spot_img
Monday, March 16, 2026
spot_img

ವಿಶ್ವೇಶ ತೀರ್ಥರ ಸ್ಮೃತಿವನದ ಕಾಮಗಾರಿಗೆ ಚುರುಕು

ಬ್ರಹ್ಮಾವರದ ಪ್ರವಾಸೋದ್ಯಮ ಕೇಂದ್ರವಾಗಿ ವಿಶ್ವೇಶ ತೀರ್ಥರ ಸ್ಮೃತಿವನ ಅಭಿವೃದ್ಧಿ

 -ಶ್ರೀರಾಜ್‌ ವಕ್ವಾಡಿ

ಬ್ರಹ್ಮಾವರ ತಾಲೂಕಿನ ನೀಲಾವರ ಗೋಶಾಲೆಯ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಸ್ಮೃತಿವನ ಕಾಮಗಾರಿಗೆ ಕೊನೆಗೂ ಚುರುಕು ಮುಟ್ಟಿದೆ. ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ದಿವ್ಯ ನಿರ್ಲಕ್ಷ್ಯದ ಕಾರಣಕ್ಕೆ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕಾಮಗಾರಿ ಕೊನೆಗೂ ಬಹುತೇಕ ಅಂತಿಮ ಹಂತಕ್ಕೆ ಬಂದು ತಲುಪಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ತುಮಕೂರಿನಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸ್ಮರಣಾರ್ಥ ಸೃತಿವನ ನಿರ್ಮಾಣವನ್ನು ತಲಾ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು. ಆ ಬಳಿಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸ್ಮೃತಿವನ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆಯೂ ಮಾಡಿದ್ದರು. ತುಮಕೂರಿನಲ್ಲಿ ಶಿವಕುಮಾರ ಸ್ವಾಮಿಗಳ ಗೌರವಾರ್ಥ ಸ್ಮೃತಿವನ ನಿರ್ಮಾಣವಾಗಿ ನಿಂತಿದೆ. ಆದರೇ, ಉಡುಪಿಯ ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರ ಸ್ಮೃತಿವನದ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅನುದಾನ ಪೂರ್ಣ ಬಿಡುಗಡೆಗೊಂಡರೂ ಕಾಮಗಾರಿ ಪೂರ್ಣಗೊಳಿಸದೇ ಇರುವುದಕ್ಕೆ ನಿರ್ಮಿತಿ ಕೇಂದ್ರ ತಾಂತ್ರಿಕ ಅಡಚಣೆಯ ನೆಪ ಹೇಳಿತ್ತು. ಜನಪ್ರತಿನಿಧಿ ಪತ್ರಿಕೆ ಕಳೆದ ವರ್ಷದ ಜುಲೈ ತಿಂಗಳ 18ನೇ ತಾರೀಕಿನಂದೇ ಈ ಸಂಬಂಧಿಸಿದಂತೆ ವಿಶೇಷ ವರದಿ ಪ್ರಕಟಿಸಿ ನಿರ್ಮಿತಿ ಕೇಂದ್ರಕ್ಕೆ ಒತ್ತಡ ತಂದಿತ್ತು. ಆದಾಗ್ಯೂ ಕಾಮಗಾರಿಯ ಬಗ್ಗೆ ನಿರ್ಮಿತಿ ಕೇಂದ್ರ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಸ್ಥಗಿತಗೊಂಡಿದ್ದ ಸ್ಮೃತಿವನ ಕಾಮಗಾರಿ ಕಳೆದ ಒಂದು ತಿಂಗಳ ಹಿಂದೆ ಪುನರಾರಂಭಗೊಂಡಿದೆ.

