spot_img
Friday, January 30, 2026
spot_img

ʼಕೈʼ ನೋವಿಗೆ ಹೈಕಮಾಂಡ್‌ ಮುಲಾಮು

ಸದ್ಯಕ್ಕಿಲ್ಲ ಸಂಪುಟ ಸರ್ಜರಿ | ಸುಧಾರಿಸಿಕೊಳ್ಳಲು ಡಿಕೆಶಿಗೆ ಹೈಕಮಾಂಡ್ ಸೂಚನೆ !?

ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡು ವರ್ಷಗಳನ್ನು ಮೇ 20ಕ್ಕೆ ಪೂರ್ಣಗೊಳಿಸಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆಂತರಿಕ ಗೊಂದಲಗಳ ನಡುವೆಯೇ ಆಡಳಿತ ನಡೆಸಬೇಕಾದ ಅನಿವಾರ್ಯ ಎದುರಿಸಿತ್ತು. ಮುಖ್ಯಮಂತ್ರಿ ಪದವಿ ಹಸ್ತಾಂತರ ಹಾಗೂ ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟಕ್ಕೆ ಮೇಜರ್‌ ಸರ್ಜರಿ ಮಾಡಲಾಗುತ್ತದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆಗಾಗ ಕೇಳಿ ಬಂದು ಆಡಳಿತದ ವರ್ಚಸ್ಸಿಗೆ ಧಕ್ಕೆಯೂ ಉಂಟಾಯಿತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ರಾಜಕೀಯ ಪ್ರತಿಷ್ಠೆಯ ವೈಮನಸ್ಸಿತ್ತು ಎಂಬೆಲ್ಲಾ ವಿಚಾರ ಪ್ರತಿಪಕ್ಷಗಳ ಬಾಯಿಗೆ ಸುಲಭ ಗ್ರಾಸವಾಗಿ ದೊರಕಿತು. ಕೊನೆಗೂ ಇವೆಲ್ಲವನ್ನೂ ಮೀರಿ ಸರ್ಕಾರ ತಾನೇ ಹೇಳಿಕೊಳ್ಳುವ ಹಾಗೆ ಯಶಸ್ವಿ ಎರಡು ವರ್ಷಗಳನ್ನು ಪೂರೈಸಿದೆ.

ಎರಡು ವರ್ಷಗಳ ಅಧಿಕಾರವಧಿಯ ಆಚರಣೆಯ ಬಳಿಕ ಮುಖ್ಯಮಂತ್ರಿ ಪದವಿ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂಬ ಮಾಹಿತಿಗಳು ಕಾಂಗ್ರೆಸ್‌ ಆಪ್ತ ಮೂಲಗಳಿಂದಲೇ ಹೊರಬಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು. ಸಿಎಂ ಬದಲಾವಣೆ ಆಗುತ್ತದೆಯೇ ? ಸಂಪುಟಕ್ಕೆ ಯಾರ ಸೇರ್ಪಡೆಯಾಗುತ್ತದೆ ? ಯಾರನ್ನು ಕೈ ಬಿಡಲಾಗುತ್ತದೆ ? ಎನ್ನುವ ಎಲ್ಲಾ ಪ್ರಶ್ನೆಗಳು ರಾಜಕೀಯ ವಲಯವನ್ನು ಕೆರಳಿಸಿದ್ದವು. ಆದರೇ, ಎರಡು ವರ್ಷಗಳು ಪೂರೈಸಿದ ಬಳಿಕ ಈಗ ಆ ಯಾವ ಬದಲಾವಣೆಯೂ ಸದ್ಯಕ್ಕೆ ಇಲ್ಲ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಪದವಿ ಹಸ್ತಾಂತರಕ್ಕಾಗಲಿ ಅಥವಾ ಸಂಪುಟ ಪುನಾರಚನೆಗಾಗಲಿ ಕಾಂಗ್ರೆಸ್‌ ಹೈಕಮಾಂಡ್‌ ಮನಸ್ಸು ಮಾಡುತ್ತಿಲ್ಲ. ʼಡೋಂಟ್‌ ಟಾಕ್‌ʼ ಎಂದು ಖಡಕ್‌ ಆಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರೇ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರಲ್ಲಿರುವ ಮುಖ್ಯಮಂತ್ರಿ ಪದವಿಯನ್ನು ಡಿ.ಕೆ ಶಿವಕುಮಾರ್‌ ಅವರಿಗೆ ಈಗಲೇ ಹಸ್ತಾಂತರಿಸಿದರೇ, ಆಡಳಿತಕ್ಕೆ ಧಕ್ಕೆ ಆಗಬಹುದು ಅಥವಾ ಬಿಜೆಪಿಯ ಟೀಕೆಯನ್ನು ಎದುರಿಸಬೇಕಾಗುತ್ತದೆ ಎನ್ನುವ ಆತಂಕವೂ ಹೈಕಮಾಂಡ್‌ ಗೆ ಇದೆ.

