spot_img
Monday, March 16, 2026
spot_img

ಪಂಚಗಂಗಾವಳಿ ನದಿ ಒಡಲಿಗೆ ಸೇರುತ್ತಿದೆ ಪುರಸಭೆ ವ್ಯಾಪ್ತಿಯ ಕೊಳಚೆ ನೀರು

ಯುಜಿಡಿ ಕರ್ಮಕಾಂಡ | ಎನ್‌ಜಿಟಿ ಸೂಚನೆ ಉಲ್ಲಂಘಿಸಿ ಕೊಳಚೆ ನೀರು ನದಿಗೆ

-ಶ್ರೀರಾಜ್‌ ವಕ್ವಾಡಿ
ಕುಂದಾಪುರದ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಸ್ಥಗಿತಗೊಂಡು ಹಲವು ವರ್ಷಗಳೆ ಕಳೆದಿವೆ. ಒಳಚರಂಡಿಯ ಕಾಮಗಾರಿಗೆ ಈಗಾಗಲೇ ಕೋಟಿಗಟ್ಟಲೇ ಅನುದಾನ ಬಿಡುಗಡೆಯಾಗಿದೆ. 48 ಕೋ.ರೂ.ಗಳಲ್ಲಿ ಆರಂಭಿಸಿದ ಒಳಚರಂಡಿ ಯೋಜನೆ (ಯುಜಿಡಿ) ಇನ್ನೂ ಕೊನೆಗೊಳ್ಳದ ಕಾರಣ ಪುರಸಭೆಯ ವ್ಯಾಪ್ತಿಯಲ್ಲಿನ 20 ವಾರ್ಡ್‌ ಗಳಿಂದ ಬರುವ ತ್ಯಾಜ್ಯ,ಕೊಳಚೆ ನೀರು ನೇರವಾಗಿ ಪಂಚಗಂಗಾವಳಿ ನದಿ ಒಡಲನ್ನು ಸೇರುತ್ತಿದೆ. ತ್ಯಾಜ್ಯ, ಮಲಯುಕ್ತ ಕೊಳಚೆ ನೀರನ್ನು ಸಂಸ್ಕರಿಸದೆ ಹಲವಾರು ವರ್ಷಗಳಿಂದ ನದಿಗೆ ಬಿಟ್ಟು ಮಲೀನಗೊಳಿಸಲಾಗುತ್ತಿದೆಯಾದರೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮೌನ ತಾಳಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಕೋಡಿ ಮಧ್ಯ, ಕೋಡಿ ಉತ್ತರ, ಕೋಡಿ ದಕ್ಷಿಣ ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾರ್ಡ್‌ಗಳಿಗೂ ಈ ಯುಜಿಡಿ ಯೋಜನೆ ಬರುತ್ತದೆ. ಒಟ್ಟು 20 ವಾರ್ಡ್‌ಗಳ ಒಳ ಚರಂಡಿ ನಿರ್ಮಾಣಕ್ಕೆ ಸುಮಾರು 39 ಕಿ. ಮೀ ಪೈಪ್‌ ಲೈನ್‌ ಹಾಕಬೇಕಾಗುತ್ತದೆ. ಆದರೆ, ಈವರೆಗೆ ಒಟ್ಟು 32 ಕಿ.ಮೀ ಪೈಪ್‌ ಲೈನ್‌ ಹಾಕಲಾಗಿದೆ. 1450 ಮ್ಯಾನ್‌ಹೋಲ್‌ ಗಳ ಪೈಕಿ 1160 ಮ್ಯಾನ್‌ಹೋಲ್‌ ಗಳಷ್ಟೇ ಆಗಿವೆ. ‌ಫೆರಿ ವಾರ್ಡ್‌, ಮದ್ದುಗುಡ್ಡೆ ವಾರ್ಡ್‌, ಈಸ್ಟ್‌ ಬ್ಲಾಕ್‌ ವಾರ್ಡ್‌, ಖಾರ್ವಿಕೇರಿ ವಾರ್ಡ್‌, ಬಹದ್ದೂರ್‌ ಷಾ ವಾರ್ಡ್‌ ಗಳು ಇನ್ನೂ ಒಳಚರಂಡಿ ಪೈಪ್‌ ಲೈನ್‌ ಭಾಗ್ಯ ಕಂಡಿಲ್ಲ. ಈ ನಾಲ್ಕೈದು ವಾರ್ಡ್‌ ನ ಜನರು ಇನ್ನೂ ಚಂರಡಿಯಿಂದ ಹರಿದು ಬರುವ ಉಳಿದ ವಾರ್ಡ್‌ ಗಳ ಕೊಳಚೆ ನೀರಿನ ವಾಸನೆಯನ್ನು ಸೇವಿಸುತ್ತಲೇ ಬದುಕುವ ಪರಿಸ್ಥಿತಿ ಇದೆ. ಸುಡುಗಾಡು ತೋಡಿನಲ್ಲಿ ಕೊಳಚೆ ನೀರು ಹೊಳೆಯಂತೆ ಹರಿಯುತ್ತಿರುವುದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿ.

