spot_img
Monday, March 16, 2026
spot_img

ಕಲ್ಲು ಮುಳ್ಳಿನ ಹಾದಿಯಲ್ಲಿ ಡಿಕೆಶಿ ಮತ್ತು ಮಹಾತ್ವಾಕಾಂಕ್ಷೆ

ಕಾಂಗ್ರೆಸ್‌ ಆಂತರಿಕ ಭಿನ್ನಮತ | ಹೈಕಮಾಂಡ್‌ಗೆ ಡಿಕೆಶಿ ಡಿಮಾಂಡೇ ಸವಾಲು !

ತಮ್ಮ ರಾಜಕಾರಣದ ಉದ್ದಗಲಕ್ಕೂ ಕಲ್ಲು ಮುಳ್ಳಿನ ಹಾದಿಯನ್ನೇ ಕಂಡ ಡಿ.ಕೆ ಶಿವಕುಮಾರ್‌ ಅವರ ಮೇಲೆ ಇಂದಿನ ಸ್ಪಾಟ್‌ಲೈಟ್‌. ರಾಜ್ಯದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ. ಕೆ ಶಿವಕುಮಾರ್‌ ಅವರ ಹಿನ್ನೆಲೆ ಏನೇ ಇರಬಹುದು, ಆದರೆ ಡಿ.ಕೆ ಶಿವಕುಮಾರ್‌ ಅವರ ಸಂಘಟನಾ ಶಕ್ತಿಯ ಬಗ್ಗೆ ಕಾಂಗ್ರೆಸ್‌ ಮಾತ್ರವಲ್ಲದೇ, ಬಿಜೆಪಿಗೂ ತಿಳಿದಿದೆ. ಡಿಕೆಶಿ ಅವರ ಪ್ಲಸ್‌ ಅಂಡ್‌ ಮೈನಸ್‌ ಬಹುಶಃ ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಅಧಿಕಾರದಲ್ಲಿದ್ದಾಗೆಲ್ಲಾ ಅವರು ಸ್ವಪಕ್ಷೀಯರಿಂದಲೂ, ವಿಪಕ್ಷಗಳಿಂದಲೂ ಟೀಕೆಗೆ ಗುರಿಯಾದವರೇ ಆಗಿದ್ದಾರೆ. ಇದು ಡಿ.ಕೆ. ಶಿವಕುಮಾರ್‌ ಪರಿಸ್ಥಿತಿ.

ಡಿ. ಕೆ. ಶಿವಕುಮಾರ್‌ ಅವರಿಗೆ ಅಧಿಕಾರದ ಬಗ್ಗೆ ಒಂದು ಮಹತ್ವಾಕಾಂಕ್ಷೆ ಇದೆ. ಅದರ ಜೊತೆಗೆ ಈಗ ರಾಜಕೀಯದ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಸನ್ನಿವೇಶಕ್ಕೆ ತಕ್ಕುದಾಗಿ ನಡೆದುಕೊಳ್ಳುವ ಪ್ರೌಢಿಮೆಯನ್ನು ಅವರು ಹೇರಳವಾಗಿ ವೃದ್ಧಿಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್‌ ಅವರಲ್ಲಿ ಕೆಲವು ವರ್ಷಗಳ ಹಿಂದಿದ್ದ ಸಿಡಿಮಿಡಿ ಸ್ವಭಾವ ಈಗ ಇಲ್ಲ. ಎಲ್ಲವನ್ನೂ ಸಾವಧಾನದಿಂದ ಸ್ವೀಕರಿಸುವ ಮನೋಭಾವವನ್ನು ಅವರು ಬೆಳೆಸಿಕೊಂಡಿದ್ದಾರೆ. ತಮ್ಮ ರಾಜಕೀಯದ ದುರ್ಗಮವಾದ ಹಾದಿಯಲ್ಲಿ ಅವರು ತಮ್ಮಲ್ಲಿ ಇರಿಸಿಕೊಂಡಿರುವ ಅಧಿಕಾರದ ಬಗೆಗಿನ ಮಹಾತ್ವಾಕಾಂಕ್ಷೆಯನ್ನು ದಾಟಲು ಬಹಳ ಕಷ್ಟಪಟ್ಟವರು ಮತ್ತು ಈಗಲೂ ಕಷ್ಟ ಪಡುತ್ತಲೇ ಇದ್ದಾರೆ. ಬಹುಶಃ ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಏರಿದ ಮೇಲೂ ಡಿಕೆಶಿ ತಮ್ಮ ರಾಜಕೀಯದ ದುಸ್ಥಿತಿಯಿಂದ ಹೊರಬರುವುದಕ್ಕೆ ಇನ್ನೂ ಒದ್ದಾಡುತ್ತಲೇ ಇದ್ದಾರೆ.

