spot_img
Wednesday, March 18, 2026
spot_img

ನಿಸರ್ಗದ ರಹಸ್ಯಗಳಿಗೆ ತೇಜಸ್ವಿಯ ಕರ್ವಾಲೋ

ಪೂರ್ಣಚಂದ್ರ ತೇಜಸ್ವಿ ಅವರು ಯಾವಾಗಲೂ ನನ್ನ ನೆಚ್ಚಿನ ಬರಹಗಾರರಲ್ಲಿ ಒಬ್ಬರು. ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಪ್ರಪಂಚದಾದ್ಯಂತ ಅನೇಕ ಭಾಷೆಗಳಿಗೆ ಅನುವಾದಿಸಲಾಗಿದೆ. ಈ ಪುಸ್ತಕದಲ್ಲಿ ತೇಜಸ್ವಿಯವರು, ಅವರು ಕಂಡಂತಹ ಮಲೆನಾಡಿನ ಅದ್ಭುತ ಚಿತ್ರಣವೊಂದು ನಮ್ಮ ಕಣ್ಣಿನ ಮುಂದೆ ಹಾಯ್ದು ಹೋಗುವಂತೆ ಮಾಡಿದ್ದಾರೆ.

ಪುಸ್ತಕದ ಶೀರ್ಷಿಕೆ ಕರ್ವಾಲೋ ಎಂಬುದು ಕೀಟಶಾಸ್ತ್ರಜ್ಞನ ಹೆಸರು. ಈ ಕಥೆಯಲ್ಲಿ ತೇಜಸ್ವಿ ರವರು ನಿರೂಪಕನ ಪಾತ್ರ ವಹಿಸಿದ್ದಾರೆ. ಅವರ ದಿನಚರಿಯಲ್ಲಿ ಕಾಣಿಸಿಕೊಳ್ಳುವ ಪಾತ್ರಗಳಾದ ಮಂದಣ್ಣ, ಕೀಟದ ಕರ್ವಾಲೊ, ಛಾಯಾಗ್ರಾಹಕ ಪ್ರಭಾಕರ, ಬಿರಿಯಾನಿ ಕರಿಯಪ್ಪ ನವರನ್ನು ಸೃಷ್ಟಿಸಿ ತಾವು ಓದಿ ತಿಳಿದುಕೊಂಡಿರುವಂಥಹ ಪರಿಸರವನ್ನು ಇವರೆಲ್ಲರ ಮುಖಾಂತರ ಅದ್ಭುತವಾಗಿ, ಕುತೂಹಲ ಹುಟ್ಟಿಸುವಹಾಗೆ ತಿಳಿಹೇಳಿದ್ದಾರೆ. ತವಕವನ್ನುಂಟುಮಾಡುವ ಹಾರುವ ಓತಿಕ್ಯಾತದ ಹುಡುಕಾಟದ ಪ್ರಸಂಗ ಮೈ ಜುಮ್ ಎನ್ನುವಂತೆ ಮಾಡುತ್ತದೆ.

ಮಂದಣ್ಣನ ಮೇರೆಜು ಪ್ರಸಂಗ, ಬಿರಿಯಾನಿ ಕರಿಯಪ್ಪನ ಶಿಕಾರಿ ಕಾಂಡ – ಕಂಡ ಪ್ರಾಣಿಯನ್ನೆಲ್ಲ ಹೊಡೆದು ತಿನ್ನುವ ಚಪಲ, ಮನೆಗೆಲಸಗಾರ ಪ್ಯಾರನ ಮಂದ ಬುದ್ಧಿ, ಆ ಪ್ರದೇಶದ ಬೈಗುಳಗಳು ಓದುಗರನ್ನು ನಗುವಂತೆ ಮಾಡುತ್ತದೆ.

