spot_img
Monday, March 16, 2026
spot_img

ʼಹ್ಯಾಪಿ ಇಂಗ್ಲೀಷ್‌ʼ ಎಂಬ ಹೊಸ ಮಾದರಿಯ ಕಲಿಕಾ ಶಾಸ್ತ್ರ | ಹೆಸ್ಕುತ್ತೂರು ಸ.ಹಿ.ಪ್ರಾ. ಶಾಲೆಯ ವಿನೂತನ ಪ್ರಯತ್ನ

-ಶ್ರೀರಾಜ್‌ ವಕ್ವಾಡಿ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆ ಕಬ್ಬಿಣದ ಕಡಲೆ ಎಂಬ ಮಾತನ್ನು ಸುಳ್ಳು ಮಾಡಿಸಿದ ಸರ್ಕಾರಿ ಶಾಲೆಯೊಂದು ನಮ್ಮ ನಡುವೆ ಇದೆ. ಹೌದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸ್ಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯನ್ನು ʼಹ್ಯಾಪಿʼ ಆಗಿ ಕಲಿಯುವುದಕ್ಕೆ ಆರಂಭಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಕ್ಲಿಷ್ಟ ಭಾಷೆಯೆಂದೆ ಹೇಳಲ್ಪಡುವ ಇಂಗ್ಲೀಷ್‌ ಭಾಷೆಯನ್ನು ಸರಳವಾಗಿ ಕಲಿಸುವುದಕ್ಕೆ ಬೇಕಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕುತ್ತೂರು ಇಲ್ಲಿ ʼಹ್ಯಾಪಿ ಇಂಗ್ಲಿಷ್‌ʼ ಎಂಬ ಇಂಗ್ಲೀಷ್‌ ಲ್ಯಾಂಗ್ವೆಜ್‌ ಲ್ಯಾಬ್‌ ಮತ್ತು ಆಡಿಯೋ ವಿಶುವಲ್‌ ಇಂಗ್ಲೀಷ್‌ ಕ್ಲಾಸ್‌ ರೂಮನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಸರ್ಕಾರಿ ಶಾಲೆಯೊಂದರಲ್ಲಿ ಇಂತಹದ್ದೊಂದು ವಿನೂತನ ಪ್ರಯತ್ನವನ್ನು ವಿಶಿಷ್ಠವಾಗಿ ಮಾಡಿದ್ದು, ಇದೇ ಮೊಟ್ಟ ಮೊದಲ ಬಾರಿಗೆ. ಸದ್ಯ, ಈ ಇಂಗ್ಲಿಷ್‌ ಲ್ಯಾಂಗ್ವೇಜ್‌ ಲ್ಯಾಬ್ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಇಂತಹದ್ದೊಂದು ಸೃಜನಶೀಲ ಶಿಕ್ಷಣದ ಕಲಿಕಾ ಶಾಸ್ತ್ರದ ಹಿಂದಿನ ಎಲುಬು ಶಾಲೆಯ ಸಹ ಶಿಕ್ಷಕ ಅಶೋಕ್‌ ತೆಕ್ಕಟ್ಟೆ. ಇಡೀ ಶಾಲೆಯನ್ನೇ ವಿದ್ಯಾರ್ಥಿ ಸ್ನೇಹಿ ವಾತಾವರಣವಾಗುವಂತೆ ಮಾಡುವಲ್ಲಿ ಅವರ ಪಾಲು ದೊಡ್ಡದು. ʼಟೀಚರ್‌ ಶುಡ್‌ ಟೀಚ್‌ ಫ್ರಂ ದಿ ಹಾರ್ಟ್‌, ನಾಟ್‌ ಫ್ರಂ ದಿ ಬುಕ್‌ʼ ಎನ್ನುವ ಮಾತು ಯತಾರ್ಥವಾಗಿ ಅವರಿಗೆ ಒಪ್ಪುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಶಾಲೆ ಹಾಗೂ ಶಾಲೆಯ ವಿದ್ಯಾರ್ಥಿಗಳ ಬಗ್ಗೆ ಅವರ ನಿರಂತರ ಶ್ರಮ ಮತ್ತು ಯೋಗದಾನ ಸ್ತುತ್ಯಾರ್ಹ.