ಕಾಂಗ್ರೆಸ್‌ ರಾಜಕೀಯದಲ್ಲಿ ಈಗ ಡಿಕೆಶಿ ಅವರದ್ದೇ ಚರ್ಚೆ. ರಾಜ್ಯ ಕಾಂಗ್ರೆಸ್‌ನ ಒಳಗೆ ಸೃಷ್ಟಿಯಾದ ಒಂದಿಷ್ಟು ಭಿನ್ನಾಭಿಪ್ರಾಯಗಳು ಮತ್ತು ಅದು ಸುದ್ದಿ ಮಾಧ್ಯಮಗಳಲ್ಲಿ ಪಡೆದ ವಾಖ್ಯಾನಗಳು ವಿಪಕ್ಷ ಬಿಜೆಪಿಗೆ ಚರ್ಚೆಯ ವಸ್ತುವಾಯಿತು. ಹೌದು, ಕರ್ನಾಟಕದ ಮಟ್ಟಿಗೆ ಅತ್ಯಂತ ಪ್ರಭಾವಿ ನಾಯಕರು ಎನ್ನಿಸಿಕೊಂಡಿರುವ ಡಿಕೆಶಿ ರಾಜಕೀಯ ವರ್ಚಸ್ಸಿಗೆ ಅಂಟಿದ ಕೆಲವು ಕಳಂಕಗಳೇ ಅವರು ಇನ್ನೂ ಏರಬಹುದಾದ ಎತ್ತರವನ್ನು ಏರುವುದಕ್ಕೆ ಬಿಡದೆ ಕಾಡುತ್ತಿದೆ. ರಾಜಕೀಯದಲ್ಲಿ ಇಂತಹ ಬೆಳವಣಿಗೆ ತೀರಾ ಸಾಮಾನ್ಯ. ರಾಜಕೀಯ ಏರಿಳಿತವನ್ನು ಕಂಡು ಮತ್ತೆ ಮರಳಿ ರಾಜಕೀಯದಲ್ಲಿ ತಮ್ಮದೇ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ. ಡಿಕೆಶಿ ಸಂಘಟನೆಯಲ್ಲಿ ಎತ್ತಿದ ಕೈ. ಪಕ್ಷ ಸಂಘಟನೆಯ ಬಗ್ಗೆ ಅವರಲ್ಲಿದ್ದ ಯೋಚನೆ ಮತ್ತು ಯೋಜನೆ ಬಹುಶಃ ಸಿದ್ದರಾಮಯ್ಯ ಅವರಿಗೂ ಇರಲಿಕ್ಕಿಲ್ಲ. ಹಾಗಂತ ಸಿದ್ದರಾಮಯ್ಯ ಅವರನ್ನು ಒಬ್ಬ ಮಾಸ್‌ ಲೀಡರ್‌ ಎಂದು ಹೇಳುವುದನ್ನು ಖಂಡಿತ ಅಲ್ಲಗಳೆಯುವಂತಿಲ್ಲ. ಎಷ್ಟೇ ಆದರೂ, ಚುನಾವಣೆ, ಪಕ್ಷ ಸಂಘಟನೆ ಎಂದು ಬಂದಾಗ ಕಾಂಗ್ರೆಸ್‌ ಪಾಳಯದಲ್ಲಿ ಕರ್ನಾಟಕದ ಪಾಲಿಗಂತೂ ಮೊದಲು ನೆನಪಾಗುವುದು ಡಿಕೆಶಿ ಎನ್ನುವುದು ಕಾಂಗ್ರೆಸ್ಸಿಗರೂ ಕೂಡ ಒಪ್ಪುವ ವಿಷಯ. ಹೀಗಾಗಿ ಡಿಕೆಶಿ ಅವರನ್ನು ಅಧಿಕಾರದ ವಿಚಾರದಲ್ಲಿ ಸರಿಯಾಗಿ ನಡೆಸಿಕೊಳ್ಳುವುದು ಕಾಂಗ್ರೆಸ್‌ ಹೈಕಮಾಂಡ್‌ಗೂ ಒಂದು ಸವಾಲಿನ ಕೆಲಸ. ಇನ್ನು, ಕರ್ನಾಟಕದ ವಿಚಾರದಲ್ಲಿ ಪಾರ್ಟಿ ಫಂಡ್‌ ಎಂದು ಬಂದಾಗಲೂ ಹೈಕಮಾಂಡ್‌ಗೆ ಮೊದಲು ನೆನಪಾಗುವುದೇ ಡಿಕೆಶಿ. ಹಾಗಾಗಿ ಡಿಕೆಶಿ ಅವರನ್ನು ನಿಭಾಯಿಸುವುದು ತುಸು ಕಷ್ಟ.

