಮೇಲೆ ಆದ್ರ್ರವಾಗಿ ಮೂಡಿಬಂದು ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಹನಿಯುವಂತೆ ಮಾಡಿದ್ದು ನಾಟಕದ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ.

ಚಾಲಕರು, ನಿರ್ವಾಹಕರು, ಡಿಪೋ ಟೆಕ್ನೀಶಿಯನ್‍ಗಳು -ಈ ರೀತಿಯಾಗಿ ಬಿಎಂಟಿಸಿಯ ವಿವಿಧ ವಿಭಾಗಗಳಲ್ಲಿ ದುಡಿಯುವ ಉದ್ಯೋಗಿಗಳು ವೃತ್ತಿಜೀವನದ ಜಂಜಡದ ನಡುವೆಯೇ ಸಾಂಸ್ಕøತಿಕವಾಗಿ ಅರಳಲು ಕಲಾ ಕುಟೀರ ವೇದಿಕೆಯಾಗಿದೆ. ಹವ್ಯಾಸಿಗಳಾದರೂ ಈ ಕಲಾವಿದರು ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆಯಾ ಪಾತ್ರಗಳಿಗೆ ನ್ಯಾಯ ಒದಗಿಸಿ ಮೆಚ್ಚುಗೆಗೆ ಪಾತ್ರರಾದರು. ಮಧುಕರ್ ಪಾತ್ರಧಾರಿರಂಗಸ್ವಾಮಿ ಪಾತ್ರಕ್ಕೆ ಜೀವತುಂಬಿ ಗಮನ ಸೆಳೆಯುತ್ತಾರೆ.

ಉಮಾ ಪಿ ಸಹ ನಿರ್ದೇಶನ, ದೇಶಿ ಮೋಹನ್ ಸಂಗೀತ, ಜಯರಾಜ್ ಹೊಸ್ಕೂರ್ ಪ್ರಸಾದನ ಮತ್ತು ಮಹೇಂದ್ರಕುಮಾರ್‍ರ ಬೆಳಕು ಸಂಯೋಜನೆ ಹೊಂದಿದ್ದ `ಖಾಕಿಯೊಳಗಿನ ಸಂತ’ ನಾಟಕ, ಸಾಮಾಜಿಕ ಮೌಲ್ಯಗಳು ಅಧಃಪತನಗೊಳ್ಳುತ್ತಿರುವ ಕಾಲಘಟ್ಟದಲ್ಲಿಉತ್ತಮ ಸಂದೇಶ ಸಾರುವ ಮೌಲಿಕ ಪ್ರಯೋಗವಾಗಿದಾಖಲಾಗುತ್ತದೆ.

ಹುಣ್ಣಿಮೆ ಹಾಡು
ನೆಲಮೂಲ ಸಂಸ್ಕøತಿಯ ಪ್ರಸಾರಕ್ಕಾಗಿ ಜನಿಸಿರುವ ಆದಿಮ ಸಂಸ್ಥೆ ಕಳೆದ 20 ವರ್ಷಗಳಿಂದ ಪ್ರತಿ ಹುಣ್ಣಿಮೆ ದಿನದಂದು ಆಯೋಜಿಸುವ ಕಾರ್ಯಕ್ರಮವೇ `ಹುಣ್ಣಿಮೆ ಹಾಡು’. ಶತಶೃಂಗ ಪರ್ವತ ಶ್ರೇಣಿಯ ತೇರಹಳ್ಳಿ ಬೆಟ್ಟದ ಅಂಗಳದಲ್ಲಿ, 2026ರ ಮೇ 31ರಂದು ಕುಳಿರ್ಗಾಳಿ ಜತೆಚೆಲ್ಲಿದ ತಿಂಗಳನ ಬೆಳಕು 230ನೇ `ಹುಣ್ಣಿಮೆ ಹಾಡು’ ಗೆಜ್ಜೆ-ಹೆಜ್ಜೆಗೆ ಸಾಕ್ಷಿಯಾಯಿತು. ಮಧುಕರರ ಸಹೋದ್ಯೋಗಿಗಳಾಗಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳಾದ ಬಿಎಂಟಿಸಿ ಭದ್ರತೆ ಹಾಗೂ ಜಾಗೃತಿ ನಿರ್ದೇಶಕ ಅಬ್ದುಲ್ ಅಹದ್ ಮತ್ತು ಬೆಂಗಳೂರಿನ ಪೊಲೀಸ್ ತರಬೇತಿ ಕೇಂದ್ರದ ಡಿಐಜಿಪಿ ಆರ್. ದೇವರಾಜ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದು ಅರ್ಥಪೂರ್ಣವಾಗಿತ್ತು.

ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಗೌರವ
ಭಾರತದ ಸರ್ವೋನ್ನತ ಪೊಲೀಸ್ ತರಬೇತಿ ಸಂಸ್ಥೆಯಾದ ರಾಷ್ಟ್ರೀಯ ಪೊಲೀಸ್ ಅಕಾಡೆಮಿ, ತನ್ನ ಪ್ರಮುಖ ಉಪನ್ಯಾಸ ಸಭಾಂಗಣಕ್ಕೆ ಮಧುಕರ ಅವರ ಹೆಸರನ್ನೇ ಇಟ್ಟಿರುವುದು, ಬದ್ಧತೆ ಹಾಗೂ ಸಮರ್ಪಣೆಗೆ ಹೆಸರಾಗಿದ್ದ ಅಧಿಕಾರಿಗೆ ಸಂದ ಸೂಕ್ತ ಗೌರವವಾಗಿದೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!