spot_img
Tuesday, March 17, 2026
spot_img

ಬ್ರಹ್ಮಾವರಕ್ಕೆ ಫ್ಲೈಓವರ್‌ / ಅಂಡರ್‌ ಪಾಸ್‌ !?

ಶೀಘ್ರ ನಿರ್ಮಾಣಕ್ಕೆ ಸಾರ್ವಜನಿಕರ ಒತ್ತಾಯ  | ಅಂದಾಜು ಪಟ್ಟಿ ತಯಾರಿಕೆಗೆ ಜಿಲ್ಲಾಧಿಕಾರಿ ಸೂಚನೆ  

-ಶ್ರೀರಾಜ್‌ ವಕ್ವಾಡಿ
ಅಪಘಾತ ವಲಯವೆಂದೇ ಗುರುತಿಸಲ್ಪಟ್ಟು ಬಹಳಷ್ಟು ಮಾರಕ ಅಪಘಾತ, ಸಾವು-ನೋವುಗಳಿಗಾಗಿ ಸಾರ್ವಜನಿಕರ ದೊಡ್ಡ ಆಕ್ರೋಶಕ್ಕೆ ಕಾರಣವಾಗಿರುವ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಕಾಶವಾಣಿ ವೃತ್ತದ ಸಮೀಪದಿಂದ ಎಸ್‌ಎಂಎಸ್ ಜೂನಿಯ‌ರ್ ಕಾಲೇಜಿನ ಬಳಿ ಇರುವ ಶನಾಯ್ ಸಭಾಂಗಣದವರೆಗೆ ಸುಮಾರು ಒಂದೂವರೆ ಕಿ.ಮೀ. ಉದ್ದದ ಫೈಓವ‌ರ್ ನಿರ್ಮಾಣಕ್ಕೆ ಅಂತೂ ನಾಂದಿ ಸಿಕ್ಕಂತಾಗಿದೆ.

ಇತ್ತೀಚೆಗಷ್ಟೇ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ಹಾಗೂ ಜೀವಹಾನಿಯನ್ನು ತಪ್ಪಿಸುವ ಉದ್ದೇಶದಿಂದ ಪರಿಹಾರೋಪಾಯಗಳ ಬಗ್ಗೆ ವರದಿ ಸಲ್ಲಿಸಲು ನೇಮಿಸಿದ್ದ ತಾಂತ್ರಿಕ ಸಮಿತಿ ನೀಡಿದ್ಧ ವರದಿಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ಚರ್ಚಿಸಿದ್ದರು. ತಕ್ಷಣಕ್ಕೆ ವ್ಯವಸ್ಥಿತ ಸರ್ವೀಸ್‌ ರಸ್ತೆ ಹಾಗೂ ಫ್ಲೈಓವರ್‌ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು.

ಬ್ರಹ್ಮಾವರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ – 66 ಹಾದು ಹೋಗಿದ್ದು, ಈ ಪ್ರದೇಶದಲ್ಲಿ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ಹೋಟೆಲ್ ಗಳು, ಸರಕಾರಿ ಕಛೇರಿಗಳು, ಬ್ಯಾಂಕ್ ಗಳು, ವಾಣಿಜ್ಯ ಮಳಿಗೆಗಳು, ನ್ಯಾಯಾಲಯ, ವಕೀಲರ ಕಚೇರಿಗಳಿವೆ. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಎಸ್ ಎಂಎಸ್ ಶಾಲೆಯ ಜಂಕ್ಷನ್ ಬಳಿ ಉಡುಪಿಯಿಂದ ಕುಂದಾಪುರದ ಕಡೆಗೆ ಸರ್ವೀಸ್ ರಸ್ತೆಯಿಂದ ತೆರಳಲು “ಮಿಡಿಯನ್ ಒಪನ್” ಮೂಲಕ ಪ್ರವೇಶ ಕಲ್ಪಿಸಲಾಗಿದ್ದು, ಮಹೇಶ್ ಆಸ್ಪತ್ರೆ ಜಂಕ್ಷನ್ ನಿಂದ ಧರ್ಮಾವರ ರೆಸಿಡೆನ್ಸಿವರೆಗೆ ಸದ್ಯ ಎರಡು ಬದಿಗಳಲ್ಲಿ ಸರ್ವೀಸ್ ರಸ್ತೆ ಇದೆ.

