spot_img
Friday, January 30, 2026
spot_img

ʼವೀರ ಚಂದ್ರಹಾಸʼ ಎಂಬ ಪ್ರಯೋಗಶೀಲತೆ ಗೆಲ್ಲಲಿ

ಮೊದಲ ಬಾರಿಗೆ ಕಲೆಯೊಂದರ ಮೂಲ ಸರಕು ಸಿನೆಮಾವಾಗಿ ಬೆಳ್ಳಿ ತೆರೆಗೆ !

ಭವ್ಯ ಪುರಾಣದ ವೀರ ಚರಿತೆಯ ಸುಂದರ ಇತಿಹಾಸ
ನವ್ಯ ಸೊಬಗಿನಲಿ ಕಣ್ಣಿಗೆ ಕಾಣುವ ವೀರ ಚಂದ್ರಹಾಸ
ಇದು ಸುಂದರ ಇತಿಹಾಸ, ಇವ ವೀರ ಚಂದ್ರಹಾಸ ||

ಯಕ್ಷಕವಿ ಪ್ರಸಾದ್‌ ಮೊಗೆಬೆಟ್ಟು ಅವರ ಚೆಂದದ ಸಾಹಿತ್ಯವಿರುವ ಶೀರ್ಷಿಕೆ ಗೀತೆಯ ಮೂಲಕ ಪ್ರೇಕ್ಷಕರನ್ನು, ಭಾರತೀಯ ಸಿನೆಮಾ ರಂಗ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ʼವೀರ ಚಂದ್ರಹಾಸʼ ಎನ್ನುವ ಜಗತ್ತಿನ ಮೊಟ್ಟಮೊದಲ ಯಕ್ಷ ಸಿನೆಮಾ ಸೆಳೆಯುತ್ತಿದೆ. ಚಂದನವನದಲ್ಲಿ ಈಗ ಒಂದೇ ಒಂದು ಸದ್ದು, ಅದು ʼವೀರ ಚಂದ್ರಹಾಸʼನದ್ದು ಎಂದರೇ ತಪ್ಪಿಲ್ಲ. ಈ ಸಿನೆಮಾ ಸೆಟ್ಟೇರುತ್ತಿದೆ ಎನ್ನುವ ಸುದ್ದಿ ಹೊರಗೆ ಬಂದಾಗ, ಯಕ್ಷಗಾನವನ್ನು ಪಕ್ಕಾ ಸಂಪ್ರದಾಯದಂತೆಯೇ ಕಾಣುವುದಕ್ಕೆ ಬಯಸುವ ವರ್ಗದಿಂದ ಅಪಸ್ವರ ಕೇಳಿಬಂದಿತ್ತು. ರವಿ ಬಸ್ರೂರು  ಯಕ್ಷಗಾನವನ್ನು ವಿಶ್ವಗಾನವನ್ನಾಗಿ ಮಾಡುವುದಕ್ಕೇನಿದೆ ? ಯಕ್ಷಗಾನ ಅದಾಗಲೇ ವಿಶ್ವಗಾನ ಆಗಿದೆ. ಯಕ್ಷಗಾನವನ್ನೆಲ್ಲಾ ಹಾಳು ಮಾಡುವುದಕ್ಕೆ ಇದೊಂದು ದಾರಿ ಎಂಬೆಲ್ಲಾ ಮಾತು ಕೇಳಿ ಬಂದಿತ್ತು. ಆದರೇ, ಬಹುತೇಕ ಎಲ್ಲರೂ ಯಕ್ಷಗಾನವನ್ನೇ ತಮ್ಮ ಬದುಕಿನ ಆಧಾರವನ್ನಾಗಿಸಿಕೊಂಡವರೇ ಈ ಸಿನೆಮಾದಲ್ಲಿ  ಪಾತ್ರವಾಗಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ʼಯಕ್ಷಗಾನವನ್ನೇ ವೈಭವೀಕರಿಸಿ ತೆರೆ ಮೇಲೆ ತೋರಿಸುವ ಪ್ರಯತ್ನವಿದು. ಎಲ್ಲಿಯೂ ಯಕ್ಷಗಾನಕ್ಕೆ ಧಕ್ಕೆ ತರುವಂತೆ ಮಾಡಿಲ್ಲ. ಯಕ್ಷಗಾನದ ಸಂಪ್ರದಾಯವನ್ನು ಸಿನೆಮಾ ನಿರ್ಮಾಣ ಮಾಡುವಾಗ ಪಾಲಿಸಿದ್ದೇವೆ. ಜಗತ್ತಿಗೆ ಯಕ್ಷಗಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವುದೇ ನಮ್ಮ ಉದ್ದೇಶʼ ಎಂದು ರವಿ ಬಸ್ರೂರು ಹೇಳುತ್ತಲೇ ಬಂದಿದ್ದಾರೆ. ಆದರೂ ಇನ್ನೂ ಪೂರ್ವಾಗ್ರಹಪೀಡಿತ ಮನೋಭಾವನೆಯಿಂದ ಈ ಸಿನೆಮಾದ ಬಗ್ಗೆ ನೋಡುವವರು ಇದ್ದಾರೆ. ರವಿ ಬಸ್ರೂರು ಹಾಗೂ ಅವರ ತಂಡ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಯಕ್ಷಗಾನ ಆರಾಧಕರಲ್ಲಿಯೂ ಈ ಸಿನೆಮಾದ ಬಗ್ಗೆ ವಿಶೇಷ ಕುತೂಹಲ ಮೂಡಿದೆ.

