spot_img
Monday, March 16, 2026
spot_img

ʼಅಂತರಂಗದ ಸ್ವಗತʼ ಬರಿ ಆತ್ಮಕಥನವಲ್ಲ ಸ್ಪೂರ್ತಿ ಸುಧೆ !

ಆತ್ಮಕಥೆ ಓದುವ ಬಗ್ಗೆ ನನಗೆ ಮೊದಲು ಅಷ್ಟೊಂದು ಆಸಕ್ತಿ ಇರಲಿಲ್ಲ. ಯಾರದ್ದೋ ಬದುಕಿನ ಕಥೆಯನ್ನು ನಾನ್ಯಾಕೆ ಓದಬೇಕು ಎಂಬ ಮನಸ್ಥಿತಿ ಕೆಲವು ವರ್ಷಗಳ ಹಿಂದಿತ್ತು. ಆದರೇ, ಕ್ರಮೇಣ ಆ ಮನಸ್ಥಿತಿ ಬದಲಾಗಿದ್ದು ಗೊತ್ತಾಗಲಿಲ್ಲ. ಕೆಲವೊಬ್ಬರ ಆತ್ಮಕಥೆಯನ್ನು ಓದಿದ್ದೇನೆ. ಪ್ರೀತಿಯ, ಗೌರವಾನ್ವಿತ ಡಾ. ಪಾರ್ವತಿ ಜಿ‌. ಐತಾಳ್ ಮೇಡಂ ಅವರಲ್ಲಿ, ಬಹುಶಃ ಅವರು ನಿವೃತ್ತಿ ಹೊಂದಿದಾಗಲಿಂದ ಆತ್ಮಕಥೆ ಬರೆಯಿರಿ ಮೇಡಂ ಎಂದು ನಾನು ಒತ್ತಾಯಿಸಿದ್ದೆ. ಮೊದಮೊದಲು ‘ಆತ್ಮಕಥೆ ಬರೆಯುವುದೆಂದರೇ ಪೂರ್ತಿ ಬರೆಯುವುದಕ್ಕೆ ಸಾಧ್ಯವಿಲ್ಲ, ಒಂದಿಷ್ಟು ವಿಷಯಗಳನ್ನು ಮುಚ್ಚಿಡಬೇಕಾಗುತ್ತದೆ. ಈಗ ನನಗೆ ಆ ಆಸಕ್ತಿ ಇಲ್ಲ. ಮುಂದೆ ನೋಡುವ’ ಅಂತ ಹೇಳಿದ್ದರು. ಆದರೂ ನಾನು ಸಿಕ್ಕಾಗೆಲ್ಲಾ ಅದೇನೋ ಗೊತ್ತಿಲ್ಲ ಅವರಲ್ಲಿ ಆತ್ಮಕಥೆಯನ್ನು ಬರೆಯುವುದಕ್ಕೆ ಒತ್ತಾಯಿಸುತ್ತಲೇ ಇದ್ದೆ. ಕಳೆದ ಎರಡು ಮೂರು ವರ್ಷಗಳ ಹಿಂದೆ ‘ಬರೆಯುತ್ತಿದ್ದೇನೆ’ ಎಂದು ಮೇಡಂ ಹೇಳಿದ್ದರು. ಅಂದಿನಿಂದ ಅವರ ಆತ್ಮಕಥೆ ಓದುವುದಕ್ಕೆ ಕಾಯುತ್ತಿದ್ದೆ. ಕೊನೆಗೂ ಈಗ ಅವರ ಆತ್ಮಕಥನ ‘ಅಂತರಂಗದ ಸ್ವಗತ’ ಓದಿದ್ದೇನೆ. ಓದಿ ಖುಷಿ ಪಟ್ಟಿದ್ದೇನೆ, ದುಃಖ ಪಟ್ಟಿದ್ದೇನೆ.

ಬಹುಶಃ ಆತ್ಮಕಥನವನ್ನು ಸಾಮಾನ್ಯವಾಗಿ ವೈಭವೀಕರಿಸಿಕೊಂಡು ಬರೆಯುವುದನ್ನು ನಾನು ನೋಡಿದ್ದೇನೆ. ಆದರೇ, ಅದಕ್ಕೆ ಅವಕಾಶವೇ ಕೊಡದೆ ಬದುಕು ಬಂದದ್ದನ್ನು, ಬದುಕು ಕೊಟ್ಟಿದ್ದನ್ನು ನೇರವಾಗಿ ಪಾರ್ವತಿ ಮೇಡಂ ಇಲ್ಲಿ ಬರೆದ್ದಾರೆ. ಬಹುಶಃ ಅದೇ ಈ ಆತ್ಮಕಥನದಿಂದ ದೊರಕುವ ಮಹತ್ವದ ಪ್ರೇರಣೆ.