ಬ್ರಹ್ಮಾವರ : ಅಪಘಾತ ವಲಯ :

ಬ್ರಹ್ಮಾವರ ನಗರಕ್ಕೆ ದಿನನಿತ್ಯದ ಆಗಮಿಸುವ ಸುತ್ತಮುತ್ತಲಿನ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಬರುವ ಶಾಲಾ ವಾಹನಗಳು ಬಿ.ಸಿ.ರೋಡ್ ನಿಂದ ಮಹೇಶ್ ಆಸ್ಪತ್ರೆ ಜಂಕ್ಷನ್‌ ವರೆಗೆ ಸರ್ವೀಸ್ ರಸ್ತೆಗಳು ಇಲ್ಲದೇ ರಾಷ್ಟ್ರೀಯ ಹೆದ್ದಾರಿಯ ವಿರುದ್ಧ ದಿಕ್ಕಿನಿಂದ ಸಂಚರಿಸುವ ಅನಿವಾರ್ಯತೆ ಬಂದೊದಗಿದೆ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ. ಇತ್ತೀಚೆಗಷ್ಟೇ ರಸ್ತೆ ದಾಟಲು ನಿಂತಿದ್ದ ಸ್ಥಳೀಯ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿಯೊಬ್ಬ ಕಾರು ಡಿಕ್ಕಿ ಹೊಡೆದು ಅಪಘಾತಕ್ಕೆ ಈಡಾಗಿ ಸಾವನ್ನಪ್ಪಿರುವ ನೆನಪು ಇನ್ನೂ ಮಾಸಿಲ್ಲ. ಆಕಾಶವಾಣಿ ಜಂಕ್ಷನ್, ಬ್ರಹ್ಮಾವರ ಬಸ್ ನಿಲ್ದಾಣ, ಮಹೇಶ್ ಆಸ್ಪತ್ರೆ ಜಂಕ್ಷನ್, ಹಾಗೂ ಎಸ್‌ಎಂಎಸ್ ಶಾಲೆ ಬಳಿ ರಸ್ತೆ ದಾಟಲು ಹಾಗೂ ಸ್ಥಳೀಯ ವಾಹನ ಸವಾರರಿಗೆ ರಸ್ತೆ ಕ್ರಾಸ್ ಮಾಡಲು ತುಂಬಾ ತೊಂದರೆಯಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ.

ಕಳೆದ ಮೂರು ವರ್ಷಗಳಲ್ಲಿ 23 ಅಪಘಾತಗಳು :

ಪೊಲೀಸ್ ಇಲಾಖೆಯ ವರದಿ ನೀಡುವ ಮಾಹಿತಿಯಂತೆ ಕಳೆದ 3 ವರ್ಷಗಳಲ್ಲಿ ಬ್ರಹ್ಮಾವರ ಭರಣಿ ಪೆಟ್ರೋಲ್ ಪಂಪ್ ನಿಂದ ಮಹೇಶ್ ಆಸ್ಪತ್ರೆಯ ಜಂಕ್ಷನ ತನಕ ಇದುವರೆಗೂ 23 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 7 ಮಾರಣಾಂತಿಕ ಅಪಘಾತ ಸಂಭವಿಸಿವೆ. ವಾಹನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶ ಮತ್ತು ಅಪಘಾತವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್‌ನಿಂದ ಮಹೇಶ್ ಆಸ್ಪತ್ರೆ ಜಂಕ್ಷನ್ ವರೆಗೆ ಫ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಈಗ ಕೇಳಿ ಬಂದಿದೆ.

ಫ್ಲೈಓವರ್‌ ನಿರ್ಮಾಣಕ್ಕೆ ಅಂದಾಜು 70 ಕೋ. ರೂ. :

ಮಹೇಶ್ ಆಸ್ಪತ್ರೆ ಜಂಕ್ಷನ್ ನಿಂದ ಬಿ.ಸಿ.ರೋಡ್ (ರುಡ್‌ಸೆಟ್)ವರೆಗೆ ಸರ್ವೀಸ್ ರಸ್ತೆ ಪ್ಲ್ಯಾನ್‌ ಎಕ್ಸಿಕ್ಯೂಟ್‌ ಆಗಿ ಅವಾರ್ಡ್ ಆಗಿದೆ. ಕಾಮಗಾರಿ ಪ್ರಾರಂಭಿಸಲು ಟೆಂಡರ್ ಪ್ರೊಸೆಸ್ ಇನ್ನಷ್ಟೇ   ಆಗಬೇಕಿದೆ. ಟೆಂಡರ್‌ ಪ್ರಕ್ರಿಯೆ ನಡೆಯುವುದಕ್ಕೆ ಸಮಯವಕಾಶ ತೆಗೆದುಕೊಳ್ಳುವುದರಿಂದ ಅಷ್ಟರಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಮಳೆಗಾಲ ಮುಕ್ತಾಯಗೊಂಡ ಬಳಿಕ ಸೆಪ್ಟಂಬರ್ ತಿಂಗಳಿನಿಂದ ಕಾಮಗಾರಿಯನ್ನು ಪ್ರಾರಭಿಸುವ ಬಗ್ಗೆ ಮತ್ತು ಕಾಮಗಾರಿ ಪ್ರಾರಂಭಕ್ಕೆ ಅಗತ್ಯವಿರುವ ಸರ್ವೇ ಕಾರ್ಯ ಹಾಗೂ ಒತ್ತುವರಿ ತೆರವು ಕಾರ್ಯಗಳನ್ನು ಕೂಡಲೇ ಮುಕ್ತಾಯಗೊಳಿಸಿಕೊಳ್ಳಬೇಕಿದೆ. ಹಾಗೂ ಫ್ಲೈಓವರ್ ಮಾಡಲು ಅಂದಾಜು 70 ಕೋಟಿ ರೂ. ವೆಚ್ಚವಾಗಬಹುದು. ಬ್ರಹ್ಮಾವರ ಆಕಾಶವಾಣಿ ಜಂಕ್ಷನ್‌ನಿಂದ ಎಸ್‌ಎಂಎಸ್ ಶಾಲೆಯ ಜಂನ್‌ವರೆಗೆ 1.50 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಪ್ರೈಓವರ್ ನಿರ್ಮಾಣ ಮಾಡುವ ಬಗ್ಗೆ, ಸಂಬಂಧಪಟ್ಟ ತಾಂತ್ರಿಕ ತಂಡವನ್ನು ಕರೆಸಿ ಪರಿಶೀಲನೆ ನಡೆಸಿ ತಾಂತ್ರಿಕ ವರದಿಯನ್ನು ಪಡೆದು ಪ್ಲೈಓವರ್ ಸೂಕ್ತವೇ ಅಥವಾ ಅಂಡರ್‌ಪಾಸ್ ಸೂಕ್ತವೇ ಎಂಬ ಬಗ್ಗೆ ಕೂಡಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಕ್ರಮವಹಿಸಲಾಗುವುದೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಮಂಗಳೂರಿನ  ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