ಹಾಗಾಂತ ವೈಯಕ್ತಿಕವಾಗಿ ಡಿ.ಕೆ. ಶಿವಕುಮಾರ್‌ ಅವರ ವಿಚಾರವಾಗಿ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಅಂತಹ ಒಳ್ಳೆಯ ಒಲವೇನೂ ಇಲ್ಲ. ಒಳ್ಳೆಯ ಅಭಿಪ್ರಾಯವೂ ಇಲ್ಲ. ಆದರೇ, ಪಾರ್ಟಿ ಫಂಡ್‌, ಚುನಾವಣೆ, ಸಂಘಟನೆ ಎಂದು ಬಂದಾಗ ಅದರ ನೇತೃತ್ವ ವಹಿಸಿಕೊಳ್ಳುವುದಕ್ಕೆ ಡಿಕೆಶಿಯೇ ಸಮರ್ಥರು ಎನ್ನುವ ಅಭಿಪ್ರಾಯ ಡಿಕೆಶಿ ಬಗೆಗೆ ಭಿನ್ನಾಭಿಪ್ರಾಯ ಇರಿಸಿಕೊಂಡಿರುವ ಕಾಂಗ್ರೆಸ್‌ ನಾಯಕರಲ್ಲಿಯೂ ಇದೆ ಎನ್ನುವುದು ಅಪ್ಪಟ ಸತ್ಯ. ಡಿಕೆಶಿ ಅವರಿಗೂ ಈ ಪಕ್ಷ ಸಂಘಟನೆ, ಚುನಾವಣೆಯ ಉಸ್ತುವಾರಿ, ಸಮಸ್ಯೆ ನಿವಾರಣೆ, ಪಾರ್ಟಿ ಫಂಡ್‌ ವಿಚಾರದಲ್ಲಿ ತಾವೇ ಹೈಕಮಾಂಡ್‌ಗೆ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ವಿಚಾರವೂ ತಿಳಿದಿದೆ. ಇದನ್ನೇ ಬಳಸಿಕೊಂಡು ಒಮ್ಮೊಮ್ಮೆ ತಮ್ಮದಲ್ಲದ ಜವಾಬ್ದಾರಿಗಳಲ್ಲಿ ಹಸ್ತಕ್ಷೇಪ ಮಾಡುವುದು, ಅಧಿಕಾರದ ಧೋರಣೆ ತೋರಿಸುವುದು, ದರ್ಬಾರು ಮಾಡುವುದನ್ನೆಲ್ಲಾ ಡಿಕೆಶಿ ಮಾಡಿದ್ದಾರೆ. ಮಾಡಿಲ್ಲ ಎಂದರೆ ಅದು ತಪ್ಪು. ಅಂತಹ ಸಂದರ್ಭಗಳಲ್ಲಿ ಹೈಕಮಾಂಡ್‌ ಅಂಕುಶ ಪ್ರಯೋಗಿಸಿ ಅವರನ್ನು ಹದ್ದುಬಸ್ತಿನಲ್ಲಿಡುವುದನ್ನೂ ಮಾಡಿಕೊಂಡು ಬಂದಿದೆ. ಹೀಗೆ ಈ ರೀತಿಯಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಪ್ರಕಟಗೊಳಿಸುತ್ತಲೇ ಇರುವುದು ಕಾಂಗ್ರೆಸ್‌ ಹಾಗೂ ಡಿಕೆಶಿ ನಡುವಿನ ರೋಗಗ್ರಸ್ತ ಮನಸ್ಥಿತಿ ಎಂದೇ ಹೇಳಬಹುದು. ಇಂತವನ್ನೆಲ್ಲಾ ಸುದ್ದಿ ಮಾಧ್ಯಮಗಳು ಊಹಾತ್ಮಕವಾಗಿ ರಾಜಕೀಯ ರಂಜನೆಗಾಗಿ ಸುದ್ದಿಗಳನ್ನು ತಯಾರಿಸುತ್ತಾ ಜನರ ದಾರಿ ತಪ್ಪಿಸುತ್ತಾ, ರಾಜಕೀಯ ಚರ್ಚೆಯನ್ನು ತಿರುಚುತ್ತಾ ಬಂದಿದೆ.

