spot_img
Friday, January 30, 2026
spot_img

ಬೆಲೆ ಏರಿಕೆ ಎಂಬ ಕೈ ಸುಡುವ ಸರ್ಕಾರಿ ಬೆಂಕಿ

ಜನಹಿತ ಕಾಯುವುದು ಸರ್ಕಾರಗಳ ಜವಾಬ್ದಾರಿ | ಬಿಜೆಪಿಯಂತೆ ಕಾಂಗ್ರೆಸ್‌ ಆಯ್ತೇ !?

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಅಧಿಕಾರ ಹಿಡಿದಾಗ, ಜನರಲ್ಲಿ ಒಂದು ಹೊಸ ನಿರೀಕ್ಷೆ ಇದ್ದಿತ್ತು. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಸಿದ್ದರಾಮಯ್ಯ ಅವರ ಮೇಲಿದ್ದ ವಿಶ್ವಾಸದಿಂದ, ರಾಜ್ಯದಲ್ಲಿ ಅಭಿವೃದ್ಧಿಯ ಕಾರ್ಯಗಳು ಹೇರಳವಾಗಿ ನಡೆಯುತ್ತವೆ ಎನ್ನುವ ನಂಬಿಕೆ ಅಪಾರವಿತ್ತು. ಆದರೇ, ಈಗ ರಾಜ್ಯ ಕಾಂಗ್ರೆಸ್‌ ಸರ್ಕಾರ ಏನು ಮಾಡಿದೆ ಎನ್ನುವುದು ರಾಜ್ಯದ ಜನರ ಮುಂದಿದೆ.

ಜನರ ಹಿತದೃಷ್ಟಿಗಾಗಿ ಕೆಲಸ ಮಾಡಬೇಕಾದ ರಾಜ್ಯ ಸರ್ಕಾರ ಬೆಲೆ ಏರಿಕೆಯಂತಹ ಸಮಸ್ಯೆಯ ದೊಡ್ಡ ಮೂಟೆಯನ್ನೇ ಜನರ ತಲೆಯ ಮೇಲೆ ಅವ್ಯಾಹತವಾಗಿ ಹೇರುತ್ತಿದೆ. ಒಂದೆಡೆ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಬಿಜೆಪಿ ಪಕ್ಷ ಜನಾಕ್ರೋಶ ಪ್ರತಿಭಟನೆ ನಡೆಸುತ್ತಿದೆ. ಇನ್ನೊಂದೆಡೆ ʼಬೆಲೆ ಏರಿಕೆ ರಾಜ್ಯ ಸರ್ಕಾರದಿಂದ ಆಗುತ್ತಿಲ್ಲʼ ಎಂದು ಹೇಳಿ ತನ್ನ ಸರ್ಕಾರದ ನೀತಿಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವಷ್ಟು ಬೌದ್ಧಿಕ ದಾರಿದ್ರ್ಯದಿಂದ ರಾಜ್ಯ ಕಾಂಗ್ರೆಸ್‌ ಬಳಲುತ್ತಿದೆ.

ಯಾವುದೇ ವಸ್ತುವಿನ ಬೆಲೆ ನಿಗದಿತವಾಗಿ ಇರುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕಾಲ ಬದಲಾದಂತೆ, ಬೇಡಿಕೆಗಳು ಹೆಚ್ಚಾದಂತೆ ಬೆಲೆ ಏರಿಕೆ ಆಗುವುದು ಸಹಜ. ಆದರೇ, ಬೆಲೆ ಏರಿಕೆ ಕತ್ತು ಹಿಸುಕುವಂತಿರಬಾರದು. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ತಂದುಕೊಡುವ ಸಾಮಾನ್ಯ ಜ್ಞಾನ ಸರ್ಕಾರಗಳಿಗೆ ಇರಬೇಕು.

