spot_img
Saturday, April 4, 2026
spot_img

ಆತ್ರಾಡಿ: ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ

ಸಂಸ್ಕೃತಿ ಕೇಂದ್ರಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ-ಗುರುರಾಜ ರಾವ್
ಕುಂದಾಪುರ: ಇವತ್ತು ಕೇವಲ ಹಣ ಗಳಿಸುವುದು, ಆಧುನಿಕತೆ ಹೆಸರಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದೇ ವ್ಯಾಪಕವಾಗುತ್ತಿದೆ. ಈ ನಡುವೆ ಧರ್ಮ, ಸಂಸ್ಕೃತಿ, ನಮ್ಮ ನಾಡಿನ ಹಿರಿಮೆ, ಗರಿಮೆಗಳನ್ನು ಶ್ರೇಷ್ಟ ಕೆಲಸಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಬ್ದಾರಿ ನಮ್ಮ ಮೇಲಿದೆ. ಊರಿಗೆ ಕೀರ್ತಿ ತರುವ ಕೆಲಸ ಮಾಡಬೇಕು. ಜೀವನ ಮೌಲ್ಯಗಳನ್ನು ನೀಡುವಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಈ ವಿದ್ಯಾಸಂಸ್ಥೆ ಸಂಸ್ಕೃತಿ ಕೇಂದ್ರಿತವಾಗಿ ಶಿಕ್ಷಣ ನೀಡುತ್ತಾ ಬಂದಿದೆ ಎಂದು ಸಿವಿಲ್ ಇಂಜಿನಿಯರ್ ಗುರುರಾಜ ರಾವ್ ಹೇಳಿದರು.

ಬೈಂದೂರು ಶೈಕ್ಷಣಿಕ ವಲಯದ ಆತ್ರಾಡಿ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ ಇದರ ವಾರ್ಷಿಕೋತ್ಸವ ೨೦೨೫-೨೬ವನ್ನು ಜ್ಯೋತಿ ಪ್ರಜ್ವಲನೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಟುಂಬಗಳು ಇವತ್ತು ಸೂಕ್ಷ್ಮವಾಗುತ್ತಿದೆ. ಸೂಕ್ಷ್ಮವಾಗಿರುವ ಕುಟುಂಬ ವ್ಯವಸ್ಥೆ ಕೂಡಾ ಸಂಸ್ಕೃತಿ ಆಧರಿತವಾಗಬೇಕು, ನಗರ ವ್ಯಾಮೋಹ ಹಾಗೂ ವಿದೇಶಿ ವ್ಯಾಮೋಹದ ನಡುವೆ ತಾಯ್ನಡ ಸೇವೆ ಸಲ್ಲಿಸಬೇಕು, ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು, ಹಣ ಗಳಿಸುವುದು ಮಾತ್ರವಲ್ಲ, ಶಿಕ್ಷಣ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಶಾಸಕ ಗುರುರಾಜ ಗಂಟಿಹೊಳೆ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೆಕ್ಕಪರಿಶೋಧಕರಾದ ಶ್ರೀಧರ ಹೆಗ್ಡೆ ಹೆಗ್ಗುಂಜೆ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಇಲ್ಲಿ ಕಲಿಸಬೇಕಾಗುತ್ತಿದೆ. ಮೌಲ್ಯಯುತ ಶಿಕ್ಷಣ ಇಲ್ಲಿ ಗಮನಿಸಬಹುದು. ಯಕ್ಷಗಾನದ ಮೂಲಕ ಪರಿಣಾಮಕಾರಿಯಾಗಿ ನೀತಿ ಪಾಠ ಕಲಿಯಬಹುದು. ಇವತ್ತು ಅವಿಭಜಿತ ಕುಟುಂಬ ವ್ಯವಸ್ಥೆಯಿಂದ ವಿಭಕ್ತ ಕುಟುಂಬ ವ್ಯವಸ್ಥೆಗೆ ಬಂದಿದ್ದೇವೆ. ಈ ನಡುವೆ ಸಂಬಂಧಗಳ ಮೌಲ್ಯಗಳನ್ನು ಮರೆತಿದ್ದೇವೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕೌಟುಂಬಿಕ ಬಾಂಧವ್ಯವನ್ನು ತಿಳಿದುಕೊಳ್ಳಬೇಕು. ಸಮಾಜ ಅಕ್ಷರಸ್ಥರಾಗಬೇಕು ಎಂದು ಬಯಸುವ ನಿಸ್ವಾರ್ಥ ಸೇವೆ ಶಿಕ್ಷಣ ಸಂಸ್ಥೆಗಳದ್ದು, ಕಲಿತ ಶಿಕ್ಷಣ ಸಂಸ್ಥೆಯನ್ನು ಎಂದೂ ಮರೆಯಬಾರದು ಎಂದರು.