ಅದಾಗಲೇ ಯಕ್ಷಗಾನದ ಚೌಕಟ್ಟು ಸಾಮಾಜಿಕ ಪ್ರಸಂಗಗಳಿಗೆ ತೆರೆದುಕೊಂಡು ಕೆಲವು ದಶಕಗಳೇ ಕಳೆದಿವೆ. ಯಕ್ಷಗಾನದ ಚೌಕಟ್ಟಿಗೆ ಸಾಮಾಜಿಕ ಪ್ರಸಂಗಗಳು ಬಂದಾಗ ಅದನ್ನು ವಿರೋಧಿಸಿದ ಒಂದು ದೊಡ್ಡ ವರ್ಗವೇ ಇದ್ದಿತ್ತು, ಈಗಲೂ ಇದೆ. ಯಕ್ಷಗಾನ, ಸಂಪ್ರದಾಯ, ಯಕ್ಷಗಾನದ ಶೈಲೀಕೃತ ಪರಿವರ್ತನೆಯ ಬಗ್ಗೆ ಚರ್ಚೆ ಬಹುಶಃ ಸದ್ಯಕ್ಕಂತೂ ಮುಗಿಯುವುದಿಲ್ಲ ಎಂದೇ ಕಾಣಿಸುತ್ತದೆ. ಯಕ್ಷಗಾನದಲ್ಲಿ ಪ್ರಯೋಗಶೀಲತೆಯನ್ನು ವಿರೋಧಿಸುವ ಮನಸ್ಥಿತಿ ಎಷ್ಟಿದೆಯೋ, ಅದಕ್ಕಿಂತ ದುಪ್ಪಟ್ಟಷ್ಟು ಅದನ್ನು ಒಪ್ಪಿಕೊಂಡ ಮನಸ್ಥಿತಿಗಳೂ ಇವೆ ಎನ್ನುವುದು ಉಲ್ಲೇಖಾರ್ಹ. ಯಕ್ಷಗಾನದ ಪುರಾಣ ಕಥೆಯೊಂದನ್ನು ಆಧರಿಸಿಕೊಂಡು ಸಿನೆಮಾವೊಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದೆ.