ಕಾಸರಗೋಡು ಭಾಗದ ಒಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಬದುಕಿಗೆ ಬೇಕಾದಷ್ಟಿದ್ದರೂ ಮನೆತನದ ಕಟ್ಟುಪಾಡು, ಆಚರಣೆ, ಪದ್ಧತಿ, ಕೌಟುಂಬಿಕ ವೈಷಮ್ಯ, ತಂದೆಯ ಒಂದು ರೀತಿಯ ದರ್ಪದ ಸ್ವಭಾವಗಳ ನಡುವೆ ಬೆಳೆದ ಸಮಾಜಮುಖಿ ಚಿಂತನೆ ಇಂದು ಪಂಚಭಾಷಾ ಅನುವಾದಕಿ ಡಾ. ಪಾರ್ವತಿ ಜಿ. ಐತಾಳರನ್ನಾಗಿ ರೂಪಿಸುವಲ್ಲಿ ಮೂಲ ಕಾರಣ ಇರಬಹುದು. ಬಾಲ್ಯ, ಯೌವನ, ಕಾಲೇಜು ದಿನಗಳು, ಉದ್ಯೋಗ, ಮದುವೆ, ಮಕ್ಕಳು, ಬರವಣಿಗೆ, ವೃತ್ತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅನುಭವಿಸಿದ ಬಹುತೇಕ ಅಷ್ಟೂ ಸಂಗತಿಗಳನ್ನು ಸೋಸದೆ ತೆರೆದಿಟ್ಟಿದ್ದಾರೆ.

ಹೆಣ್ಣಿಗೆ ಪುರುಷ ಪ್ರಧಾನ ಸಮಾಜ ಒಂದಿಷ್ಟು ನಿರ್ದಿಷ್ಟ ಮಾನದಂಡಗಳನ್ನು ವಿಧಿಸಿದೆ. ಹೆಣ್ಣಾದವಳು ಆ ಮಾನದಂಡಗಳನ್ನು ಒಪ್ಪಿ ಅಪ್ಪಿ ನಡೆದುಕೊಳ್ಳುವಂತಹ ವಾತಾವರಣವನ್ನು ಈ ಸಮಾಜ ನಿರ್ಮಿಸಿದೆ. ಹೆಣ್ಣನ್ನು ಮಾನಸಿಕವಾಗಿಯೋ, ದೈಹಿಕವಾಗಿಯೋ ಹಿಂಸಿಸುವುದು ಪುರುಷತ್ವದ ಲಕ್ಷಣ ಎಂಬಂತೆ ಈ ಸಮಾಜ ನಂಬಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಬಾಲ್ಯದಿಂದಲೂ ಅನುಭವಿಸುತ್ತಲೇ ಅದನ್ನು ಮೀರಿ,  ಹಂತಹಂತವಾಗಿ ಸಾತ್ವಿಕ ಮನಸ್ಥಿತಿಯಿಂದಲೇ ವಿರೋಧಿಸುತ್ತಲೇ ಬಂದಿರುವುದು ಪಾರ್ವತಿ ಅವರ ಬದುಕಿನುದ್ದಕ್ಕೂ ಕಾಣ ಸಿಗುತ್ತದೆ.