ಕೆಲವು ರಾಜ್ಯಗಳ ಪ್ರದೇಶ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದು ಎಂದು ಮಲ್ಲಿಕಾರ್ಜುನ್ ಖರ್ಗೆ ಕಳೆದ ಕೆಲವು ತಿಂಗಳುಗಳ ಹಿಂದೆ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಡಿಕೆಶಿ ಅವರಲ್ಲಿರುವ ಪ್ರದೇಶ್ ಕಾಂಗ್ರೆಸ್‌ ಅಧ್ಯಕ್ಷಗಿರಿಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ದೃಷ್ಟಿಯಲ್ಲಿ ಕೆಲವು ಕಾಂಗ್ರೆಸ್‌ ಪ್ರಭಾವಿ ಸಚಿವರು, ನಾಯಕರು ಪ್ರಯತ್ನಿಸಿದ್ದರು. ಆದರೇ, ಅವೆಲ್ಲಾ ರಾಜ್ಯ ರಾಜಕಾರಣದಲ್ಲಿ ಸುಖಾಸುಮ್ಮನೆ ಚರ್ಚೆಗೆ ಕಾರಣವಾಯಿತು ಬಿಟ್ಟರೇ, ಮತ್ತೇನೂ ಆಗಲಿಲ್ಲ. ಡಿಕೆಶಿ ತಮ್ಮ ಬಲವನ್ನು ಹೈಕಮಾಂಡ್‌ ಮುಂದೆ ತೋರ್ಪಡಿಸಿದ್ದರು. ʼಕಳೆದ ಕೆಲವು ದಶಕಗಳಿಂದ ಪಕ್ಷಕ್ಕಾಗಿ ಹಗಲು ರಾತ್ರಿ ಶ್ರಮಿಸಿದ್ದೇನೆ. ಪಕ್ಷ ಸಂಘಟನೆಗಾಗಿ ಬೆವರು ಸುರಸಿದ್ದೇನೆ. ಸಿಎಂ ಪದವಿ ಈಗ ಕೊಡುವುದಿಲ್ಲವಾದರೇ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಾನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲʼವೆಂದು ಹೈಕಮಾಂಡ್‌ ಮುಂದೆ ಡಿಕೆಶಿ ಹೇಳಿಕೊಂಡಿದ್ದರು. ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಪದವಿಯನ್ನು ಡಿಕೆಶಿ ಅವರಿಗೆ ಹಸ್ತಾರಿಸುವ ಬದಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಡಿಕೆಶಿ ಇರಲಿ ಎಂದು ಹೈಕಮಾಂಡ್‌ ನಿರ್ಧರಿಸಿದೆ ಎಂಬಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ʼಮುಂದಿನ ಚುನಾವಣೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ನಡೆಯಲಿ ಡಿಕೆಶಿʼ ʼಪಕ್ಷ ಅಧಿಕಾರಕ್ಕೆ ಬಂದಮೇಲೆ ನಿಮ್ಮನ್ನೇ ಸಿಎಂ ಮಾಡುತ್ತೇವೆʼ ಎಂದು ಹೈಕಮಾಂಡ್‌ ಡಿಕೆಶಿ ಅವರಿಗೆ ಹೇಳಿದಂತಿದೆ. ಡಿಕೆಶಿ ಕೂಡ ತಮ್ಮ ಷರತ್ತನ್ನು ಮುಂದಿಟ್ಟು ಹೈಕಮಾಂಡ್‌ ಭರವಸೆಗೆ ಒಪ್ಪಿದಂತಿದೆ.