ಕಾಲ ಬದಲಾದಂತೆ ಯಕ್ಷಗಾನದಲ್ಲಿ ಪ್ರಯೋಗಶೀಲತೆ ತುಸು ಹೆಚ್ಚೇ ಕಾಣುವುದಕ್ಕೆ ಆರಂಭವಾದಾಗ ಅದರ ಔಚಿತ್ಯದ ಬಗ್ಗೆ ಅನೇಕ ಪ್ರಶ್ನೆಗಳು ಮೇಲೆದ್ದಿದ್ದವು. ಸಾಂಪ್ರದಾಯಿಕ ಚೌಕಟ್ಟಿನೊಳಗೆ ಹೊಸತನದ ಪ್ರಯೋಗಶೀಲತೆಯ ಬಗ್ಗೆ ಹೀಯಾಳಿಕೆಯೇ ಹೆಚ್ಚು ಕೇಳಿಬಂದಿತ್ತು. ಬಹುಶಃ ಈ ರೀತಿಯ ಮನೋಧೋರಣೆ ಯಕ್ಷಗಾನ, ಸಿನೆಮಾ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಆದಾಗ್ಯೂ, ಯಕ್ಷಗಾನ, ಸಿನೆಮಾ ಸೇರಿ ಎಲ್ಲಾ ಕ್ಷೇತ್ರಗಳು ಕಾಲದ ಪರೀಕ್ಷೆಯನ್ನು ಸಮರ್ಥವಾಗಿ ಗೆದ್ದು ಬಂದಿವೆ. ಜಾಗತಿಕವಾಗಿ ಮಾನ್ಯತೆಯನ್ನೂ ಪಡೆದುಕೊಂಡಿವೆ. ಈಗ ಅದು ವಿಸ್ತೃತ ರೂಪಾಂತರವಾಗಿಯೂ ಬದಲಾಗಿ ಅನೇಕರನ್ನು ಯಶಸ್ವಿಯಾಗಿ ಸೆಳೆಯುತ್ತಿವೆ.

ಸಿನೆಮಾ ಮಾಡುವ ನಿರ್ದೇಶಕನಿಗೆ ಪ್ರೇಕ್ಷಕರ ಬೇಕು ಬೇಡಗಳನ್ನು ಅರಿಯುವ ಮನಸ್ಥಿತಿ ಬಹಳ ಮುಖ್ಯ. ಕಥೆಯ ಆಯ್ಕೆಯ ಮಾನದಂಡಗಳಲ್ಲಿ ಸಿನೆಮಾಗಳು ಆಯಾ ಪ್ರದೇಶಗಳ ಪ್ರಾತಿನಿಧಿಕ ಬಿಂಬವೇ ಆಗಿರುತ್ತವೆ. ಆದರೇ, ಕಥೆ ಮತ್ತು ಕಲೆ ಎಲ್ಲವೂ ಚೆನ್ನಾಗಿಯೇ ಇದ್ದರೂ ಸಿನೆಮಾಗಳೆಲ್ಲಾ ಗುಣಮಟ್ಟದ್ದೇ ಆಗಿರಬೇಕೆಂದಿಲ್ಲ. ಉತ್ತಮ ಮತ್ತು ಉತ್ತಮವಲ್ಲದ ಸಿನೆಮಾಗಳೂ ಬೇಕಾದಷ್ಟಿವೆ. ಪ್ರಾದೇಶಿಕತೆಯನ್ನೇ ಜೀವಾಳವಾಗಿಟ್ಟುಕೊಂಡು ತೆರೆ ಕಾಣುವ ಸಿನೆಮಾಗಳು ಮೇಕಿಂಗ್‌ ನಲ್ಲಿ ಸೋತು ಮೆಚ್ಚುಗೆಗೆ ಪಾತ್ರವಾಗದೇ ಇರಬಹುದು. ಇಷ್ಟಾಗಿಯೂ ಸಿನೆಮಾ ಒಂದು ಪರಿಣಾಮಕಾರಿ ಮಾಧ್ಯಮವಾಗಿರುವುದರಿಂದ ವಿವಿಧ ಭಾಗದ, ವಿವಿಧ ಪ್ರದೇಶಗಳ ಮಾದರಿಯನ್ನು ಜಗತ್ತಿಗೆ ಪರಿಚಯಿಸುತ್ತವೆ. ಹೀಗೆನ್ನುವ ಕಾರಣಕ್ಕೆ ಪ್ರಾದೇಶಿಕತೆಯ ವಿಷಯವೊಂದನ್ನು ಜಗತ್ತಿಗೆ ಪರಿಚಯ ಮಾಡಿಕೊಡುವುದೇ ನಿರ್ದೇಶಕರ ಅಥವಾ ಸಿನೆಮಾ ತಂಡದ ಪ್ರತಿಷ್ಠೆಯ ವಿಷಯವಾಗಬಾರದು. ಒಂದು ಭಾಗದ ಹಿರಿಮೆಯನ್ನು ಜಗತ್ತಿಗೆ ಕಾಣಿಸಿಕೊಡುವುದೇ ಬಹಳ ಮುಖ್ಯವಾಗಬೇಕು. ಬಹುಶಃ ಈ ವೀರ ಚಂದ್ರಹಾಸ ಸಿನೆಮಾ ತಯಾರಿಸುವಲ್ಲಿ ರವಿ ಬಸ್ರೂರು ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬಂತೆ ಕಾಣಿಸುತ್ತದೆ. ಸಿನೆಮಾದ ಪ್ರಚಾರಗಳಲ್ಲಿ ಅವರು ಸಿನೆಮಾದ ಬಗ್ಗೆ ಎಲ್ಲಿಯೂ ವೈಭವೀಕರಿಸಿಕೊಂಡು ಮಾತಾಡಿದ್ದು ಕಾಣುವುದಕ್ಕೆ ಸಿಗುವುದಿಲ್ಲ. ಯಕ್ಷಗಾನ ಮತ್ತು ಯಕ್ಷಗಾನ ಕಲಾವಿದರ ಹೆಚ್ಚುಗಾರಿಕೆಯನ್ನೇ ಅವರು ಹೇಳುತ್ತಾ ಬಂದಿದ್ದಾರೆ. ಬಹುಶಃ ಈ ಯಕ್ಷ ಸಿನೆಮಾದಲ್ಲಿಯೂ ಅದನ್ನೇ ಪ್ರಾಮಾಣಿಕವಾಗಿ ತೋರಿಸುವುದೇ ಅವರ ಪ್ರಧಾನ ಉದ್ದೇಶವಿತ್ತೆಂದು ಕಾಣಿಸುತ್ತಿದೆ.

