spot_img
Friday, January 30, 2026
spot_img

ಬ್ರಹ್ಮಾವರದಲ್ಲಿ ಕಾಂಗ್ರೆಸ್‌ ಇತಿಹಾಸ ಮರುಕಳಿಸುತ್ತೇವೆ : ರಾಘವೇಂದ್ರ ಶೆಟ್ಟಿ ಕರ್ಜೆ

ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಇತ್ತೀಚೆಗೆ ಅಷ್ಟೇ ಎರಡು ವರ್ಷಗಳನ್ನು ಪೂರೈಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ರಾಜ್ಯದಾದ್ಯಂತ ತನ್ನ ಬಲವರ್ಧನೆ ಮಾಡಿಕೊಳ್ಳುತ್ತಿದೆ. ತಳ ಮಟ್ಟದಲ್ಲಿ ಪಕ್ಷ ಸಂಘಟನೆಗೆ ದೃಢ ಸಂಕಲ್ಪ ಮಾಡಿಕೊಂಡಿದೆ. ಬ್ಲಾಕ್‌ ಮಟ್ಟದಲ್ಲಿ ಸಂದರ್ಶನ ನಡೆಸಿ ಸಮರ್ಥ ನಾಯಕರಿಗೆ ಅಧ್ಯಕ್ಷಗಿರಿ ನೀಡುತ್ತಿದೆ. ಇತ್ತೀಚೆಗೆ ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಗೂ ಕೂಡ ನೂತನ ಅಧ್ಯಕ್ಷರನ್ನು ನೇಮಿಸಿದ್ದು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷಗಿರಿಯನ್ನು ರಾಘವೇಂದ್ರ ಶೆಟ್ಟಿ ಕರ್ಜೆ ವಹಿಸಿಕೊಂಡಿದ್ದಾರೆ. ಪಕ್ಷದ ಮೇಲೆ ವಿಶೇಷ ಗೌರವ, ಸಂಘಟನೆಯಲ್ಲಿ ಸಮರ್ಥರಾಗಿರುವ ರಾಘವೇಂದ್ರ ಶೆಟ್ಟಿ, ಈಗಾಗಲೇ ಎನ್‌ಎಸ್‌ಯುಐ ಸದಸ್ಯರಾಗಿ, ಬ್ರಹ್ಮಾವರ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ, ಉಡುಪಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ, ಬ್ರಹ್ಮಾವರ ಬ್ಲಾಕ್‌ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ, ಕರ್ಜೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸದ್ಯ, ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ನ ಅಧ್ಯಕ್ಷರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜನಪ್ರತಿನಿಧಿ ಪತ್ರಿಕೆ ಅವರನ್ನು ಸಂದರ್ಶಿಸಿದೆ.

ನಿಮ್ಮ ಹೊಸ ಜವಾಬ್ದಾರಿ ಬಗ್ಗೆ ಹೇಳಿ. ಯಾವ ಹೊಸ ಯೋಜನೆಗಳನ್ನು ರೂಪಸಿಕೊಂಡಿದ್ದೀರಿ ?

ಕಾಂಗ್ರೆಸ್‌ ಪಕ್ಷ, ನಾನು ಪಕ್ಷಕ್ಕಾಗಿ ದುಡಿದಿರುವುದನ್ನು ಪರಿಗಣಿಸಿ ಬ್ರಹ್ಮಾವರ ಬ್ಲಾಕ್‌ ನ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಪಕ್ಷದ ಸಂಘಟನೆಯನ್ನು ವೃದ್ಧಿಸುವಲ್ಲಿ ಹಿರಿಯ, ಕಿರಿಯ ಮುಖಂಡರನ್ನು ಸೇರಿಸಿಕೊಂಡು ಯೋಜಿಸಿ ಮುಂದುವರಿಯುತ್ತೇನೆ. ಬ್ರಹ್ಮಾವರ ಈ ಹಿಂದೆ ಕಾಂಗ್ರೆಸ್‌ನ ಭದ್ರ ನೆಲೆಯಾಗಿತ್ತು. ರಾಜಕೀಯದ ಕಾರಣದಿಂದ ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ ಇಲ್ಲಿ ಕಳೆಗುಂದಿದೆ ಎನ್ನುವುದನ್ನು ಒಪ್ಪುತ್ತೇನೆ. ಆದರೇ, ಖಂಡಿತ ಬ್ರಹ್ಮಾವರ ಬ್ಲಾಕ್‌ ಗೆ ಸಂಬಂಧಿಸಿದ ಅಷ್ಟೂ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮತ್ತೆ ಕಾಂಗ್ರೆಸ್‌ ನ ಭದ್ರ ನೆಲೆ ಎನ್ನುವ ಹಾಗೆ ಮರು ಸ್ಥಾಪನೆ ಮಾಡುತ್ತೇವೆ.