ಹೆಣ್ಣನ್ನು ಮನಸ್ಸಿನಿಂದ ನೋಡುವ ಪಕ್ವತೆಯನ್ನು, ವಿವೇಕವನ್ನು ನಮ್ಮ ಸಮಾಜ ಇನ್ನೂ ಸಿದ್ಧಿಸಿಕೊಂಡಿಲ್ಲ. ಪಾರ್ವತಿ ಮೇಡಂ ಅವರು ತಮ್ಮ ಬಾಲ್ಯದಲ್ಲೇ ತಮ್ಮ ಅಮ್ಮನಿಗಾದ ಕಷ್ಟಗಳನ್ನು ಕಂಡು ಮರುಗಿದವರು. ತಮ್ಮ ʼತಂದೆಯವರು ಹೆಂಡತಿ ಮಕ್ಕಳ ವಿಚಾರದಲ್ಲಿ ದರ್ಪ ಕೋಪಗಳ ಪ್ರತಿಮೂರ್ತಿಯಂತಿದ್ದರು. ಹೆಂಡತಿಯನ್ನು, ಹೆಂಡತಿಯ ತೌರು ಮನೆಯವರನ್ನು ವಿನಾಕಾರಣ ಏನೇನೋ ನೆಪ ಹೇಳಿ ನಿಂದಿಸುವುದು, ತಾತ್ಸಾರ ಮಾಡುವುದು, ಚುಚ್ಚು ಮಾತಾಡಿ ನೋವಿಸುವುದು ಪುರುಷ ಲಕ್ಷಣ ಎಂದು ಅವರು ತಿಳಿದಂತಿತ್ತು ಎನ್ನುವುದನ್ನು ನೇರವಾಗಿ ಈ ಆತ್ಮಕಥೆಯಲ್ಲಿ ಬರೆಯುತ್ತಾರೆ. ಸಮಾಜದ ಈ ಧೋರಣೆಗೆ ದುರದೃಷ್ಟವಂತ ಹೆಣ್ಣು ಮಕ್ಕಳು ಬಲಿಯಾಗುತ್ತಿರುವುದರ ಬಗ್ಗೆ ಅಂದೇ ಅವರಲ್ಲಿ ಅಸಹನೆ ಇದ್ದಿದ್ದು. ಹೆಣ್ಣು ದೊಡ್ಡವಳಾದ ವಿಚಾರವನ್ನು ಸಮಾಜಕ್ಕೆ ಅಂಜಿ ಗುಟ್ಟಾಗಿ ಇಡುವ ಅಂದಿನ ಕಾಲದ ಪದ್ಧತಿ, ಶಾಲಾ, ಕಾಲೇಜು ದಿನಗಳಲ್ಲಿ ಅನುಭವಿಸಿದ ನೋವುಗಳು, ಮದುವೆ ಮತ್ತು ಉದ್ಯೋಗ ಕ್ಷೇತ್ರದ ವಿಚಾರಗಳಲ್ಲಿ ಅನುಭವಿಸಿದ ಸಂಕಷ್ಟ ಅಪಮಾನಗಳೆಲ್ಲಾ ಅವರನ್ನು ಇನ್ನಷ್ಟು ಗಟ್ಟಿಯಾಗಿ ಬದುಕುವಂತೆ ಮಾಡಿತ್ತು ಎನ್ನುವುದನ್ನು ನಾವಿಲ್ಲಿ ಗುರುತಿಸಬಹುದು. ಕಾಲಾಂತರದಲ್ಲಿ ಈ ಎಲ್ಲಾ ಅನುಭವ ಅವರಲ್ಲಿ ಒಂದು ಸದೃಢ ಚಿಂತನೆಯಾಗಿ ಬೆಳೆಯಿತು. ಆ ಚಿಂತನೆ ಇಲ್ಲಿ ವ್ಯಕ್ತವಾಗುತ್ತಲೇ ಹೋಗುತ್ತದೆ.