ಇನ್ನು, ಡಿಕೆಶಿ ಬಂಡಾಯ, ಕಾಂಗ್ರೆಸ್‌ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚಿತ್ರಚಿತ್ರವಾಗಿ ಮಾಧ್ಯಮಗಳು ಸುದ್ದಿ ಮಾಡುತ್ತಲೇ ಬಂದಿವೆ. ಡಿಕೆಶಿ ತಮ್ಮ ಮಾತೃಪಕ್ಷ ಕಾಂಗ್ರೆಸ್‌ ವಿರುದ್ಧ ಬಂಡಾಯ ಏಳುತ್ತಾರೆ ಎನ್ನುವುದು ಅಪ್ಪಟ ಸುಳ್ಳಾದರೂ, ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಭಿನ್ನಾಭಿಪ್ರಾಯ ಇರುವುದು ಸತ್ಯಾಂಶವೇ ಆಗಿದೆ. ಬಹುಶಃ ಇಂತಹ ವಿಷಮ ಸಂದರ್ಭದಲ್ಲಿ ಡಿಕೆಶಿ ಪ್ರತಿಕ್ರಿಯಿಸಿರುವುದರಲ್ಲಿ ಪ್ರೌಢಿಮೆ ಎದ್ದು ಕಾಣಿಸುತ್ತದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ ಪಕ್ಷದೊಳಗಿನ ಈ ಸಮಸ್ಯೆಯನ್ನು ಡಿಕೆಶಿ ನಿಭಾಯಿಸಿರುವುದನ್ನು ಮೆಚ್ಚಲೇ ಬೇಕು. ಸತೀಶ್‌ ಜಾರಕೀಹೊಳಿ, ಡಾ. ಜಿ. ಪರಮೇಶ್ವರ್‌ ಅವರ ಹೇಳಿಕೆಗಳು ಡಿಕೆಶಿ ಅವರನ್ನು ಸ್ವಲ್ಪ ಮಟ್ಟಿಗೆ ಕೆರಳಿಸಿತ್ತು, ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದರಾದರೂ ಆಮೇಲೆ ಏನೂ ಆಗಿಲ್ಲ ಎಂಬಂತೆ ಪಕ್ಷದ ಸಮಸ್ಯೆಗಳು ವಿಪಕ್ಷಗಳ ಬಾಯಿಗೆ ತುತ್ತಾಗಬಾರದು ಎಂಬ ದೃಷ್ಟಿಯಲ್ಲಿ ನಡೆದುಕೊಂಡಿರುವುದು ನಿಜಕ್ಕೂ ಮೆಚ್ಚಲೇ ಬೇಕು.