ಹಾಲು, ವಿದ್ಯುತ್‌, ಬಸ್‌‍ ಪ್ರಯಾಣ, ವಿದ್ಯುತ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ 16 ದಿನಗಳ ಜನಾಕ್ರೋಶ ಯಾತ್ರೆ ಆಯೋಜಿಸಿದೆ. ರಾಜ್ಯದಲ್ಲಿ ಕಳೆದ ಇಪ್ಪತ್ತು ತಿಂಗಳಲ್ಲಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಸಾಮಾನ್ಯ ಜನರಿಗೆ ಬರೆ ಎಳೆಯುವ ಕೆಲಸವಾಗುತ್ತಿದೆ. ದುಬಾರಿ ಜೀವನವನ್ನು ನಾಡಿನ ಜನ ನಡೆಸುವ ದುಸ್ಥಿತಿ ಕಾಂಗ್ರೆಸ್‌‍ ಸರ್ಕಾರ ನಿರ್ಮಾಣ ಮಾಡಿದೆ. ಉಸಿರಾಡುವ ಗಾಳಿ ಬಿಟ್ಟರೆ, ಉಳಿದ ಎಲ್ಲದರ ಬೆಲೆ ಏರಿಕೆ ನಿರಂತರವಾಗಿದೆ. ಮತದಾರರಿಗೆ ವರದಾನ ಆಗುವ ಬದಲು ಸರ್ಕಾರ ಶಾಪಗ್ರಸ್ಥವಾಗಿದೆ ಎಂದು ಬಿಜೆಪಿ ಆರೋಪಿಸಿದಾಗ್ಯೂ, ಬೆಲೆ ಏರಿಕೆ ಕೇಂದ್ರ ಸರ್ಕಾರದ ಕಾರಣದಿಂದ ಆಗುತ್ತಿರುವುದು ಎಂದು ಹೇಳುವುದಕ್ಕೂ ಸಾಮರ್ಥ್ಯ ಇಲ್ಲವೆಂಬಂತೆ ಕಾಂಗ್ರೆಸ್‌ ವರ್ತಿಸಿದಂತಿದೆ.

ವಿದ್ಯುತ್‌ ದರ ಏಪ್ರಿಲ್‌ 1ರಿಂದ ಪ್ರತಿ ಯೂನಿಟ್‌ ಗೆ 36 ಪೈಸೆ ಜಾಸ್ತಿ ಮಾಡಿದ್ದಾರೆ. ಹಾಲಿನ ದರ ಏರಿಕೆಯಾಗಿದೆ. ಆಸ್ಪತ್ರೆಗಳಲ್ಲೂ ಚಿಕಿತ್ಸೆ ದರ ಜಾಸ್ತಿ ಮಾಡಲಾಗಿದೆ. ಬಡವರು, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಜನರಿಗೂ ಬರೆ ಎಳೆಯಲಾಗುತ್ತಿದೆ. ಅಫಿಡವಿಟ್‌, ಮುದ್ರಾಂಕ ಶುಲ್ಕ, ವೃತ್ತಿಪರ ತೆರಿಗೆ, ಬಸ್‌‍ ದರ ಜಾಸ್ತಿ ಮಾಡಲಾಗಿದೆ. ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್‌‍ ಸರ್ಕಾರದ ಜನವಿರೋಧಿ ನೀತಿ ನಿಜಕ್ಕೂ ಖಂಡನೀಯ. ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಾ, ನಾವು ಜನರಿಗೆ ಬೇಕಾದದ್ದನ್ನು ಕೊಟ್ಟಿದ್ದೇವೆ ಎನ್ನುವ ಕಾಂಗ್ರೆಸ್ ಸರ್ಕಾರ, ಇನ್ನೊಂದೆಡೆ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ.

ಬೆಲೆ ಏರಿಕೆ ಎನ್ನುವುದು ಎಲ್ಲಾ ಕಾಲದ ಸಾಮಾನ್ಯ ಸಂಗತಿ. ಆದರೇ, ಅದು ಜನರ ಮೇಲೆ ಹೇರಿಕೆಯಾಗುವಂತೆ ಆಗಬಾರದು. ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಪ್ರಗತಿಗೆ ಶಕ್ತಿ ತುಂಬುವಂತಾಗಿದ್ದರೂ, ಬೆಲೆ ಏರಿಕೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಒಂದು ಕಡೆಯಿಂದ ಕೊಟ್ಟು, ಇನ್ನೊಂದು ಕಡೆಯಿಂದ ಕಿತ್ತುಕೊಳ್ಳುತ್ತಿರುವ ರಾಜ್ಯ ಸರ್ಕಾರದ ಈ ಮನೋಧೋರಣೆ ಮತದಾರರಲ್ಲಿ ಭ್ರಮನಿರಸನ ಮೂಡಿಸಿದೆ.