ಚರಂಡಿ ನೀರು ಹರಿಸಿ ಶುಚಿ ಮಾಡಲು ವೆಟ್ ವೆಲ್ಗಳಿಲ್ಲದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಯೋಜನೆ ಆರಂಭವಾಗಿ ದಶಕ ಕಳೆದರೂ ಇನ್ನೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ತಿಯಾಗಿ ನಡೆದಿಲ್ಲ ಎನ್ನುವುದು ದುರಂತವೇ ಸರಿ.

48 ಕೋಟಿ ಯೋಜನೆ | ಹೊಸ ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭ

26 ಕೋ.ರೂ. ಕಾಮಗಾರಿ ಮಾತ್ರ ಈವರೆಗೆ ಆಗಿದ್ದು, ಪೈಪ್‌ ಲೈನ್‌ ಹಾಗೂ ವೆಟ್‌ ವೆಲ್‌ (ಪಂಪಿಂಗ್‌ ಸ್ಟೇಷನ್‌)ಗೆ ಮಾತ್ರ ಟೆಂಡರ್‌ 2016ರಲ್ಲಿ ಆಗಿತ್ತು. ಆದರೇ, ಭೂಸ್ವಾದೀನ ಪ್ರಕ್ರಿಯೆ, ನಿರಾಕ್ಷೇಪಣ ಪತ್ರ ಪಡೆದುಕೊಳ್ಳುವುದಕ್ಕೆ ವಿಳಂಬ ಆಗಿರುವ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿತ್ತು. ಗುತ್ತಿಗೆ ಪಡೆದ ಸಂಸ್ಥೆ ಈಗ ಹಳೆ ಟೆಂಡರ್‌ನಲ್ಲಿ ಕಾಮಗಾರಿ ಮುಂದುವರಿಸುವುದಕ್ಕೆ ತಯಾರಿಲ್ಲ, ಹೊಸ ಟೆಂಡರ್‌ ಪ್ರಕ್ರಿಯೆ ನಡೆಯಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

48 ಕೋ.ರೂ.ಗಳ ಯೋಜನೆ ರೂಪಿಸಿ ಅದು ಕೆಯುಡಬ್ಲ್ಯುಎಸ್‌ಡಿಬಿ ವತಿಯಿಂದ ಮಂಜೂರಾಗಿತ್ತು. ಕೇಂದ್ರ ಸರ್ಕಾರ ಶೇ.80 ಪಾಲುದಾರಿಕೆಯ 37.89 ಕೋ.ರೂ., ರಾಜ್ಯ ಸರ್ಕಾರ ಶೇ.10ರಷ್ಟು 5.51 ಕೋ. ರೂ., ಸ್ಥಳೀಯಾಡಳಿತ ಸಂಸ್ಥೆಯ ಪಾಲಾಗಿ 4.73 ಕೋ.ರೂ. ಸೇರಿ ಒಟ್ಟು 48.14 ಕೋ.ರೂ. ಮಂಜೂರಾಗಿತ್ತು. ಪಿ.ಸಿ. ಸ್ನೇಹಲ್ ಕನ್‌ಸ್ಟ್ರಕ್ಷನ್ ಕಂಪೆನಿ ಟೆಂಡರ್‌ನಲ್ಲಿ 42.11 ಕೋ.ರೂ.ಗೆ ಗುತ್ತಿಗೆ ಪಡೆದಿತ್ತು. ಅಂದಿದ್ದ ಕೇಂದ್ರದ ಯುಪಿಎ ಸರ್ಕಾರ ಕೊಡಬೇಕಿದ್ದ ಅನುದಾನದ ಅರ್ಧಾಂಶ 19 ಕೋ.ರೂ.ಗಳನ್ನು ನೀಡಿತ್ತು. ನಂತರ ಅಧಿಕಾರಕ್ಕೆ ಬಂದ ಎನ್‌ಡಿಎ  ಸರ್ಕಾರ ಅದನ್ನು ಪರಿಷ್ಕರಿಸಿ, 2016ರ ಜುಲೈಯಲ್ಲಿ ಬದಲಾಯಿಸಿ ಕೇಂದ್ರದ ಪಾಲು 23.68 ಕೋ.ರೂ. ಮಾತ್ರ ಎಂದು ಇನ್ನುಳಿದ 5.44 ಕೋ.ರೂ.ಗಳನ್ನು ನೀಡುವುದಾಗಿ ಹೇಳಿತ್ತು. ಕಂಪೆನಿಗೆ 38 ಕೋ.ರೂ. ಬಿಡುಗಡೆಯಾಗಿತ್ತು. ಆದರೆ, ಹಳೆಯ ಟೆಂಡರ್‌ ನಲ್ಲಿ ಕಾಮಗಾರಿ ಮುಂದುವರಿಸುವುದಕ್ಕೆ ಪಿ.ಸಿ. ಸ್ನೇಹಲ್ ಕನ್‌ಸ್ಟ್ರಕ್ಷನ್ ಕಂಪೆನಿ ಸದ್ಯ ತಯಾರಿಲ್ಲ. ಹೊಸ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ.