ಮಲೆನಾಡ ಮಲೆಯೊಳಗೆ ಎಂಟು ವರ್ಷಕ್ಕೆ ಹೂ ಬಿಟ್ಟ ಗುರುಗಿ ಜಾತಿಯ ಸಸ್ಯ ಅದೆಷ್ಟು ಜೇನಿನ ಉತ್ಪಾದನೆಗೆ ಕಾರಣವಾಗುತ್ತದೆ, ಅದನ್ನು ಕೊಳ್ಳಲು ಸ್ವತಃ ಸೊಸೈಟಿಯಲ್ಲಿದ್ದ ಹಣವೆಲ್ಲಾ ಖಾಲಿ ಆಗಿ ಹೋಗಿತ್ತು ಅಂತ ಲೇಖಕರು ಅನುಭವದ ಕತೆ ಹೆಣೆಯಲು ಶುರು ಮಾಡುತ್ತಾರೆ. ಹೀಗೆ ಶುರುವಾಗುವ ಕತೆಯಲ್ಲಿ ಜೇನಿನ ಉತ್ಪಾದನೆ – ಸಂಶೋಧನೆ – ನಿರ್ವಹಣೆ, ಆರ್ಥಿಕ ಲಾಭ ನಷ್ಟ ಹೀಗೆ ಎಲ್ಲವನ್ನೂ ಬಿಚ್ಚಿಡುತ್ತಾರೆ. ನಂತರ ಜೇನಿನ ಬೆನ್ನು ಹತ್ತಿದವರಿಗೆ ಮಂದಣ್ಣನ ಪಾತ್ರ ಪರಿಚಯವಾಗುತ್ತದೆ. ಕಾಡಿನ ಒಳಾಂತರಗಳ ಬಗ್ಗೆ ಅದಮ್ಯವಾಗಿ ಗ್ರಹಿಸುವ ಶಕ್ತಿ – ತಾಳ್ಮೆ – ಜಾಣತನ ಎಲ್ಲವನ್ನೂ ಹೊಂದಿದ ಮಂದಣ್ಣನಿಗೆ ತನ್ನ ಜೀವನದ ಮೇಲೆ ತನಗೆ ನಿರುತ್ಸಾಹ ಇರುವ ಬಗ್ಗೆ ತೇಜಸ್ವಿ ಎಷ್ಟು ಚೆಂದವಾಗಿ ಬರಿಯುತ್ತಾರೆ.

ಗದ್ದೆಗೆ ಹುಳುವಿನ ಕಾಟದಿಂದ ಪರಿಹಾರ ಕಂಡುಕೊಳ್ಳಲು, ಮಂದಣ್ಣನ ಬಗ್ಗೆ ಅಪಾರ ಗೌರವ ಹೊಂದಿರುವ ಕರ್ವಾಲೋರನ್ನು ಭೇಟಿಯಾಗಲು ನಲವತ್ತು ವರ್ಷಗಳ ಹಳೆಯದಾದ ಮೇಲ್ಛಾವಣಿ ಇಲ್ಲದ ಜೀಪೊಂದನ್ನು ಹತ್ತಿ ಅವರ ರಿಸರ್ಚ್ ಸ್ಟೆಷನ್ನಿಗೆ ಹೋಗುತ್ತಾರೆ. ನಿಸರ್ಗದ ಬಗ್ಗೆ ಅವರಿಗಿರುವ ಕೌತುಕ ಕುತೂಹಲಗಳು ಲೇಖಕರಲ್ಲಿ ಅಚ್ಚರಿ ಮೂಡಿಸುತ್ತವೆ. ಮಂದಣ್ಣನ ಮದುವೆ ಮತ್ತು ಅಲ್ಲಿ ನಡೆಯಲ್ಪಡುವ ಹಾಸ್ಯ ಪ್ರಸಂಗಗಳು ಕತೆಯನ್ನು ರಂಜನಿಯವಾಗಿ ಎಳೆದುಕೊಂಡು ಹೋಗುತ್ತವೆ.

ಅನಾದಿ ಕಾಲದಿಂದಲೂ ಉಳಿದು ಬಂದ ಅಪರೂಪದ ಅವಶೇಷಗಳು ಮತ್ತು ಅಳಿವಿನಂಚಿನ ಸಂತತಿಗಳ ಸುರುಳಿ ಬಿಚ್ಚಿಟ್ಟು ಕರ್ವಾಲೋ ಎಲ್ಲರ ಮನಸ್ಸಿನಲ್ಲಿ ತಮ್ಮ ವಿಚಾರವನ್ನು ಗಂಟು ಹಾಕಿ ವಿಸ್ಮಯ ಮೂಡಿಸುತ್ತಾರೆ. ಹಾರುವ ಓತಿಕೇತದ ಅನ್ವೇಷಣೆಗೆಂದು ಅಣಿಯಾಗಿ ನಿಂತಾಗ ಎಲ್ಲರಲ್ಲೂ ಕುತೂಹಲ, ಕೌತುಕ, ಕನಸು ಉತ್ಪತ್ತಿಯಾಗಿ ಯಾವುದೋ ಭರವಸೆ ಎಲ್ಲರೊಳಗೆ ಇಣುಕಿ ನೋಡುತ್ತದೆ.