ಪಕ್ಷದ ಕಷ್ಟದ ಸಂದರ್ಭದಲ್ಲಿ ಡಿಕೆಶಿ ಆರ್ಥಿಕ ಮೂಲವಾಗಿದ್ದವರು. ಡಿಕೆಶಿ ಅವರನ್ನು ಸಾರಾಸಗಟಾಗಿ ತಿರಸ್ಕರಿಸುವುಕ್ಕೆ ಹೈಕಮಾಂಡ್‌ ಗೆ ಖಂಡಿತ ಸಾಧ್ಯವಿಲ್ಲ. ಇತ್ತೀಚೆಗೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆಶಿ ಹೆಸರು, ಡಿ.ಕೆ.ಸುರೇಶ್ ಅವರ ಹೆಸರು ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಹೆಸರು ಇರುವುದರ ಬಗ್ಗೆ ಮಾಧ್ಯಮಗಳ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ನ್ಯಾಷನಲ್‌ ಹೆರಾಲ್ಡ್ ನಮ್ಮ ಪಕ್ಷ ನಡೆಸುವಂತಹ ಪತ್ರಿಕೆ‌. ಅದಕ್ಕೆ ನಾನು ಹಾಗೂ ಸುರೇಶ್ 25 ಲಕ್ಷ ದುಡ್ಡು ಕೊಟ್ಟಿದ್ದೇವೆ. ‌ನಮ್ಮ ಟ್ರಸ್ಟ್‌ ನಿಂದಲೂ ದೇಣಿಗೆ ನೀಡಿದ್ದೇವೆ”  ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಪಕ್ಷಕ್ಕೆ ಬೇಕಾದಾಗೆಲ್ಲಾ, ಸಂಘಟನೆಗೆ ಬೇಕಾದಾಗೆಲ್ಲಾ ಡಿಕೆಶಿ ಆರ್ಥಿಕವಾಗಿ ಪಕ್ಷವನ್ನು ಆಧರಿಸಿದ್ದಾರೆ. ಪಕ್ಷದೊಳಗೆ ಆಂತರಿಕ ಸಮಸ್ಯೆ ಬಂದಾಗಲೂ ಡಿಕೆಶಿ ಮುಂದೆ ನಿಂತು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಡಿಕೆಶಿ ಅವರನ್ನು ಮೂಲೆಗುಂಪು ಮಾಡುವುದಕ್ಕೆ ಹೈಕಮಾಂಡ್‌ ಗೆ ಖಂಡಿತ ಸಾಧ್ಯವಿಲ್ಲ. ʼಸ್ವಲ್ಪ ಸುಧಾರಿಸಿಕೊಳ್ಳಿ ಡಿಕೆಶಿʼ ಎಂದು ಹೈಕಮಾಂಡ್‌ ಸೂಚನೆ ನೀಡಿದೆ. ಅಂತೆಯೇ ಡಿಕೆಶಿ ತಮ್ಮ ರಾಜಕೀಯ ವರ್ಚಸ್ಸನ್ನು ಯಥೇಚ್ಛವಾಗಿ ವೃದ್ಧಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

ಇನ್ನು, ಸದ್ಯಕ್ಕಂತೂ ಸಂಪುಟ ಪುನಾರಚನೆ ಇಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್‌ ಹೇಳಿದೆ. ಸಂಪುಟಕ್ಕೆ ಸೇರ್ಪಡೆ ಆಗಲು ಸಾಕಷ್ಟು ಆಕಾಂಕ್ಷಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಸದ್ಯ ಹೈಕಮಾಂಡ್ ಯಾವುದೇ ಮನಸ್ಸು ಮಾಡುತ್ತಿಲ್ಲ. ಸಂಪುಟ ಪುನಾರಚನೆ ಎರಡುವರೆ ವರ್ಷದ ಬಳಿಕ ಆಗಲಿ, ಸದ್ಯ ಬೇಡ ಎಂಬ ನಿಲುವನ್ನು ಸಿಎಂ ಸಿದ್ದರಾಮಯ್ಯ ಹೊಂದಿದ್ದಾರೆ. ಆದರೆ ಈಗಲೇ ಸಂಪುಟ ಪುನಾರಚನೆ ಆದರೆ ಉತ್ತಮ ಎಂಬ ಅಭಿಪ್ರಾಯವನ್ನು ಡಿಕೆ ಶಿವಕುಮಾರ್ ಹೊಂದಿದ್ದಾರೆ. ಒಂದು ಹಂತಕ್ಕೆ ಗಮನಿಸುವುದಾದರೇ, ಸಿಎಂ ಸಿದ್ದರಾಮಯ್ಯ ಪರವಾಗಿಯೇ ಎಂಬಂತೆ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ/ವಿಸ್ತರಣೆ ಬೇಡವೆಂದು ಹೈಕಮಾಂಡ್‌ ಹೇಳಿದೆ.

ಸದ್ಯಕ್ಕಂತೂ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದೆ ಆಗಿದೆ. ಈ ಹಿಂದೆ ಕರ್ನಾಟಕದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದವರು ದೇವರಾಜ ಅರಸು ಅವರು. ಅರಸು ಏಳು ವರ್ಷ ಹನ್ನೊಂದು ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ರಾಜ್ಯದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಾಖಲೆ ಅರಸು ಹೆಸರಲ್ಲೇ ಇದೆ. ೨೦೨೬ ಏಪ್ರಿಲ್‌ ೧೯ರ ನಂತರವೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿದರೇ ಅರಸು ದಾಖಲೆ ಸಿದ್ದರಾಮಯ್ಯ ಅವರ ಪಾಲಿಗಾಗುತ್ತದೆ. ಇನ್ನು, ಹೈಕಮಾಂಡ್‌ ತೆಗೆದುಕೊಂಡ ಈ ನಿರ್ಧಾರ ಪಕ್ಷದ ದೃಷ್ಟಿಯಿಂದಲೂ ಒಳ್ಳೆಯ ನಿರ್ಧಾರವೇ ಆಗಿದೆ. ಡಿಸಿಎಂ ಡಿಕೆಶಿ ಸ್ವಲ್ಪ ಸುಧಾರಿಸಿಕೊಳ್ಳುವುದನ್ನು ಕಾಂಗ್ರೆಸ್‌ ಪಕ್ಷ ಅಕ್ಷರಶಃ ಬಯಸುತ್ತಿದೆ. ಬಹುಶಃ ಡಿಕೆಶಿ ಅದಕ್ಕೆ ಮನಸ್ಸು ಮಾಡಿದ್ದಾರೆಂಬಂತೆ ಕಾಣಿಸುತ್ತಿದೆ.