ʼವೀರ ಚಂದ್ರಹಾಸʼ ಸಿನೆಮಾ ತೆರೆ ಮೇಲೆ ಬರುತ್ತಿರುವ ಶೈಲಿ ವಿಭಿನ್ನ. ಆದರೇ, ಒಂದು ಪುರಾಣ ಕಥೆಯನ್ನೋ, ಐತಿಹಾಸಿಕ ಕಥೆಯನ್ನೋ, ಕಲೆಯನ್ನೋ, ಆಚರಣೆಯನ್ನೋ ಸಿನೆಮಾವಾಗಿ ತೋರಿಸುತ್ತಿರುವುದು ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ. ಹೀಗೆ ಬಂದ ಎಷ್ಟೋ ಸಿನೆಮಾಗಳು ಪ್ರೇಕ್ಷಕರಿಂದ, ವಿಮರ್ಶಕರಿಂದ ಅತ್ಯಂತ ಟೀಕೆಗೂ ಒಳಗಾಗಿವೆ.    ಆದರೇ ಈ ಸಿನೆಮಾದಲ್ಲಿ ಯಕ್ಷಗಾನವನ್ನು ಸಿನೆಮಾದ ಯಾವುದೋ ಒಂದು ದೃಶ್ಯಕ್ಕೋ, ಹಾಡಿಗೋ ಬಳಸಿಕೊಳ್ಳದೇ, ಇಡಿ ಸಿನೆಮಾವೇ ʼಯಕ್ಷ ಸಿನೆಮಾʼವಾಗಿ ತೆರೆ ಕಾಣಿಸುತ್ತಿರವುದರಿಂದ ರಂಗಸ್ಥಳದ ಪರಿಕಲ್ಪನೆಯ ಆಚೆಗೆ ಕಥೆಯನ್ನು, ಸನ್ನಿವೇಶಗಳನ್ನು ದೃಶ್ಯೀಕರಣಗೊಳಿಸಿರುವ ಶೈಲಿಯ ಬಗ್ಗೆ ಅತ್ಯಂತ ಕುತೂಹಲ ಸೃಷ್ಟಿಯಾಗಿದೆ.