ಹೆಚ್ಚುವರಿ 30 ಕೋ.ರೂ. ಬೇಡಿಕೆ

ಯುಜಿಡಿ ಉಳಿದ ಕಾಮಗಾರಿಯ ಮುಂದುವರಿಕೆಗಾಗಿ ಹೆಚ್ಚವರಿ 30 ಕೋಟಿ ರೂ. ಗಳನ್ನು ಸರ್ಕಾರಕ್ಕೆ ಕೇಳಲಾಗಿದೆ. ಅದು ಸದ್ಯ ಅನುಮೋದನೆಯ ಹಂತದಲ್ಲಿದೆ ಎಂಬ ಮಾಹಿತಿ ಇದೆ. ಅನುಮೋದನೆ ಆದ ಕೂಡಲೇ ಟೆಂಡರ್‌ ಪ್ರಕ್ರಿಯೆ ಮುಗಿಸಿ ಸಂಗಂ, ಮದ್ದುಗುಡ್ಡೆ, ವಿಠಲವಾಡಿ, ಕಡ್ಡಿಮನಿ ರಸ್ತೆ, ಹುಂಚಾರಬೆಟ್ಟು ಬಳಿ ಕೊಳಚೆ ನೀರು ಬಂದು ಸೇರುವ ಬಾವಿ(ವೆಟ್‌ ವೆಲ್‌) ನಿರ್ಮಾಣ ಕಾರ್ಯ ಹಾಗೂ ಉಳಿದಿರುವ ಮ್ಯಾನಹೋಲ್‌ ಕಾಮಗಾರಿ, ಉಳಿದ ಏಳು ಕಿ. ಮೀ ಒಳಚರಂಡಿ ಪೈಪ್‌ ಲೈನ್ ಕಾಮಗಾರಿ ಆರಂಭವಾಗಲಿದೆ. ವೆಟ್‌ ವೆಲ್‌ ಗಳಿಂದ ತ್ಯಾಜ್ಯಗಳನ್ನು ಪಂಪ್‌ ಮಾಡಿ ಶುದ್ಧೀಕರಣ ಘಟಕಕ್ಕೆ ಹರಿಸಿ, ಶುದ್ಧಿಕರಣಗೊಂಡ ನೀರನ್ನು ಮರು ಬಳಕೆಗೆ ಅಥವಾ ನದಿಗೆ ಹರಿಸಲಾಗುತ್ತದೆ. ಕೆಯುಡಿಎಫ್‌ಸಿ ವತಿಯಿಂದ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣವಾಗಲಿದೆ.

