spot_img
Friday, January 30, 2026
spot_img

ಶುಭ್‌ಮನ್ ಗಿಲ್‌ಗೆ  ಒಲಿದು ಬಂತು ‘ಟೆಸ್ಟ್  ನಾಯಕತ್ವ’

[ಎಸ್.ಜಗದೀಶ್ಚಂದ್ರ ಅಂಚನ್, ಸೂಟರ್ ಪೇಟೆ]

ಭಾರತದ ಕ್ರಿಕೆಟ್‌ ಇದೀಗ  ಸಂಕ್ರಮಣ ಕಾಲಘಟ್ಟದಲ್ಲಿದೆ. ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ,ರೋಹಿತ್ ಶರ್ಮ ಹಾಗೂ ಆರ್. ಅಶ್ವಿನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಭಾರತ ತಂಡದ ಸ್ಥಿತಿಯನ್ನು ಊಹಿಸುವುದು ಕಷ್ಟಕರ. ಈ ಮೂವರು ದಿಗ್ಗಜರ ನಿವೃತ್ತಿಯ ನಂತರ ಸದೃಢತೆಯನ್ನು ಕಳೆದುಕೊಂಡಿರುವ ಭಾರತ ತಂಡವನ್ನು ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸುವವರು ಯಾರು ಎನ್ನುವ ಚರ್ಚೆಗಳು ಐಪಿಎಲ್‌ ಟೂರ್ನಿಯ ಜಬರ್ದಾಸ್ತದ ಪ್ರದರ್ಶನದ ನಡುವೆಯೂ ನಡೆಯುತ್ತಿತ್ತು. ಇದೀಗ ಆ ಚರ್ಚೆಗಳಿಗೆ ಫುಲ್ ಸ್ಟಾಪ್ ಬಿದ್ದಿದ್ದು , ಶನಿವಾರ ಭಾರತ ಟೆಸ್ಟ್‌ ತಂಡದ ನೂತನ ನಾಯಕರಾಗಿ ಯುವ ಆಟಗಾರ ಶುಭ್‌ಮನ್ ಗಿಲ್‌ಗೆ ಪಟ್ಟಾಭಿಷೇಕ ಆಗಿದೆ. ಐಪಿಎಲ್‌ ಟೂರ್ನಿಯಲ್ಲಿ  ಗುಜರಾತ್‌ ಟೈಟಾನ್ಸ್ ಪರ ರನ್ ಗಳಿಕೆ ಹಾಗೂ ನಾಯಕನಾಗಿ ಸರ್ವಾಂಗೀಣ ಪ್ರದರ್ಶನ ನೀಡುತ್ತಿರುವ ಶುಭ್‌ಮನ್ ಗಿಲ್  ಒಂದರ್ಥದಲ್ಲಿ ಅದೃಷ್ಟದ ಬೆನ್ನೇರಿದ ಆಟಗಾರ.

