spot_img
Sunday, February 15, 2026
spot_img

ಉದ್ಯಮ ಕ್ಷೇತ್ರದಲ್ಲಿ ಧನಾತ್ಮಕ ಯೋಚನೆಗಳನ್ನು ಮೈಗೂಡಿಸಿಕೊಳ್ಳಿ-ಉದ್ಯಮಿ ನಿವೇದನ್ ನೆಂಪೆ

 

ಕುಂದಾಪುರ ವೆಂಕಟರಮಣ ಕಾಲೇಜಿನಲ್ಲಿ ವ್ಯವಹಾರ ದಿನ V-VISTAR 2K24

ಕುಂದಾಪುರ, ಡಿ.7 (ಜನಪ್ರತಿನಿಧಿ ವಾರ್ತೆ) ವ್ಯವಹಾರ ಕ್ಷೇತ್ರದಲ್ಲಿ ಸದಾ ಅವಕಾಶಗಳನ್ನು ಗಮನಿಸುವುದು, ತನ್ನ ವ್ಯವಹಾರದದಲ್ಲಿ ಅಭಿಮಾನ ಹಾಗೂ ಶ್ರದ್ದೆ ಹೊಂದಿ, ನಕರಾತ್ಮಕ ಮಾತುಗಳಿಗೆ ಕಿವಿಗೊಡದೆ ಧನಾತ್ಮಕವಾಗಿ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು ಆಗ ಯಶಸ್ವಿ ಉದ್ಯಮಿಯಾಗಿ ಮೂಡಿಬರಲು ಸಾಧ್ಯ ಎಂದು ಅರೇಕಾ ಟಿ ಇದರ ಸಂಸ್ಥಾಪಕರು, ಸಿ‌ಇ‌ಓ ನಿವೇದನ್ ನೆಂಪೆ ಹೇಳಿದರು.

ಅವರು ಕುಂದಾಪುರ ಶ್ರೀ ವೆಂಕಟರಮಣ ಪಿಯು ಕಾಲೇಜಿನಲ್ಲಿ ವ್ಯವಹಾರ ದಿನ V-VISTAR 2K24 ಉದ್ಘಾಟಿಸಿ ಮಾತನಾಡಿದರು.

ಅರೇಕಾ ಟಿ ಪ್ರಾರಂಭಿಸಿದಾಗ ಕೆಲವರು ವ್ಯಂಗ್ಯ ಮಾಡಿದರು. ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಇವತ್ತು ಆರೇಕಾ ಟಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದಿವೆ. ವ್ಯವಹಾರ, ಉದ್ಯಮದಲ್ಲಿ ಕುಗ್ಗಬಾರದು. ಧೈರ್ಯ, ಆತ್ಮವಿಶ್ವಾಸದಿಂದ ಮುನ್ನೆಡೆದಾಗ ನಾವು ಯಶಸ್ಸು ಕಾಣುತ್ತೇವೆ. ನಾನು ನಾನೇ ಆಗಿರಬೇಕು ಎಂದರು.