ಜನರಿಗೆ ತಪ್ಪದ ಗೋಳು :

ಪುರಸಭೆ ವ್ಯಾಪ್ತಿಯಲ್ಲಿ ಪಂಚಗಂಗಾವಳಿ ನದಿಯನ್ನು ಆಶ್ರಯಿಸಿ ಬದುಕು ಸಾಗಿಸುತ್ತಿರುವ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ದಶಕಕ್ಕೂ ಹೆಚ್ಚು ವರ್ಷಗಳಿಂದ ಈ ಗೋಳನ್ನು ಅನುಭವಿಸುತ್ತಿವೆ. ನದಿ ತೀರದ ಕುಟುಂಬಗಳ ಮೂಲ ಆದಾಯ ಮೀನುಗಾರಿಕೆ, ಚಿಪ್ಪು ಹೆಕ್ಕುವುದು ಮೀನು ಸಾಕಾಣಿಕೆ. ಈ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆಯೂ ಇಲ್ಲಿ ನಡೆಯುತ್ತಿತ್ತು. ಹೊಸ ಕಾನೂನಿನ ಕಾರಣದಿಂದ ಮರಳುಗಾರಿಕೆಯೂ ಸ್ಥಗಿತಗೊಂಡಿದೆ. ಕೊಳಚೆ ನೀರು ನೇರವಾಗಿ ನದಿ ಒಡಲನ್ನು ಸೇರುತ್ತಿರುವುದರಿಂದ ಈ ಭಾಗದ ಮೂಲ ಆದಾಯವಾದ ಮೀನುಗಾರಿಕೆಗೂ ದೊಡ್ಡ ಹೊಡೆತ ಬೀಳುತ್ತಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

ತೆರೆದ ತೋಡಿನಿಂದಲೇ ಕೊಳಚೆ ನೀರು ನದಿಗೆ

ಪುರಸಭೆಯ ವ್ಯಾಪ್ತಿಯ ಸುಮಾರು 10-15 ವಾರ್ಡ್‌ಗಳ ಮಲಯುಕ್ತ ಕೊಳಚೆ ನೀರು ತೆರೆದ ಸುಡುಗಾಡು ತೋಡಿನ ಮೂಲಕ ನೇರವಾಗಿ ನದಿಗೆ ಹರಿಸಲಾಗುತ್ತಿದೆ. ಸ್ಥಳೀಯರ ಆರೋಗ್ಯದ ಬಗ್ಗೆ ಪುರಸಭೆ ಗಂಭೀರವಾಗಿ ಪರಿಗಣಿಸುವ ತುರ್ತಿದೆ. ಒಳ ಚರಂಡಿ ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ಈ ಭಾಗದ ಜನರು ನರಕ ಯಾತನೆ ಅಭವಿಸುವಂತಾಗಿದೆ. ಕೊಳಚೆ ನೀರಿನ ಶುದ್ದೀಕರಣ ನಡೆಯುತ್ತಲೇ ಇಲ್ಲ. ಶುದ್ಧೀಕರಣ ಮಾಡುವುದಕ್ಕೆ ಶುದ್ದೀಕರಣ ಘಟಕಗಳೇ ಇಲ್ಲ. ಪುರಸಭೆ ಕೊಳಚೆ ನೀರನ್ನು ಶುದ್ಧೀಕರಿಸದೆಯೇ ನದಿಗೆ ಹರಿಯ ಬಿಟ್ಟು, ಎಲ್ಲಾ ವ್ಯವಸ್ಥಿತವಾಗಿದೆ ಎಂದು ಬಿಂಬಿಸುತ್ತಿದೆ. ಇನ್ನು, ಫೆರಿ ಪಾರ್ಕ್‌ ಬಳಿ ಪಂಚಗಂಗಾವಳಿ ನದಿ ಕೊಳಚೆ ನೀರಿನಿಂದಲೇ ತುಂಬಿಕೊಂಡಿದೆ. ಕೊಳಚೆ ನೀರು ನದಿ ಸೇರಿ ಅಲ್ಲಿನ ಸುತ್ತಮುತ್ತ ಪ್ರದೇಶಗಳಲ್ಲಿ ದುರ್ವಾಸನೆ ಹೇಳತೀರದು.  ಶೀಘ್ರದಲ್ಲೇ ವೆಟ್‌ ವೆಲ್‌ ಗಳು, ಎಸ್‌ಟಿಪಿಗಳ ನಿರ್ಮಾಣ ಆಗಬೇಕಿದೆ.

 ಜಲಮೂಲಗಳಿಗೆ ಕೊಳಚೆ ನೀರು ಬಿಡುವಂತಿಲ್ಲ!