ವಯೋಸಹಜ ಮನೋ ಬದಲಾವಣೆಗಳನ್ನು ಅವರು ಇಲ್ಲಿ ಪ್ರಸ್ತುತ ಪಡಿಸಿದ ರೀತಿಯೂ ಕೂಡ ಓದುಗರಲ್ಲಿ ಪ್ರೇರಕ ಶಕ್ತಿಯಾಗಿ ಮೂಡಬಹುದು‌. ಸಹಪಾಠಿ ಪ್ರಸಾದನ ಬಗ್ಗೆ ಮೂಡಿದ ಆಕರ್ಷಣೆ, ಕೊನೆಗೆ ಇದೇ ವಿಷಯದಲ್ಲಿ ಆದ ಸಣ್ಣ ನಿರಾಸೆ. ಎಂ.ಎ ವ್ಯಾಸಂಗ ಮಾಡುತ್ತಿದ್ದಾಗ ಪೊಲಂಕಿ ಸರ್, ಶೇಕ್ಸ್ ಪಿಯರ್ ನಾಟಕ ‘ಮೆಶರ್ ಫಾರ್ ಮೆಶರ್’ ಅಲ್ಲಿ ಲೈಂಗಿಕ ಅತ್ಯಾಚಾರದ ಸಂದರ್ಭವನ್ನು ವಿವರಿಸುವಾಗ ಫ್ರಾಯ್ಡ್ ಹೇಳಿದ ‘ಒಬ್ಬ ಹೆಣ್ಣು ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಎಷ್ಟೇ ದ್ವೇಷಿಸಿದರೂ ಸಂಭೋಗದ ಯಾವುದೇ ಒಂದು ಕ್ಷಣವನ್ನು ಎಂಜಾಯ್ ಮಾಡುತ್ತಾಳೆ’ ಎಂಬುವುದನ್ನು ಪ್ರಸ್ತಾಪಿಸಿದಾಗ ‘ಇಲ್ಲ ಸರ್, ಅದು ಸಾಧ್ಯವೇ ಇಲ್ಲ. ತಾನು ಪ್ರೀತಿಸದಿರುವ ಒಬ್ಬ ವ್ಯಕ್ತಿಯ ಜೊತೆಗೆ ಒಬ್ಬ ಹೆಣ್ಣು ಸೆಕ್ಸ್ ಎಂಜಾಯ್ ಮಾಡುತ್ತಾಳೆ ಎನ್ನುವುದು ನಾನ್ ಸೆನ್ಸ್ʼ ಎಂದು ಹುಡುಗಿಯರು ಎಲ್ಲರೂ ಕಿರುಚಿದ್ದು, ‘ಮಾನಸಿಕವಾದ ಪ್ರೀತಿಯಿಲ್ಲದ ದೈಹಿಕ ಸಂಬಂಧವನ್ನು ಯಾವ ಹೆಣ್ಣೂ ಇಷ್ಟಪಡಲಾರಳು’ ಎಂಬ ಅಭಿಪ್ರಾಯವನ್ನು ಅಂದೇ ಹೊಂದಿರುವುದೆಲ್ಲಾ ಅವರಲ್ಲಿ ಸ್ತ್ರೀವಾದದ ಬಗೆಗಿನ ಸರಿಯಾದ ಕಲ್ಪನೆಯನ್ನು ತೋರಿಸುತ್ತವೆ. ಗೆಳತಿ ಗಿರಿಜಾ ಅನುಭವಿಸಿದ ನೋವಿಗೆ ಸ್ಪಂದಿಸಿದ ರೀತಿ, ವಿಮಲೆ, ವೇಲಾಯುಧನ್ ಅವರ ನಡುವೆ ಸೇತುವೆಯಾಗಿ ಇದ್ದಿದ್ದು ಹೀಗೆ ಎಲ್ಲವನ್ನೂ ನೇರ ನೇರವಾಗಿ ಹೇಳುವ ಮನಸ್ಥಿತಿ ಎಳವೆಯಿಂದಲೇ ಅವರಲ್ಲಿದೆ ಎನ್ನುವುದು ಕೂಡ ಇಲ್ಲಿ ವ್ಯಕ್ತವಾಗುತ್ತಲೇ ಹೋಗುತ್ತದೆ. ಮದುವೆಯ ವಿಚಾರದರಲ್ಲಿ ಸಹೋದ್ಯೋಗಿಯೊಬ್ಬರು ಅಸಹನೀಯವಾಗಿ ವರ್ತಿಸಿರುವುದನ್ನು ಮೇಡಂ ಮೊದಲೇ ಒಮ್ಮೆ ನನ್ನಲ್ಲಿ ಪ್ರಸ್ತಾಪಿಸಿದ್ದರು. ಆತ್ಮಕಥೆಯಲ್ಲಿ ಹೇಳಿರುವುದನ್ನು ನೋಡಿ ಇನ್ನೂ ಆಘಾತವಾಯಿತು.