ʼರಾಜ್ಯದಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್‌ ಭಾಷೆಯನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಕಲಿಸುವಲ್ಲಿ ಅನೇಕ ಶಿಕ್ಷಕರು ಈಗಾಗಲೇ ಪ್ರಯತ್ನಿಸಿದ್ದಾರೆ. ಅದು ಯಶಸ್ವಿಯೂ ಆಗಿದೆ. ಹೆಸ್ಕುತ್ತೂರು ಎಲ್ಲಾ ರೀತಿಯಲ್ಲಿ ಹಿಂದುಳಿದ ಸಣ್ಣ ಗ್ರಾಮ. ಇಲ್ಲಿನ ವಿದ್ಯಾರ್ಥಿಗಳು ಇಂಗ್ಲೀಷ್‌ ಕಲಿಕೆಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಲ್ಲಿ, ನಮ್ಮಲ್ಲಿ ಸಾಧ್ಯತೆಗಳಿರುವ ಮಟ್ಟದಲ್ಲಿ, ದಾನಿಗಳ ಸಹಕಾರದಿಂದ ಈ ʼಹ್ಯಾಪಿ ಇಂಗ್ಲೀಷ್‌ʼ ಎನ್ನುವ ಲಾಂಗ್ವೇಜ್‌ ಲ್ಯಾಬ್‌ ಅನ್ನು ತೆರೆಯಲಾಗಿದೆ. ವಿದ್ಯಾರ್ಥಿಗಳು ಈ ಮಾದರಿಯ ಇಂಗ್ಲೀಷ್‌ ಕಲಿಕೆಯಲ್ಲಿ ಆಸಕ್ತಿ ತೋರಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಿರುವುದು ಸಾರ್ಥಕʼ ಎಂದು ವಿನಮ್ರವಾಗಿ ಹೇಳಿಕೊಳ್ಳುತ್ತಾರೆ ಶಿಕ್ಷಕ ಅಶೋಕ್‌ ತೆಕ್ಕಟ್ಟೆ. ‌

ಒನ್‌ ಗುಡ್‌ ಸ್ಟೆಪ್‌ ಸಂಸ್ಥೆಯ ಸ್ಥಾಪಕರು, ಮ್ಯಾನೆಂಜಿಂಗ್‌ ಟ್ರಸ್ಟಿ ಅಮಿತಾ ಪೈ, ದಾನಿಗಳಾದ ಆನಂದ ಸಿ. ಕುಂದರ್‌, ಗಣೇಶ್‌ ಪ್ರಸಾದ್‌ ಕಾಂಚನ್‌, ನಿವೃತ್ತ ಶಿಕ್ಷಕರಾದ ಜಯರಾಮ್‌ ಶೆಟ್ಟಿ ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಆರ್ಥಿಕ  ಬೆನ್ನೆಲುಬಾಗಿ ನಿಂತಿದ್ದಾರೆ. ಸ್ಮಾರ್ಟ್‌ ಜಗತ್ತಿನಲ್ಲಿ ಸ್ಮಾರ್ಟ್‌ ಲರ್ನಿಂಗ್‌ ಅವಕಾಶಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸ್ಮಾರ್ಟ್‌ ಕ್ಲಾಸ್‌ರೂಮ್‌ ಪರಿಕಲ್ಪನೆ ಕೂಡ ಈಗ ಎಲ್ಲೆಡೆ ಜಾಲ್ತಿಯಲ್ಲಿದೆ. ಅದಕ್ಕೂ ಮೀರಿದ ಒಂದು ಕ್ರಿಯೇಟಿವ್‌ ಕ್ಲಾಸ್‌ರೂಮ್‌ ಇದು ಎಂದರೇ ತಪ್ಪಿಲ್ಲ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಈ ಲ್ಯಾಂಗ್ವೇಜ್‌ ಲ್ಯಾಬ್‌ನಲ್ಲಿ ಕಲಿಕಾ ಶಾಸ್ತ್ರವನ್ನು ಅಳವಡಿಸಿಕೊಳ್ಳಲಾಗಿದೆ.