ಕಾಂಗ್ರೆಸ್‌ ಯುವಕರನ್ನು ತಲುಪುತ್ತಿಲ್ಲ ಎನ್ನುವ ಅಭಿಪ್ರಾಯದ ಬಗ್ಗೆ ಏನನ್ನುತ್ತೀರಿ ?

ಇದನ್ನು ನಾನು ಒಪ್ಪಲ್ಲ. ಕರಾವಳಿ ಕರ್ನಾಟಕದಲ್ಲಿ ಮಾತ್ರ ಯುವಕರು ಬಿಜೆಪಿಯ ಮೈಂಡ್‌ ವಾಷ್‌ ಗೆ ಒಳಗಾಗಿದ್ದಾರೆ. ಹದಿನೆಂಟು ವರ್ಷಕ್ಕೆ ಯುವಕರಿಗೆ ಮತದಾನದ ಹಕ್ಕು ನೀಡಿ, ತಮಗೆ ಬೇಕಾದ ನಾಯಕನನ್ನು ಆಯ್ಕೆ ಮಾಡುವ ಅವಕಾಶ ಮಾಡಿಕೊಟ್ಟವರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು. ಕಾಂಗ್ರೆಸ್‌ ಎಂದಿಗೂ ಯುವಕರ ಪರವಾಗಿಯೇ ಇದೆ. ಯುವ ಸಮುದಾಯಕ್ಕಾಗಿ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಕಾಂಗ್ರೆಸ್‌ ನ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಯುವನಿಧಿʼ ಪ್ರಸ್ತುತ ಉದಾಹರಣೆ. ಬಿಜೆಪಿಯ ಧರ್ಮದ ಹೆಸರಿನ ರಾಜಕಾರಣ ಯುವಕರನ್ನು ಪ್ರಚೋದಿಸಿದೆ. ಧರ್ಮ ರಾಜಕಾರಣದಿಂದ ಯುವಕರು ಕಾಂಗ್ರೆಸ್‌ ನಿಂದ ವಿಮುಖರಾಗಿದ್ದಾರೆ. ಕಾಂಗ್ರೆಸ್‌ನ ಜನಪರ ಯೋಜನೆಗಳ ಬಗ್ಗೆ ಈಗ ಮತ್ತೆ ಯುವಕರಿಗೆ ಅರಿವಾಗುತ್ತಿದೆ. ಕಾಂಗ್ರೆಸ್‌ ಪಕ್ಷದ ಹಿಂದೆ ಮರಳಿ ಬಹಳ ದೊಡ್ಡ ಯುವ ಸಮೂಹ ಬರುವುದನ್ನು ಶೀಘ್ರದಲ್ಲೇ ಈ ದೇಶ ಕಾಣಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಬ್ರಹ್ಮಾವರ, ಕಾಂಗ್ರೆಸ್‌ ನ ಭದ್ರ ಕೋಟೆ ಆಗಿತ್ತು. ಕಳೆದ ಕೆಲವು ಚುನಾವಣೆಗಳನ್ನು ಗಮನಿಸಿದರೇ, ಬ್ರಹ್ಮಾವರದಲ್ಲಿ ಕಾಂಗ್ರೆಸ್‌ ಹೇಳಹೆಸರಿಲ್ಲದಂತಾಗಿದೆಯಲ್ವೇ ?