ಕುಂದಾಪುರದ ಪಂಚಗಂಗಾವಳಿ ಮಾತ್ರವಲ್ಲ, ದೇಶದಾದ್ಯಂತ ಇರುವ ನದಿಗಳಿಗೆ, ಜಲ ಮೂಲಗಳಿಗೆ ಕೊಳಚೆ ನೀರು ಹರಸಿ ಮಲೀನಗೊಳಿಸಲಾಗುತ್ತಿದೆ ಎನ್ನುವುದು ಕಟು ಸತ್ಯ. ನದಿಗಳಿಗೆ, ಜಲಮೂಲಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಯುದ್ದೋಪಾದಿಯಲ್ಲಿ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಪ್ರಧಾನ ಪೀಠ ಎಲ್ಲಾ ರಾಜ್ಯಗಳಿಗೆ ಈಗಾಗಲೇ ನಿರ್ದೇಶನ ನೀಡಿದೆ. ನದಿಗಳ ಮಾಲಿನ್ಯದಿಂದ ದೊಡ್ಡ ಪ್ರಮಾಣದಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಲಕಾಯಗಳ ಮಾಲಿನ್ಯ ತಡೆಗಟ್ಟಲು  ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಾದ ತುರ್ತಿದೆ. ನೈಸರ್ಗಿಕದತ್ತವಾದ ಜಲಮೂಲಗಳಿಗೆ ಕೊಳಚೆ ನೀರನ್ನು ನೇರವಾಗಿ ಬಿಡಬಾರದು. ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜತೆಗೂಡಿ ಕೆಲಸ ಮಾಡಿ ಪ್ರಗತಿಯ ವರದಿ ಸಲ್ಲಿಸಬೇಕೆಂದು ಎನ್‌ಜಿಟಿ ಪ್ರಧಾನ ಪೀಠ ೨೦೨೩ರ ಮೇ ತಿಂಗಳಲ್ಲೇ ಎಲ್ಲಾ ರಾಜ್ಯಗಳ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ ವಿಷಯಗಳ ಬಗ್ಗೆ ನ್ಯಾಯಮಂಡಳಿ ತನ್ನ ವಿಚಾರಣೆಯನ್ನು ಪೂರ್ಣಗೊಳಿಸಿ ಸೂಚನೆ ನೀಡಿತ್ತು. ಅಷ್ಟಾಗಿಯೂ ಎನ್‌ಜಿಟಿ ಸೂಚನೆಯನ್ನು ದೇಶದೆಲ್ಲೆಡೆ ಕಡೆಗಣಿಸಲಾಗುತ್ತಿದೆ ಎನ್ನುವುದು ದುರಂತ.

ರಿಂಗ್‌ ರೋಡ್‌ ಗೂ ಮುನ್ನಾ ಯುಜಿಡಿ ಆಗಲಿ

ಕುಂದಾಪುರದ ಹಲವು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷಿ ರಿಂಗ್‌ ರೋಡ್‌ ನಿರ್ಮಾಣ ಕಾಮಗಾರಿಗೆ ಶಿಲನ್ಯಾಸವಾಗಿ ಎರಡು ವರ್ಷ ಒಂದು ತಿಂಗಳಾಗಿದೆ. ಇನ್ನೂ ಕುಂಟುತ್ತಾ ಸಾಗುತ್ತಿದೆ. ಪುರಸಭೆಯ ಬಹುತೇಕ ಅಷ್ಟೂ ವಾರ್ಡ್‌ಗಳ ಕೊಳಚೆ ನೀರು ಬಹದ್ದೂರ್‌ ಷಾ ವಾರ್ಡ್‌ ನಲ್ಲಿರುವ ಸುಡುಗಾಡು ತೋಡಿನ ಮೂಲಕವೇ ನದಿಗೆ ಸೇರುತ್ತದೆ. ಈ ಭಾಗದ ಜನರಿಗೆ ನಿತ್ಯ ನರಕ. ಇಲ್ಲಿನ ಮೂರ್ನಾಲ್ಕು ವಾರ್ಡ್‌ ಗಳಿಗೆ ಇನ್ನೂ ಒಳಚರಂಡಿ ಪೈಪ್‌ ಲೈನ್‌ ಆಗಿಲ್ಲ. ರಿಂಗ್‌ ರೋಡ್‌ ಆಗುವುದರೊಳಗೆ ಒಳಚರಂಡಿ ಪೈಪ್‌ಲೈನ್‌ ಮಾಡಿ ಎನ್ನುವುದು ಸ್ಥಳೀಯರ ಆಗ್ರಹ. ಸ್ಥಳೀಯರ ಬೇಡಿಕೆಯಲ್ಲಿ ದೂರಾಲೋಚನೆ ಇದೆ. ಕೋಟ್ಯಾಂತರ ರೂ. ವ್ಯಯಿಸಿ ನಿರ್ಮಾಣ ಮಾಡುತ್ತಿರುವ ರಿಂಗ್‌ ರೋಡ್‌ ನಿರ್ಮಾಣವಾದ ಬಳಿಕ ಮತ್ತೆ ಅದನ್ನು ಅಗೆದು ಯುಜಿಡಿ ಪೈಪ್‌ಲೈನ್‌ ಮಾಡುವ ಬದಲು ರಿಂಗ್‌ ರೋಡ್‌ ಆಗುವ ಮೊದಲೇ ಯುಜಿಡಿ ಮಾಡಿದರೆ ಒಳಿತು ಎನ್ನುವ ಅಭಿಪ್ರಾಯವನ್ನು ಪರಿಗಣಿಸಿ ಯುಜಿಡಿ ಇಲಾಖೆ, ಲೋಕೋಪಯೋಗಿ ಇಲಾಖೆ, ಪುರಸಭೆ ಜಂಟಿಯಾಗಿ ಯೋಚಿಸಿ, ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಿರುವುದು ಅಗತ್ಯ.