ಲಾಂಗ್ವೇಜ್‌ ಲ್ಯಾಬ್‌ ಒಳಗೆ ಕಾಲಿಟ್ಟರೇ, ವಿದ್ಯಾರ್ಥಿಗಳ ಕಲಿಕೆಗಾಗಿ ಟೇಬಲ್ಸ್‌ ಮತ್ತು ಚೇರ್ಸ್‌ ಇಡಲಾಗಿದೆ. ಅದರಲ್ಲೂ ಸೃಷ್ಟಿಶೀಲತೆಯನ್ನು ಹೇರಳವಾಗಿ ಬಳಸಿಕೊಳ್ಳಲಾಗಿದೆ. ನಾಲ್ಕು ಟೇಬಲ್‌ಗಳನ್ನು ಜೋಡಿಸಿದರೇ, ಗುಂಪು ಕಲಿಕೆಗಾಗಿ ಬೇಕಾಗುವಂತೆ ರೌಂಡ್‌ ಟೇಬಲ್‌ ಆಗಿ ಪರಿವರ್ತನೆಯಾಗುತ್ತದೆ. ವಿದ್ಯಾರ್ಥಿಗಳು ಅಲ್ಲಿ ಸಮೂಹ ಕಲಿಕೆಯನ್ನು ಮಾಡಬಹುದಾಗಿದೆ. ಅಲ್ಲೇ ಪಕ್ಕದಲ್ಲಿ ಮೊದಲ ಬಾರಿಗೆ ನೋಡಿದರೇ, ಕಂಪ್ಯೂಟರ್‌ ಲ್ಯಾಬ್‌ ಎಂದೇ ಅಂದುಕೊಳ್ಳುವಂತಿರುವ ಅಪ್ಪಟ್ಟ ಇಂಗ್ಲೀಷ್‌ ಲ್ಯಾಂಗ್ವೇಜ್‌ ಲ್ಯಾಬ್‌ ನಮ್ಮ ಕಣ್ಮುಂದೆ ಅಚ್ಚರಿ ಮೂಡಿಸುತ್ತದೆ. ವಿದ್ಯಾರ್ಥಿ ಸ್ನೇಹಿ ಪಠ್ಯಕ್ರಮಗಳುಳ್ಳ ಸಾಫ್ಟ್‌ ವೇರ್‌ ಮೂಲಕ ಇಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್‌ ಭಾಷೆಯನ್ನು ಸರಳವಾಗಿ, ಸುಲಭವಾಗಿ ಕಲಿಯುತ್ತಾರೆ.  ಸುವ್ಯವಸ್ಥಿತ ಕಂಪ್ಯೂಟರ್‌ ಸಿಸ್ಟಮ್‌ಗಳು, ಪ್ರಾಜೆಕ್ಟರ್‌, ವಿದ್ಯಾರ್ಥಿ ಆಧಾರಿತ ನಿಯತಕಾಲಿಕೆಗಳು, ಇಂಗ್ಲೀಷ್‌ ವ್ಯಾಕರಣ, ಭಾಷಾ ಶುದ್ಧೀಕರಣಕ್ಕೆ ಬೇಕಾಗಿ ಬೇರೆ ಬೇರೆ ಮಾದರಿಯಲ್ಲಿ ಅಳವಡಿಸಲಾಗಿರುವ ಕಲಿಕಾ ಶಾಸ್ತ್ರದ ಹೊಸ ಸಾಧ್ಯತೆಗಳು ಹೇರಳವಾಗಿ ಕಾಣಸಿಗುತ್ತವೆ.

ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆಯ ಮಟ್ಟದಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಬೇಕಾಗಿ ಎಲ್ಲಾ ಅವಕಾಶಗಳಿದ್ದರೂ, ಇನ್ನೂ ಕನ್ನಡ ಮಾಧ್ಯಮ ಶಾಲೆಯಾಗಿಯೇ ಉಳಿದುಕೊಂಡು, ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಕಡಿಮೆಯಾಗದೆ. ಎಂದೂ ದಾಖಲಾತಿ ಕುಸಿತಕೊಳ್ಳದೆ ಇರುವುದು ಉತ್ತಮ ಶಿಕ್ಷಣ ಕೊಟ್ಟರೇ, ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳು ತುಂಬಿರುತ್ತಾರೆ ಎನ್ನುವುದಕ್ಕೆ ಈ ಶಾಲೆಯೇ ಪ್ರಮುಖ ಸಾಕ್ಷಿ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಎಸ್‌ಇಎಲ್‌) 2024-25ರ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪರಿಚಯಿಸುವುದಕ್ಕೆ ಯೋಜನೆ ರೂಪಿಸಿತ್ತು. 40 ನಿಮಿಷಗಳ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಪ್ರತಿ ಶನಿವಾರ ನಡೆಸಲು ಯೋಜನೆ ರೂಪಿಸಿತ್ತು. ಆದರೇ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಇಂಗ್ಲಿಷ್‌ ಮಾಧ್ಯಮಕ್ಕೆ ಅನುಮತಿ ದೊರೆತ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್‌ ಎರಡೂ ತರಗತಿಗಳನ್ನು ನಡೆಸಲಾಗುತ್ತಿದೆ ಹೊರತು ಇಲಾಖೆಯಿಂದ ಸ್ಪೋಕನ್‌ ಇಂಗ್ಲೀಷ್‌ ತರಗತಿಗಳ ಯೋಜನೆ ಜಾರಿಗೆ ತಂದಿಲ್ಲ. ಅದಕ್ಕೂ ಮೀರಿದ ಒಂದು ಪ್ರಯತ್ನಕ್ಕೆ ಮುಂದಾಗಿ ಹೆಸ್ಕುತ್ತೂರು ಸರ್ಕಾರಿ ಪ್ರಾಥಮಿಕ ಶಾಲೆ ಮಾದರಿಯಾಗಿದೆ.