ಮದುವೆ, ಎರಡನೇ ಮದುವೆಗೆ ಬಂದ ಪ್ರಸ್ತಾಪ ಮತ್ತದಕ್ಕೆ ಪಾರ್ವತಿ ಮೇಡಂ ವ್ಯವದಾನದಿಂದ ಸ್ಪಂದಿಸಿದ ರೀತಿ ನಿಜಕ್ಕೂ ಅಚ್ಚರಿ ಅನ್ನಿಸುತ್ತದೆ. ಮದುವೆಯಾಗದೆ ಇರುವ ಹೆಣ್ಣು ಮಕ್ಕಳನ್ನು ಸಮಾಜ ನೋಡುವ ರೀತಿಯ ಬಗ್ಗೆ ಅವರಲ್ಲಿ ಅಂದೇ ಅಪಾರ ಸಿಟ್ಟಿತ್ತು. ಮುಂದೆ ಬದುಕಿಗೆ ಹಿಂದಿನ ಎಲುಬಿನಂತೆ ಬಂದ ಗಂಗಾಧರ ಐತಾಳರು, ಅವರೊಂದಿಗಿನ ಸಂಸಾರ, ಮೊದಲು ಅವರಿಂದ ಪಡೆದ ಅವಳಿ ಗಂಡು ಮಕ್ಕಳನ್ನು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಕಳೆದುಕೊಂಡದ್ದನ್ನು ಇಲ್ಲಿ ವಿವರಿಸಿದ್ದನ್ನು ಓದುವಾಗ ನಿಜಕ್ಕೂ ಕಣ್ಣೀರು ಇಳಿಯುತ್ತದೆ. ಮತ್ತೆ ಮುಂದೆ ಮಕ್ಕಳಾದ ರಮ್ಯತಾ, ಸುಸ್ಮಿತಾ ಅವರ ತಾಯಿಯಾಗಿ, ವೃತ್ತಿ, ಪ್ರವೃತ್ತಿ  ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದು ಮಾದರಿಯೇ ಸರಿ‌.

ಜಾತಿ ವ್ಯವಸ್ಥೆಯ ಬಗ್ಗೆಯೂ ಅಪಾರ ಸರಿಚಿಂತನೆ ಹೊಂದಿದ್ದ ಮೇಡಂ, ಅಂತರ್ಜಾತಿ ವಿವಾಹ, ಅಂತರ್ಜಾತಿ ಪ್ರೀತಿ, ಪ್ರೇಮ, ಪುರಾಣಗಳ ನಡುವೆ ಇರುವ ಚರ್ಚೆಗಳ ಬಗ್ಗೆಯೂ ತಮ್ಮದೇ ಚಿಂತನೆಯನ್ನು ಇಲ್ಲಿ ಪ್ರಸ್ತಾಪಿಸುತ್ತಾರೆ. ಅದು ಈ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ‌.

ತಾವೊಬ್ಬ ಉತ್ತಮ ಬರಹಗಾರ್ತಿಯಾಗಿದ್ದರೂ, ಪಂಚಭಾಷಾ ಅನುವಾದಕಿಯಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೂ, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವೃತ್ತಿಯಲ್ಲಿರುವಾಗ ಕಾಲೇಜಿನ ಸಾಹಿತ್ಯ ವೇದಿಕೆಗಳಲ್ಲಿ ಅವಕಾಶ ವಂಚಿತರಾಗಿರುವುದನ್ನು ಸಾತ್ವಿಕ ಮನಸ್ಥಿತಿಯಲ್ಲೇ ಎದುರಿಸಿ, ಈಗ ಎಲ್ಲರೂ ಗುರುತಿಸುವ, ಎಲ್ಲಾ ದೊಡ್ಡ ದೊಡ್ಡ ಸಾಹಿತ್ಯದ ವೇದಿಕೆಗಳಲ್ಲಿ ಅವಕಾಶ ಪಡೆದವರಾಗಿ ಬೆಳೆದು, ಕಾಲೇಜಿನ ಸಾಹಿತ್ಯ ವೇದಿಕೆಗಳಲ್ಲಿ ಅವಕಾಶ ಸಿಗದೆ ಇರುವ ಹಾಗೆ ಮಾಡಿದವರಿಗೆ ತಾವು ಏರಿದ ಎತ್ತರವನ್ನು ತೋರಿಸಿದ ರೀತಿ ನಿಜಕ್ಕೂ ಸ್ಫೂರ್ತಿ.