ಅರಣ್ಯ ಇಲಾಖೆಯ ಮೂಲಕ ಸ್ಮೃತಿವನ ನಿರ್ಮಾಣ :

ಅರಣ್ಯ ಇಲಾಖೆಯ ಮೂಲಕ ಈ ಸ್ಮೃತಿವನ ನಿರ್ಮಾಣ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಉಡುಪಿಯ ಸರ್ಕಾರಿ ಗುತ್ತಿಗೆ ಸಂಸ್ಥೆ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಯನ್ನು ಒಪ್ಪಿಸಿ ಮೂರು ವರ್ಷಗಳು ಕಳೆದಿವೆ. ಮೇ 8, 2022ರಂದು ಸ್ಮೃತಿವನ ನಿರ್ಮಾಣ ಕಾರ್ಯಕ್ಕೆ ಅಂದಿನ ಅರಣ್ಯ ಇಲಾಖೆಯ ಸಚಿವ ಉಮೇಶ್ ಕತ್ತಿ ಶಂಕು ಸ್ಥಾಪನೆ ಮಾಡಿದ್ದರು. ಸ್ಮೃತಿವನದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡ ನಿರ್ಮಿತಿ ಕೇಂದ್ರ, ಕೇವಲ ಎರಡು ಕೋಟಿ ವೆಚ್ಚದ ಕಾಮಗಾರಿಯನ್ನೂ ಇನ್ನೂ ಪೂರ್ಣಗೊಳಿಸದೆ ತನ್ನ ಬೇಜವಾಬ್ದಾರಿ ಧೋರಣೆಯನ್ನು ತೋರಿಸಿದೆ. ಅರಣ್ಯ ಇಲಾಖೆಯಿಂದ ತಾಂತ್ರಿಕ ಸಮಸ್ಯೆ ಎಂಬ ಸಬೂಬು ನೀಡಿತ್ತು. ಇದೇ ಅರಣ್ಯ ಇಲಾಖೆ ತುಮುಕೂರಿನಲ್ಲಿ ಶಿವಕುಮಾರ ಸ್ವಾಮಿಗಳ ಗೌರವಾರ್ಥ ಸ್ಮೃತಿವನ ಮಾಡಿಸಿದ್ದು ನಮ್ಮ ಕಣ್ಣೆದುರಿಗಿದೆ.

ಶೇ. 80ರಷ್ಟು ಕಾಮಗಾರಿ ಪೂರ್ಣ :

ಅಂದಾಜು 85 ಲಕ್ಷ ವೆಚ್ಚದಲ್ಲಿ ಸ್ಮೃತಿವನದ ಮುಖ್ಯ ಕಟ್ಟಡ, ಆರ್ಟ್ ಗ್ಯಾಲರಿ, ಧ್ಯಾನ ಮಂದಿರ, 13 ಲಕ್ಷ ವೆಚ್ಚದಲ್ಲಿ ಕೆಫೆಟೇರಿಯಾ, 10 ಲಕ್ಷ ವೆಚ್ಚದಲ್ಲಿ ಪಾಥ್ ವೇ ಹಾಗೂ ಲ್ಯಾಂಡ್ ಸ್ಕೇಪಿಂಗ್, 10 ಲಕ್ಷದಲ್ಲಿ ಪೇಜಾವರ ವಿಶ್ವೇಶ ತೀರ್ಥರ ಕಂಚಿನ ಪ್ರತಿಮೆ ಸೇರಿ ಉಳಿದ ಕೆಲವು ಶಿಲ್ಪಕಲೆಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ಅರಣ್ಯ ಇಲಾಖೆ ನಿರ್ಮಿತಿ ಕೇಂದ್ರ ಉಡುಪಿಯೊಂದಿಗೆ ಗುತ್ತಿಗೆಯ ಒಪ್ಪಂದ ಮಾಡಿಕೊಂಡಿದೆ. ಅಂದಾಜು ಒಂದು ಕೋಟಿ ಹದಿನೆಂಟು ಲಕ್ಷದಲ್ಲಿ ಸ್ಮೃತಿವನದ ಈ ಮೇಲೆ ಉಲ್ಲೇಖಿಸಿದ ಕಾಮಗಾರಿಗಳು ಹಾಗೂ ಉಳಿದ ಮೊತ್ತದಲ್ಲಿ ರಾಶಿವನ ಹಾಗೂ ಔಷಧೀಯ ಸಸ್ಯಗಳ ಉದ್ಯಾನವನದ ರಚನೆ, ಮಕ್ಕಳು ಆಡಲುಅನುಕೂಲವಾಗುವ ಉಪಕರಣಗಳ ಆಳವಡಿಕೆ, ಕುಡಿಯುವ ನೀರಿನ ಸೌಲಭ್ಯ, ವಿರಳ ಪ್ರದೇಶಗಳಲ್ಲಿ ವಿವಿಧ ಜಾತಿಗಳ ಗಿಡಗಳನ್ನು ನೆಡುವುದನ್ನು ಒಳಗೊಂಡು ಇತರೆ ಕಾರ್ಯಗಳಿಗೆ ಮೀಸಲಿಡಲಾಗಿದೆ. ಈ ಮೇಲೆ ಉಲ್ಲೇಖಿಸಿದ ಬಹುತೇಕ ಎಲ್ಲಾ ಕಾಮಗಾರಿಗಳು ಶೇ. 80ರಷ್ಟು ಈಗ ಸಂಪೂರ್ಣಗೊಂಡಿದೆ. ಲ್ಯಾಂಡ್‌ ಸ್ಕೇಪಿಂಗ್‌, ಪಾಥ್‌ ವೇ, ರಾಶಿವನ, ಔಷಧೀಯ ಸಸ್ಯಗಳ ಉದ್ಯಾನವನ ನಿರ್ಮಾಣದ ಕಾಮಗಾರಿ ಆಗಬೇಕಿದೆ. ಸರ್ಕಾರದಿಂದ ಬಂದ ಅನುದಾನವನ್ನು ನಿರ್ಮಿತಿ ಕೇಂದ್ರಕ್ಕೆ ಸಂಪೂರ್ಣವಾಗಿ ಹಸ್ತಾಂತರಿಸಿ ಎರಡು ವರ್ಷ ಕಳೆದಿದೆ.