ಇನ್ನು, ಜನವರಿಯಿಂದ ಈವರೆಗೆ 3 ತಿಂಗಳಲ್ಲಿ ಆರು ಮಂದಿ ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳುವುದು ರಸ್ತೆ ಪ್ರಾಧಿಕಾರ ಪೊಲೀಸ್ ಇಲಾಖೆಯ ಜವಾಬ್ದಾರಿ. ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾಸಂಸ್ಥೆಗಳಿದ್ದು, ಬೇರೆ ಬೇರೆ ಕಡೆಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಾರೆ. ಒಂದು ವಿದ್ಯಾರ್ಥಿಯ ಜೀವಕ್ಕೆ ಹಾನಿಯಾದರೂ ಅದು ತುಂಬಾ ವಿಷಾದನೀಯ ಸಂಗತಿ. ವಿದ್ಯಾರ್ಥಿಯಂತಲ್ಲ, ಯಾರಿಗೇ ಹಾನಿಯಾದರೂ ಅದು ದುರಂತವೇ ಸರಿ. ಅಪಘಾತ ತಡೆಗಟ್ಟುವಲ್ಲಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ತುರ್ತಿದೆ. ಅತಿ ಶೀಘ್ರದಲ್ಲಿ ಬ್ರಹ್ಮಾವರಕ್ಕೆ ಫ್ಲೈಓವರ್‌ ಅಥವಾ ಅಂಡರ್‌ ಪಾಸ್‌ ನಿರ್ಮಾಣವಾಗುವ ಅಗತ್ಯವಿದೆ.

“ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ  ಬ್ರಹ್ಮಾವರ ಫ್ಲೈಓವರ್‌ ನಿರ್ಮಾಣದ ಬಗ್ಗೆ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ. ಹೆದ್ದಾರಿ ಪ್ರಾಧಿಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕಳುಹಿಸುತ್ತೇವೆ. ಆದ್ಯತೆ ಮೇರೆಗೆ ಯೋಜನೆ ರೂಪಿಸಿ ಕೇಂದ್ರದ ಅನುಮತಿಗೆ ಸಲ್ಲಿಸುವಂತೆ ಸೂಚಿಸಿದ್ದೇನೆ.
-ಡಾ. ಕೆ. ವಿದ್ಯಾಕುಮಾರಿ
ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ. 

“ಬ್ರಹ್ಮಾವರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಧರ್ಮಾವರದಿಂದ ಎಸ್‌ಎಂಎಸ್ ಶಾಲೆವರೆಗೆ ಪ್ರಸ್ತುತ ಕುಂದಾಪುರದಲ್ಲಿ ಇರುವಂತೆ ಫ್ಲೈಓವರ್ ಮಾಡಿ ಬ್ರಹ್ಮಾವರ ಬಸ್ ಸ್ಟ್ಯಾಂಡ್ ಜಂಕ್ಷನ್ ಮತ್ತು ಆಕಾಶವಾಣಿ ಜಂಕ್ಷನ್ ಸೇರಿದಂತೆ ಎರಡು ಕಡೆಗಳಲ್ಲಿ ಪಾಸಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಮಿತಿಯ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಸಮಿತಿ ಈಗಾಗಲೇ ತನ್ನ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ. ಮಹೇಶ್ ಆಸ್ಪತ್ರೆಯ ಬಳಿ ಪೆಡೆಸ್ಟ್ರೇನ್‌ ಓವರ್‌ ಬ್ರಿಡ್ಜ್‌ (ಪಾದಾಚಾರಿ ಸೇತುವೆ) ಅತಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ.  
-ಶ್ರೀಕಾಂತ್ ಎಸ್‌.ಹೆಗ್ಡೆ
ತಹಶೀಲ್ದಾರರು, ಬ್ರಹ್ಮಾವರ ತಾಲೂಕು.
 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!