ಬದಲಾವಣೆ ಜಗದ ನಿಯಮ. ರಾಜಕೀಯ ಅದರಿಂದ ಏನೂ ಹೊರತಾಗಿಲ್ಲ. ಜನ ಆಡಳಿತದಲ್ಲಿ ಬದಲಾವಣೆ ನಿರೀಕ್ಷಿಸುವುದು ಸಹಜ. ಉಡುಪಿ ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಮರಳಿ ಚೇತರಿಸಿಕೊಳ್ಳುತ್ತಿದೆ. ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್‌ ಸಂಘಟನಾ ಬಲ ವೃದ್ಧಿಸುತ್ತಿದೆ. ಯಾರು ಜನರ ಪರ, ಯಾರು ಜನರ ವಿರುದ್ಧ ಇದ್ದಾರೆ ಎನ್ನುವುದು ಈಗ ಮತದಾರರಿಗೆ ಅರಿವಾಗುತ್ತಿದೆ. ಸುದೀರ್ಘ ಕಾಲದವರೆಗೆ ಒಂದೇ ರಾಜಕೀಯ ಪಕ್ಷ ಆಡಳಿತ ನಡೆಸಿದ ಉದಾಹರಣೆ ಭಾರತೀಯ ರಾಜಕೀಯದ ಇತಿಹಾಸದಲ್ಲಿಲ್ಲ. ಬ್ರಹ್ಮಾವರದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಹೆಚ್ಚುಗಾರಿಕೆಯನ್ನು ತೋರಿಸುವ ಕಾಲ ಹೆಚ್ಚು ದೂರವಿಲ್ಲ.

ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕ್ಷೀಣಿಸಿರುವುದಕ್ಕೆ ಕಾರಣವೇನು ?

ಬಿಜೆಪಿಯ ಅಪಪ್ರಚಾರವೇ ಇದಕ್ಕೆ ಮೂಲ ಕಾರಣ. ನಮ್ಮ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಸೋತಿರುವುದನ್ನು ನಾವು ಒಪ್ಪಿಕೊಳ್ಳಬೇಕಿರುವ ಅನಿವಾರ್ಯವಿದೆ. ನಮ್ಮ ಜಾತ್ಯಾತೀತ ನಿಲುವಿನ ಬಗ್ಗೆ ವಿರೋಧಾಭಿಪ್ರಾಯವನ್ನು ಮತದಾರರ ತಲೆಗೆ ಹೇರಿಕೆ ಮಾಡಿ, ಧರ್ಮ, ದೇವರುಗಳ ಹೆಸರು ಹೇಳಿ ಬಿಜೆಪಿ ರಾಜಕೀಯ ಮಾಡಿದ್ದೇ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕ್ಷೀಣಿಸಿರುವುದಕ್ಕೆ ಕಾರಣ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯವೆಂದು ಜನರಿಗೆ ನಂಬಿಸಿದ ಬಿಜೆಪಿಯ ಕೀಳು ಮಟ್ಟದ ರಾಜಕೀಯ ಹೆಚ್ಚು ದಿನ ನಡೆಯುವುದಿಲ್ಲ.

ವಿದ್ಯಾರ್ಥಿ ಸಂಘಟನೆ ಬಲ ಕಳೆದುಕೊಳ್ಳುತ್ತಿದೆ. ಇದೇ ಪಕ್ಷ ಸಂಘಟನೆಗೆ ಮುಳುವಾಗುತ್ತಿದೆಯೇ ?

ಈ ಭಾಗಕ್ಕೆ ನಾನು ಈ ವಿಚಾರವನ್ನು ಒಪ್ಪಿಕೊಳ್ಳುತ್ತೇನೆ. ಆದರೇ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಅವರು ಪಕ್ಷದ ಯುವ ಕಾರ್ಯಕರ್ತರನ್ನು, ಯುವ ಸಂಘಟನೆಯನ್ನು ಬಡಿದೆಬ್ಬಿಸುವುದಕ್ಕೆ ಪ್ರಾರಂಭಿಸಿದ್ದಾರೆ. ಎನ್‌ಎಸ್‌ಯುಐ ಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಯೂ ಬಲಿಷ್ಠವಾಗಿ ಬೆಳಯುತ್ತದೆ ಎನ್ನುವ ನಂಬಿಕೆ ಇದೆ. ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಯಾವ ಘಟಕವನ್ನೂ ಸುಮ್ಮನೆ ಕೂರುವುದಕ್ಕೆ ಬಿಡುತ್ತಿಲ್ಲ. ವಿದ್ಯಾರ್ಥಿ ಸಂಘಟನೆ ಬಹಳ ಮುಖ್ಯ. ನಾಯಕತ್ವ ಅಲ್ಲಿಂದಲೇ ಬೆಳೆಯುತ್ತದೆ. ರಾಹುಲ್‌ ಗಾಂಧಿ ಅವರು ದೇಶ ಮಟ್ಟದಲ್ಲಿ ವಿದ್ಯಾರ್ಥಿ ಸಮೂಹವನ್ನು ಮತ್ತೆ ಸೆಳೆಯುತ್ತಿದ್ದಾರೆ. ಸತ್ಯ ಎಂದಿಗೂ ಗೆಲ್ಲುತ್ತದೆ. ವಿದ್ಯಾರ್ಥಿ ಸಂಘಟನೆಗಳು ಬಲಗೊಂಡಾಗ, ಪಕ್ಷ ಸಂಘಟನೆಯೂ ಬಲಗೊಳ್ಳುತ್ತದೆ ಎನ್ನುವುದಲ್ಲಿ ಅನುಮಾನವಿಲ್ಲ.