ಮಂದಣ್ಣ ಯಾವಾಗಲೋ ನೋಡಿದ್ದ ಈ ಹಾರುವ ಓತಿಕೇತದ ಬೆನ್ನು ಹತ್ತಿ ಈಗ ವಿಜ್ಞಾನಿ ಕರ್ವಾಲೊ, ಕ್ಯಾಮೆರಾ ಪ್ರಭಾಕರ, ಕರಿಯಪ್ಪ ಮತ್ತು ನಿರೂಪಕರ ಕಿವಿ ಎಂಬ ನಾಯಿ ಮತ್ತು ಲೇಖಕರ ಹೊರಡುತ್ತಾರೆ. ಇಲ್ಲಿಂದ ಕತೆ ಇನ್ನಷ್ಟು ರೋಚಕಗೊಳ್ಳುತ್ತದೆ. ಈಚಲ ಮರಗಳ ವಿಸ್ತಾರ ಭೂಮಿಯನ್ನು ದಾಟಿದ ಮೇಲೆ ದಟ್ಟ ಕಾಡಿನ ಅಂಚೊಂದು ಎದುರುಗೊಂಡು ಅಲ್ಲಿ ಹಳೆ ಪರಿಚಯದ ಎಂಗ್ಟನ ಪರಿವಾರ ಎದುರುಗೊಳ್ಳುತ್ತದೆ. ಆ ರಾತ್ರಿ ಅಲ್ಲಿಯೆ ಉಳಿದು ಫೈರ್ ಕ್ಯಾಂಪ್ ಹಾಕಿ ಈಡಿಗೆ ಗುರಿಯಾದ ಕಾಡುಕೋಳಿಯನ್ನೆ ಹದವಾಗಿ ಬೇಯಿಸಿ ರಾತ್ರಿ ಊಟಕ್ಕೆ ತಿಂದು ಮಲಗುತ್ತಾರೆ.

ಈ ಓತಿಕ್ಯಾತಗಳ ಜಾಡು ಹಿಡಿದು ಹೊರಟಾಗ ಲೇಖಕರ ಅಂತರಂಗದಲ್ಲಿ ಅನಂತ ಪ್ರಶ್ನೆಗಳ ಜೊತೆಗೆ ಕುತೂಹಲವೂ ಹುಟ್ಟಿಕೊಳ್ಳುತ್ತದೆ. ನಡುನಡುವೆ ಕರ್ವಾಲೊ ಅವರ ಕೆಲವು ಫಿಲಾಸಫಿಗಳು ಓದುಗರಿಗೆ ಇಷ್ಟವಾಗಿಬಿಡುತ್ತವೆ. ನಿದ್ದೆಯಿಂದ ಎದ್ದಾಗ ಚಗುಳಿ ಇರುವೆ ಗೂಡಿನ ಪಕ್ಕದಲ್ಲಿ ಹಾರುವ ಓತಿಕೇತ ಕಾಣಿಸುತ್ತದೆ. ತೇಜಸ್ವಿಯವರು ಇಲ್ಲಿ ಅನುಭವಿಸುವ ಅನುಭವ ಪ್ರತಿಯೊಬ್ಬ ಓದುಗನು ಈ ಹಾರುವ ಓತಿಕೇತದ ಬೆನ್ನು ಹತ್ತಿ ಒಂದೊಂದು ಕ್ಷಣಕ್ಕೂ, ಪ್ರಪಾತದ ತುದಿಯಲ್ಲಿ ನಿಂತು ಅವಕಾಶ ಒಂದಕ್ಕೆ ಕಾಯ್ದಷ್ಟು ತೀವ್ರತೆಯಿಂದ ಓದುತ್ತಾ ಹೋಗುತ್ತಾನೆ.

ಕುತೂಹಲವು ಜ್ಞಾನೋದಯಕ್ಕೆ ಮಾರ್ಗವಾಗಿದೆ ಎಂಬ ತತ್ವವನ್ನು ತೇಜಸ್ವಿಯವರು ಈ ಪುಸ್ತಕದಲ್ಲಿ ಪ್ರತಿನಿಧಿಸುತ್ತಾರೆ. ಹಾಸ್ಯಲೇಪಿತ, ಕುತೂಹಲ ಹುಟ್ಟಿಸುವಂತಹ, ತತ್ತ್ವಾಂಶಗಳುಳ್ಳ ತವಕವನ್ನುಂಟು ಮಾಡುವ, ಅತ್ಯದ್ಭುತ ಕಥೆ ಕರ್ವಾಲೋ.

-ರಶ್ಮಿ ಉಡುಪ ಮೊಳಹಳ್ಳಿ
SKVMS GFGC Kundapura Koteshwara

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!