ವಿ‌ಎಂಕೆ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಬಿ.ಎನ್.ಶೆಟ್ಟಿ ಬಗ್ವಾಡಿ ಅಧ್ಯಕ್ಷತೆ ವಹಿಸಿದ್ದರು. ವಿ‌ಎಂಕೆ ಗವರ್ನಿಂಗ್ ಕೌನ್ಸಿಲ್ ಉಪಾಧ್ಯಕ್ಷರಾದ ಆತ್ರಾಡಿ ನಾರಾಯಣ ಶೆಟ್ಟಿ, ಗ್ರಾಮ ಸೇವಾ ಸಂಗಮದ ಅಧ್ಯಕ್ಷರಾದ ರಾಜಗೋಪಾಲ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ರಾಜೀವ ಶೆಟ್ಟಿ ಬಗ್ವಾಡಿ, ವಿದ್ಯಾರ್ಥಿ ನಾಯಕ ಅನ್ವಿತ್ ಶೆಟ್ಟಿ, ವಿದ್ಯಾರ್ಥಿ ನಾಯಕಿ ತನ್ವಿ ಶೆಟ್ಟಿ ಉಪಸ್ಥಿತರಿದ್ದರು.

ವಿಜಯ ಮಕ್ಕಳ ಕೂಟದ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಪಾಠ, ಪಠ್ಯೇತರವಾಗಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಪ್ರಾಮಾಣಿಕ ಪ್ರಯತ್ನ ಸಂಸ್ಥೆ ನಿರಂತವಾಗಿ ಮಾಡುತ್ತಾ ಬಂದಿದೆ. ಯಕ್ಷಗುರು ಪ್ರಸಾದ ಕುಮಾರ ಮೊಗೆಬೆಟ್ಟು ಅವರಲ್ಲಿ ಸಂಸ್ಥೆಯ 110 ವಿದ್ಯಾರ್ಥಿಗಳು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ. ಜಯಕರ ಪೂಜಾರಿ ಗುಲ್ವಾಡಿ ಅವರು ಭಜನೆ ತರಭೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕವಾಗಿ ಸಾಧನೆ ಮಾಡುತ್ತಿದ್ದಾರೆ. ಶೆಟ್ಲ್ ಬ್ಯಾಡ್ಮಿಂಟನ್ ನಲ್ಲಿ ವಿಭಾಗೀಯ ಮಟ್ಟ ಪ್ರತಿನಿಧಿಸಿದ್ದಾರೆ. ಪ್ರಸ್ತುತ ಐದನೇ ಬ್ಯಾಚ್ ನವರು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದಾರೆ. ಎಸ್.ಎಸ್.ಎಲ್.ಸಿಯಲ್ಲಿ ಗುಣಮಟ್ಟದ ಫಲಿತಾಂಶ ನೀಡುವುದರೊಂದಿಗೆ ಬೈಂದೂರು ವಲಯದಲ್ಲಿ ಪ್ರಥಮ, ಜಿಲ್ಲೆಯಲ್ಲಿ ಟಾಪ್ 10 ಒಳಗಡೆ ಇದ್ದೇವೆ ಎಂದರು.

ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ದಿಶಾಂತ್ ವಂದಿಸಿದರು, ವಿದ್ಯಾರ್ಥಿನಿಯರಾದ ಮನಸ್ವಿ ಮತ್ತು ಶ್ರೀಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.

‘ಕನ್ನಡಮ್ಮನ ಹರಕೆಯಿದು ಮರೆಯದಿರು ಚಿನ್ನ’ ಸಾಂಸ್ಕೃತಿಕ ವೇದಿಕೆಯ ಮೂಲಕ ಬಯಲಾಟ 2025-26 ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ನೃತ್ಯ, ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ-ನೃತ್ಯವೈಭವ ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!