ರೋಹಿತ್ ಶರ್ಮ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಸಂದರ್ಭದಲ್ಲಿ  ಟೆಸ್ಟ್ ತಂಡದ ನಾಯಕತ್ವಕ್ಕೆ ಜಸ್‌ಪ್ರೀತ್ ಬುಮ್ರಾ ಹಾಗೂ ಕೆಎಲ್ ರಾಹುಲ್ ಹೆಸರು ಬಲವಾಗಿ ಕೇಳಿ ಬಂದಿತ್ತು. ಭಾರತದ ಮಾಜಿ ಟೆಸ್ಟ್‌ ನಾಯಕರು ಸೇರಿದಂತೆ ಹಲವು ದಿಗ್ಗಜರು ಇವರಿಬ್ಬರಲ್ಲಿ ಒಬ್ಬರಿಗೆ ನಾಯಕತ್ವ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ, ಮುಂದಿನ ಭವಿಷ್ಯದ ದೃಷ್ಟಿಯಿಂದ ಬಿಸಿಸಿಐ ಆಯ್ಕೆ ಸಮಿತಿಯು ಯುವ ಆಟಗಾರ ಶುಭ್‌ಮನ್ ಗಿಲ್‌ಗೆ ಟೆಸ್ಟ್  ನಾಯಕತ್ವದ ಜವಾಬ್ದಾರಿಯನ್ನು ನೀಡಿದೆ. ಶುಭ್‌ಮನ್ ಗಿಲ್ ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದ ಕೌಶಲ್ಯವನ್ನು ತೋರಿಸಿ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಶುಭ್‌ಮನ್ ಗಿಲ್  ಟೆಸ್ಟ್‌ ಕ್ರಿಕೆಟ್‌ ನಾಯಕತ್ವಕ್ಕೆ ಪಾದಾರ್ಪಣೆಯನ್ನು ಮಾಡಲಿದ್ದು,ಇದು ಅವರ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು ಮುಂದಿನ ತಿಂಗಳ ಜೂನ್ -20ರಿಂದ ಕ್ರಿಕೆಟ್‌ ಜನಕರ ನಾಡಿನಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಭಾರತ – ಇಂಗ್ಲೆಂಡ್‌ ತಂಡಗಳು ಆಡಲಿವೆ. ಇದು ಭಾರತ ತಂಡಕ್ಕೆ ಒಂದು ಪ್ರಮುಖ ಸವಾಲಾಗಿದೆ. ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ವೈಟ್‌ವಾಷ್ ಅನುಭವಿಸಿದ ನಂತರ ,ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲುವ ಮೂಲಕ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕೈಚೆಲ್ಲಿತ್ತು. ಹೀಗಾಗಿ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೆ ಗೆಲುವಿನ ವೈಭವ ಕಾಣಬೇಕಾಗಿದೆ. ಇಂಗ್ಲೆಂಡ್‌ನ ಕಠಿಣ ಪಿಚ್‌ಗಳು ಮತ್ತು ವೇಗದ ಬೌಲಿಂಗ್‌ಗೆ ಎದುರಾಗಿ ಶುಭ್‌ಮನ್  ಗಿಲ್‌ರ ನಾಯಕತ್ವವು ಪರೀಕ್ಷೆಗೆ ಒಳಗಾಗಲಿದೆ. ಈ ಸರಣಿಯು ಗಿಲ್‌ಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಒಂದು ಉತ್ತಮ ವೇದಿಕೆಯಾಗಿದೆ.

ಗಿಲ್‌ಗೆ ಸವಾಲು : ಶುಭ್‌ಮನ್ ಗಿಲ್‌ಗೆ ಟೆಸ್ಟ್ ನಾಯಕತ್ವ ಹೊಸತು. ಸೀಮಿತ ಓವರುಗಳ ಪಂದ್ಯಗಳಿಗೆ ಹೋಲಿಸಿದರೆ , ಟೆಸ್ಟ್ ಕ್ರಿಕೆಟ್‌ ನಲ್ಲಿ ಕಠಿಣ ಪರೀಕ್ಷೆ ಎದುರಿಸಬೇಕಾಗುತ್ತದೆ. ಮೊದಲಿಗೆ  ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಆರ್. ಅಶ್ವಿನ್  ಅವರಂತಹ ದಿಗ್ಗಜ ಆಟಗಾರರು ತಂಡದಲ್ಲಿಲ್ಲ. ತಂಡ ಬಹುತೇಕ ಯುವ ಪ್ರತಿಭೆಗಳಿಂದ ತುಂಬಿದೆ . ಈ ಹೊಸ ಆಟಗಾರರ ಸಾಮರ್ಥ್ಯವನ್ನು ಅರಿತು ಒಟ್ಟಿಗೆ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಗಿಲ್ ಮೇಲಿದೆ. ಮೊದಲೇ ಹೇಳಿದಂತೆ ಇಂಗ್ಲೆಂಡ್‌ ವಿರುದ್ಧದ ಸರಣಿ ಕಠಿಣ ಆಗಿರುವುದರಿಂದ ಗಿಲ್  ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸಬೇಕು. ಕಳೆದ ಕೆಲವು ವರ್ಷಗಳಿಂದ ತಂಡದ ಭಾಗವಾಗಿರುವ ಗಿಲ್‌ ಕೇವಲ ಬ್ಯಾಟರ್  ಆಗಿ ಮಾತ್ರವಲ್ಲ, ತಂಡದ ನಾಯಕರಾಗಿಯೂ ಆಡಬೇಕಾಗುತ್ತದೆ. ತಂಡದ ಸಂಯೋಜನೆಯಲ್ಲೂ ವಿಶೇಷವಾಗಿ ಗಿಲ್ ಗಮನ ಹರಿಸಬೇಕು.