ಹಾಗಾಗಿ ನೋಡುಗನೊಬ್ಬ ಹೊಸತನದ ಪ್ರಯೋಗಶೀಲತೆಯನ್ನು ಆಸ್ವಾದಿಸುವ ಮನಸ್ಥಿತಿಯಿಂದಲೇ ಈ ʼವೀರ ಚಂದ್ರಹಾಸʼ ಸಿನೆಮಾವನ್ನು ಒಪ್ಪಿಕೊಳ್ಳಬೇಕಿದೆ. ಇಲ್ಲಿ ಶ್ರಮ ಮತ್ತು ಸೃಜನಶೀಲತೆ, ಪ್ರಯೋಗಶೀಲತೆ ಒಟ್ಟಾಗಿರುವುದು ಯಕ್ಷ ಸಿನೆಮಾ ಸೃಷ್ಟಿಯ ಒಂದು ವಿಶೇಷ. ಆದರೇ, ಒಂದು ಕಲಾ ಕ್ಷೇತ್ರದಲ್ಲಿ ʼಸಾಬೀತಾಗಿರುವ ಮೂಲ ಸರಕುʼ ಸಿನೆಮಾವಾಗಿ ತೆರೆ ಕಾಣುತ್ತಿರುವುದು ವಿಶೇಷ. ಯಕ್ಷಗಾನದ ಮೂಲಕ ಈಗಾಗಲೇ ಜನ ಮಾನಸದಲ್ಲಿ ಅಚ್ಚೊತ್ತಿದ ಪುರಾಣ ಕಥೆಯೊಂದು ಸಿನೆಮಾವಾಗಿ ಜನಪ್ರಿಯವಾಗಿ, ಲಾಭದಾಯಕವೂ ಆಗಲಿದೆ ಎನ್ನುವ ಭರವಸೆ ನಿರ್ದೇಶಕರು ಹಾಗೂ ನಿರ್ಮಾಪಕರಲ್ಲಿ ಬಹಳವಾಗಿ ಮೂಡಿರುವ ಕಾರಣಕ್ಕೆ ಸಿನೆಮಾ ಸೃಷ್ಟಿಯಾಗಿದೆ ಅಂತನ್ನಿಸುತ್ತದೆ.

ಚಂದನವನದಲ್ಲಿ ಕಳೆದ ಕೆಲವು ದಶಕಗಳಿಂದ ಬಹುಪಾಲು ಸಿನೆಮಾಗಳಲ್ಲಿ ಬಹುತೇಕ ಎಲ್ಲಾ ಸಿನೆಮಾಗಳು ಪ್ರೇಮ ಕಥೆ, ಆಕ್ಶನ್‌ ಓರಿಯೆಂಟೆಡ್‌ ಸಿನೆಮಾಗಳೇ ಹೆಚ್ಚು ತೆರೆ ಕಂಡಿವೆ. ಪ್ರಯೋಗಶೀಲ, ಸೃಷ್ಟಿಶೀಲ ಸಿನೆಮಾಗಳು ತೆರೆಗೆ ಬಂದಿರುವುದು ಕೂಡ ತೀರಾ ಕಡಿಮೆ. ಬಂದ ಪ್ರಯೋಗಶೀಲ, ಸೃಷ್ಟಿಶೀಲ ಸಿನೆಮಾಗಳಲ್ಲಿ ಕೆಲವಷ್ಟು ಯಶಸ್ಸು ಕಂಡರೆ, ಕೆಲವಷ್ಟು ಬಂದು ಹೋಗಿದ್ದೇ ಗೊತ್ತಾಗಿಲ್ಲ ಎಂಬಂತಾಗಿವೆ. ಕನ್ನಡದಲ್ಲಿ ಪ್ರಯೋಗಶೀಲತೆ, ಸೃಷ್ಟಿಶೀಲತೆಯನ್ನು ಒಪ್ಪುವ ಮನಸ್ಥಿತಿ ಸ್ವಲ್ಪ ಕಡಿಮೆಯೇ ಇದೆ. ಪ್ರಯೋಗಶೀಲತೆ ಹಾಗೂ ಸೃಜನಶೀಲ ಕಥೆಗಳು ತೆರೆಗೆ ಬಂದಾಗ, ಅವನ್ನು ಸಹಜ ಸ್ವಭಾವದಿಂದ ನೋಡದೆ ʼಪೂರ್ವಗ್ರಹ ಪ್ರತಿಷ್ಠೆʼಯ ಮನಸ್ಥಿತಿಯಲ್ಲೇ ಸಿನೆಮಾವನ್ನು ನೋಡಿ ತೆಗಳಿದವರೇ ಹೆಚ್ಚು. ಹಾಗಾಗಿ ಚಂದನವನದಲ್ಲಿ ತೆರೆ ಕಾಣುವ ಪ್ರಯೋಗಶೀಲ ಸಿನೆಮಾಗಳನ್ನು ನೋಡುವ ದೃಷ್ಟಿ ಅಗತ್ಯವಾಗಿ ಬದಲಾಗಬೇಕಿದೆ. ಯಕ್ಷಗಾನವನ್ನು ಯಕ್ಷಗಾನದ ಶೈಲಿಯಲ್ಲೇ ತೋರಿಸುತ್ತಿರುವ ಈ ಸಿನೆಮಾದ ಬಗ್ಗೆ ಟೀಕಿಸುವ ಮೊದಲು ಸಿನೆಮಾ ನೋಡಬೇಕಿದೆ. ಯಕ್ಷಗಾನಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಸಿನೆಮಾ ಇದೆ ಎಂದಾದರೇ, ಅದನ್ನು ಜವಾಬ್ದಾರಿಯಿಂದ ವಿಮರ್ಶಿಸುವ ಮನಸ್ಸು ಚಿತ್ರ ನೋಡಿದವರು ಎಲ್ಲರೂ ಮಾಡಬೇಕಿದೆ.