ಸಂಪುಟ ಪುನಾರಚನೆ ಆಗಬಹುದು ಎಂದು ಕಾಯುತ್ತಿದ್ದ ಬಿ. ಕೆ. ಹರಿಪ್ರಸಾದ್, ಬಸವರಾಜ ರಾಯರೆಡ್ಡಿ, ನರೇಂದ್ರ ಸ್ವಾಮಿ, ಆಸೀಫ್ ಸೇಠ್, ವಿಜಯಾನಂದ ಕಾಶಪ್ಪನವರ್, ಟಿ ರಘುಮೂರ್ತಿ, ಬಿ ಆರ್ ಪಾಟೀಲ್, ಬಿ ಕೆ ಸಂಗಮೇಶ್, ಅಜಯ್ ಸಿಂಗ್, ತನ್ವೀರ್ ಸೇಠ್ ಅವರುಗಳಿಗೆ ಹೈಕಮಾಂಡ್‌ ನಿರ್ಧಾರದಿಂದ ತುಸು ನಿರಾಸೆಯಾದಂತಿದೆ. ಇವರೆಲ್ಲರೂ ಸಿದ್ದರಾಮಯ್ಯ, ಡಿಕೆಶಿ ಆಪ್ತರೇ ಆಗಿದ್ದಾರೆ. ಹಾಗಾಗಿ ಸಂಪುಟ ಪುನಾರಚನೆಗೆ ಮುಂದಾದರೇ ಅಲ್ಲಿಯೂ ಇವರಿಬ್ಬರ(ಸಿದ್ದು,ಡಿಕೆಶಿ) ಡಿಮ್ಯಾಂಡ್‌ ಪೂರೈಸುವುದು ಸುಲಭವಿಲ್ಲ ಎನ್ನುವುದನ್ನು ಹೈಕಮಾಂಡ್‌ ಮನಗಂಡಂತಿದೆ. ಸಂಪುಟ ಪುನಾರಚನೆ ಆದಲ್ಲಿ ಕೆಲವು ಸಚಿವರಿಗೆ ಕೊಕ್ ನೀಡಬೇಕಾಗುವುದು ಅನಿವಾರ್ಯ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಸಚಿವರ ಕಾರ್ಯವೈಖರಿಯ ವರದಿಯನ್ನು ತರಿಸಿಕೊಂಡು ಪರಿಶೀಲಿಸುತ್ತಿದೆ ಎನ್ನಲಾಗುತ್ತಿದ್ದು, ಕೆಲಸ ಮಾಡದ ಸಚಿವರಿಗೆ ಮುಂದೆ ಮುಲಾಜಿಲ್ಲದೆ ಕೋಕ್‌ ನೀಡಬಹುದು. ಸದ್ಯಕ್ಕೆ ಮುಂದೂಡಲ್ಪಟ್ಟ ಸಂಪುಟ ಪುನರಾಚನೆ ಆಗುವ ಸಂದರ್ಭದಲ್ಲಿ ಪ್ರಭಾವಿ ಸಚಿವರನ್ನು ಹೊರತುಪಡಿಸಿ ಇತರ ಕೆಲ ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಬಹಳ ಮುಂದೂಡಲ್ಪಡುವುದಕ್ಕೂ ಹೈಕಮಾಂಡ್‌ ಗೆ ಸಾಧ್ಯವಿಲ್ಲ. ಆಕಾಂಕ್ಷಿಗಳು ಬೆನ್ನು ಬಿದ್ದಾಗ ಸಿಎಂ, ಡಿಸಿಎಂ ಹೈಕಮಾಂಡ್‌ ಬೆನ್ನು ಹಿಡಿಯಲೇ ಬೇಕಾಗುತ್ತದೆ. ಹೈಕಮಾಂಡ್‌ ಮತ್ತೆ ʼಎಸ್‌ ಓಕೆʼ ಅಥವಾ ʼನೋʼ ಎನ್ನಲೇಬೇಕು.  ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!