ದ್ರಾವಿಡ್ ಗರಡಿಯಲ್ಲಿ ಪಳಗಿದ ಪ್ರತಿಭೆ : ಶುಭ್​ಮನ್ ಗಿಲ್ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಪ್ರತಿಭೆ. ರಾಹುಲ್ ದ್ರಾವಿಡ್ ಅಂಡರ್-19 ತಂಡದ ಕೋಚ್ ಆಗಿದ್ದಾಗ ಗಿಲ್ ತಂಡದ ನಾಯಕರಾಗಿದ್ದರು. ಹೀಗಾಗಿ ನಾಯಕನಾಗಿ ಗಿಲ್ ಅವರ ಸಾಮರ್ಥ್ಯದ ಬಗ್ಗೆ ದ್ರಾವಿಡ್ ಗೆ ಉತ್ತಮ ಅರಿವಿತ್ತು. ಮಾತ್ರವಲ್ಲ ಭಾರತ  ಹಿರಿಯ ತಂಡದ ಕೋಚ್ ಆಗಿದ್ದಾಗಲೂ  ಗಿಲ್‌ ಪ್ರತಿಭೆ ಅನಾವರಣಗೊಳ್ಳಲು ದ್ರಾವಿಡ್ ಪ್ರಮುಖ ಕಾರಣರಾಗಿದ್ದರು. ಹೀಗಾಗಿ ನಾಯಕತ್ವದ ರೇಸ್​ನಲ್ಲಿ ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹೆಸರುಗಳು ಮುಂಚೂಣಿಯಲ್ಲಿದ್ದರೂ ಗಿಲ್ , ರಾಹುಲ್ ದ್ರಾವಿಡ್ ಶಿಷ್ಯ ಎನ್ನುವ ಸೂಕ್ಷ್ಮತೆಯನ್ನು ಬಿಸಿಸಿಐ ಗಮನಿಸಿ ನಾಯಕ ಪಟ್ಟ ನೀಡಿದೆ.

ಐದನೇ ಕಿರಿಯ ನಾಯಕ ಗಿಲ್ : ಭಾರತದ ಟೆಸ್ಟ್‌ ಕ್ರಿಕೆಟ್‌ಗೆ 93 ವರ್ಷಗಳ ಇತಿಹಾಸವಿದೆ. ಈ 93 ವರ್ಷಗಳ ಇತಿಹಾಸವನ್ನು ಕೆದಕಿದಾಗ  ಭಾರತ ತಂಡದ ಮೊದಲ ನಾಯಕ ಕರ್ನಲ್ ಸಿ.ಕೆ. ನಾಯ್ಡು ಅವರು. ಈ ನಾಯಕತ್ವದ ಪರಂಪರೆ  ಕರ್ನಲ್ ಸಿ.ಕೆ. ನಾಯ್ಡು ಅವರಿಂದ ಆರಂಭವಾಗಿ ಇತ್ತೀಚೆಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮವರೆಗೂ ಮುಂದುವರೆದಿದೆ. ಇದೀಗ ಪರಂಪರೆಯ ಕೊಂಡಿಯಾಗಿ ಶುಭ್​ಮನ್ ಗಿಲ್ ಅವರ ಹೆಸರು ಜೋಡಿಸಲ್ಪಟ್ಟಿದೆ. ಗಿಲ್ ಈಗ ಭಾರತ ಟೆಸ್ಟ್‌ ತಂಡದ 37ನೇ ನಾಯಕ ಹಾಗೂ ಐದನೇ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲೇ ಭಾರತ ತಂಡವನ್ನು ಮುನ್ನೆಡೆಸಿರುವ ಹೆಗ್ಗಳಿಕೆಯು ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಹೆಸರಿನಲ್ಲಿದೆ. 1962ರಲ್ಲಿ ಕೇವಲ 21ನೇ ವಯಸ್ಸಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದ ಪಟೌಡಿ ಭಾರತ ತಂಡವನ್ನು ಮುನ್ನೆಡೆಸಿದ್ದರು. 1996ರಲ್ಲಿ ಸಚಿನ್‌ ತೆಂಡೂಲ್ಕರ್‌ 23ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ನಾಯಕನಾಗಿ ಆಯ್ಕೆಯಾಗಿದ್ದರು. ಕಪಿಲ್ ದೇವ್ ಅವರು 24ನೇ ವಯಸ್ಸಿನಲ್ಲಿ ಹಾಗೂ ರವಿ ಶಾಸ್ತ್ರಿ 25ನೇ ವಯಸ್ಸಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ತಂಡವನ್ನು ಮುನ್ನೆಡೆಸಿದ್ದರು.ಇದೀಗ 25ನೇ ವಯಸ್ಸಿನ ಶುಭಮನ್ ಗಿಲ್‌  ಮುಂಬರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ನಾಯಕರಾಗಿದ್ದಾರೆ.