ಯುಜಿಡಿಗೆ ಸಂಬಂಧಿಸಿದಂತೆ ಎಲ್ಲಾ ವಾರ್ಡ್‌ಗಳಲ್ಲಿಯೂ ಕೆಲಸವಾಗಿದೆ. ವೆಟ್‌ವೆಲ್‌ ನಿರ್ಮಾಣಕ್ಕೆ ಒಂದಿಷ್ಟು ತಾಂತ್ರಿಕ ಸಮಸ್ಯೆ ಇದೆ. ಭೂಸ್ವಾದೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಇನ್ನೆರಡು ಮೂರು ತಿಂಗಳಲ್ಲಿ ಯುಜಿಡಿಯ ಉಳಿದ ಕಾಮಗಾರಿಗಳು ಆರಂಭವಾಗುವ ನಿರೀಕ್ಷೆ ಇದೆ.
-ಮೋಹನದಾಸ್‌ ಶೆಣೈ
ಅಧ್ಯಕ್ಷರು, ಪುರಸಭೆ ಕುಂದಾಪುರ

ರಿಂಗ್‌ ರೋಡ್‌ ಹಾಳಾಗದಂತೆ ಒಳಚರಂಡಿ ಪೈಪ್‌ಲೈನ್‌ ಹಾಕುವ ಬಗ್ಗೆ ಯುಜಿಡಿ ಇಲಾಖೆ, ಲೋಕೋಪಯೋಗಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ಮುಂದಿನ ಕಾರ್ಯ ನಿರ್ವಹಿಸುತ್ತೇವೆ. ಯುಜಿಡಿಯ ಉಳಿದ ಕಾಮಗಾರಿಗೆ ಹೊಸದಾಗಿ ಟೆಂಡರ್‌ ಪ್ರಕ್ರಿಯೆ ನಡೆಯಬೇಕಿದೆ. ಅತಿಶೀಘ್ರದಲ್ಲಿ ಯುಜಿಡಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಪುರಸಭೆಯಿಂದ ನಾವು ಕಾರ್ಯ ನಿರ್ವಹಿಸುತ್ತೇವೆ.
-ಆನಂದ್‌ ಜೆ.
ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ

ಅನಧಿಕೃತವಾಗಿ ಪುರಸಭೆಯಿಂದ ಕೊಳವೆಗಳ ಮೂಲಕ ನದಿಗೆ ಕೊಳಚೆ ನೀರನ್ನು ಬಿಡುವುದನ್ನು ನಿಲ್ಲಿಸಿ ಜಲ ಮಾಲಿನ್ಯವನ್ನು ತಡೆಯಬೇಕು. ರಿಂಗ್‌ ರೋಡ್‌ ಮಾಡುವುದಕ್ಕೂ ಮೊದಲು ಒಳಚರಂಡಿ ಪೈಫಲೈನ್‌ ಹಾಕಬೇಕು. ರಿಂಗ್‌ ರೋಡ್‌ ಆದಮೇಲೆ ಯುಜಿಡಿಗಾಗಿ ರೋಡ್‌ ಅಗೆದು ಹಾಳುಗೆಡವಿ ಸಂಚಾರ ದುಸ್ತರಗೊಳಿಸದಿರಲಿ.
-ಚಂದ್ರಶೇಖರ್‌ ಖಾರ್ವಿ
ಪುರಸಭಾ ಸದಸ್ಯರು, ಖಾರ್ವಿಕೇರಿ ವಾರ್ಡ್‌  

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!