ನಿರ್ಮಿತಿ ಕೇಂದ್ರದ ಅಸಡ್ಡೆಯೇ ಕಾಮಗಾರಿ ಪೂರ್ಣಗೊಳ್ಳದೇ ಇರುವುದಕ್ಕೆ ಕಾರಣ. ವಿಶ್ವೇಶ ತೀರ್ಥರು ಕೃಷ್ಣೈಕ್ಯರಾಗಿ ಆರು ವರ್ಷಗಳು ಕಳೆಯುತ್ತಾ ಬಂತಾದರೂ ಇನ್ನೂ ಸ್ಮೃತಿವನ ಲೋಕಾರ್ಪಣೆಗೆ ಮೂಹೂರ್ತ ಸಿಕ್ಕಿಲ್ಲ. ಕಾಮಗಾರಿ ಭರದಿಂದ ಸಾಗುತ್ತಿದೆ ಎನ್ನುವುದು ಸಮಾಧಾನ.

ಬ್ರಹ್ಮಾವರ ತಾಲೂಕಿಗೊಂದು ಪ್ರೇಕ್ಷಣೀಯ ಸ್ಥಳ :

ನೀಲಾವರ ಗೋಶಾಲೆಗೆ ಹೊಂದಿಕೊಂಡೇ ಇರುವ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಪೇಜಾವರ ವಿಶ್ವೇಶ ತೀರ್ಥರ ಸ್ಮರಣಾರ್ಥ ಸ್ಮೃತಿವನ ಲೋಕಾರ್ಪಣೆಗೊಂಡ ಬಳಿಕ ಬ್ರಹ್ಮಾವರ ತಾಲೂಕಿಗೊಂದು ಪ್ರೇಕ್ಷಣೀಯ ಸ್ಥಳವಾಗಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸಮೀಪದಲ್ಲೇ ಹರಿಯುವ ಸೀತಾ ನದಿಯ ತಟದಲ್ಲೇ ಪ್ರಸಿದ್ಧ ನೀಲಾವರ ಮಹಿಷ ಮರ್ಧಿನಿ ದುರ್ಗಾಪರಮೇಶ್ವರಿ ದೇವಾಸ್ಥಾನವೂ ಇದೆ. ದೇವಸ್ಥಾನಕ್ಕೆ ಬಂದವರು, ಗೋಶಾಲೆ ನೋಡುವುದಕ್ಕಾಗಿ ಬಂದವರನ್ನು ಈ ಸ್ಮೃತಿವನ ಆಕರ್ಷಿಸಲಿದೆ. ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ  ಪಟ್ಟಿಗೆ ಸ್ಮೃತಿವನೂ ಸೇರ್ಪಡೆಯಾಗಲಿದೆ. ಬ್ರಹ್ಮಾವರ ತಾಲೂಕಿನ ಅಭಿವೃದ್ಧಿಗೂ ಒಂದಲ್ಲಾ ಒಂದು ರೀತಿಯಲ್ಲಿ ಈ ಸ್ಮೃತಿವನ ಪೂರಕವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ ಬಹಳ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಬ್ರಹ್ಮಾವರ ತಾಲೂಕಿನಲ್ಲಿ ಈ ಸ್ಮೃತಿವನ ಒಂದು ಪ್ರೇಕ್ಷಣೀಯ ಸ್ಥಳವಾಗಿ ಮೂಡಿ ಬರಲಿದೆ. ಜಿಲ್ಲೆಯ ಪ್ರವಾಸೋದ್ಯಮದ ನೆಲೆಯಲ್ಲಿಯೂ ಸರ್ಕಾರದ ಮಹತ್ವದ ಕೊಡುಗೆ ಇದು. ಅತಿ ಶೀಘ್ರದಲ್ಲಿ ಸ್ಮೃತಿವನ ಲೋಕಾರ್ಪಣೆಯಾಗಲಿ ಎಂಬುದು ಸಾರ್ವಜನಿಕರ ಆಶಯ.