ಇನ್ನು, ಮಹಿಳೆಯನ್ನು ಸುಖಾಸುಮ್ಮನೆ ಹಿಂಸಿಸುವ ಪುರುಷ ಪ್ರಧಾನ ಸಮಾಜದ ಬಗ್ಗೆ ತಮ್ಮ ಒಳಗೊಳಗೆ ಆಕ್ರೋಶದ ಬೆಂಕಿಯನ್ನು ಅವರು  ಇಟ್ಟುಕೊಂಡಿದ್ದು ಅವರ ಬಹುತೇಕ ಎಲ್ಲಾ ಕೃತಿಗಳಲ್ಲಿ ಕಾಣಬಹುದು. ಈ ನಡುವೆ ತಮ್ಮ ಪ್ರೀತಿಯ ಸಂಗಾತಿ ಗಂಗಾಧರ ಐತಾಳರು ತಮ್ಮ ಬೆನ್ನಿನ ಎಲುಬಿನಂತೆಯೇ ಇದ್ದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಗಂಡ- ಹೆಂಡತಿಯರ ಪ್ರವಾಸಗಳು, ಪರಸ್ಪರ ಅರಿತು ಬಾಳಿದ ಸಂಸಾರ ಎಲ್ಲವೂ ಖುಷಿ ಕೊಡುತ್ತವೆ. ಬಳಿಕ ಎದುರಾದ ಸಂಗಾತಿ ಗಂಗಾಧರ ಐತಾಳರ ಅನಾರೋಗ್ಯ, ಆ ಕಾಲಘಟ್ಟದ ಯಾತನೆ, ಪತಿಯ ಅಗಲುವಿಕೆ ಎಲ್ಲವೂ ತುಂಬಾ ನೋವು ಕೊಡುತ್ತವೆ.

ಒಂದು ಹಂತದಲ್ಲಿ ಬರೆಯುವುದನ್ನು ನಿಲ್ಲಿಸಿ ಬಿಟ್ಟಿದ್ದ ಮೇಡಂ ಗೆ, ನಾನೇ ಅನೇಕ ಬಾರಿ ಬರೆಯಿರಿ ಮೇಡಂ ಎಂದು ಒತ್ತಾಯಿಸಿದ್ದೆ‌. ಹಾಗೆ ಒತ್ತಾಯಿಸಿದಾಗೆಲ್ಲಾ ‘ಸಾಕಷ್ಟು ಬರೆದಿದ್ದೇನೆ ಶ್ರೀರಾಜ್, ಸಾಕಾಯ್ತು, ಈಗ ಸ್ವಲ್ಪ ವಿಶ್ರಾಂತಿ ಬೇಕು’ ಅಂತ ಹೇಳುತ್ತಿದ್ದರು. ಹಾಗೆ ಯಾಕೆ ಹೇಳುತ್ತಿದ್ದರು ಎನ್ನುವುದು ಈ ಆತ್ಮಕಥನ ಓದಿ ಅರ್ಥೈಸಿಕೊಂಡಿದ್ದೇನೆ. ಆದರೇ, ಪಾರ್ವತಿ ಮೇಡಂ ಮರಳಿ ಲೇಖನಿ ಹಿಡಿದು ಬರೆಯುವುದಕ್ಕೆ ಆರಂಭಿಸಿದ್ದು, ವರ್ಷಕ್ಕೆ ಅವರ ಐದಾರು ಪುಸ್ತಕಗಳು ಪ್ರಕಟಗೊಂಡಿದ್ದು, ಸಾಹಿತ್ಯ ಮತ್ತು ಇನ್ನಿತರೆ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮೇಲಿಂದ ಮೇಲೆ ಪ್ರವಾಸಗಳಿಗೆ ತೆರಳಿದ್ದು ನಿಜಕ್ಕೂ ಆಶ್ಚರ್ಯ. ಬದುಕಿನಲ್ಲಿ ಎದುರಾದ ಏಕಾಂತ ಎನ್ನಿಸುವ ಜೀವನದಲ್ಲಿ ತಮ್ಮನ್ನು ತಾವು ಇನ್ನೆಲ್ಲೂ ಇಲ್ಲವೆಂಬಂತೆ ತೊಡಗಿಸಿಕೊಂಡಿದ್ದು ಪದಶಃ ಸ್ಪೂರ್ತಿ ಸುಧೆ. ಹಾಗಾಗಿ ಈ ಆತ್ಮಕಥೆ ನಮ್ಮ ನಿಮ್ಮ ಬದುಕನ್ನು ಪ್ರೇರೆಪಿಸುವ ಕೃತಿಯೂ ಹೌದು‌.

-ಶ್ರೀರಾಜ್ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!