ಅಂತೂ , ಸೊಗಸಾದ ಸ್ಟ್ರೋಕ್‌ಪ್ಲೇ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಖುಷಿ  ಪಡಿಸುತ್ತಿದ್ದ ಶುಭಮನ್ ಗಿಲ್‌ ಟೆಸ್ಟ್‌ ತಂಡದ ನಾಯಕರಾಗಿದ್ದಾರೆ.ಮೂರು ಮಾದರಿಯ ಕ್ರಿಕೆಟ್‌ಗೆ ಸೈ ಎನಿಸಿಕೊಂಡ ಈ ಆಟಗಾರ ಪಂದ್ಯದಿಂದ ಪಂದ್ಯಕ್ಕೆ ಸ್ಥಿರ ಪ್ರದರ್ಶನ ನೀಡುವ ಮೂಲಕ ತನ್ನ  ಪ್ರತಿಭೆಯನ್ನು ಕ್ರಿಕೆಟ್ ಜಗತ್ತಿನ  ಮುಂದೆ ಅನಾವರಣಗೊಳಿಸಿದ್ದಾರೆ. ಬಾಲ್ಯದಿಂದಲೂ ಕ್ರಿಕೆಟ್ ಆಡುತ್ತಿದ್ದ  ಇವರಿಗೆ ಸಚಿನ್ ತೆಂಡೂಲ್ಕರ್ ಮತ್ತು  ರಾಹುಲ್ ದ್ರಾವಿಡ್ ಸ್ಫೂರ್ತಿಯಾಗಿದ್ದರು. ಮನೆಯ ಸಮೀಪದಲ್ಲೇ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಗೆ ಸೇರಿದ ಸ್ಟೇಡಿಯಂ ಇದ್ದ ಕಾರಣ ಗಿಲ್‌ಗೆ ಕ್ರಿಕೆಟ್ ಆಡುವ ಆಸಕ್ತಿ ಮತ್ತಷ್ಟು ಹೆಚ್ಚಿಸಿತು.ಕಠಿಣ ಪರಿಶ್ರಮದಿಂದಲೇ ಕ್ರಿಕೆಟ್ ಆಡುವ ಕೌಶಲ್ಯವನ್ನು ಹೆಚ್ಚಿಸಿಕೊಂಡ ಇವರ ಕ್ರಿಕೆಟ್ ಪಯಾಣ ಅನೇಕ ಯುವಕರಿಗೆ ಸ್ಪೂರ್ತಿಯಾಗಿದೆ. ಒಬ್ಬ ಸಾಮಾನ್ಯ ರೈತನ ಮಗ ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಶುಭ್​ಮನ್ ಗಿಲ್ ಉತ್ತಮ ಉದಾಹರಣೆಯಾಗಿದ್ದಾರೆ.