ಶ್ರೀ ವೆಂಕಟರಮಣ ದೇವ್ ಎಜ್ಯುಕೇಶನ್ ಮತ್ತು ಕಲ್ಚರಲ್ ಟ್ರಸ್ಟ್ ಅಧ್ಯಕ್ಷರಾದ ಕೆ.ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉದ್ಯಮಿ ಬಿ.ಎಸ್ ಸುರೇಶ ಶೆಟ್ಟಿ ಉಪ್ಪುಂದ ಮಾತನಾಡಿ, ವ್ಯವಹಾರ ಎಂದರೆ ಸವಾಲು. ನಂಬಿಕೆ ಮಾತ್ರ ನಮ್ಮ ಜೊತೆ ಇರಬೇಕು. ಉದ್ಯಮ ಎಂದರೆ ಅದು ಮುಗಿಯುವುದೇ ಇಲ್ಲ. ಅದಕ್ಕೆ ಕೊನೆ ಇಲ್ಲ. ವ್ಯವಹಾರದಲ್ಲಿ ವೈಫಲ್ಯತೆ ಕಾಣಬಾರದು. ಸೋಲುಗಳಿಗೆ ಹೆದರಬಾರದು. ವ್ಯವಹಾರ ಧರ್ಮವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಉದ್ಯಮದಲ್ಲಿ ಯಶಸ್ಸು ಸಾಧಿಸುವುದರ ಜೊತೆಯಲ್ಲಿ ತನ್ನೂರು, ಸಮಾಜಕ್ಕೂ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ದುಡಿಮೆಯ ಒಂದಂಶವನ್ನು ಚಾರಿಟಿಗೂ ನೀಡಬೇಕು, ಸಾಮಾಜಿಕ ಜವಬ್ದಾರಿಯನ್ನು ಮರೆಯಬಾರದು. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ದಿನೇಶ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಉದ್ಯಮ ಎಂದರೆ ಅದೊಂದು ಸವಾಲು. ತಾಳ್ಮೆ, ಶ್ರದ್ಧೆ ಬೇಕು, ಎಲ್ಲರಿಗೂ ಯಶಸ್ವಿ ಉದ್ಯಮಿ ಆಗಲು ಸಾಧ್ಯವಿಲ್ಲ. ಇವತ್ತು ಸ್ಪರ್ಧಾತ್ಮಕ ಯುಗ, ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೂಡಾ ಕಷ್ಟವಿದೆ. ತಾಳ್ಮೆ, ಸಹನೆ, ಉದ್ಯಮಶೀಲತಾ ಗುಣಗಳನ್ನು ಮೈಗೂಡಿಸಿಕೊಂಡರೆ ಯಶಸ್ಸು ಆಗಬಹುದು. ಇವತ್ತು ತಂದೆ ತಾಯಿಗಳು ಮಕ್ಕಳನ್ನು ವ್ಯವಹಾರ ಮಾಡಿ ಎಂದು ಹೇಳುವುದು ಕಡಿಮೆ. ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಲು ಉತ್ತೇಜನ ಕೊಡುತ್ತಾರೆ. ಇಂಥಹ ಅದ್ಬುತವಾದ ವ್ಯವಹಾರ ದಿನ ಆಯೋಜನೆಯಿಂದ ಮಕ್ಕಳಲ್ಲಿ ವ್ಯವಹಾರ ಕೌಶಲ್ಯದ ಅರಿವಾಗುತ್ತದೆ. ತಂದೆತಾಯಿಯ ದುಡಿಮೆ ಅರ್ಥವಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡು ವಿಭಿನ್ನ ವೇಷಭೂಷಣಗಳಿಂದ ಸುಮಾರು 85 ಲಕ್ಷಕ್ಕೂ ಅಧಿಕ ಆರ್ಥಿಕ ನೆರವು ಸಂಗ್ರಹಿಸಿಕೊಟ್ಟ ಬೆಂಕಿಮಣಿ ಸಂತು, 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ರಕ್ತದಾನಿ, ಕರೋನಾ ಫ್ರಂಟ್ ಲೈನ್ ವಾರಿಯರ್ ರಾಘವೇಂದ್ರ ನೆಂಪು, ಮುಳುಗು ತಜ್ಞ ಮಂಜುನಾಥ ನಾಯ್ಕ್ ಕನ್ನೇರಿ, ಉರಗ ಸಂರಕ್ಷಕ ಶಂಕರ ಪೂಜಾರಿ ಅಂಪಾರು, ಸ್ವಚ್ಛತಾ ಸೇವಕ ಗಣೇಶ ಕಂಬದಕೋಣೆ ಇವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ ಮಾತನಾಡಿ 1988ರಲ್ಲಿ 16 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಸಂಸ್ಥೆಯಲ್ಲಿ ಇವತ್ತು 3200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಸೇವೆಯ ಉದ್ದೇಶಕ್ಕಾಗಿ ಈ ಸಂಸ್ಥೆಯನ್ನು ಅಂದು ಆರಂಭಿಸಲಾಯಿತು. ಅದೇ ಧ್ಯೇಯದಡಿ ಕಾರ್ಯನಿರ್ವಸುತ್ತಿದೆ.ಯಾವುದೇ ಲಾಭದ ದೃಷ್ಟಿಯಿಂದ ಇಂಥಹ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ ಎಂದರು.

ಕೋಶಾಧಿಕಾರಿ ಕೆ.ಲಕ್ಷ್ಮೀನಾರಾಯಣ ಶೆಣೈ, ಕಾಲೇಜಿನ ಉಪಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಪ್ರೌಢಶಾಲೆ ಮುಖ್ಯಶಿಕ್ಷಕ ಕೃಷ್ಣ ಅಡಿಗ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ, ಪೂರ್ವಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದ ಸವಿತಾ ರಮೇಶ ಅವರನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಬೆಂಕಿಮಣಿ ಸಂತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಸ್ವಾಗತಿಸಿದರು. ಬ್ಯುಸಿನೆಸ್ ಡೇ ಕಾರ್ಯಕ್ರಮ ಸಂಯೋಜಕ ಶಿವರಾಜ ಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಸುಶಾಂತ್ ನಾಯಕ್ ವಂದಿಸಿದರು. ಉಪನ್ಯಾಸಕರಾದ ಮಂಜುನಾಥ ಹಾಗೂ ಅಮೃತ ಕಾರ್ಯಕ್ರಮ ನಿರ್ವಹಿಸಿದರು.

ಸತತ ನಾಲ್ಕನೇ ವರ್ಷ ಈ ವ್ಯವಹಾರ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸುಮಾರು ೭೦ ಕ್ಕೂ ಅಧಿಕ ಮಳಿಗೆಗಳನ್ನು ತೆರೆದಿದ್ದರು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ವ್ಯವಹಾರ ಜ್ಞಾನ ನೀಡುವ ಈ ಕಾರ್ಯಕ್ರಮದಲ್ಲಿ ಬಂದ ಲಾಭಾಂಶವನ್ನು ವಿದ್ಯಾರ್ಥಿಗಳು ಸಮಾಜ ಸೇವಾ ಸಂಸ್ಥೆಗಳಿಗೆ ನೀಡಲಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಭೇಟಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!