ಸೋನಿಯಾ ಗಾಂಧಿ ಅವರ ತ್ಯಾಗವನ್ನು ಸದಾ ಉಲ್ಲೇಖಿಸುವ ಡಿಕೆಶಿ, ಈ ಅಧಿಕಾರ ಹಂಚಿಕೆ ಹಾಗೂ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ವಿಚಾರ ಮೇಲೆ ಬಂದಾಗ, ಸೋನಿಯಾರನ್ನೇ ಸ್ಫೂರ್ತಿಯಾಗಿ ಇರಿಸಿಕೊಂಡಂತೆ ʼಪಕ್ಷಕ್ಕಾಗಿ ಉಸಿರು ಬಿಗಿ ಹಿಡಿದು ತ್ಯಾಗ ಮಾಡಿದ್ದೇನೆʼ ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆಯಲ್ಲಿ ಅವರಿಟ್ಟುಕೊಂಡಿರುವ ಮಹಾತ್ವಕಾಂಕ್ಷೆ ಈಡೇರಿಲ್ಲ ಎನ್ನುವ ನೋವು ಎದ್ದು ಕಾಣಿಸುತ್ತಿತ್ತು. ʼಪಕ್ಷಕ್ಕಾಗಿ ನಾನು ಈ ಹಿಂದಿನಿಂದಲೂ ಹಲವು ತ್ಯಾಗ ಮಾಡಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರ ಎದುರು ತಲೆಬಾಗಿ ಅವರ ಸೇವೆ ಮಾಡುತ್ತೇನೆ. ನನಗೆ ಫಲದ ಅಗತ್ಯವಿಲ್ಲ’ ಎಂದಿದ್ದರು. ಇವೆಲ್ಲಾ ಅವರ ಹೆಚ್ಚುಗಾರಿಕೆ ಎಂಬಂತೆ ಕಾಣುವುದಕ್ಕೆ ಆರಂಭವಾಯಿತು.

ಡಿಕೆಶಿ ಅವರಿಗೆ ಇನ್ನೂ ಅವಕಾಶವಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮಗೆ ಅಂಟಿರುವ ಎಲ್ಲಾ ಕಳಂಕದಿಂದ ಮುಕ್ತರಾಗಿ, ಪಕ್ಷದವರನ್ನು ಇನ್ನಷ್ಟು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಎತ್ತರವನ್ನು ಏರುವುದಕ್ಕೆ ಖಂಡಿತ ಸಾಧ್ಯವಿದೆ. ಡಿಕೆಶಿ ಇಂತಹ ವಿಷಮ ಪರಿಸ್ಥಿತಿಯಲ್ಲಿ ತ್ಯಾಗಿಗಳಾಗಿಯೇ ಹೀರೋ ಆದರೇ, ಅವರ ಭವಿಷ್ಯಕ್ಕೂ ಒಳ್ಳೆಯದು ಎಂದು ಅವರು ಅರಿತುಕೊಂಡು ನಡೆದರೇ ಪಕ್ಷಕ್ಕೂ, ಅವರಿಗೂ ಒಳ್ಳೆಯದು. ಹೇಗೂ ಪಕ್ಷ ಸಂಘಟನೆಯಲ್ಲಿ ಡಿಕೆಶಿ ಅವರಿಗೆ ತಮ್ಮದೇ ಆದ ಚಾರ್ಮ್‌ ಇದೆ. ಪಾರ್ಟಿಗೆ ಅಗತ್ಯವಿದ್ದಲ್ಲಿ ಫಂಡ್‌ ಒದಗಿಸುವ ಎಲ್ಲಾ ಸಾಮರ್ಥ್ಯವೂ ಇದೆ. ಪಕ್ಷದಲ್ಲಿ ಪ್ರಭಾವಿಯೂ ಹೌದು. ಸ್ವಲ್ಪ ತಾಳ್ಮೆಯನ್ನು ಅವರು ತಂದುಕೊಳ್ಳಬೇಕಿದೆ. ಪಕ್ಷದ ಒಳಗೆ ಹಾಗೂ ಸಿದ್ದರಾಮಯ್ಯ ಮತ್ತು ಡಿಕೆಶಿ, ಹೈಕಮಾಂಡ್ ನಡುವೆ ಅಧಿಕಾರದ ಹಂಚಿಕೆಯ ಬಗ್ಗೆ ಯಾವ ರೀತಿಯ ಒಪ್ಪಂದ ಆಗಿದೆಯೋ ಗೊತ್ತಿಲ್ಲ. ಆಗದೆ ಇದ್ದರೇ,  ಸಿಎಂ ಸ್ಥಾನಕ್ಕೆ ಡಿಕೆಶಿ ಸದ್ಯಕ್ಕೆ ಡಿಮ್ಯಾಂಡ್‌ ಮಾಡದೆ ಉಳಿದರೇ ಅವರ ಮೇಲೆ ಇನ್ನಷ್ಟು ಭರವಸೆ ಮೂಡಲಿದೆ. ಬಹುಶಃ ಡಿಕೆಶಿ ಕಾಂಗ್ರೆಸ್‌ನ ಭವಿಷ್ಯದ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಇದರ ಮೇಲೆ ಮುಂದೇನಾಗುತ್ತದೆಂದು ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ   

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!