ಬ್ರಹ್ಮಾವರದಲ್ಲಿ ಅನೇಕ ಸಮಸ್ಯೆಗಳಿವೆ. ಸಾರ್ವಜನಿಕ ವಲಯದಲ್ಲಿ ಅನೇಕ ಬೇಡಿಕೆಗಳಿವೆ. ಇವೆಲ್ಲದಕ್ಕೂ ಬ್ಲಾಕ್‌ ಕಾಂಗ್ರೆಸ್‌ ಹೇಗೆ ಸ್ಪಂದಿಸಲಿದೆ ?

ಕಾಂಗ್ರೆಸ್‌ ಎಂದಿಗೂ ಜನರ ಧ್ವನಿಯಾಗಿಯೇ ಇದೆ. ಮುಂದೆಯೂ ಕಾಂಗ್ರೆಸ್‌ ಜನಪರ ಧ್ವನಿಯಾಗಿಯೇ ಇರಲಿದೆ. ಬ್ರಹ್ಮಾವರ ಫ್ಲೈಓವರ್‌, ಆಕಾಶವಾಣಿ ಮರುಪ್ರಸರಣ ಕೇಂದ್ರದ ನಿರುಪಯುಕ್ತ ಜಾಗ ಸದ್ಬಳಕೆಯಾಗಬೇಕೆಂಬ ಸಾರ್ವಜನಿಕರ ಬೇಡಿಕೆ, ಬ್ರಹ್ಮಾವರ ಪುರಸಭೆ ಬೇಡಿಕೆ ಹಾಗೂ ಉಳಿದ ಎಲ್ಲಾ ಸಾರ್ವಜನಿಕರ ಬೇಡಿಕೆಗಳಿಗೆ ಬ್ಲಾಕ್‌ ಕಾಂಗ್ರೆಸ್‌ ಜೊತೆಯಾಗಿ ನಿಲ್ಲುತ್ತದೆ. ಫ್ಲೈಓವರ್‌ ಆಗಬೇಕು ಎನ್ನುವ ಸಾರ್ವಜನಿಕರ ಬೇಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಅದರ ಪ್ರಕ್ರಿಯೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಜನರಿಗಾಗಿ ಸದಾ ಇರಲಿದೆ.

ಜಿಲ್ಲೆಯಲ್ಲಿ ಯೂಥ್ ಕಾಂಗ್ರೆಸ್‌ ಚಟುವಟಿಕೆಗಳು ಕಾಣಿಸುತ್ತಿಲ್ಲ. ನಿದ್ದೆಗೆ ಜಾರಿದೆಯೇ ?

ಇತ್ತೀಚೆಗಷ್ಟೇ ಹೊಸ ಪದಾಧಿಕಾರಿಗಳ ಆಯ್ಕೆಯಾಗಿದೆ. ಯೂಥ್‌ ಕಾಂಗ್ರೆಸ್‌ ತನ್ನದೇ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ನಾಯಕತ್ವದ ಆಳ ಅಗಲ ಪರಿಚಯ ಯೂಥ್‌ ಕಾಂಗ್ರೆಸ್‌ ಗೆ ಈಗ ಆಗುತ್ತಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಯೂಥ್‌ ಕಾಂಗ್ರೆಸ್‌ ನಿರತವಾಗಲಿದೆ ಎನ್ನುವ ಅಪಾರ ನಂಬಿಕೆ ಇದೆ. ಯೂಥ್‌ ಕಾಂಗ್ರೆಸ್‌ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿ ಅವರಿಗೆ ಅಪಾರ ಕಾಳಜಿ ಇದೆ. ಡಿಕೆಶಿ ಯೂಥ್‌ ಕಾಂಗ್ರೆಸ್‌ ಗೆ ನಿದ್ದೆ ಮಾಡುವುದಕ್ಕೆ ಬಿಡುವುದಿಲ್ಲ.