ಕಳೆದ ಸಪ್ಟೆಂಬರ್‌ ಅಂತ್ಯದೊಳಗೆ ಲೋಕಾರ್ಪಣೆ ಮಾಡಬೇಕು ಎನ್ನುವ ಉದ್ದೇಶ ನಮ್ಮದಾಗಿತ್ತು. ಆದರೇ, ಕೆಲವು ತಾಂತ್ರಿಕ ಕಾರಣಗಳಿಂದ ಕಾಮಗಾರಿ ಮುಂದುವರಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಕಾಮಗಾರಿ ಅಂತಿಮ ಹಂತದಲ್ಲಿದೆ. ಒಂದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಅರಣ್ಯ ಇಲಾಖೆಗೆ ಯೋಜನೆಯನ್ನು ಒಪ್ಪಿಸುತ್ತೇವೆ. ಲೋಕಾರ್ಪಣೆಯ ಕಾರ್ಯಕ್ರಮವೂ ಅತಿ ಶೀಘ್ರದಲ್ಲೇ ನಡೆಯಲಿದೆ. ಅರಣ್ಯ ಇಲಾಖೆಯ ಸಚಿವರನ್ನು ಲೋಕಾರ್ಪಣೆಗೆ ಆಹ್ವಾನಿಸುವ ಬಗ್ಗೆ ಯೋಚನೆಯಿದೆ. ಶೀಘ್ರದಲ್ಲೇ ಸಂಬಂಧಪಟ್ಟವರೊಂದಿಗೆ ಲೋಕಾರ್ಪಣಾ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ನಡೆಸುತ್ತೇವೆ.
-ಡಾ. ಕೆ. ವಿದ್ಯಾಕುಮಾರಿ
ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಮತ್ತು ಅಧ್ಯಕ್ಷರು, ನಿರ್ಮಿತಿ ಕೇಂದ್ರ, ಉಡುಪಿ ಜಿಲ್ಲೆ.

ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗಾಗಲೇ ಕಾಮಗಾರಿ ಪುನರಾರಂಭಗೊಂಡು ಒಂದು ತಿಂಗಳಾಗಿದೆ. ಕಾಮಗಾರಿ ತ್ವರಿತ ಗತಿಯಲ್ಲಿ ಮಾಡುತ್ತಿದ್ದೇವೆ. ಪಾಥ್ ವೇ, ಲ್ಯಾಂಡ್‌ ಸ್ಕೇಪಿಂಗ್‌ ಕೆಲಸಗಳು ಆಗಬೇಕಿದೆ. ಉಳಿದ ಬಹುತೇಕ ಎಲ್ಲಾ ಕೆಲಸಗಳು ಮುಗಿದಿವೆ. ಒಂದು ತಿಂಗಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ.
-ಸಚಿನ್‌ ವೈ.
ಇಂಜಿನೀಯರ್‌, ನಿರ್ಮಿತಿ ಕೇಂದ್ರ ಉಡುಪಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!