ವಿದ್ಯಾರ್ಥಿಗಳೊಂದಿಗೆ ಹ್ಯಾಪಿ ಇಂಗ್ಲೀಷ್‌ ಲ್ಯಾಂಗ್ವೇಜ್‌ ಲಾಬ್‌ ನಲ್ಲಿ ಶಿಕ್ಷಕ ಅಶೋಕ್‌ ತೆಕ್ಕಟ್ಟೆ

ವಿದ್ಯಾರ್ಥಿ ಸ್ನೇಹಿ ಲ್ಯಾಂಗ್ವೇಜ್‌ ಲ್ಯಾಬ್‌ ಮಾಡುವ ನಮ್ಮ ಕನಸು ನನಸಾಗಿದೆ. ಇಂಗ್ಲೀಷ್‌ ಸರ್ಕಾರಿ ಶಾಲಾ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಕಷ್ಟವಾಗಬಾರದು. ಇಂಗ್ಲೀಷ್‌ ಕಲಿಕೆ ಕಠಿಣ ಎನ್ನಿಸಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಾಥಮಿಕ ಶಾಲಾ ಮಕ್ಕಳಿಗೆ ಬೇಕಾದ ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ. ಈ ಮಾದರಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಆದಲ್ಲಿ, ಸರ್ಕಾರಿ ಶಾಲೆಗಳು ಮಕ್ಕಳಿಗೆ ಹತ್ತಿರವಾಗುತ್ತದೆ.
-ಶೇಖರ್‌ ಕುಮಾರ್‌
ಮುಖ್ಯೋಪಾದ್ಯಾಯರು, ಸ. ಹಿ. ಪ್ರಾ. ಶಾಲೆ, ಹೆಸ್ಕುತ್ತೂರು.

ಇಂಗ್ಲೀಷ್‌ ಭಾಷೆಯನ್ನು ಪ್ರಾಯೋಗಿಕವಾಗಿ ಕಲಿಸಬೇಕು ಎನ್ನುವ ನಮ್ಮ ಆಯೋಚನೆ ʼಹ್ಯಾಪಿ ಇಂಗ್ಲೀಷ್‌ʼ ಆಗಿ ಮುಂದಿದೆ. ವಿದ್ಯಾರ್ಥಿಗಳಿಗೆ ಈ ಲ್ಯಾಬ್‌ ಸ್ವಯಂ ಕಲಿಕೆಗೆ ಯೋಗ್ಯವಾಗಿದೆ. ಇಂಗ್ಲೀಷ್ ಭಾಷೆಯನ್ನು ಆಸಕ್ತಿಯಿಂದ ವಿದ್ಯಾರ್ಥಿಗಳು ಕಲಿಯುತ್ತಿರುವುದು ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಶ್ರಮಕ್ಕೆ ಹಿಡಿದ ಕನ್ನಡಿ. ನಮ್ಮ ಯೋಜನೆ ಫಲಿಸಿದೆ ಎನ್ನುವ ವಿಶ್ವಾಸವಿದೆ. ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಿ ನಮ್ಮ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹ್ಯಾಪಿ ಇಂಗ್ಲೀಷ್‌ ಕೂಡ ಇದರ ಒಂದು ಭಾಗ.
-ಅಶೋಕ್‌ ತೆಕ್ಕಟ್ಟೆ
ಇಂಗ್ಲೀಷ್‌ ಶಿಕ್ಷಕರು, ಸ. ಹಿ. ಪ್ರಾ. ಶಾಲೆ, ಹೆಸ್ಕುತ್ತೂರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!