ಕಾಂಗ್ರೆಸ್‌ ನಲ್ಲಿ ಬಣ ರಾಜಕೀಯ ಹೆಚ್ಚಾಗಿ ಕಾಣಿಸುತ್ತಿದೆ. ನೀವು ಯಾರ ಬಣ ?

ಖಂಡಿತ ಇಲ್ಲ. ನಾನು ಕಾಂಗ್ರೆಸ್‌ ಬಣ. ಕಾಂಗ್ರೆಸ್‌ ಸಿದ್ಧಾಂತದಲ್ಲಿಯೇ ಕಾರ್ಯ ನಿರ್ವಹಿಸುತ್ತೇವೆ. ನಾಯಕರ ಬೆಂಬಲಿಗರು, ಅಭಿಮಾನಿಗಳು ಬಣವೆಂದು ಹೇಳಬಹುದು. ಕಾಂಗ್ರೆಸ್‌ ಪಕ್ಷದ ಆದೇಶವೇನಿದೆ ಅದನ್ನು ಕಾಂಗ್ರೆಸ್‌ ಕಾರ್ಯಕರ್ತನಾಗಿ ಮಾಡುವುದೇ ನನ್ನ ಮೊದಲ ಆದ್ಯತೆ. ಬಣ ರಾಜಕಾರಣ ನಮ್ಮಲ್ಲಿಲ್ಲ.

ಜಿಲ್ಲೆಯಲ್ಲಿ ಬಿಜೆಪಿಯ ನಾಯಕರು ತೊಡಗಿಸಿಕೊಂಡಿರುವ ಭ್ರಷ್ಟಾಚಾರಗಳ ವಿರುದ್ಧ ಕಾಂಗ್ರೆಸ್‌ ಧ್ವನಿ ಕೇಳುತ್ತಿಲ್ಲ ಯಾಕೆ ?

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ, ಪರಶುರಾಮ ಥೀಂ ಪಾರ್ಕ್‌ ಅವ್ಯವಹಾರದಂತಹ ಪ್ರಮುಖ ಪ್ರಕರಣಗಳ ವಿರುದ್ಧ ಸಮರ್ಥವಾಗಿ ಕಾಂಗ್ರೆಸ್ ಪ್ರತಿಭಟಿಸಿದೆ. ಹಗರಣವನ್ನು ಬಯಲಿಗೆಳೆದವರ ಜೊತೆಯಾಗಿ ಕಾಂಗ್ರೆಸ್‌ ನಿಂತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹ ಮಾಡಿದೆ. ಭ್ರಷ್ಟಾಚಾರದ ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಕಾಂಗ್ರೆಸ್‌ ಭ್ರಷ್ಟಾಚಾರವನ್ನು ಸಹಿಸಲ್ಲ.

ಕಾಂಗ್ರೆಸ್‌ ನಿಮ್ಮನ್ನು ಬ್ರಹ್ಮಾವರ ಬ್ಲಾಕ್‌ ನ ಅಧ್ಯಕ್ಷರನ್ನಾಗಿಸಿದೆ. ನಿಮ್ಮಿಂದ ಪಕ್ಷ ಏನನ್ನು ನಿರೀಕ್ಷಿಸಬಹುದು ?

ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಕಾಂಗ್ರೆಸ್‌ ನ ಗತವೈಭವ ಬ್ರಹ್ಮಾವರದಲ್ಲಿ ಮರುಕಳಿಸಬೇಕೆಂಬ ಕನಸಿದೆ. ಜಿಲ್ಲೆಯ ಹಿರಿಯ ನಾಯಕರ ನಿರ್ದೇಶನದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ನಮ್ಮ ಬ್ಲಾಕ್‌ ನಲ್ಲಿ ಸಮರ್ಥರ ಸಮೂಹವಿದೆ. ಇತಿಹಾಸವನ್ನು ಮರುಕಳಿಸುತ್ತೇವೆ. ಜನಪರವಾಗಿದ್ದು, ಕಾರ್ಯ ನಿರ್ವಹಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವಲ್ಲಿ ದುಡಿಯುತ್ತೇವೆ.

ಸಂದರ್ಶನ : ಶ್ರೀರಾಜ್ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!