ಶುಭ್​ಮನ್ ಗಿಲ್ ಅವರ ನಾಯಕತ್ವದ ಪ್ರಯಾಣವು ಮುಂದಿನ ಜೂನ್ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸದೊಂದಿಗೆ ಪ್ರಾರಂಭವಾಗಲಿದೆ. ಕಳೆದ 7 ವರ್ಷಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ  ತನ್ನದೇ ಆದ ಛಾಪು ಮೂಡಿಸುತ್ತಿರುವ ಶುಭಮನ್ ಗಿಲ್, ಇಲ್ಲಿಯವರೆಗೆ ಅದ್ಭುತವಾದ ಸಾಧನೆಗಳನ್ನು ಮಾಡಿದ್ದಾರೆ. ಬಲಗೈ  ಬ್ಯಾಟರ್ ಆಗಿರುವ ಶುಭಮನ್ ಗಿಲ್ 2018 ರಲ್ಲಿ  ವಿಶ್ವ ಕ್ರಿಕೆಟ್‌ಗೆ ಪರಿಚಿತರಾದರು. ಅವರು ಟೀಂ ಇಂಡಿಯಾವನ್ನು ಅಂಡರ್ -19 ವಿಶ್ವಕಪ್ ನಲ್ಲಿ ಚಾಂಪಿಯನ್ ಮಾಡುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದರು. ಅದೇ ವರ್ಷ, ಅವರನ್ನು ಐಪಿಎಲ್ ಗೆ  ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿತು. ಆ ಮೂಲಕ ಐಪಿಎಲ್‌ಗೆ ಎಂಟ್ರಿಕೊಟ್ಟ  ಇವರು  ನಂತರ 2019ರಲ್ಲಿ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದರು. ಗಿಲ್ ಅವರ ಕ್ರಿಕೆಟ್ ಬದುಕಿನ ಸ್ಮರಣೀಯ ಕ್ಷಣವೆಂದರೆ 2020ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದು. ಹೀಗೆ,ಇಲ್ಲಿಂದ ಮುಂದೆ ಅವರ ವೃತ್ತಿಜೀವನದ ಗ್ರಾಫ್ ಏರುತ್ತಲೇ ಇತ್ತು. ಗಿಲ್ ಇದುವರೆಗೆ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 35.05ರ ಸರಾಸರಿಯಲ್ಲಿ 1893 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 7 ಅರ್ಧಶತಕಗಳು ಸೇರಿವೆ. ಮಾತ್ರವಲ್ಲ 55 ಏಕದಿನ ಪಂದ್ಯಗಳಲ್ಲಿ 8 ಶತಕ, 15 ಅರ್ಧಶತಕಗಳ ನೆರವಿನಿಂದ 2775ರನ್ ಕಲೆಹಾಕಿದ್ದಾರೆ. 21 ಟ್ವೆಂಟಿ -20 ಪಂದ್ಯಗಳನ್ನು ಆಡಿರುವ ಇವರು 1 ಶತಕ, 3 ಅರ್ಧಶತಕಗಳು ಸೇರಿ 578 ರನ್ ಗಳಿಸಿದ್ದಾರೆ. ಹೀಗೆ  ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಕೆಲವೇ ವರ್ಷಗಳಲ್ಲಿ ಭಾರತ ತಂಡದ ಬಹುಬೇಡಿಕೆಯ ಆಟಗಾರನಾಗಿ ರೂಪುಗೊಂಡಿದ್ದಾರೆ.ಇದೀಗ ಭಾರತ ಟೆಸ್ಟ್ ತಂಡದ ನಾಯಕತ್ವವು ಇವರಿಗೆ ಲಭಿಸಿದೆ. ಇಂತಹ ಪ್ರತಿಭೆಯ ಗಣಿಯಾಗಿರುವ ಶುಭ್​ಮನ್ ಗಿಲ್ ತನಗೆ ದೊರೆತ ನಾಯಕತ್ವದಲ್ಲೂ ಪ್ರಭಾವಶಾಲಿ ಕೌಶಲ್ಯತೆಯೊಂದಿಗೆ ಪ್ರಜ್ವಲಿಸಲಿ ಎಂದು ಈ ಸಂದರ್ಭದಲ್ಲಿ  ಆಶಿಸೋಣ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!