ಜನಪ್ರತಿನಿಧಿ ಪತ್ರಿಕೆಯ ಯೂಟ್ಯೂಬ್‌ ವಾಹಿನಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಈ ಸಿನೆಮಾಕ್ಕೆ ಎಪ್ಪತ್ತು ಯಕ್ಷಗಾನ ಪದ್ಯ ರಚನೆ ಮಾಡಿರುವ ಪ್ರಸಾದ್‌ ಮೊಗೆಬೆಟ್ಟು ಅವರು ಮಾತನಾಡುತ್ತಾ, ʼಯಶಸ್ವಿ ಸಿನೆಮಾ ಕಥೆಯೊಂದು ಯಕ್ಷಗಾನಕ್ಕೆ ಬಂದರೆ ಜನ ಒಪ್ಪಿ ನೋಡುತ್ತಾರೆ, ಆದರೆ, ಯಕ್ಷಗಾನವೇ ಸಿನೆಮಾವಾದರೇ ಒಪ್ಪುವ ಮನಸ್ಥಿತಿ ಯಾಕಿಲ್ಲ ? ಎಂದು ಕೇಳಿದ್ದರು. ಬಹುಶಃ ಸುಖಾಸುಮ್ಮನೆ ʼವೀರ ಚಂದ್ರಹಾಸʼದ ಬಗ್ಗೆ ಟೀಕಿಸುವವರು ಹೀಗೆ ಯೋಚಿಸಬೇಕಿದೆ ಎನ್ನಿಸುತ್ತದೆ. ಈ ಬಗ್ಗೆ ಚರ್ಚೆಗಳು ಏನೇ ಇರಲಿ, ರವಿ ಬಸ್ರೂರು ಮತ್ತವರ ತಂಡದ ಶ್ರಮ ʼವೀರ ಚಂದ್ರಹಾಸʼ ಗೆಲ್ಲಲಿ. ಜಗತ್ತಿಗೆ ಯಕ್ಷಗಾನ ಇನ್ನಷ್ಟು ಹೆಚ್ಚು ಪರಿಚಯವಾಗಲಿ. ಸರ್ಕಾರವೂ ಯಕ್ಷಗಾನವನ್ನು ಪ್ರೋತ್ಸಾಹಿಸುವಲ್ಲಿ ಕಾರ್ಯೋನ್ಮುಖವಾಗಲಿ.

-ಶ್ರೀರಾಜ್‌ ವಕ್ವಾಡಿ       

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!