ಇನ್ನು, ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಅಷ್ಟೇ ಅಲ್ಲದೇ, ದಕ್ಷ ಆಡಳಿತ ನೀಡುವಲ್ಲಿಯೂ ಮುಗ್ಗರಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ, ಸಂಪನ್ಮೂಲ ಹೊಂದಿಸಿಕೊಳ್ಳುವುದಕ್ಕೆ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಸಿ ಕತ್ತು ಹಿಸುಕುತ್ತಿದೆ. ಯಾವುದೇ ಸರ್ಕಾರಗಳಿಗೂ ಈ ಬೆಲೆ ಏರಿಕೆ ಎನ್ನುವುದು ಅನುಕೂಲಕರವಾದ ಅಸ್ತ್ರ ಎಂಬಂತಾಗಿದೆ. ಸರ್ಕಾರ ಮುನ್ನಡೆಸಲು ಆರ್ಥಿಕ ಮೂಲ ಕ್ರೋಢಿಕರಿಸುವುದಕ್ಕೆ ಜನರ ನಿತ್ಯ ಬಳಕೆಯ ವಸ್ತುಗಳ ಮೇಲೆ ಅತ್ಯಂತ ತೀವ್ರವಾಗಿ ಪ್ರಯೋಗಕ್ಕೊಡ್ಡುವ ಮನಸ್ಥಿತಿ ಎಲ್ಲಾ ಸರ್ಕಾರಗಳಿಗೂ ಇವೆ.

ರಾಜ್ಯ ಬಿಜೆಪಿ ಅವರು ಅಸಲಿಗೆ ಜನಾಕ್ರೋಶ ಯಾತ್ರೆ ನಡೆಸಬೇಕಿರುವುದು ತಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ. ಅಧಿಕಾರದಲ್ಲಿದ್ದಾಗ ತಮ್ಮದೇ ಕೇಂದ್ರ ಸರ್ಕಾರ ಅವ್ಯಾಹತವಾಗಿ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದಾಗ ತುಟಿ ಪಿಟಿಕ್‌ ಎನ್ನದ ರಾಜ್ಯ ಬಿಜೆಪಿ ನಾಯಕರು, ಈಗ ಬೀದಿಗಳಿದು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಬಿಜೆಪಿಯವರದ್ದು ನಿಜವಾದ ಜನಪರ ನಿಲುವಾಗಿದ್ದರೇ, ತಮ್ಮದೇ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಧೋರಣೆಯ ವಿರುದ್ಧ ಪ್ರತಿಭಟನೆಗೆ ಇಳಿಯಲಿ.

ತರಕಾರಿ ಹಾಗೂ ಬೇಳೆ ಕಾಳುಗಳು ಸೇರಿದಂತೆ ಅಡುಗೆಗೆ ಸಂಬಂಧಿಸಿದ ವಸ್ತುಗಳ ಬೆಲೆಗಳು ಒಂದೂವರೆ ಪಟ್ಟು ಹೆಚ್ಚಾಗಿವೆ. ಪ್ರಸ್ತುತ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ, ಆದರೆ ದೇಶದ ನಾಗರಿಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ದುಬಾರಿ ಸುಂಕ, ತೆರಿಗೆಗಳನ್ನು ವಿಧಿಸಿ 36.58 ಲಕ್ಷ ಕೋಟಿ ಸಂಗ್ರಹಿಸಿದೆ ಕೇಂದ್ರ ಸರ್ಕಾರ. ಕಳೆದ ಹತ್ತು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ದೊಡ್ಡ ಪ್ರಮಾಣದಲ್ಲಿ ಕುಸಿತಗೊಂಡಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೇಲ್‌ ಹಾಗೂ ಸಿಲಿಂಡರ್‌ ಗ್ಯಾಸ್‌ ಬೆಲೆಯನ್ನು ಇಳಿಕೆ ಮಾಡುತ್ತಿಲ್ಲ.

ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸುವ ಬಿಜೆಪಿ, ಕೇಂದ್ರ ಸರ್ಕಾರದ ಈ ಬೆಲೆ ಏರಿಕೆಗಳ ಬಗ್ಗೆ ಮೊದಲು ಸ್ಪಷ್ಟನೆ ನೀಡಬೇಕಿದೆ. ತಾಕತ್ತಿದ್ದರೇ ರಾಜ್ಯದ ಬಿಜೆಪಿ ಸಂಸದರು, ಪೆಟ್ರೋಲ್‌ ಹಾಗೂ ಡಿಸೆಲ್‌ ಬೆಲೆಗಳಲ್ಲಿ ಕನಿಷ್ಟ 20-25 ರೂ. ಕಡಿಮೆಗೊಳಿಸುವಂತೆ ತಮ್ಮ ಪ್ರಧಾನಿಗಳಿಗೆ ಒತ್ತಡ ತರಲಿ. ಅಗತ್ಯ ವಸ್ತುಗಳ ಏರಿಕೆಯ ನಡುವೆಯ ದೇಶದ ಜನರಿಗೆ ಮತ್ತೊಂದು ಆಘಾತ ನೀಡಿದ್ದು ಅಡುಗೆ ಅನಿಲದ ದರವನ್ನು 50 ರೂ. ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿರುವುದು. ಸಾಮಾನ್ಯ ಸಿಲಿಂಡರ್‌ ಜೊತೆಗೆ ಉಜ್ವಲಾ ಯೋಜನೆಗೂ ಇದು ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಜ್ಯ ಬಿಜೆಪಿ ನಾಯಕರು ಈ ಬೆಲೆ ಏರಿಕೆಗೆ ಏನನ್ನುತ್ತಾರೆ ?

ಜೀವ ವಿಮೆ, ಆರೋಗ್ಯ ವಿಮೆಗಳ ಮೇಲೂ ಶೇ.18 ರಷ್ಟು ಜಿಎಸ್ಟಿ ಹೇರಲಾಗಿದೆ, ಮೊದಲ ಬಾರಿಗೆ ಕೃಷಿ ಉತ್ಪನ್ನಗಳಿಗೂ ಜಿಎಸ್ಟಿ ಹಾಕಲಾಗಿದೆ. ಎಟಿಎಂ ಶುಲ್ಕಗಳೂ ಏರಿಕೆ ಆಗುತ್ತಿವೆ. ಅಕ್ಕಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಶೇ. 70 ರಿಂದ 80ರಷ್ಟು ದುಪ್ಪಟಾಗಿವೆ. ಶೇ. 4-5ರಷ್ಟು ಟೋಲ್‌ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡುತ್ತಿದೆ. ಆಳು ಸರ್ಕಾರಗಳ ಅಸಮರ್ಥ ಆರ್ಥಿಕ ನೀತಿಯಿಂದಾಗಿ ಹಣದುಬ್ಬರ ಗಣನೀಯ ಏರಿಕೆಯಾಗಿದೆ. ಇದು ಜನ ಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಇನ್ನು, ಬೆಲೆ ಏರಿಕೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಾಯಕರು, ʼಬೇರೆ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ರಾಜ್ಯದಲ್ಲಿ ಬೆಲೆ ಏರಿಕೆ ಮಿತಿಯಲ್ಲಿದೆʼ ಎಂದು ಸಮರ್ಥಿಸಿಕೊಳ್ಳುತ್ತಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ. ಅವರು ಅಷ್ಟು ಮಾಡಿದ್ದಾರೆ, ನಾವು ಇಷ್ಟೇ ಮಾಡಿದ್ದೇವೆ ಎಂದು ಪಟ್ಟಿ ಬಿಡುಗಡೆ ಮಾಡಿ ತೋರಿಸುವುದು ಒಂದು ಸರ್ಕಾರದ ಆಡಳಿತಕ್ಕೆ ಶೋಭೆಯಲ್ಲ ಎನ್ನುವುದನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಅರ್ಥೈಸಿಕೊಳ್ಳಲಿ. ಆರೋಪಗಳನ್ನು ಪರಸ್ಪರ ಮಾಡಿಕೊಳ್ಳುವ ಬದಲು ರಾಜ್ಯ ಸರ್ಕಾರ ಎಲ್ಲಿ ಎಡವಿದೆ ಎನ್ನುವುದನ್ನು ತಿಳಿದು ಸರಿಪಡಿಸಿಕೊಳ್ಳಬೇಕಿದೆ. ಬಿಜೆಪಿ ಅವರು ಜನಪರ ಜವಾಬ್ದಾರಿ ಇರುವವರು ಹೌದಾದರೇ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವ ಮೊದಲು, ತಮ್ಮದೇ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ಧೋರಣೆಯ ವಿರುದ್ಧ ಹೋರಾಟ ನಡೆಸಿ, ಜನಸಾಮಾನ್ಯರಿಗೆ ಅನುಕೂಲ ಆಗುವಂತೆ ಮಾಡಲಿ. ಉಳಿದದ್ದು ಮತ್ತೆ ನೋಡೋಣ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!